ಸೋಮವಾರ, ಜನವರಿ 20, 2020
21 °C
3ನೇ ಬಾರಿಗೆ ಮುಂದೂಡಿಕೆ

ವಿದ್ಯಾರ್ಥಿ ವೇತನಕ್ಕೆ ಹೊಸ ಪೋರ್ಟಲ್‌: ದಾಖಲೆ ಅಪ್‌ಲೋಡ್‌ಗೆ ನಿರಾಸಕ್ತಿ

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಧಾರವಾಡ: ವಿವಿಧ ಇಲಾಖೆಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ’ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ’ದಲ್ಲಿ (ಎಸ್‌ಎಸ್‌ಪಿ) ದಾಖಲೆಗಳ ಜೋಡಣೆಗೆ ವಿದ್ಯಾರ್ಥಿಗಳು ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಈಗ ಮೂರನೇ ಬಾರಿಗೆ ಮುಂದೂಡಲಾಗಿದೆ.

ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿವೇತನ ಪಾವತಿಯಾಗುತ್ತದೆ. ಅಕ್ರಮ ತಡೆಯುವ ಈ ಹೊಸ ವ್ಯವಸ್ಥೆಯನ್ನು (ssp.karnataka.gov.in) ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದೆ. ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಿಂದ ವಿದ್ಯಾರ್ಥಿವೇತನ ಪಡೆಯುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಈ ಪೋರ್ಟಲ್‌ ಮೂಲಕ ಹೆಸರು ನೋಂದಣಿಗೆ ಸರ್ಕಾರ ಸೂಚಿಸಿದೆ.

ನ.1ಕ್ಕೆ ಆರಂಭವಾದ ಈ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಲು ನ.30 ಕೊನೆಯ ದಿನವಾಗಿತ್ತು. ನಂತರ ವಿದ್ಯಾರ್ಥಿಗಳ ನಿರಾಸಕ್ತಿಯಿಂದ ಈ ಅವಧಿಯನ್ನು ಡಿ.30ರವರೆಗೆ ವಿಸ್ತರಿಸಲಾಗಿತ್ತು. ಅದರ ನಂತರವೂ ಸರಿಯಾಗಿ ನೋಂದಣಿ ಮಾಡಿಸಿಕೊಳ್ಳದ ಕಾರಣ ಮತ್ತೆ ಕೊನೆ ದಿನಾಂಕವನ್ನು ಜ.15ಕ್ಕೆ ವಿಸ್ತರಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಹಿಂದಿನ ತಂತ್ರಾಂಶಗಳಲ್ಲಿ ದಾಖಲಾಗಿರುವ 3.48 ಲಕ್ಷ ವಿದ್ಯಾರ್ಥಿಗಳ ಪೈಕಿ ಎಸ್‌ಎಸ್‌ಪಿ ಮೂಲಕ 2.70 ಲಕ್ಷ ಮಂದಿ ಮಾತ್ರ ಹೆಸರು ನೋಂದಾಯಿಸಿದ್ದಾರೆ. ಇನ್ನೂ 68 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವುದು ಬಾಕಿ ಇದೆ. ಅದರಂತೆಯೇ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವ್ಯಾಪ್ತಿಯ 1.21 ಲಕ್ಷ ವಿದ್ಯಾರ್ಥಿಗಳಲ್ಲಿ 1.07 ಲಕ್ಷ ವಿದ್ಯಾರ್ಥಿಗಳು ಮಾತ್ರ ನೋಂದಾಯಿಸಿಕೊಂಡಿದ್ದಾರೆ.

ಅಧ್ಯಯನ ಪ್ರಮಾಣ ಪತ್ರ, ಶುಲ್ಕ ರಸೀದಿ, ವಿದ್ಯಾರ್ಥಿ ಪ್ರವೇಶಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಪೋಷಕರ ವೇತನ ಪ್ರಮಾಣ ಪತ್ರ, ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು. ಪ್ರತಿ ಕಾಲೇಜಿನಲ್ಲಿ ಪ್ರಾಂಶುಪಾಲರೂ ಸೇರಿದಂತೆ ಐವರು ಅಧಿಕಾರಿಗಳನ್ನು ದಾಖಲೆ ಪರಿಶೀಲನೆಗೆ ನಿಯೋಜಿಸಲಾಗಿದೆ. ಈ ವರ್ಷ ಪ್ರತಿ ವಿದ್ಯಾರ್ಥಿಯೂ ಈ ದಾಖಲೆಗಳನ್ನು ಸಲ್ಲಿಸಲೇಬೇಕು. ಮುಂದೆ ಇವು ಸಹಜವಾಗಿಯೇ ನವೀಕರಣಗೊಳ್ಳಲಿವೆ.

ಇಲಾಖೆಗಳಿಂದ ವ್ಯಾಪಕ ಪ್ರಚಾರ, ಕಾಲೇಜುಗಳಲ್ಲಿ ಪ್ರಾಚಾರ್ಯರ ಸೂಚನೆ ಇದ್ದರೂ ನೋಂದಣಿಯಲ್ಲಿ ಪ್ರಗತಿ ಕಂಡುಬಂದಿಲ್ಲ. ರಾಜ್ಯದ ಹಲವು ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಡಿಸೆಂಬರ್‌ನಲ್ಲಿ ರಜೆ ಇದ್ದ ಕಾರಣದಿಂದ ನೋಂದಣಿ ವಿಳಂಬವಾಗಿತ್ತು. ಹೀಗಾಗಿ ಪ್ರಗತಿ ಕುಂಠಿತಗೊಂಡಿತ್ತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

*
ಕರ್ನಾಟಕ ವಿ.ವಿ ಅಧೀನದಲ್ಲಿ 255 ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳೇ ನಿರಾಸಕ್ತಿ ತೋರಿದರೆ ಏನು ಮಾಡುವುದು?
–ಪ್ರೊ. ಎ.ಎಸ್.ಶಿರಾಳಶೆಟ್ಟಿ, ಪ್ರಭಾರ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು