ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಡೆಗೆ ಕರ್ಫ್ಯೂ | ಊಟಕ್ಕಾಗಿ 20 ಕುಟುಂಬಗಳ ಪರದಾಟ!

Last Updated 24 ಮಾರ್ಚ್ 2020, 12:31 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ರಸ್ತೆ ಬದಿಯಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿ ಉಳಿದುಕೊಂಡು ಬೀಸುಕಲ್ಲು, ಒರಳು ಕಲ್ಲು ಮೊದಲಾದವುಗಳನ್ನು ಸಿದ್ಧಪಡಿಸಿ ಮಾರಿ ಬದುಕಿನ ಬಂಡಿ ಎಳೆಯುತ್ತಿದ್ದ ರಾಜಸ್ಥಾನ, ಬಿಹಾರ ಮೂಲದ ಇಪ್ಪತ್ತು ಕುಟುಂಬಗಳ ಬದುಕು ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕರ್ಫ್ಯೂ ವಿಧಿಸಿದ್ದರಿಂದ ಅತಂತ್ರವಾಗಿದೆ. ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹಲವು ದಿನಗಳಿಂದ ನಿರ್ಬಂಧಗಳನ್ನು ವಿಧಿಸಲಾಗಿದೆ. ಹೀಗಾಗಿ, ಅವರ ಬಳಿ ಬೀಸುಕಲ್ಲು ಮೊದಲಾದವುಗಳನ್ನು ಖರೀದಿಸುವವರಿಲ್ಲ. ಇದರಿಂದಾಗಿ ಅವರಿಗೆ ವರಮಾನವೇ ಇಲ್ಲದಂತಾಗಿದೆ. ಜೊತೆಗೆ, ಅಂಗಡಿಗಳನ್ನು ಬಂದ್ ಮಾಡಿಸಿರುವುದರಿಂದ ದಿನಸಿ ಪದಾರ್ಥಗಳನ್ನು ತರುವುದಕ್ಕೂ ಅವರಿಗೆ ಸಾಧ್ಯವಾಗಿಲ್ಲ. ಪರಿಣಾಮ, ಊಟ ಹಾಗೂ ಉಪಾಹಾರಕ್ಕೂ ತತ್ವಾರ ಉಂಟಾಗಿರುವುದರಿಂದ ಅವರು ಕಂಗಾಲಾಗಿದ್ದಾರೆ.

‘ಮೂರು ದಿನಗಳಿಂದಲೂ ಬಹಳ ತೊಂದರೆ ಅನುಭವಿಸುತ್ತಿದ್ದೇವೆ. ಸಂಗ್ರಹಿಸಿದ್ದ ಆಹಾರ ಪದಾರ್ಥಗಳೆಲ್ಲವೂ ಖಾಲಿಯಾಗಿವೆ. ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ಸಾಮಗ್ರಿಗಳನ್ನು ತರೋಣವೆಂದರೆ ಪೊಲೀಸರು ಅವಕಾಶ ಕೊಡುತ್ತಿಲ್ಲ; ಸಣ್ಣ ಅಂಗಡಿಗಳು ಕೂಡ ಬಂದ್ ಆಗಿವೆ. ಅಧಿಕಾರಿಗಳು ನಮಗೆ ನೆರವಾಗಬೇಕು’ ಎಂದು ಅವರು ಮೊರೆ ಇಟ್ಟಿದ್ದಾರೆ.

ವಿಷಯ ತಿಳಿದ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು, ಸುವರ್ಣ ದೀಪಕ ಪಾಟೀಲ ದಂಪತಿ ನೆರವಿನಿಂದ ಅಕ್ಕಿ, ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ವಿತರಿಸಿ ನೆರವಾಗಿ ಮಾನವೀಯತೆ ಮೆರೆದರು. ಇನ್ನೂ ಕೆಲವು ದಾನಿಗಳು ಆ ಜನರಿಗೆ ತಮ್ಮ ಶಕ್ತಾನುಸಾರ ನೆರವಾದರು.

‘ಕೊರೊನಾ ಭೀತಿ ಇರುವುದರಿಂದ ಜನ ಸಂಚಾರ ಕಡಿಮೆಯಾಗಿದೆ. ಹೀಗಿರುವಾಗ ಈ ಗುಡಿಸಲು ವಾಸಿಗಳಿಗೆ ವ್ಯಾಪಾರ ಆಗುತ್ತಿಲ್ಲ. ಇಂಥವರಿಗೆ ಉಚಿತವಾಗಿ ಊಟ ನೀಡುವ ಕೆಲಸವನ್ನು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಚಂದರಗಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT