ಶುಕ್ರವಾರ, ಮೇ 29, 2020
27 °C
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆ

ಮಕ್ಕಳ ಗಮನ ಸೆಳೆಯಲು ಕ್ರಮ: ವಾಟ್ಸ್‌ಆ್ಯಪ್‌ನಲ್ಲಿ ಮಾದರಿ ಪ್ರಶ್ನೆಪತ್ರಿಕೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್‌–19 ಲಾಕ್‌ಡೌನ್‌ನಿಂದ ದೊರೆತಿರುವ ರಜೆಯ ನಡುವೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿರುವಂತೆ ಮಾಡಲು ಹಾಗೂ ವಾರ್ಷಿಕ ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸಲು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ತಂತ್ರಜ್ಞಾನ ಆಧರಿತವಾದ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಮಕ್ಕಳ ಚಿತ್ತವನ್ನು ಪರೀಕ್ಷೆಯತ್ತ ಸೆಳೆಯಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ವಿಷಯಗಳ ಶಿಕ್ಷಕರ ಮೊಬೈಲ್‌ ಸಂಖ್ಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ‘ಮಿಸ್‌ ಕಾಲ್‌ ಕೊಡಿ ಉತ್ತರ ಪಡೆ’ ಕಾರ್ಯಕ್ರಮದಲ್ಲಿ ಅವರು ಮಿಸ್ ಕಾಲ್‌ ಕೊಟ್ಟು ಸಂದೇಹ ಪರಿಹರಿಸಿಕೊಳ್ಳಬಹುದು. ನಿತ್ಯ ಆಡಿಯೊ ಪಾಠ, ಯೂಟ್ಯೂಬ್ ಮೂಲಕ ವಿಷಯವಾರು ಪಾಠ ಬೋಧಿಸಲಾಗುತ್ತಿದೆ. ಸಿರಿಗನ್ನಡ ಬಳಗದ ಕ್ರಿಯಾಶೀಲ ಶಿಕ್ಷಕರಿಂದ ರಾಜ್ಯಮಟ್ಟದ ಆನ್‌ಲೈನ್‌ ಕ್ವಿಜ್‌ ನಡೆಸಲಾಗಿದೆ. ನಮ್ಮೂರ ಬಾನುಲಿ ರೇಡಿಯೊ ಕೇಂದ್ರದ ಮೂಲಕ ವಿದ್ಯಾರ್ಥಿಗಳು, ಪಾಲಕರ ಪ್ರಶ್ನೆಗಳಿಗೆ ಉತ್ತರ ನೀಡಿ, ಸಂದೇಹ ನಿವಾರಿಸುವ ಪ್ರಯತ್ನ ಮಾಡಲಾಗಿದೆ. ವಿಷಯವಾರು ರಸಪ್ರಶ್ನೆ ಕಾರ್ಯಕ್ರಮ ನಡೆದಿದೆ.

ಸಿದ್ಧತೆ ನಿಲ್ಲಿಸಿಲ್ಲ: ‘ಶಾಲೆಗಳಿಗೆ ರಜೆ ಇದ್ದರೂ ನಾವು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರ್ವ ತಯಾರಿಯನ್ನು ನಿಲ್ಲಿಸಿಲ್ಲ. ರಜೆಯಲ್ಲಿ ಸಮಯ ಸದ್ಬಳಕೆ ಮಾಡಿಕೊಂಡಿದ್ದೇವೆ. ಶೈಕ್ಷಣಿಕ ಜಿಲ್ಲೆಯಲ್ಲಿರುವ 40,438 ಮಕ್ಕಳ ಅಧ್ಯಯನಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದೇವೆ. ವಿಷಯ ಮರೆಯದಿರಲೆಂದು ಅವರಿಗೆ ಪಾಠ–ಪ್ರವಚನವನ್ನು ಮೊಬೈಲ್‌ ಫೋನ್‌ ಬಳಸಿಕೊಂಡು ಮುಂದುವರಿಸಿದ್ದೇವೆ. ಪೋಷಕರ ಸಹಕಾರದಲ್ಲಿ ಅವರ ಮೊಬೈಲ್‌ಗಳ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದೇವೆ’ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಕ್ಟೀಸ್ ಮಾಡಿ ಪರ್ಫೆಕ್ಟ್‌ ಆಗಿ: ‘ಪ್ರಾಕ್ಟೀಸ್ ಮಾಡಿ ಪರ್ಫೆಕ್ಟ್‌ ಆಗಿ’ ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಲಾಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ಒಂದೊಂದು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತೆ ಮಾಡುವಂತೆ ತಿಳಿಸಲಾಗುತ್ತಿದೆ. ಮರುದಿನ ಮಾದರಿ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ತಾವು ಬರೆದ ಉತ್ತರ ಪುನರ್ ಪರಿಶೀಲಿಸಲು ಅನುಕೂಲ ಕಲ್ಪಿಸಲಾಗಿದೆ. ಈ ಪ್ರಶ್ನೆಪತ್ರಿಕೆಗಳು ನಮ್ಮ ಜಿಲ್ಲೆಯಲ್ಲದೇ ರಾಜ್ಯದ ಬೇರೆ ಜಿಲ್ಲೆಗಳಿಗೂ ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಗೆ ಹಾಗೂ ಪರೀಕ್ಷೆಗೆ ಸಹಕಾರಿಯಾಗಿದೆ’ ಎನ್ನುತ್ತಾರೆ ಅವರು.

‘ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಹಾಯವಾಣಿಯಲ್ಲಿ ವಿಷಯವಾರು ಸಂಪನ್ಮೂಲ ಶಿಕ್ಷಕರ ಮೊಬೈಲ್ ಸಂಖ್ಯೆ ನೀಡಿದ್ದು ವಿದ್ಯಾರ್ಥಿಗಳು ಶಿಕ್ಷಕರನ್ನು ಯಾವಾಗ ಬೇಕಾದರೂ ಸಂಪರ್ಕಿಸಬಹುದಾಗಿದೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುನರ್ ಮನನ’ ಕಾರ್ಯಕ್ರಮ ವೀಕ್ಷಿಸುವಂತೆಯೂ ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು