ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುವೈನಿಂದ 2000 ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ತರಬೇತಿ: ಡಾ. ಅಶ್ವತ್ಥನಾರಾಯಣ

Last Updated 21 ಮೇ 2020, 10:05 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಲ ತಂತ್ರಜ್ಞಾನ ಹಾಗೂ ಕೌಶಲ ತರಬೇತಿ ನೀಡಲು ಹುವೈ ಸಂಸ್ಥೆ ಮುಂದೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಹುವೈ ಟೆಲಿ ಕಮುನಿಕೇಷನ್ ಎಂಟರ್‌ಪ್ರೈಸಸ್‌ ಮುಖ್ಯಸ್ಥರಾದ ಡೆರೆಕ್ ಹು ಮತ್ತು ಉಪಾಧ್ಯಕ್ಷ ಸ್ಟ್ಯಾಂಡಿ ನೇತೃತ್ವದ ‌ನಿಯೋಗವನ್ನು ಗುರುವಾರ ಇಲ್ಲಿ ಭೇಟಿ ಮಾಡಿದ ನಂತರ, ಡಾ.ಅಶ್ವತ್ಥನಾರಾಯಣ ಸುದ್ದಿಗಾರರ ಜತೆ ಮಾತನಾಡಿದರು.

'ಸರ್ಕಾರಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ಮುಂದಿನ ವೃತ್ತಿ ಜೀವನಕ್ಕೆ ಪೂರಕವಾದ ಮೂಲ ತಂತ್ರಜ್ಞಾನ, ಕೌಶಲ ಅಭಿವೃದ್ಧಿ ತರಬೇತಿ ನೀಡಲು ಹುವೈ ಸಂಸ್ಥೆ ಉತ್ಸುಕವಾಗಿದ್ದು, ಈ ಸಂಬಂಧ ಸಂಸ್ಥೆಯವರ ಜತೆ ಹೆಚ್ಚಿನ ಮಾತುಕತೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು,' ಎಂದು ತಿಳಿಸಿದರು.

'ಕೃತಕ ಬುದ್ಧಿಮತ್ತೆಯಂಥ ಅತ್ಯಾಧುನಿಕ ತಂತ್ರಜ್ಞಾನ ವಿಷಯಗಳ ಕುರಿತು ಸುಮಾರು 2000 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್‌ ಕೋರ್ಸ್‌ ನಡೆಸಲು ಸಿದ್ಧ ಎಂದು ಹುವೈ ಸಂಸ್ಥೆಯವರು ತಿಳಿಸಿದ್ದಾರೆ. ಕಾಲೇಜುಗಳ ಜತೆ ಕಾರ್ಯ ನಿರ್ವಹಿಸಲು ಅವರಿಗೆ ಅನುಕೂಲ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಹುವೈ ಸಂಸ್ಥೆ ಸರ್ಕಾರದ ಜತೆ ಕೈ ಜೋಡಿಸಲು ಮುಂದೆ ಬಂದಿರುವುದು ಪ್ರಶಂಸಾರ್ಹ,' ಎಂದರು.

'ಇಂಟರ್ನೆಟ್‌ ಸೇವೆ ಪೂರೈಕೆ ಹಾಗೂ ಎಲೆಕ್ಟ್ರಾನಿಕ್‌ ಉತ್ಪಾದಕ ಸಂಸ್ಥೆ ಹುವೈ, ತಂತ್ರಜ್ಞಾನ ಆವಿಷ್ಕಾರದಲ್ಲೂ ಮುಂದಿದೆ. ವೈಟ್‌ಫೀಲ್ಡ್‌ನಲ್ಲಿ ಅವರ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಿದ್ದು, ಸುಮಾರು 4200 ನುರಿತ ಎಂಜಿನಿಯರ್‌ಗಳು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನ ಆವಿಷ್ಕಾರಗಳಿಗೆ ನಮ್ಮ ಸರ್ಕಾರದ ಪ್ರೋತ್ಸಾಹ ಸದಾ ಇರುತ್ತದೆ,' ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT