ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಜೀವನದಿ ಕೃಷ್ಣೆ; ನದಿ ಪಾತ್ರದಲ್ಲೇ ಬಾವಿಗಳ ನಿರ್ಮಾಣ!

ಒಣಗುತ್ತಿರುವ ಬೆಳೆಗಳು
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪ್ರತಿ ಮಳೆಗಾಲದಲ್ಲೂ ಉಕ್ಕಿ ಹರಿದು ಸಾವಿರಾರು ಎಕರೆ ಬೆಳೆಯನ್ನು ಮುಳುಗಡೆ ಮಾಡಿಕೊಂಡು ಸಾಗುವ ಕೃಷ್ಣೆಯ ಒಡಲಿನಲ್ಲಿ ಈಗ ಬಾವಿಗಳು ನಿರ್ಮಾಣಗೊಳ್ಳುತ್ತಿವೆ!

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜೀವ ನದಿ ಕೃಷ್ಣೆಯ ಒಡಲು ಕಳೆದ ಒಂದು ತಿಂಗಳಿನಿಂದ ಬರಿದಾಗಿದೆ. ಹೀಗಾಗಿ, ರೈತರು ನದಿ ಪಾತ್ರದಲ್ಲಿ ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಜೆಸಿಬಿ ಯಂತ್ರಗಳನ್ನು ಬಳಸಿ ಹತ್ತಾರು ಅಡಿ ಆಳದ ಬಾವಿಯಾಕಾರದ ಗುಂಡಿಗಳನ್ನು ಅಲ್ಲಲ್ಲಿ ತೋಡಿ ಅದರಲ್ಲಿ ಸಂಗ್ರಹವಾಗುವ ನೀರನ್ನು ಪಂಪ್‌ ಮಾಡಿ ಬೆಳೆಗಳಿಗೆ ಉಣಿಸುತ್ತಿದ್ದಾರೆ. ಗುಂಡಿಗಳಲ್ಲಿ ಜಿನುಗುವ ಅಂತರ್ಜಲಕ್ಕಾಗಿ ಇವರು ಪರದಾಡುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಸಾವಿರಾರು ಹೆಕ್ಟೇರ್‌ ಭೂಮಿ ಮತ್ತು ಲಕ್ಷಾಂತರ ಜನರ ದಾಹ ತಣಿಸುವ ಕೃಷ್ಣೆ ಈಗ ನೀರಿಲ್ಲದೇ ಸೊರಗಿ ಹೋಗಿದ್ದಾಳೆ. ಕೃಷ್ಣೆಯ ಮಡಿಲಿನ ಮಕ್ಕಳು ಕಂಗಾಲಾಗಿದ್ದಾರೆ. ಕಳೆದೊಂದು ದಶಕಗಳ ನಂತರ ಭೀಕರ ಬರ ತಲೆದೋರಿದೆ. ಪ್ರತಿ ವರ್ಷದ ಬೇಸಿಗೆಯಲ್ಲೂ ಕೃಷ್ಣೆ ಬರಿದಾಗುತ್ತಿದ್ದಂತೆಯೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುವುದು ನಡೆದುಕೊಂಡು ಬಂದಿದೆ. ಆದರೆ, ಪ್ರಸಕ್ತ ವರ್ಷ ಮೇ 2ನೇ ವಾರವಾದರೂ ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಬಿಡುಗಡೆ ಆಗಿಲ್ಲ. ಹೀಗಾಗಿ, ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳೂ ಒಣಗುತ್ತಿವೆ.

ಪ್ರಸಕ್ತ ವರ್ಷ ನದಿ ತೀರದ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳನ್ನೇ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರು, ಮುಂಗಾರು ಹಂಗಾಮಿನಲ್ಲಿ ಬೆಳೆಯಬೇಕಾದ ಸೊಯಾಬೀನ್ ಬೆಳೆ ಬಿತ್ತನೆಗೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸೋಯಾಬೀನ್ ಬಿತ್ತನೆ ಬೀಜ ದಾಸ್ತಾನು ಮಾಡಿರುವ ವರ್ತಕರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳಾದ ದೂಧ್‌ಗಂಗಾ ಮತ್ತು ವೇದ್‌ಗಂಗಾ ನದಿಗಳಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗಿದೆ. ನದಿಗಳು ಬತ್ತಿರುವುದರಿಂದ ಈ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀರಿನ ಕೊರತೆಯಿಂದಾಗಿ ಬೆಳೆಗಳೂ ಬತ್ತಿ ಹೋಗುತ್ತಿವೆ.

‘ಪ್ರತಿ ವರ್ಷ ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತುವುದು ಸಾಮಾನ್ಯ. ಆದರೆ, ಪ್ರತಿ ವರ್ಷ ನದಿ ಬರಿದಾಗುತ್ತಿದ್ದಂತೆಯೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಪ್ರಸಕ್ತ ವರ್ಷವೂ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸುವಂತೆ ನದಿ ತೀರದ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ, ಚುನಾವಣೆ ನೀತಿಸಂಹಿತೆ ಮುಂದಿಟ್ಟುಕೊಂಡು ಆಡಳಿತ ಸೂಕ್ತ ಸ್ಪಂದನೆ ಮಾಡಲಿಲ್ಲ. ಹೀಗಾಗಿ ಸಮಸ್ಯೆ ಜಟಿಲವಾಗಿದೆ. ಈಗಲಾದರೂ ಜಿಲ್ಲಾಡಳಿತ ಈ ಭಾಗದ ಜನರ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯತ್ತ ಗಮನಹರಿಸಬೇಕು. ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅಂಕಲಿಯ ಕೃಷಿಕ ಸುರೇಶ ಪಾಟೀಲ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT