ಶನಿವಾರ, ಏಪ್ರಿಲ್ 4, 2020
19 °C
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್

ಎಡಿಆರ್: ಸಂಕೀರ್ಣ ಸಮಸ್ಯೆಗೂ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕೇಂದ್ರದಲ್ಲಿ ಕ್ಲಿಷ್ಟಕರ –ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದರು.

ನಗರದಲ್ಲಿರುವ ಕೆನರಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ (ಕೆಸಿಸಿಐ) ಆವರಣದಲ್ಲಿ ಶನಿವಾರ ಎಡಿಆರ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಕ್ಷಿದಾರರಿಗೆ ಹೇಳಿಕೊಳ್ಳಲಾಗದ ಸಮಸ್ಯೆಗಳು ಇರುತ್ತವೆ. ಅಭಿವ್ಯಕ್ತಿಗೆ ಅವಕಾಶ ಸಿಕ್ಕಾಗ ಅವು ಇತ್ಯರ್ಥಗೊಳ್ಳುತ್ತವೆ’ ಎಂದ ಅವರು, ‘ವೈವಾಹಿಕ ಪ್ರಕರಣಗಳಲ್ಲಿ ಇಂತಹ ಸಮಸ್ಯೆಗಳೇ ಹೆಚ್ಚು. ಹೆಚ್ಚಿನವರು ಹಣಕ್ಕಾಗಿ ವಿಚ್ಛೇದನ ಕೇಸು ಹಾಕಿರುವುದಿಲ್ಲ. ಪರಸ್ಪರ ಅಭಿವ್ಯಕ್ತಿಸಲಾಗದೇ ಕೋರ್ಟ್‌ ಮೆಟ್ಟಿಲೇರಿತ್ತಾರೆ. ಅದೇ ರೀತಿ ವ್ಯಾಪಾರ ಹಾಗೂ ಬದುಕಿನ ದೈನಂದಿನ ವ್ಯವಹಾರಗಳಲ್ಲೂ ಸಮಸ್ಯೆಗಳು ಇರುತ್ತವೆ’ ಎಂದು ವಿವರಿಸಿದರು.

ವೈವಾಹಿಕ ವ್ಯಾಜ್ಯ ಹೆಚ್ಚಳ

‘ಈಚೆಗೆ ವೈವಾಹಿಕ ವ್ಯಾಜ್ಯಗಳು ಹೆಚ್ಚಾಗುತ್ತಿವೆ’ ಎಂದ ಅವರು, ‘ತ್ರಿವಳಿ ತಲಾಕ್ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಮತ್ತೊಂದು ಒಪ್ಪಿತ ತಲಾಕ್‌ ಇದೆ. ಹಿರಿಯರ ಸಮಕ್ಷಮದಲ್ಲಿ ಒಂದು ತಲಾಕ್‌ ಹೇಳಿ, ಮತ್ತೊಂದು ತಲಾಕ್‌ ಹೇಳಲು ಒಂದು ತಿಂಗಳು ಕಳೆಯಬೇಕು. ಅನಂತರ ಒಂದು ತಿಂಗಳು ಬಿಟ್ಟು ಮೂರನೇ ತಲಾಕ್ ಹೇಳಬೇಕು. ಈ ನಡುವೆ ಕೆಲವೊಮ್ಮೆ ರಾಜಿಯೂ ಆಗುತ್ತದೆ. ‘ತಲಾಕ್‌’ಗಳ ನಡುವೆ ಸಮಯ ನೀಡುವ ಕಾರಣ ವಿವೇಚನೆಗೆ ಅವಕಾಶ ಸಿಗುತ್ತದೆ. ಆ ಕಾರಣಕ್ಕಾಗಿಯೇ ಮುಸ್ಲಿಮರಲ್ಲಿ ವೈವಾಹಿಕ ಮೊಕದ್ದಮೆಗಳು ಕಡಿಮೆ ಇವೆ. ಅದಕ್ಕಾಗಿಯೇ, ಎಲ್ಲ ವೈವಾಹಿಕ ವಿಚ್ಛೇದನ ನೀಡಲು ಕನಿಷ್ಠ ಆರು ತಿಂಗಳ ಸಮಯವನ್ನು ಕಡ್ಡಾಯ ಮಾಡಿದ್ದಾರೆ’ ಎಂದು ವಿಶ್ಲೇಷಿಸಿದರು.

‘1986ರ ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆಯನ್ನು ಆಗ ಹಿರಿಯ ನ್ಯಾಯಮೂರ್ತಿಯೊಬ್ಬರು, ‘ಇದು ಮುಸ್ಲಿಂ ಪುರುಷರ ರಕ್ಷಣಾ ಕಾಯ್ದೆ’ ಎಂದು ತಮಾಷೆ ಮಾಡುತ್ತಿದ್ದರು’ ಎಂದು ಉಲ್ಲೇಖಿಸಿದರು.

‘ಎಲ್ಲ ವ್ಯಾಜ್ಯಗಳು ಮಧ್ಯಸ್ಥಿಕೆ ಮೂಲಕ ಬಗೆಹರಿಯುವುದಿಲ್ಲ. ಹೀಗಾಗಿಯೇ, ಅಯೋಧ್ಯಾ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಬೇಕಾಯಿತು’ ಎಂದು ನೆನಪಿಸಿಕೊಂಡರು.

ಸೋತವನು ಸತ್ತ

‘ನಿಮ್ಮ ಮನೆಗೆ ಸಿವಿಲ್ ವ್ಯಾಜ್ಯ ಬೀಳಲಿ’ ಎಂಬುದು ಅತಿ ಕಠೋರ ಶಾಪವಾಗಿದೆ. ರಾಮನ ವನವಾಸವೇ 14 ವರ್ಷಗಳಲ್ಲಿ ಮುಗಿದರೂ, 3 ರಿಂದ 4 ದಶಕ ಮುಗಿಯದ ಸಿವಿಲ್‌ ವ್ಯಾಜ್ಯಗಳಿವೆ. ಅದಕ್ಕಾಗಿ ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎಂಬ ಮಾತು ಚಾಲ್ತಿಯಲ್ಲಿದೆ. ವ್ಯಾಜ್ಯ ಪರಿಹಾರದಲ್ಲಿ ಮಾನಸಿಕ ಸ್ಥಿತಿ ಮುಖ್ಯ ಎಂಬುದನ್ನು ಮನಗಂಡು ‘ಪರಿಹಾರ’ ಕೇಂದ್ರಗಳನ್ನು ಕಾನೂನು ಚೌಕಟ್ಟಿನಲ್ಲಿ ತೆರೆಯಲಾಗಿದೆ. ಇಲ್ಲಿ ಪಾಲುದಾರರು ಪರಿಹಾರ ಕಂಡುಕೊಳ್ಳುವುದು ಮುಖ್ಯ. ಸಮಸ್ಯೆಯಲ್ಲ’ ಎಂದರು.

ಶಾಂತಿದೂರರಾಗಿ

‘ತನ್ನ 20 ವರ್ಷಗಳ ವಕೀಲಿ ವೃತ್ತಿಯಲ್ಲಿ ಎಷ್ಟೋ ಪ್ರಕರಣಗಳನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿದ್ದೇನೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ವಕೀಲರು ಶಾಂತಿದೂತರಾಗಿರಬೇಕು. ಸಹಬಾಳ್ವೆಯ ನ್ಯಾಯ ಸಿಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ದಕ್ಷಿಣ ಕನ್ನಡದಲ್ಲಿ ತೀರ್ಪು ನೀಡುವುದು ಸ್ವಲ್ಪ ಕಷ್ಟಕರ. ಏಕೆಂದರೆ, ಇಲ್ಲಿನ ಪ್ರಕರಣಗಳು ಬಹುತೇಕ ಕೊನೆಗೊಳ್ಳುವುದು ಸುಪ್ರೀಂ ಕೋರ್ಟ್‌ನಲ್ಲಿ’ ಎಂದು ಮುಗುಳ್ನಕ್ಕರು.

‘ಬೇಡಿಕೆ, ಜನಸಂಖ್ಯಾ ಲಾಭಾಂಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಕಾರಣ ಭಾರತದಲ್ಲಿ ಬಂಡವಾಳ ಹೂಡಿಕೆಯ ಅವಕಾಶ ಹೆಚ್ಚಿದೆ’ ಎಂದರು.

ಅರಿವಿಲ್ಲದೇ ಸಾಯುವ ಮಂದಿ

‘ಪರಿಹಾರದ ಅರಿವಿಲ್ಲದೇ ಸಾಯುವ ಮಂದಿಗೆ ನ್ಯಾಯ ಕೊಡಿಸುವುದೇ ನ್ಯಾಯಾಂಗದ ದೊಡ್ಡ ಜವಾಬ್ದಾರಿ’ ಎಂದು ನ್ಯಾ. ಎಸ್.ಅಬ್ದುಲ್ ನಜೀರ್ ಹೇಳಿದರು. 

‘ದೇಶದ ನ್ಯಾಯಾಂಗಕ್ಕೆ ಎರಡು ದೊಡ್ಡ ಸಮಸ್ಯೆಗಳು ಕಾಡುತ್ತಿವೆ. ನ್ಯಾಯಕ್ಕೆ ತೆರೆದುಕೊಂಡವರು ಮತ್ತು  ಹೊರಗುಳಿದವರು. ಶಿಕ್ಷಣ ಮತ್ತಿತರ ಕಾರಣದಿಂದ ನ್ಯಾಯಾಲಯದ ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಮೂಲಸೌಕರ್ಯ ಮತ್ತಿತರ ಕೊರತೆಗಳ ಕಾರಣ ನ್ಯಾಯದಾನ ವಿಳಂಬವಾಗುತ್ತಿದೆ. ಮತ್ತೊಂದೆಡೆ ‘ನ್ಯಾಯ ವ್ಯವಸ್ಥೆ’ಯ ಅರಿವೇ ಇಲ್ಲದವರೂ ಇನ್ನೂ ಇದ್ದಾರೆ. ಹಕ್ಕಿಗಾಗಿ ಹೋರಾಡದೇ ಸಾಯುತ್ತಾರೆ. ಉತ್ತರ ಭಾರತದಲ್ಲಿ ಈ ಸ್ಥಿತಿ ಹೆಚ್ಚಾಗಿದೆ. ಅಂತಹವರಿಗೆ ನ್ಯಾಯ ಕೊಡಿಸುವುದು ನಮ್ಮ ದೊಡ್ಡ ಸವಾಲು’ ಎಂದರು. 

ನ್ಯಾ.ನಜೀರ್ ಪತ್ನಿ ಶಮೀರಾ ಅಬ್ದುಲ್ ನಜೀರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ಉಪಾಧ್ಯಕ್ಷ ಶಶಿಧರ್‌ ಪೈ ಮಾರೂರ್, ಎಡಿಆರ್ ಉಪಸಮಿತಿ ಅಧ್ಯಕ್ಷ ವಿವೇಕಾನಂದ ಪಣಿಯಾಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು