ಬುಧವಾರ, ಫೆಬ್ರವರಿ 19, 2020
18 °C
ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸಲು ಸ್ಥಳೀಯರ ಮುಖಂಡರ ಒಮ್ಮತ: ವರಿಷ್ಠರ ಒಪ್ಪಿಗೆಗೆ ಕಾಯುತ್ತಿರುವ ಸದಸ್ಯರು

ತುಮಕೂರು| ಜೆಡಿಎಸ್‌ ಮೈತ್ರಿ; ಕಾಂಗ್ರೆಸ್‌ಗೆ ಮೇಯರ್‌ ಗಾದಿ ಖಾತ್ರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಆಡಳಿತದ ಚುಕ್ಕಾಣಿಗಾಗಿ ಕಾಂಗ್ರೆಸ್‌– ಜೆಡಿಎಸ್‌ ಈ ಹಿಂದಿನ ವರ್ಷದಲ್ಲಿ ಮಾಡಿಕೊಂಡಿದ್ದ ಒಪ್ಪಂದದಂತೆ ಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್‌ನ ಸದಸ್ಯರೆಲ್ಲರೂ ನಿರ್ಣಯ ತಳೆದಿದ್ದಾರೆ. ಜೆಡಿಎಸ್‌ ಉಪಮೇಯರ್‌ ಕುರ್ಚಿಯಲ್ಲಿ ಕೂರುವುದು ಬಹುತೇಕ ಖಚಿತವಾಗಿದೆ.

ಈ ಎರಡು ಪಕ್ಷವನ್ನು ಪ್ರತಿನಿಧಿಸುವ ಪಾಲಿಕೆಯ ಸದಸ್ಯರು ಜಿಲ್ಲಾ ಮಟ್ಟದ ಪ್ರಮುಖ ಮುಖಂಡರ ಮಾರ್ಗದರ್ಶನದ ಮಾತಿಗೆ ಕಿವಿಗೊಡುತ್ತಿದ್ದಾರೆ. ಜೆಡಿಎಸ್‌ ಪಾಳಯಕ್ಕೆ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌, ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ರಫೀಕ್ ಅಹ್ಮದ್‌ ಮುಂದಾಳತ್ವ ವಹಿಸಿದ್ದಾರೆ. ಈ ಮುಖಂಡರು ಈಗಾಗಲೇ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಎಸ್‌.ಆರ್‌.ಶ್ರೀನಿವಾಸ್‌ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜೆಡಿಎಸ್‌ನ ಹತ್ತೂ ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್‌ಗೆ ಬೆಂಬಲ ಮುಂದುವರೆಸುವ ಮಾತಿಗೆ ಈ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತಳೆಯಲಾಯಿತು.

‘ಒಪ್ಪಂದದಂತೆ ಈ ಬಾರಿಯ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವುದು ನಮ್ಮ ಧರ್ಮ. ಆದರೂ, ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಅಂತಿಮ ತೀರ್ಮಾನವನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ’ ಎಂದು ಜೆಡಿಎಸ್‌ನ ತುಮಕೂರು ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಎರಡು ಬಾರಿ ಸಭೆ ಮಾಡಿ, ಜೆಡಿಎಸ್‌ ಜತೆಗಿನ ಮೈತ್ರಿಯ ಮಹತ್ವದ ಕುರಿತು ಸದಸ್ಯರಿಗೆ ಹೇಳಿ ಮನವೊಲಿಸಿದ್ದೇನೆ. ಐದು ವರ್ಷಗಳ ನಮ್ಮ ಮೈತ್ರಿ, ಈ ಬಾರಿಯ ಚುನಾವಣೆಯಲ್ಲೂ ಮುಂದುವರೆಯಲಿದೆ’ ಎಂದು ಕಾಂಗ್ರೆಸ್‌ ಮುಖಂಡರೂ ಆಗಿರುವ ಮಾಜಿ ಶಾಸಕ ರಫೀಕ್‌ ಅಹ್ಮದ್‌ ಅವರು ತಿಳಿಸಿದರು.

‘ಪಾಲಿಕೆ ಮಟ್ಟದ ಮೈತ್ರಿಯನ್ನು ನಮ್ಮ ಮುಖಂಡರಾದ ಜಿ.ಪರಮೇಶ್ವರ ಮತ್ತು ದಿನೇಶ್‌ ಗುಂಡೂರಾವ್‌ ಅವರ ಗಮನಕ್ಕೆ ತಂದು, ಅವರ ಮಾರ್ಗದರ್ಶನವನ್ನೂ ಪಡೆಯುತ್ತೇವೆ’ ಎಂದು ಅವರು ಹೇಳಿದರು.

ಪಕ್ಷೇತರರ ಬೆಂಬಲ

ಉಪ್ಪಾರಹಳ್ಳಿ ವಾರ್ಡ್‌ ಪ್ರತಿನಿಧಿಸುವ ಪಕ್ಷೇತರ ಸದಸ್ಯ ಶಿವರಾಮ್‌ ಅವರು ಜೆಡಿಎಸ್‌ ಜತೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು, ಪಾಲಿಕೆ ಪ್ರವೇಶ ಮಾಡಿರುವ ನೂರುನ್ನಿಸಾ ಬಾನು ಸಹ ಈಗ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. ಇಂದರಿಂದಾಗಿ ಮೈತ್ರಿಯ ಬಂಧ ಈಗ ಮತ್ತಷ್ಟು ಗಟ್ಟಿಯಾಗಿದೆ.

‘ಮೇಯರ್‌ ಗಾದಿ ಬಳಿ ಮುಜೀದಾ, ನೂರುನ್ನಿಸಾ’

ಈ ಬಾರಿಯ ಮೀಸಲಾತಿ ಹಂಚಿಕೆ ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಎ’ ಸದಸ್ಯರಿಗೆ ದಕ್ಕುತ್ತಿದೆ.

ಎರಡನೇ ಬಾರಿ ಸದಸ್ಯೆಯಾಗಿರುವ ಮುಜೀದಾ ಖಾನಂ ಮೇಯರ್‌ ಸ್ಥಾನ ಅಲಂಕರಿಸಲು ಅರ್ಹರು ಎಂಬ ಮಾತು ಕೇಳಿಬರುತ್ತದೆ. ಜತೆಗೆ ನೂರುನ್ನಿಸಾ ಬಾನು ಸಹ ಆಡಳಿತ ಚುಕ್ಕಾಣಿ ಹಿಡಿಯಲು ಸಮರ್ಥರು ಎಂದು ಕೆಲವು ಸದಸ್ಯರು ಅಭಿಪ್ರಾಯ ಪಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಈ ಗಾದಿಗೇರುವ ಸ್ಪರ್ಧೆಯಲ್ಲಿ ಭಾಗವಹಿಸಲು 9ನೇ ವಾರ್ಡ್‌ನ ಪ್ರಭಾವತಿ ಅವರಿಗೂ ಮೀಸಲಾತಿಯ ಅರ್ಹತೆ ಇದೆ.

ಉಪಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಶಶಿಕಲಾ ಗಂಗಹನುಮಯ್ಯ ಮತ್ತು ನಾಜಿಮಾಬೀ ಅವರ ಹೆಸರುಗಳು ಕೇಳಿಬರುತ್ತಿವೆ.

ಪಕ್ಷಗಳ ಬಲಾಬಲ

ಬಿಜೆಪಿ: 12 ಸದಸ್ಯರು

ಕಾಂಗ್ರೆಸ್‌: 10

ಜೆಡಿಎಸ್‌: 10

ಪಕ್ಷೇತರ: 3

ಸರಳ ಬಹುಮತಕ್ಕೆ ಬೇಕಾದದ್ದು: 18 ಮತಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು