ಭಾನುವಾರ, ಆಗಸ್ಟ್ 25, 2019
21 °C
ಆದಾಯ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ಸೆಪ್ಟೆಂಬರ್ 1ರಿಂದ ಜಾರಿಗೆ

ಚಾಲಕ–ನಿರ್ವಾಹಕರು ಮೊಬೈಲ್ ದೂರವಾಣಿ ಬಳಸಿದರೆ ಸಸ್ಪೆಂಡ್‌!

Published:
Updated:
Prajavani

ಬೆಂಗಳೂರು: ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಿಲ್ಲದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳ ಚಾಲಕ–ನಿರ್ವಾಹಕರು ಇನ್ನುಮುಂದೆ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ದೂರವಾಣಿ ಬಳಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರೆ ಅಮಾನತುಗೊಳ್ಳಲಿದ್ದಾರೆ.

ಚಾಲಕ–ನಿರ್ವಾಹಕರು ಮೊಬೈಲ್ ದೂರವಾಣಿ ಬಳಸುವುದನ್ನು ನಿಷೇಧಿಸಿ ನಿಗಮ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ 1ರಿಂದ ಈ ಹೊಸ ಆದೇಶ ಜಾರಿಗೆ ಬರಲಿದೆ.

ಮೊಬೈಲ್ ದೂರವಾಣಿ ಬಳಸಲು ಇದ್ದ ಅವಕಾಶವನ್ನು ಚಾಲಕರು ಮತ್ತು ನಿರ್ವಾಹಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ತನಿಖಾ ಸಿಬ್ಬಂದಿಗಳು ಯಾವ ಮಾರ್ಗದಲ್ಲಿದ್ದಾರೆ ಎಂಬುದರ ಬಗ್ಗೆ ಬೇರೆ ಬಸ್‌ಗಳ ಚಾಲಕ–ನಿರ್ವಾಹಕರು ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿರುವುದು  ಗಮನಕ್ಕೆ ಬಂದಿದೆ.

‘ಆದಾಯ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಮತ್ತು ಸಂಭವನೀಯ ಅಪಘಾತ  ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯದ ಸಮಯದಲ್ಲಿ ಈ ಸಿಬ್ಬಂದಿ ಮೊಬೈಲ್ ದೂರವಾಣಿಯನ್ನು ನಿಷ್ಕ್ರಿಯಗೊಳಿಸಿ ತಮ್ಮ ಸ್ವಂತ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

‘ಮೊಬೈಲ್ ನಿಷ್ಕ್ರಿಯಗೊಳಿಸಿಯೂ ಪೆಟ್ಟಿಗೆಯಲ್ಲಿ ಇಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರೆ ಕೆಂಪು ಗುರುತಿನ(ಆರ್‌ಎಂಸಿ) ಪ್ರಕರಣ ಎಂದು ಪರಿಗಣಿಸಲಾಗುವುದು. ತನಿಖಾ ಸಿಬ್ಬಂದಿ ಬಂದಾಗ ಮೊಬೈಲ್ ದೂರವಾಣಿ ಬಳಕೆ ಮಾಡುತ್ತಿರುವುದು ಕಂಡು ಬಂದರೆ ಅತಿ ಗಂಭೀರ ಕೆಂಪು ಗುರುತಿನ(ಒಆರ್‌ಎಂಸಿ) ಪ್ರಕರಣ ಎಂದು ಪರಿಗಣಿಸಲಾಗುವುದು. ದೂರವಾಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಈ ಆದೇಶ ಉಲ್ಲಂಘಿಸಿ ಪದೇ‍ ‍ಪದೇ ಮೊಬೈಲ್ ಬಳಿಕೆ ಮಾಡಿ ಸಿಕ್ಕಿಬಿದ್ದರೆ ಅಮಾನತುಗೊಳಿಸುವ ಅಧಿಕಾರವನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನೀಡಲಾಗಿದೆ’ ಎಂದು ನಿಗಮದ ವ್ಯವಸ್ಥಾ‍‍ಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು. 

Post Comments (+)