ಶನಿವಾರ, ಮಾರ್ಚ್ 6, 2021
21 °C
ಕಾಯ್ದೆ ಅನುಷ್ಠಾನದಲ್ಲಿ ಇರುವ ಗೊಂದಲ ಕುರಿತು ವಿಧಾನ ಪರಿಷತ್ ಸದಸ್ಯರ ಅಭಿಮತ

ವರ್ಗಾವಣೆ ಇರಲಿ, ನ್ಯೂನತೆಯನ್ನು ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಆರಂಭವಾಗಿದ್ದು, ಭಾರಿ ಗೊಂದಲಗಳಿಂದಾಗಿ ಹಲವಾರು ಶಿಕ್ಷಕರು ಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ತಕ್ಷಣಕ್ಕೆ ಬಗೆಹರಿಸುವುದು ಸಾಧ್ಯವಿಲ್ಲ, ಆದರೆ ವರ್ಗಾವಣೆ ಕಾಯ್ದೆಗೆ ಸೂಕ್ತ ತಿದ್ದುಪಡಿಯೊಂದೇ ದಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಪ್ರಜಾವಾಣಿ’ ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿರುವ ನಾಲ್ವರು ವಿಧಾನ ಪರಿಷತ್ ಸದಸ್ಯರನ್ನು ಮಾತನಾಡಿಸಿದಾಗ ವಿವಿಧ ಸಲಹೆಗಳು ಕೇಳಿಬಂದವು. ಒತ್ತಡದ ಮೂಲವಾಗಿರುವ ಕಡ್ಡಾಯ ವರ್ಗಾವಣೆಯನ್ನು ರದ್ದುಗೊಳಿಸಿದರೆ ಇಡೀ ವರ್ಗಾವಣೆ ಪ್ರಕ್ರಿಯೆಯೇ ಕುಸಿದುಬೀಳುವ ಅಪಾಯ ಇದೆ ಎಂಬ ಆತಂಕವೂ ಕೇಳಿಬಂತು.

‘ವರ್ಗಾವಣೆ ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಮತ್ತೊಂದು ತಿದ್ದುಪಡಿಯನ್ನು ಜಾರಿಗೆ ತರಬೇಕು. ಕಡ್ಡಾಯ ವರ್ಗಾವಣೆಯನ್ನು ವಿರೋಧಿಸುತ್ತಿರುವವರ ಒತ್ತಡಕ್ಕೆ ಮಣಿದರೆ ಇಡೀ ವರ್ಗಾವಣೆ ಪ್ರಕ್ರಿಯೆಯೇ ಕುಸಿದು ಬೀಳಬಹುದು. ಈ ಬಾರಿಯ ವರ್ಗಾವಣೆ ಮುಗಿದ ತಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ಮುಂದಿನ ವರ್ಷ ವ್ಯವಸ್ಥಿತವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಮರಿತಿಬ್ಬೇಗೌಡ ಹೇಳಿದರು.

‘ಎ, ಬಿ, ಸಿ ವಲಯಗಳಿಗೆ ಕಡ್ಡಾಯ ವರ್ಗಾವಣೆ ಮಾಡುವ ಅಗತ್ಯವೇ ಇಲ್ಲ. ತಾಲ್ಲೂಕು, ಜಿಲ್ಲೆ ಮತ್ತು ವಿಭಾಗೀಯ ಹಂತದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದ್ದೇ ಆದರೆ ಯಾವ ಗೊಂದಲವೂ ಇಲ್ಲದೆ ವರ್ಗಾವಣೆ ಪ್ರಕ್ರಿಯೆ ಕೊನೆಗೊಳಿಸಬಹುದು. ತಪ್ಪು ಮಾಡಿದ ಅಧಿಕಾರಿಗಳಿಗೆ ತಕ್ಷಣ ಶಿಕ್ಷೆಯಾಗುವಂತೆ ನೋಡಿಕೊಂಡರೆ ವ್ಯವಸ್ಥೆ ಸರಿಯಾಗಿಬಿಡುತ್ತದೆ’ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

‘ಶೇ 5ರಷ್ಟು ಶಿಕ್ಷಕರನ್ನು ಕಡ್ಡಾಯ ವರ್ಗಾವಣೆಗೆ ಒಡ್ಡುವುದರಿಂದ ಕೆಲಸದ ಒತ್ತಡ ಇರುವ ಶಾಲೆಗಳಿಗೆ ಬೇರೆ ಕಡೆಯಿಂದ ಶಿಕ್ಷಕರು ಬರುವುದಿಲ್ಲ. ಆಗ ಅಂತಹ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕ್ಷೀಣಿಸುತ್ತದೆ. ಇದರ ಬದಲಿಗೆ ಕೋರಿಕೆ ವರ್ಗಾವಣೆಗೆ ಹೆಚ್ಚು ಒತ್ತು ಕೊಡಬಹುದು’ ಎಂದು ಪುಟ್ಟಣ್ಣ ಒತ್ತಾಯಿಸಿದರು.

‘ವರ್ಗಾವಣೆಯಲ್ಲಿ ಭಾರಿ ಗೊಂದಲ ಇದೆ, ಹಾಗಂತ ಈ ಹಂತದಲ್ಲಿ ಅದನ್ನು ಸ್ಥಗಿತಗೊಳಿಸುವುದೂ ಸಾಧ್ಯವಿಲ್ಲ. ವಿದ್ಯಾರ್ಥಿ–ಶಿಕ್ಷಕ ಅನುಪಾತವನ್ನು ಸರಿಯಾಗಿ ಪರಿಗಣಿಸಿದರೆ ಹೆಚ್ಚುವರಿ ಶಿಕ್ಷಕರಿಗೆ ಸಂಬಂಧಿಸಿದ ಗೊಂದಲ ನಿವಾರಣೆಯಾಗುತ್ತದೆ. ಪತಿ–ಪತ್ನಿ, ಅನಾರೋಗ್ಯ ಆಧಾರದಲ್ಲಿ ವರ್ಗಾವಣೆ ರದ್ದುಪಡಿಸುವಲ್ಲಿರುವ ಗೊಂದಲ ಬಗೆಹರಿಸುವುದು ಅಧಿಕಾರಿಗಳಿಗೆ ಸಾಧ್ಯ’ ಎಂದು ಅರುಣ್‌ ಶಹಾಪುರ ಹೇಳಿದರು.

‘ಈಗಾಗಲೇ ಪ್ರಕಟಿಸಿದಂತೆ ವರ್ಗಾವಣೆ ಕೌನ್ಸೆಲಿಂಗ್‌ ಆರಂಭವಾಗಿದೆ. ವೇಳಾಪಟ್ಟಿಯಂತೆ ಅದು ನಡೆಯಲಿದ್ದು, ಶಿಕ್ಷಕರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ, ಯಾವ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

**

ನಾನು ರೂಪಿಸಿದ ಕಾಯ್ದೆ ಇದು, ಗೊಂದಲಗಳನ್ನು ಅರ್ಧ ಗಂಟೆಯಲ್ಲೇ ಬಗೆಹರಿಸಬಹುದು. ಎ,ಬಿ, ಸಿ, ವಲಯದೊಳಗೇ ಕಡ್ಡಾಯ ವರ್ಗಾವಣೆ ಮಾಡಬಹುದಲ್ಲ, ಅಧಿಕಾರಿಗಳಿಗೆ ಹೊಣೆ ಇರಲಿ.
-ಬಸವರಾಜ ಹೊರಟ್ಟಿ

**

ಕೋರಿಕೆ ವರ್ಗಾವಣೆ ಪ್ರಮಾಣ ಹೆಚ್ಚಿಸಿ, ಕಡ್ಡಾಯ ವರ್ಗಾವಣೆಯನ್ನು ರದ್ದುಪಡಿಸಬಹುದು. ಕೇವಲ ಶೇ 5ರಷ್ಟಿರುವ ಕಡ್ಡಾಯ ವರ್ಗಾವಣೆಯಿಂದ ಉತ್ತಮ ಶಿಕ್ಷಣ ಸಂಸ್ಥೆಗಳೂ ಕೆಟ್ಟುಹೋಗುವ ಅಪಾಯ ಇದೆ.
-ಪುಟ್ಟಣ್ಣ

**

ಕಡ್ಡಾಯ ವರ್ಗಾವಣೆಯನ್ನಷ್ಟೇ ಸ್ಥಗಿತಗೊಳಿಸಿಬಿಟ್ಟರೆ ಇಡೀ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳುವ ಅಪಾಯ ಇದೆ. ಅಧಿಕಾರಿಗಳು ಸರಿಯಾಗಿ ನಡೆದುಕೊಂಡಿದ್ದರೆ ಅಂತಹ ಗೊಂದಲ ಆಗುತ್ತಿರಲಿಲ್ಲ.
-ಅರುಣ್‌ ಶಹಾಪುರ

**

2017–18ರಲ್ಲಿನ ಶಿಕ್ಷಕ–ವಿದ್ಯಾರ್ಥಿ ಅನುಪಾತ ನೋಡಿಕೊಂಡು ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆಗೆ ಈ ಬಾರಿ ಕೈಹಾಕಿದ್ದೇ ದೊಡ್ಡ ತಪ್ಪು. ನ್ಯೂನತೆ ಸರಿಪಡಿಸಿ ಕಾಯ್ದೆಗೆ ತಿದ್ದುಪಡಿ ತರಲೇಬೇಕು.
-ಮರಿತಿಬ್ಬೇಗೌಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು