ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಒಕ್ಕಲಿಗರಿಗಿಲ್ಲ ಮೀಸಲಾತಿ

ಕೇಂದ್ರದ ಬಿಸಿಎಂ ಪಟ್ಟಿ, ಶೇ‌ 10ರ ಮೀಸಲಾತಿ ಪಟ್ಟಿಯಲ್ಲೂ ಹೆಸರು ಇಲ್ಲ
Last Updated 15 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಿರುವ ಶೇ 10ರಷ್ಟು ಮೀಸಲಾತಿಯಿಂದ ನಗರ ಪ್ರದೇಶದ ಒಕ್ಕಲಿಗ ಸಮುದಾಯ ವಂಚಿತವಾಗಿದೆ.

ಒಕ್ಕಲಿಗ ಮತ್ತು ಅದರ ಉಪಜಾತಿಗಳು ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಒಕ್ಕಲಿಗ (ಗ್ರಾಮಾಂತರ ಪ್ರದೇಶ ಮಾತ್ರ) ಎಂದು ನಮೂದಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ವರ್ಗಗಳ (3ಎ) ಮೀಸಲಾತಿಯಿಂದ ನಗರ ಪ್ರದೇಶದ ಒಕ್ಕಲಿಗರು ಹೊರಗುಳಿದಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಶೇ 10ರಷ್ಟು ಮೀಸಲಾತಿ ಪಟ್ಟಿಯಲ್ಲಿ ಈವರೆಗೆ ಮೀಸಲಾತಿಯಿಂದ ಹೊರಗಿರುವ ಸಾಮಾನ್ಯ ವರ್ಗದವರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಅದರಲ್ಲಿ ಸರ್ಪ ಒಕ್ಕಲಿಗ, ಹಳ್ಳಿಕಾರ್‌ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ ಸಮುದಾಯಗಳು ಸೇರಿವೆ.

ಆದರೆ, ಶಾಲಾ ದಾಖಲೆಗಳಲ್ಲಿ ‘ಒಕ್ಕಲಿಗ’ ಎಂದಷ್ಟೇ ನಮೂದಿಸಿರುವ ನಗರ ಪ್ರದೇಶದವರು ಈಗ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ (3ಎ) ಪಟ್ಟಿಯಲ್ಲಿ ಹಾಗೂ ಇಡಬ್ಲ್ಯುಎಸ್‌ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ. ಉಪಜಾತಿಗಳ ಬಗ್ಗೆ ದಾಖಲೆ ಇದ್ದವರಿಗೆ ಮಾತ್ರತಹಶೀಲ್ದಾರ್ ಕಚೇರಿಗಳಲ್ಲಿ ಇಡಬ್ಲ್ಯುಎಸ್‌ ಪ್ರಮಾಣಪತ್ರ ನೀಡಲಾಗುತ್ತಿದೆ.

ನಗರ ಪ್ರದೇಶದ ‘ಒಕ್ಕಲಿಗ’ ವಿದ್ಯಾರ್ಥಿಗಳು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ನಡೆಸುವ ಎನ್‌ಇಟಿ ಪರೀಕ್ಷೆ ಬರೆಯುವಾಗ ಇಡಬ್ಲ್ಯುಎಸ್‌ ಎಂದು ನಮೂದಿಸಿದ್ದರು. ಅವರಲ್ಲಿ ಕೆಲವರು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್‌ಗೆ (ಜೆಆರ್‌ಎಫ್‌) ಆಯ್ಕೆಯಾದರು. ಯುಜಿಸಿಗೆ ನೀಡಲು ತಹಶೀಲ್ದಾರ್ ಕಚೇರಿಯಿಂದ ಇಡಬ್ಲ್ಯುಎಸ್‌ ಪ್ರಮಾಣಪತ್ರ ಪಡೆಯಲು ಅವರು ಸಲ್ಲಿಸಿದ ಅರ್ಜಿಗಳು ತಿರಸ್ಕಾರಗೊಂಡಿವೆ. ಹಲವು ವಿದ್ಯಾರ್ಥಿಗಳು ಇಡಬ್ಲ್ಯುಎಸ್‌ ಕೋಟಾ ಅಡಿ ಎನ್‌ಇಟಿ ಉತ್ತೀರ್ಣರಾಗಲು ಮತ್ತು ಜೆಆರ್‌ಎಫ್‌ ಸೌಕರ್ಯ ಪಡೆಯಲು ಅರ್ಹತೆ ಹೊಂದಿದ್ದರೂ ಇದರಿಂದ ವಂಚಿತರಾಗಿದ್ದಾರೆ.

ಅಭಿಪ್ರಾಯ ಕೋರಿ ಪತ್ರ

ಶಾಲಾ ದಾಖಲೆಗಳಲ್ಲಿ ‘ಒಕ್ಕಲಿಗ’ ಎಂದಷ್ಟೇ ನಮೂದಾಗಿದ್ದರೆ ಇಡಬ್ಲ್ಯುಎಸ್ ಪ್ರಮಾಣಪತ್ರದಲ್ಲಿ ಯಾವ ಜಾತಿ ನಮೂದಿಸಬೇಕು ಎಂದು ಹುಣಸೂರಿನ ತಹಶೀಲ್ದಾರ್ ಮೈಸೂರು ಜಿಲ್ಲಾಧಿಕಾರಿಗೆ ಆಗಸ್ಟ್ 23ರಂದು ಪತ್ರ ಬರೆದಿದ್ದಾರೆ. ಆ ಪತ್ರ ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರಿಗೆ ಅಕ್ಟೋಬರ್ 5ರಂದು ರವಾನೆಯಾಗಿದೆ.

ಅಧಿಕಾರಿಗಳು ಮಾಡಿದ ಎಡವಟ್ಟು

‘ಯಾವುದೇ ಮೀಸಲಾತಿಯಲ್ಲಿ ಇಲ್ಲದ ಜಾತಿಗಳು ಇಡಬ್ಲ್ಯುಎಸ್‌ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿತ್ತು. ಆದರೆ, ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ನಗರ ಪ್ರದೇಶದ ಒಕ್ಕಲಿಗ ಸಮುದಾಯ ಅತಂತ್ರಕ್ಕೆ ಒಳಗಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಈ ಹಿಂದಿನ ಸದಸ್ಯ ಎನ್.ಲಿಂಗಪ್ಪ ಹೇಳಿದರು. ಶೇ 90ರಷ್ಟು ಮಂದಿಯ ದಾಖಲೆಗಳಲ್ಲಿ ಒಕ್ಕಲಿಗ ಎಂದಷ್ಟೇ ಇದೆ. ಕೇಂದ್ರದ ಇಡಬ್ಲ್ಯುಎಸ್‌ ಪಟ್ಟಿಯಲ್ಲಿ ‘ನಗರ ಪ್ರದೇಶದ ಒಕ್ಕಲಿಗ’ ಎಂದಷ್ಟೇ ನಮೂದಿಸಿದ್ದರೆ ಸಾಕಿತ್ತು. ಉಪಜಾತಿಗಳನ್ನು ನಿರ್ದಿಷ್ಟವಾಗಿ ಹೆಸರಿಸಿರುವ ಕಾರಣ ಇಡಬ್ಲ್ಯುಎಸ್‌ ಅಡಿ ಮೀಸಲಾತಿ ಸಿಗದಂತೆ ಆಗಿದೆ ಎಂದರು.

ನಗರದ ಒಕ್ಕಲಿಗರೂ ಇಡಬ್ಲ್ಯುಎಸ್‌ ಅರ್ಹತೆ ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯ ಕೋರಿದ್ದೇನೆ.

- ಪಿ.ವಸಂತಕುಮಾರ್, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT