ಸೋಮವಾರ, ಮಾರ್ಚ್ 8, 2021
31 °C
ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಸಿದ್ಧತೆ

ಅರಣ್ಯ ಹಕ್ಕು ಜಾರಿಗೆ ಬೇಕು ಸಮಯ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‌‌‌‌ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಮಂಡಿಸಿ‌ ತಿರಸ್ಕೃತಗೊಂಡಿರುವ ಅರ್ಜಿಗಳ ಕೂಲಂಕಷ ಮರುಪರಿಶೀಲನೆಗೆ ಇನ್ನೂ ಒಂದೂವರೆ ವರ್ಷ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.

ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಧ್ಯಂತರ ವರದಿ ಪಡೆದಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಕೇಳಿದ್ದಾರೆ. ಒಂದೆರಡು ದಿನಗಳಲ್ಲಿ ಅವರು ಸಲಹೆ ನೀಡಲಿದ್ದು, ಈ ವಾರವೇ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಅಫಿಡವಿಟ್‌ ಸಲ್ಲಿಸಲಿದೆ. 

‘ಕರ್ನಾಟಕ ಸೇರಿ ಒಟ್ಟು 21 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡ(ಆದಿವಾಸಿ) ಮತ್ತು ಇತರ ಪಾರಂಪರಿಕ ಅರಣ್ಯ ನಿವಾಸಿಗಳು ಅರಣ್ಯದಲ್ಲಿ ವಾಸಿಸುವ ಹಕ್ಕಿಗಾಗಿ ಸಲ್ಲಿಸಿದ್ದ 11 ಲಕ್ಷಕ್ಕೂ ಹೆಚ್ಚು ಮಂದಿಯ ಅರ್ಜಿಗಳು ತಿರಸ್ಕೃತವಾಗಿದ್ದವು. ಅರ್ಜಿ ತಿರಸ್ಕೃತರಾದವರನ್ನು ಕಾಡಿನಿಂದ ಹೊರಗೆ ಕಳುಹಿಸಲು ನಿರ್ದೇಶನ ನೀಡಲು ಕೋರಿ ‘ವೈಲ್ಡ್‌ ಲೈಫ್‌ ಫಸ್ಟ್‌’ ಮತ್ತು ಇತರ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಇದನ್ನು ಆಧರಿಸಿ ಸುಪ್ರೀಂ ಕೋರ್ಟ್‌ ಅರಣ್ಯ ಒತ್ತುವರಿದಾರರನ್ನು ಅರಣ್ಯ ಪ್ರದೇಶದಿಂದ ತೆರವು ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಫೆಬ್ರುವರಿ 13ರಂದು ಆದೇಶಿಸಿತ್ತು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾ ಲಯದ ಮೇಲ್ಮನವಿ ಪರಿಗಣಿಸಿ ಹಿಂದಿನ ಆದೇಶಕ್ಕೆ ತಾತ್ಕಾಲಿಕ ತಡೆಯನ್ನು ಕೋರ್ಟ್‌ ನೀಡಿತ್ತು. ತಿರಸ್ಕೃತಗೊಂಡಿರುವ ಅರ್ಜಿಗಳ ಮರು ಪರಿಶೀಲನೆ ನಡೆಸಿ ಜುಲೈ 24ರಂದು ಅಫಿಡವಿಟ್‌ ಸಲ್ಲಿಸಬೇಕು ಎಂದೂ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದ ಮುಖ್ಯ ಕಾರ್ಯದರ್ಶಿ ಅವರು, ಜೂನ್ 30ರೊಳಗೆ ಮಧ್ಯಂತರ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. 

‘ರಾಜ್ಯದಲ್ಲಿ ಸಲ್ಲಿಕೆಯಾಗಿದ್ದ 2.84 ಲಕ್ಷ ಅರ್ಜಿಗಳ ಪೈಕಿ 2.14 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ. ಅರ್ಜಿ ತಿರಸ್ಕರಿಸುವಾಗ ಕಾಯ್ದೆಯ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ. ತಿರಸ್ಕಾರ ಆಗಿರುವ ಪ್ರತಿಯೊಂದು ಅರ್ಜಿಯನ್ನೂ ನಿರ್ದಿಷ್ಟವಾಗಿ ಪರಿಶೀಲಿಸಬೇಕು. ಅರಣ್ಯವಾಸಿಗಳ ಅಹವಾಲು ಆಲಿಸಬೇಕು. ತಿರಸ್ಕಾರ ಮಾಡುವುದಿದ್ದರೆ ಅದಕ್ಕೆ ಕಾರಣ ನೀಡಬೇಕು. ಅರ್ಜಿದಾರನಿಗೆ ತನ್ನ ಅರ್ಜಿ ಏಕೆ ತಿರಸ್ಕಾರವಾಗುತ್ತಿದೆ ಎಂಬುದರ ಪೂರ್ಣ ಮಾಹಿತಿ ಒದಗಿಸಬೇಕು.ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಅವಕಾಶಗಳನ್ನು ಕಲ್ಪಿಸಬೇಕು. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡಬೇಕು’ ಎಂದು ತಾಕೀತು ಮಾಡಿದ್ದರು.

ಪರಿಶೀಲನೆ ಆರಂಭಿಸಿ ಮಧ್ಯಂತರ ವರದಿ ನೀಡಿರುವ ಜಿಲ್ಲಾಧಿಕಾರಿಗಳು, ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಒಂದೂವರೆ ವರ್ಷ ಕಾಲಾವಕಾಶ ಕೋರಿ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

‘2.14 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಅವುಗಳಲ್ಲಿ ಕೆಲವರು ನಿಜವಾದ ಅರಣ್ಯವಾಸಿಗಳಿದ್ದರೆ, ಅರಣ್ಯ ವಾಸಿಗಳಲ್ಲದವರೂ ಅನೇಕರು ಇದ್ದಾರೆ. ನಿಜವಾದ ಅರಣ್ಯ ವಾಸಿಗಳ ಬದುಕಿನ ಪ್ರಶ್ನೆಯಾಗಿರುವ ಕಾರಣ ಎಚ್ಚರಿಕೆಯಿಂದ ಅರ್ಜಿಗಳ ಪರಿಶೀಲನೆ ನಡೆಸಬೇಕಿದೆ. ಹೀಗಾಗಿ ಕಾಲಾವಕಾಶ ಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಸರ್ಕಾರ ಆಲೋಚನೆ ನಡೆಸಿದೆ.

ಜಮೀನು ವಿತರಿಸುವ ಕಾನೂನು ಅಲ್ಲ

‘ಅರಣ್ಯ ಹಕ್ಕು ಕಾಯ್ದೆಯನ್ನು ಅಧಿಕಾರಿಗಳು ಜಮೀನು ವಿತರಿಸುವ ಕಾನೂನು ಎಂದು ಅರ್ಥೈಸಿಕೊಂಡಿದ್ದೆ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ’ ಎಂದು ‘ವೈಲ್ಡ್‌ ಲೈಫ್‌ ಫಸ್ಟ್‌’ನ ಟ್ರಸ್ಟಿ ಪ್ರವೀಣ್ ಭಾರ್ಗವ್‌ ಹೇಳಿದರು.

‘ರಕ್ಷಿತಾರಣ್ಯವೆಂದು ಘೋಷಿಸುವಾಗ ಬಿಟ್ಟುಹೋದ ಆದಿವಾಸಿಗಳು, ಇತರ ಪಾರಂಪರಿಕ ಅರಣ್ಯವಾಸಿಗಳು ಅರಣ್ಯದಲ್ಲೇ ಬದುಕುವ ಹಕ್ಕು ನೀಡುವ ಕಾನೂನು. ಆದಿವಾಸಿಗಳಲ್ಲಿ ಬಹುತೇಕರಿಗೆ ಈ ಹಕ್ಕು ದೊರಕಿದೆ’ ಎಂದರು.

‘ಕಾಯ್ದೆ ಪ್ರಕಾರ ಉಪಗ್ರಹ ಆಧಾರಿತ ಚಿತ್ರಗಳನ್ನು ಆಧರಿಸಿ ಪರಿಶೀಲನೆ ನಡೆಸಬೇಕು. ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿದ್ದೇವೆ. 2005ರ ಉಪಗ್ರಹ ಚಿತ್ರಗಳನ್ನು ಪಡೆದು ಪರಿಶೀಲಿಸಲು ಸರ್ಕಾರ ಏಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ.ಮುಂದಿನ ವಿಚಾರಣೆಯಲ್ಲಿ ಈ ಎಲ್ಲಾ ವಿಷಯಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ವಿವರಿಸುತ್ತೇವೆ’ ಎಂದರು.

* ಎಲ್ಲಾ ಜಿಲ್ಲೆಗಳಿಂದ ಮಧ್ಯಂತರ ವರದಿ ತರಿಸಿಕೊಳ್ಳಲಾಗಿದೆ. ಅರ್ಜಿಗಳ ಪರಿಶೀಲನೆಗೆ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸಲಾಗುವುದು

ಟಿ.ಎಂ. ವಿಜಯಭಾಸ್ಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು