ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿಲ್ಲ ಪುಸ್ತಕ ಬಿಡುಗಡೆ; ಸಾಹಿತಿಗಳಿಗೆ ನಿರಾಸೆ

ಸಮ್ಮೇಳನದ ಸವಿನೆನಪಿಗಾಗಿ 85 ಪುಸ್ತಕ ಬಿಡುಗಡೆ ಮಾಡುವರೆಂಬ ನಿರೀಕ್ಷೆ ಹುಸಿ
Last Updated 6 ಜನವರಿ 2020, 2:49 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ 32 ವರ್ಷಗಳ ಬಳಿಕ ನಡೆಯುತ್ತಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ 85 ಕೃತಿಗಳನ್ನು ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆ ಮಾಡಬೇಕು ಎಂಬ ಸಾಹಿತಿಗಳ ಬೇಡಿಕೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.

ಪ್ರತಿ ವರ್ಷದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕಸಾಪ ಕೃತಿಗಳನ್ನು ಬಿಡುಗಡೆ ಮಾಡುವ ರೂಢಿ ಇರಿಸಿಕೊಂಡಿದೆ. ಹೀಗಾಗಿ, ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ನೆಪದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪರಂಪರೆ, ಸಂಸ್ಕೃತಿ, ಭಾಷೆಯ ಸೊಗಡು, ಪ್ರಾಗೈತಿಹಾಸ, ತತ್ವಪದಕಾರರು, ಸೂಫಿ–ಸಂತರ ಜೀವನ ಚರಿತ್ರೆಯಂತಹ ವಿಷಯಗಳನ್ನೊಳಗೊಂಡ ಕೃತಿಗಳನ್ನು ಪ್ರಕಟಿಸುವ ಮೂಲಕ ನಿಜವಾದ ಅರ್ಥದಲ್ಲಿ ಸಾಹಿತ್ಯ ಸೇವೆ ಮಾಡುತ್ತದೆ ಎಂಬ ನಿರೀಕ್ಷೆಯನ್ನು ಹೊಂದಲಾಗಿತ್ತು.

ಆದರೆ, ಸಮ್ಮೇಳನದ ದಿನಾಂಕವನ್ನೇ ವಿಳಂಬವಾಗಿ ಪ್ರಕಟಿಸಲಾಯಿತು. ವಾರಾಂತ್ಯದ ಬದಲು ವಾರದ ದಿನಗಳಲ್ಲಿಯೇ ಸಮ್ಮೇಳನನಡೆಸುವ ಕುರಿತಂತೆ ಉಂಟಾದ ಗೊಂದಲ, ಸಿದ್ಧತೆಗೆ ಸಾಕಷ್ಟು ಸಮಯ ದೊರೆಯದೇ ಇದ್ದುದರಿಂದ ಸದ್ಯಕ್ಕೆ ಕೃತಿಗಳನ್ನು ಪ್ರಕಟಿಸುವ ಗೊಡವೆಗೆ ಹೋಗುವುದಿಲ್ಲ ಎಂದು ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆದ ಸಮ್ಮೇಳನದ ಪೂರ್ವಸಿದ್ಧತಾ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ ಅವರು ಸ್ಪಷ್ಟಪಡಿಸಿದ್ದಾರೆ.

ಕಸಾಪದ ಈ ನಿಲುವಿಗೆ ಬೇಸರ ವ್ಯಕ್ತಪಡಿಸಿರುವ ಸಾಹಿತಿ ಸ್ವಾಮಿರಾವ ಕುಲಕರ್ಣಿ, ‘ಮೂರು ದಶಕಗಳ ಬಳಿಕ ಸಮ್ಮೇಳನ ನಡೆಯುತ್ತಿರುವುದರಿಂದ ಸಹಜವಾಗಿಯೇ ಇಲ್ಲಿನ ಸಂಶೋಧನೆ, ಸಾಹಿತ್ಯಿಕ ಕೃತಿಗಳು ಪ್ರಕಟವಾಗಬೇಕು ಎಂಬುದು ಸಾಹಿತಿಗಳ ಅಭಿಪ್ರಾಯ. ಇರುವ ಅಲ್ಪ ಅವಧಿಯಲ್ಲಿಯೇ ಲೇಖಕರನ್ನು ಸಂಪರ್ಕಿಸಿ ಕೃತಿಗಳನ್ನು ಮುದ್ರಿಸುವ ಕಾರ್ಯವನ್ನು ಕಸಾಪ ಮಾಡಬೇಕಿತ್ತು. ಇದು ಸಾಧ್ಯವಾಗದಿದ್ದರೆ ಈ ಭಾಗದ ಹಲವು ಲೇಖಕರು ಸಂಶೋಧನೆ ಮಾಡಿದ ಕೃತಿಗಳು ಸಾಕಷ್ಟು ಮೌಲಿಕವಾಗಿದ್ದು, ಅವುಗಳ ಪ್ರತಿ ಎಲ್ಲಿಯೂ ಸಿಗುತ್ತಿಲ್ಲ. ಅಂಥವನ್ನಾದರೂ ಗುರುತಿಸಿ ಮರು ಮುದ್ರಣ ಕಾರ್ಯ ಕೈಗೆತ್ತಿಕೊಳ್ಳಬೇಕಿತ್ತು’ ಎಂದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ‘ಪ್ರತಿ ಸಮ್ಮೇಳನದಲ್ಲಿಯೂ ಸಮ್ಮೇಳನದ ಸಂಖ್ಯೆಗೆ ತಕ್ಕಂತೆ ಕೃತಿಗಳನ್ನು ಪ್ರಕಟಿಸುತ್ತಿದ್ದೆವು. ಆದರೆ, ಬರೀ ಸಂಖ್ಯೆಯ ಬೆನ್ನು ಬಿದ್ದುದರಿಂದ ಮೌಲಿಕ ಕೃತಿಗಳು ಬರಲಿಲ್ಲ. ಹೀಗಾಗಿ, ಸಾವಿರಾರು ಕೃತಿಗಳು ಮಾರಾಟವಾಗದೇ ಉಳಿದಿವೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ‘ಮುಖ್ಯಮಂತ್ರಿ ಅವರು ಕಾರ್ಯಕ್ರಮ ಉದ್ಘಾಟಿಸುವುದರಿಂದ ಭದ್ರತೆಯ ದೃಷ್ಟಿಯಿಂದ ಎಲ್ಲ ಲೇಖಕರನ್ನು ವೇದಿಕೆಗೆ ಕರೆಯುವುದು ಆಗುವುದಿಲ್ಲ. ಹೀಗಾಗಿ, ಪುಸ್ತಕ ಬಿಡುಗಡೆ ಮಾಡುತ್ತಿಲ್ಲ. ಲೇಖಕರೊಬ್ಬರು ತಮ್ಮ ಕೃತಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ಪುಸ್ತಕಗಳ ಬಿಡುಗಡೆ ಇಲ್ಲದಿರುವುದರಿಂದ ಅವರ ಮನವಿಯನ್ನು ಪರಿಗಣಿಸಲಿಲ್ಲ’ ಎಂದರು.

ಸಾಹಿತ್ಯ ಸಮ್ಮೇಳನದ ಲಾಂಛನಬಿಡುಗಡೆ

ಕಲಬುರ್ಗಿಯಲ್ಲಿ ಫೆ.5ರಿಂದ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಭಾನುವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ ಬಿಡುಗಡೆ ಮಾಡಿದರು.

ಲಾಂಛನವು ವಿಶಿಷ್ಟವಾಗಿದ್ದು, ಕಲ್ಯಾಣ ಕರ್ನಾಟಕದ ಸೊಗಡು, ಸಂಸ್ಕೃತಿ ಮತ್ತು ಸಾಹಿತ್ಯಿಕ ಮಹತ್ವ ಸಾರುವ ಚಿತ್ರಗಳನ್ನು ಹೊಂದಿದೆ. ಇದನ್ನು ಸ್ಥಳೀಯ ಕಲಾವಿದ ಡಾ.ಪಿ.ಪರಶುರಾಮ ವಿನ್ಯಾಸಗೊಳಿಸಿದ್ದಾರೆ.

ಕನ್ನಡದ ಮೊದಲ ಉಪಲಬ್ಧ ಗ್ರಂಥ ‘ಕವಿರಾಜ ಮಾರ್ಗ’, ಕನ್ನಡಾಂಬೆಯ ಚಿತ್ರ, ಜಾನಪದ ಛತ್ರಿ, ಶಾಸನ, ಸೂಫಿ ಸಂತ ಹಜರತ್‌ ಖಾಜಾ ಬಂದೇ ನವಾಜ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ಕೋಟೆ, ಚರ್ಚ್‌, ಬುದ್ಧ ವಿಹಾರ, ಸನ್ನತಿಯ ಶಿಲ್ಪಗಳು, ವಚನಕಾರರ ತಾಳೆಗರಿ ಕಟ್ಟು, ತೊಗರಿ ಬೆಳೆ ಚಿತ್ರವನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

‘16 ಸಮಿತಿಗಳ ಸಭೆ ನಡೆಸಲಾಗಿದ್ದು, ಸಮ್ಮೇಳನದ ತಯಾರಿ ಕುರಿತು ಮಾಹಿತಿ ಪಡೆಯಲಾಗಿದೆ. ಜ.15ರೊಳಗೆ ಪ್ರತಿನಿಧಿ ನೋಂದಣಿ ಕುರಿತು ಮಾಹಿತಿ ದೊರೆಯಲಿದೆ’ ಎಂದುಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದರು.

‘ಸಮ್ಮೇಳನಕ್ಕೆ 1,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹಂತಹಂತವಾಗಿ ಸಭೆಗಳನ್ನು ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಪಿ ಕಿಶೋರ್ ಬಾಬು ತಿಳಿಸಿದರು.

***

ಸಮ್ಮೇಳನದ ಸಿದ್ಧತೆಗೆ ಹೆಚ್ಚು ಸಮಯವಿಲ್ಲ. ಹೀಗಾಗಿ ಗಡಿಬಿಡಿಯಲ್ಲಿ ಪುಸ್ತಕ ಪ್ರಕಟಿಸುವುದು ಬೇಡ. ಸಮ್ಮೇಳನದ ನಂತರ ಪುಸ್ತಕಗಳ ಪಟ್ಟಿ ನೀಡಿದರೆ ಅವುಗಳನ್ನು ಕಸಾಪ ಪ್ರಕಟಿಸಲಿದೆ

–ಡಾ.ಮನು ಬಳಿಗಾರ,ಕಸಾಪ ಅಧ್ಯಕ್ಷ

85 ಕೃತಿಗಳನ್ನು ಬಿಡುಗಡೆ ಮಾಡುವಂತೆ ಕಸಾಪ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಈಗಾಗಲೇ ತಡವಾಗಿದ್ದರಿಂದ ಸಮ್ಮೇಳನದ ನಂತರ ಪ್ರಕಟಿಸುತ್ತೇವೆ ಎಂದಿದ್ದಾರೆ. ಸಮ್ಮೇಳನದ ನಂತರವಾದರೂ ಅಷ್ಟು ಕೃತಿಗಳು ಬಿಡುಗಡೆಯಾಗಬೇಕು

–ವಸಂತ ಕುಷ್ಟಗಿ,ಸಾಹಿತಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT