ಭಾನುವಾರ, ಜನವರಿ 24, 2021
24 °C
ಸಾವಿನ ಸಂಖ್ಯೆ 14ಕ್ಕೆ ಏರಿಕೆ

ಸುಳ್ವಾಡಿ ದುರಂತ: ಪ್ರಸಾದದಲ್ಲಿ ಕೀಟನಾಶಕ ಪ್ರಯೋಗಾಲಯ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ದೇಗುಲ ಪ್ರಸಾದ ಸೇವಿಸಿ ಮೃತ‍ಪಟ್ಟ ದುರಂತಕ್ಕೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಪ್ರಸಾದದಲ್ಲಿ ಕೀಟನಾಶಕ ಬೆರೆತಿರುವುದು ಖಚಿತಗೊಂಡಿದೆ.

ಪ್ರಸಾದ ಸೇವಿಸಿ ಅಸ್ಸ್ಥರಾದವರ ದೇಹದಲ್ಲಿ ‘ಆರ್ಗನೊ ಫಾಸ್ಫರಸ್‌’  ಗುಂಪಿಗೆ ಸೇರಿದ ‘ಮೊನೊ ಕ್ರೋಟೊಫಾಸ್‌’ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಲಾದ ಪ್ರಯೋಗಾಲಯ ವರದಿಯಲ್ಲಿದೆ.

‘ಈ ರಾಸಾಯನಿಕ ಅಂಶವನ್ನು ಸಾಮಾನ್ಯವಾಗಿ ಕೀಟನಾಶಕಗಳಲ್ಲಿ ಬಳಸಲಾಗುತ್ತದೆ. ಭಕ್ತರು ಸೇವಿಸಿದ ಪ್ರಸಾದದಲ್ಲಿ ಇದನ್ನು ಬೆರೆಸಲಾಗಿದೆ’ ಎಂದು ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. 13 ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಸೋಮವಾರ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೈಲಿಬಾಯಿ (35) ಎಂಬುವವರು ಮೃತಪಟ್ಟಿದ್ದಾರೆ. ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಒಟ್ಟು 101 ಅಸ್ವಸ್ಥರನ್ನು ನಗರದ 11 ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಇವರಲ್ಲಿ 24 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ.

ಊರು ಬಿಟ್ಟವರಿಗೆ ಹುಡುಕಾಟ’

ಸುಳ್ವಾಡಿ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು. ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಘಟನೆ ಬಳಿಕ ಅನೇಕರು ಊರು ಬಿಟ್ಟಿದ್ದಾರೆ. ಅವರನ್ನು ಹುಡುಕಲಾಗುತ್ತಿದೆ’ ಎಂದರು.

‘ಘಟನೆಗೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ಒಂದೆರಡು ದಿನದಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ’ ಎಂದೂ ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ ‘ನಡೆಯಬಾರದ ಘಟನೆ ನಡೆದಿದೆ. ಈ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಕೊಡಿ’ ಎಂದು ಒತ್ತಾಯಿಸಿದರು.

ಹನೂರು ಶಾಸಕ ನರೇಂದ್ರ ಮಾತನಾಡಿ, ‘ಖಾಸಗಿ ಆಡಳಿತ ಮಂಡಳಿಯ ಒಡೆತನದ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡು, ಮುಂದಾಗುವ ಅನಾಹುತ ತಪ್ಪಿಸಬೇಕು’ ಎಂದು ಆಗ್ರಹಿಸಿದರು. ಬಿಜೆಪಿಯ ಗೋವಿಂದ ಕಾರಜೋಳ, ಸುಳ್ವಾಡಿ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಎರಡು ಎಕರೆ ಜಮೀನು ನೀಡುವಂತೆ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು