ಮಂಗಳವಾರ, ಏಪ್ರಿಲ್ 20, 2021
31 °C
ಸಿದ್ಧವಾದ ವೇಳಾಪಟ್ಟಿ; ಆಗಸ್ಟ್‌ 10ರೊಳಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ನಿರ್ಧಾರ

10ರಿಂದ ಶಿಕ್ಷಕರ ವರ್ಗಾವಣೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಕೊನೆಗೂ ಚಾಲನೆ ನೀಡಿದ್ದು, ‘ಸಿ’ ವಲಯದ ಶಾಲೆಗಳಿಗೆ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ.

ಜೂನ್‌ 10ರಂದು ಟಿಡಿಎಸ್‌ ಮತ್ತು ವರ್ಗಾವಣೆ ತಂತ್ರಾಂಶದಲ್ಲಿ ಶಾಲೆಗಳ ವಲಯಗಳ ವಿವರ ನೀಡುವುದರ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿವೆ. ಆಗಸ್ಟ್‌ 10ರೊಳಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್‌ ವ್ಯಕ್ತಪಡಿಸಿದ್ದಾರೆ. ಸುಮಾರು 27 ಪುಟಗಳ ವರ್ಗಾವಣೆ ಮಾರ್ಗಸೂಚಿಗಳು ಮತ್ತು ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ. ಮಾಹಿತಿಗೆ www.schooleducation.kar.nic.in ವೆಬ್‌ಸೈಟ್‌ ನೋಡಬಹುದು.

ಕಡ್ಡಾಯ/ಕೋರಿಕೆ/ಪರಸ್ಪರ ವರ್ಗಾವಣೆ ಪಟ್ಟಿಗೆ ಆಕ್ಷೇಪಣೆಯನ್ನು ಜೂನ್ 12ರಿಂದ 20ರ ವರೆಗೆ ಸ್ವೀಕರಿಸಲಾಗುವುದು. 26ರಂದು ಅದನ್ನು ಅಂತಿಮಗೊಳಿಸಿ, ಅದೇ ದಿನ ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿ ಮಾಡಿ, ಶಾಲಾವಾರು ಖಾಲಿ ಹುದ್ದೆ ಪಟ್ಟಿ ಪ್ರಕಟಿಸಲಾಗುತ್ತದೆ.

ಪ್ರಮುಖ ನಿಯಮ: ಯಾವುದೇ ತಾಲ್ಲೂಕು ಅಥವಾ ಘಟಕದಿಂದ ಹೊರಗೆ ವರ್ಗಾವಣೆ ಹೊಂದಲು ಕೋರಿ ಅರ್ಜಿ ಸಲ್ಲಿಸಬೇಕಾದಲ್ಲಿ ಆ ಘಟಕದಲ್ಲಿ ಮಂಜೂರಾದ ಆಯಾ ವೃಂದದ ಖಾಲಿ ಹುದ್ದೆಗಳು ಶೇ 20ಕ್ಕಿಂತ ಹೆಚ್ಚು ಖಾಲಿ ಇರಬಾರದು. ವರ್ಗಾವಣೆ ಕೋರುವ ಘಟಕದಲ್ಲಿ ಯಾವುದೇ ಹೆಚ್ಚುವರಿ ಶಿಕ್ಷಕರು ಇರಬಾರದು ಎಂಬ ಪ್ರಮುಖ ನಿಯಮ ರೂಪಿಸಲಾಗಿದೆ.

ವರ್ಗಾವಣೆ ವಿಧಗಳು: ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಕಡ್ಡಾಯ ವರ್ಗಾವಣೆ, ಕೋರಿಕೆ ವರ್ಗಾವಣೆಯಲ್ಲಿ ಘಟಕದ ಒಳಗಿನ ಮತ್ತು ಹೊರಗಿನ ವರ್ಗಾವಣೆ, ಪರಸ್ಪರ ವರ್ಗಾವಣೆ ಹಾಗೂ ದೂರಿನ ಪ್ರಕರಣಗಳ ವರ್ಗಾವಣೆಗಳ ಎಂದು ವಿಭಾಗಿಸಲಾಗಿದೆ. ಎಲ್ಲದಕ್ಕೂ ಪ್ರತ್ಯೇಕ ವೇಳಾಪಟ್ಟಿ ನೀಡಲಾಗಿದೆ.

2018ರಲ್ಲಿ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ, ವರ್ಗಾವಣೆ ವೇಳೆ ಅರ್ಜಿ ಸಲ್ಲಿಸಿದ್ದ ಸುಮಾರು 50 ಸಾವಿರ ಪ್ರಾಥಮಿಕ ಶಾಲೆಯ ಶಿಕ್ಷಕರ ಅರ್ಜಿಗಳನ್ನು ಹೊಸ ನಿಯಮಗಳು ಮತ್ತು ಮಾರ್ಗಸೂಚಿಯಂತೆ ಪರಿಗಣಿಸಲಾಗುತ್ತದೆ. ‍ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಪರಿಗಣಿಸುವ ವೇಳೆ ಕರ್ನಾಟಕ ಪಬ್ಲಿಕ್‌ ಶಾಲೆ ಮತ್ತು ‌ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಗೀತ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಬಾರದು ಎಂದು ಆಯುಕ್ತರು ಸೂಚಿಸಿದ್ದಾರೆ. 

ವರ್ಗಾವಣೆ ಪ್ರಕ್ರಿಯೆಗಳೆಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತವೆ. ಒಮ್ಮೆ ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿದ ನಂತರ ಮಾರ್ಪಾಡು ಅಥವಾ ವರ್ಗಾವಣೆ ಆದೇಶ ರದ್ದತಿಗೆ ಅವಕಾಶ ಇರುವುದಿಲ್ಲ.

ಇಲಾಖೆ ವೆಬ್‌ಸೈಟ್‌ ಅನ್ನು (www.schooleducation.kar.nic.in ) ಪ್ರತಿದಿನ ನೋಡಿ ಮಾಹಿತಿ ಪಡೆದುಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು