ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಶಿಕ್ಷಣ ನಿಷೇಧಕ್ಕೆ ಹೈಕೋರ್ಟ್‌ ತಡೆ

Last Updated 9 ಜುಲೈ 2020, 7:39 IST
ಅಕ್ಷರ ಗಾತ್ರ

ಬೆಂಗಳೂರು: ಎಲ್‍ಕೆಜಿಯಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಬುಧವಾರ ಈ ಆದೇಶ ಪ್ರಕಟಿಸಿದೆ.

ಇದೇ ವೇಳೆ ಶಿಕ್ಷಣ ಸಂಸ್ಥೆಗಳಿಗೆ ಕೆಲವು ಷರತ್ತುಗಳನ್ನೂ ವಿಧಿಸಿದೆ. ಈ ಕುರಿತಂತೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಹಕ್ಕು ಉಲ್ಲಂಘನೆ: ‘ಸರ್ಕಾರದ ಆದೇಶದಿಂದ ಅರ್ಜಿದಾರರ ಮೂಲಭೂತ ಹಕ್ಕುಗಳ ಅತಿಕ್ರಮಣವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಾಗ್ಯೂ ತಜ್ಞರ ಸಮಿತಿ ರಚನೆಗೆ ಸಂಬಂಧಿಸಿದಂತೆ ಈ ಆದೇಶ ಅನ್ವಯವಾಗುವುದಿಲ್ಲ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಎಲ್‍ಕೆಜಿಯಿಂದ 5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ನಿಷೇಧಿಸಿ 2020ರ ಜೂನ್ 15ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದೆ. ಅಂತೆಯೇ ಎಲ್‍ಕೆಜಿ, ಯುಕೆಜಿ ಮತ್ತು 1ರಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ಆರಂಭಿಸಲು ಕೆಲವು
ನಿಬಂಧನೆ ವಿಧಿಸಿ ಜೂನ್ 27ರಂದು ಹೊರಡಿಸಿದ್ದ ಆದೇಶಕ್ಕೂ ಮಧ್ಯಂತರ ತಡೆ ನೀಡಿದೆ.

ಕೋರಿಕೆ ಏನು?: ‘ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳ ಪಠ್ಯಕ್ರಮ ಮತ್ತು ಕಲಿಕಾ ಮಾಧ್ಯಮದ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ನಿಯಂತ್ರಿಣವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯ ಮೂಲಕ ನಿಷೇಧ ಹೇರಲು ಅವಕಾಶವಿಲ್ಲ. ಕೋವಿಡ್-19 ಪರಿಸ್ಥಿತಿ ಎಲ್ಲಿಯವರೆಗೆ ಮುಂದುವರಿಯತ್ತೆ ಎಂಬುದು ಗೊತ್ತಿಲ್ಲ. ಆನ್‍ಲೈನ್ ಶಿಕ್ಷಣ ನಿಷೇಧಿಸಿ ಹೊರಡಿಸಿರುವ ರಾಜ್ಯ ಸರ್ಕಾರದ ಆದೇಶ ಕಾನೂನುಬಾಹಿರ. ಇದು ಮಕ್ಕಳ ಶಿಕ್ಷಣ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು ರದ್ದುಗೊಳಿಸಬೇಕು' ಎಂದು ಕೋರಿದ್ದರು.

ಶಿಕ್ಷಣ ಸಂಸ್ಥೆಗಳಿಗೆ ಷರತ್ತು

*ಶಾಲೆಗಳು ಆನ್‍ಲೈನ್ ಶಿಕ್ಷಣವನ್ನು ಕಡ್ಡಾಯಗೊಳಿಸುವಂತಿಲ್ಲ.

*ಹೆಚ್ಚುವರಿ ಶುಲ್ಕವನ್ನೂ ವಿಧಿಸುವಂತಿಲ್ಲ.

* ಆನ್‍ಲೈನ್ ಶಿಕ್ಷಣದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದ ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗದಂತೆ ಶಾಲೆಗಳು ನೋಡಿಕೊಳ್ಳಬೇಕು.

* ಅಂತಹ ಮಕ್ಕಳಿಗೆ ಶಾಲೆ ಪುನರಾರಂಭದ ಬಳಿಕ ವಿಶೇಷ ವ್ಯವಸ್ಥೆ ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT