ಇಂದಿನಿಂದ ಹಳಗನ್ನಡ ಸಮ್ಮೇಳನ

7
2000 ಮಂದಿ ಭಾಗವಹಿಸುವ ನಿರೀಕ್ಷೆ

ಇಂದಿನಿಂದ ಹಳಗನ್ನಡ ಸಮ್ಮೇಳನ

Published:
Updated:

ಬೆಂಗಳೂರು: ಪ್ರಖ್ಯಾತ ವಿದ್ವಾಂಸ ಡಾ. ಷ. ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಭಾನುವಾರದಿಂದ ಮೂರು ದಿನ ‘ಅಖಿಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ’ ಶ್ರವಣಬೆಳಗೊಳದಲ್ಲಿ ನಡೆಯಲಿದೆ.

ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ಆಯೋಜಿಸುವ ಸಾಹಿತ್ಯ ಪರಿಷತ್‌ ಇದೇ ಮೊದಲ ಬಾರಿಗೆ ಹಳಗನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿದೆ. ‘ಹಳಗನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ವಿದ್ವಾಂಸರು ಹಾಗೂ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಪರಿಷತ್ತನ್ನು ಒತ್ತಾಯಿಸುತ್ತಿದ್ದರು. ಅವರ ಒತ್ತಾಯಕ್ಕೆ ಸ್ಪಂದಿಸಿ ಈ ಸಮ್ಮೇಳನ ನಡೆಸುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

‘ಹಳಗನ್ನಡ ಸಾಹಿತ್ಯಕ್ಕೆ ವಿಶ್ವಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ಹೊಸ ತಲೆಮಾರಿಗೆ ಕನ್ನಡದ ಶಾಸ್ತ್ರೀಯ ಕೃತಿಗಳ ಬಗ್ಗೆ ಅರಿವು–ಆಸಕ್ತಿ ಮೂಡಿಸುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ನಾಡಿನ ಹಿರಿಯ ವಿದ್ವಾಂಸರು, ಅಧ್ಯಾಪಕರು ಹಾಗೂ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಮೂರು ದಿನಗಳ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವರು’ ಎಂದರು.

ಜೈನಮಠದ ಆತಿಥ್ಯ:ಲೋಕಸಭಾ ಸದಸ್ಯ ಎಚ್‌.ಡಿ. ದೇವೇಗೌಡರು ಸಮ್ಮೇಳನ ಉದ್ಘಾಟಿಸಲಿದ್ದು, ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಗವಹಿಸುವರು. ಸುಮಾರು 2000 ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಜೈನಮಠ ವಹಿಸಿಕೊಂಡಿದೆ.

‘ಹಳಗನ್ನಡ ಸಾಹಿತ್ಯ: ಮರುಸೃಷ್ಟಿಯ ಸವಾಲುಗಳು’, ‘9 ಮತ್ತು 10ನೇ ಶತಮಾನ ಸಾಹಿತ್ಯದ ಅನನ್ಯತೆ’, ‘11ನೇ ಶತಮಾನದ ಸಾಹಿತ್ಯ: ಹಿಂಸೆ ಅಹಿಂಸೆಗಳ ನಿರ್ವಹಣೆ’, ‘ಕನ್ನಡ ಶಾಸ್ತ್ರಕೃತಿಗಳು: ಮರು ಓದು’, ‘ಹಳಗನ್ನಡ ಸಾಹಿತ್ಯದ ಪ್ರಸ್ತುತತೆ’ ವಿಷಯಗಳಿಗೆ ಸಂಬಂಧಿಸಿದಂತೆ ವಿಷಯ ತಜ್ಞರು ಸಮ್ಮೇಳನದಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವರು. ಕವಿಗೋಷ್ಠಿ ಹಾಗೂ ಹಳಗನ್ನಡ ಓದಿನ ಕಾರ್ಯಕ್ರಮಗಳೂ ಸಮ್ಮೇಳನದಲ್ಲಿವೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಸ್ತಕಾಭಿಷೇಕಕ್ಕೆ ಅವಕಾಶ: ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಭಾನುವಾರ ಬೆಳಿಗ್ಗೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮಸ್ತಕಾಭಿಷೇಕದ ನಂತರವೇ ‘ಚಾವುಂಡರಾಯ ಮಂಟಪ’ ವೇದಿಕೆಯಲ್ಲಿ ಕವಿಗೋಷ್ಠಿಗೆ ಚಾಲನೆ ದೊರೆಯಲಿದೆ.

ಉತ್ತರದ ಹುಡುಕಾಟ

ಹಳಗನ್ನಡ ಏಕೆ ಬೇಕು? ಹಳಗನ್ನಡದ ಮಹತ್ವ ಏನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ‘ಹಳಗನ್ನಡ ಸಾಹಿತ್ಯ ಸಮ್ಮೇಳನ’. ಈವರೆಗೆ ಹಳಗನ್ನಡದ ಬಗ್ಗೆ ಯಾರೂ ಗಮನ ಕೊಟ್ಟಿರಲಿಲ್ಲ. ಆ ಕಾರಣದಿಂದಾಗಿಯೂ ಸಮ್ಮೇಳನಕ್ಕೆ ವಿಶೇಷ ಮಹತ್ವವಿದೆ. ಸಾಹಿತ್ಯದ ಜೊತೆಗೆ ಶಾಸನಗಳ ಪರಿಶೀಲನೆಯೂ ನಡೆಯಲಿರುವ ಈ ಸಮ್ಮೇಳನ ವಿಶಿಷ್ಟವಾದುದು, ವಿಭಿನ್ನವಾದುದು.

–ಪ್ರೊ. ಷ. ಶೆಟ್ಟರ್, ಸಮ್ಮೇಳನಾಧ್ಯಕ್ಷರು

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !