ಬುಧವಾರ, ಜನವರಿ 29, 2020
30 °C
ಚಿಕ್ಕಬಳ್ಳಾಪುರದಲ್ಲಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್‌, ಜೆಡಿಎಸ್ ವಿರುದ್ಧ ವಾಗ್ದಾಳಿ

ಕೆಟ್ಟ ಸರ್ಕಾರ ತೆಗೆದ ಆತ್ಮ ತೃಪ್ತಿ ಇದೆ: ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಇವತ್ತು ಕೆಟ್ಟ ಸರ್ಕಾರ ತೆಗೆದ ಆತ್ಮತೃಪ್ತಿ ನನಗಿದೆ. ಅಂತಃಕರಣದಿಂದ ನಾನು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ನನ್ನನ್ನು ನಂಬಿರುವ ಜನರು ತೀರ್ಮಾನ ಕೊಟ್ಟಿದ್ದಾರೆ. ಅವರ ಅಪೇಕ್ಷೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ’ ಎಂದು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಸೋಮವಾರ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಟ್ಟ ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ರಾಜೀನಾಮೆ ಕೊಟ್ಟ ಬಳಿಕ ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ನ ಕೆಲ ನಾಯಕರ ಮಾತು ಕೇಳಿ ಹಿಂದಿನ ಸಭಾಧ್ಯಕ್ಷರು ನಮ್ಮನ್ನು ಅನರ್ಹರನ್ನಾಗಿ ಮಾಡಿದರು. ಆದರೆ ಕ್ಷೇತ್ರದ ಜನತೆ ಇವತ್ತು ನಮ್ಮ ಶಾಸಕರು ಅನರ್ಹರಲ್ಲ. ನಮ್ಮ ಮಾನ್ಯತೆ ಪಡೆದ ಅರ್ಹ ಶಾಸಕರು, ನಮ್ಮೆಲ್ಲರ ನಾಯಕರು ಎಂದು ಮತ್ತೆ ಮುದ್ರೆ ಒತ್ತಿ, 34 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ’ ಎಂದು ತಿಳಿಸಿದರು.

‘ನನ್ನನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಒಳಸಂಚು ಮಾಡಿಕೊಂಡು, ಮೂರು ಮಾಜಿ ಮುಖ್ಯಮಂತ್ರಿಗಳು, ಒಬ್ಬ ಮಾಜಿ ಪ್ರಧಾನಿಯವರು ಇಲ್ಲಿಗೆ ಬಂದು ಬಹಳ ಸಾಹಸ ಮಾಡಿದರು. ಆದರೆ ಅಧಿಕಾರದಲ್ಲಿದ್ದಾಗ ನಮಗೆ ಯಾರು ಬಹಳ ಅನ್ಯಾಯ ಮಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ. ಹೀಗಾಗಿ ನನ್ನನ್ನು ಸೋಲಿಸಬೇಕು ಎಂದವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎನ್ನುವುದು ಈ ಫಲಿತಾಂಶದಿಂದ ಅರ್ಥವಾಗುತ್ತದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸುಧಾಕರ್ ಅವರು ಅನಿವಾರ್ಯವಾಗಿದ್ದರೇ ವಿನಾ ಸುಧಾಕರ್‌ಗೆ ಕಾಂಗ್ರೆಸ್‌ ಅನಿವಾರ್ಯವಾಗಿರಲಿಲ್ಲ ಎಂದು ಈ ಕ್ಷೇತ್ರದ ಜನತೆ ಬಹಳ ಸ್ಪಷ್ಟವಾಗಿ ತೀರ್ಪು ಕೊಟ್ಟಿದ್ದಾರೆ’ ಎಂದರು.

‘ಒಬ್ಬ ತರುಣ, ವಿದ್ಯಾವಂತ, ರೈತನ ಮಗ ಬೆಳೆಯುವುದು ಸಹಿಸಿಕೊಳ್ಳಲು ಜೆಡಿಎಸ್‌ ಪಕ್ಷದಲ್ಲಿ ಸಾಧ್ಯವಿಲ್ಲ. ಅವರದು ಏನಿದ್ದರೂ ಕುಟುಂಬ ರಾಜಕಾರಣ. ಅದರಾಚೆ ಅವರು ಯಾರನ್ನೂ ಸಹಿಸಿಕೊಳ್ಳುವುದಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಕಾಂಗ್ರೆಸ್‌ನಲ್ಲಿ ಕೂಡ ನಾನೇ ಅನ್ನುವ ನಾಯಕರ ಅಹಂಕಾರ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರು ಇಲ್ಲಿಗೆ ಬಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಅವರಿಗೆ ಮತದಾರರು ನಿಮ್ಮ ಪಕ್ಷ ಮುಖ್ಯವಲ್ಲ, ನಮಗೆ ಸುಧಾಕರ್ ಅವರು ಮುಖ್ಯ ಎಂದು ಒತ್ತಿ ಒತ್ತಿ ಹೇಳಿದ್ದಾರೆ‘ ಎಂದು ತಿಳಿಸಿದರು.

‘ರಮೇಶ್‌ ಕುಮಾರ್‌ ಅವರ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ. ಅವರು ನನ್ನ ಊರಿಗೆ ಬಂದು ಪಾದರಕ್ಷೆಗಳನ್ನು ದೇವಸ್ಥಾನಕ್ಕೆ ಹೋಗುವಾಗ ಹೊರಗಡೆ ಬಿಟ್ಟು ಒಳಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಸಭಾಧ್ಯಕ್ಷರನ್ನು ನಾವು ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಆದರೆ ಅವರು ಪಾದರಕ್ಷೆ, ನಾಯಿ, ನರಿ ರೀತಿ ನಡೆದುಕೊಂಡಿದ್ದಾರಾ ಎಂದು ಸದನದಲ್ಲಿ ಹೇಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸ್ಥಿರ ಸರ್ಕಾರ ಇರಬೇಕು. ಅದರ ಮೂಲಕ ರಾಜ್ಯದ ಅಭಿವೃದ್ಧಿಯಾಗಬೇಕು. ಶುದ್ಧ ಆಡಳಿತ ನೀಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈಬಲಪಡಿಸಬೇಕು ಎನ್ನುವ ನಿಟ್ಟಿನಲ್ಲಿ ನನಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಯಡಿಯೂರಪ್ಪ, ಮೋದಿ ಅವರು ನನಗೆ ಯಾವ ಜವಾಬ್ದಾರಿ ವಹಿಸಿಕೊಟ್ಟರೂ ಅದಕ್ಕೆ ನೂರಕ್ಕೆ ನೂರು ನ್ಯಾಯ ಒದಗಿಸುವ ರೀತಿ ಕೆಲಸ ಮಾಡುತ್ತೇನೆ. ನಾನು ಲಾಬಿ ಮಾಡುವ ಸಂಸ್ಕೃತಿಯವನಲ್ಲ. ನನ್ನ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದೇ ನನ್ನ ಮೊದಲ ಆದ್ಯತೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು