ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪರಿಣಾಮ ವರದಿ ರದ್ದತಿಗೆ ಒತ್ತಾಯ

ತಪ್ಪು ಮಾಹಿತಿ ನೀಡುವ ವರದಿ: ಪರಿಸರ ತಜ್ಞರ ಗಂಭೀರ ಆರೋಪ
Last Updated 4 ಡಿಸೆಂಬರ್ 2018, 16:32 IST
ಅಕ್ಷರ ಗಾತ್ರ

ಶಿರಸಿ: ಮುಂಬೈನ ಭಾರತ ಅಣುಶಕ್ತಿ ನಿಗಮ ಪ್ರಕಟಿಸಿರುವ ಕೈಗಾ 5-6ನೇ ಅಣುವಿದ್ಯುತ್ ಘಟಕ ನಿರ್ಮಾಣ ಯೋಜನೆಯ ಪರಿಸರ ಪರಿಣಾಮ ವರದಿ ಕೇವಲ ಹೆಸರಿಗೆ ಮಾತ್ರವಾಗಿದ್ದು, ತಪ್ಪು ಮಾಹಿತಿ ನೀಡುತ್ತಿದೆ. ಜನರ ಆರೋಗ್ಯ, ಜಲ, ಸಸ್ಯ, ವನ್ಯಜೀವಿ ಮೇಲೆ ಆಗಿರುವ, ಆಗಲಿರುವ ಗಂಭೀರ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಬೆಂಗಳೂರು ಮೆಕಾನ್’ ಎಂಬ ಸಂಸ್ಥೆ ಈ ಪರಿಸರ ವರದಿಯನ್ನು ಅಣುಶಕ್ತಿ ನಿಗಮದ ಪರವಾಗಿ ತಯಾರಿಸಿದೆ. ಇದನ್ನು ರದ್ದು ಮಾಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದ್ದಾರೆ.

ಪರಿಸರ ತಜ್ಞರ ಅಭಿಪ್ರಾಯ:

‘ಪರಿಸರ ಕಾಯ್ದೆ ಪ್ರಕಾರ ಬೃಹತ್ ಯೋಜನೆ ಜಾರಿಗೆ ಮೊದಲು ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು. ಆದರೆ, ಕೈಗಾ ಅಣು ಯೋಜನೆ ಬಗ್ಗೆ 30 ವರ್ಷಗಳಲ್ಲಿ ನಾಲ್ಕು ಘಟಕಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಹವಾಲು ಸಭೆ ನಡೆದಿಲ್ಲ. ಇದೇ ಮೊದಲ ಬಾರಿಗೆ ಕೈಗಾ ಅಣು ಸ್ಥಾವರದ ಪರಿಸರ ಪರಿಣಾಮ ವರದಿ ಪ್ರಕಟಿಸಲಾಗಿದೆ. ಈಗ ಡಿ.15ರಂದು ಕೈಗಾದಲ್ಲಿ ಸರ್ಕಾರ ಅಹವಾಲು ಸಭೆ ಕರೆದಿದೆ. ಮೆಕಾನ್ ಕಂಪನಿ ನೀಡಿರುವ ವರದಿಯು ಹಿಂದಿನ ನಾಲ್ಕು ಅಣು ಘಟಕಗಳಿಂದ ಆಗಿರುವ ಪರಿಸರ ದುಷ್ಪರಿಣಾಮಗಳ ಬಗ್ಗೆ ಉಲ್ಲೇಖ ಮಾಡಿಲ್ಲ’ ಎಂದು ಕಾರವಾರದ ವಕೀಲ ಬಿ.ಎಸ್. ಪೈ ಹೇಳುತ್ತಾರೆ.

ಕೈಗಾ ಪಕ್ಕದಲ್ಲೇ ರಾಷ್ಟ್ರೀಯ ಉದ್ಯಾನ, ಹುಲಿಯೋಜನಾ ಪ್ರದೇಶವಿದೆ. ಹೀಗಿರುವಾಗ ಕೈಗಾದಲ್ಲಿ ಇನ್ನಷ್ಟು ಅಣು ವಿದ್ಯುತ್ ಯೋಜನೆ ನಿರ್ಮಿಸಲು ಹೇಗೆ ಸಾಧ್ಯ? ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ ಪಡೆದಿದ್ದೀರಾ? ಎಂಬ ಪ್ರಶ್ನೆ ಪರಿಸರ ಪರಿಣಾಮ ವರದಿಯಲ್ಲಿ ಉಲ್ಲೇಖವಾಗಿಲ್ಲ ಎಂದು ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಟೀಕಿಸಿದ್ದಾರೆ.

‘ಈವರೆಗೆ ಕೈಗಾದಿಂದ ದಾವಣಗೆರೆವರೆಗೆ ಹಾಗೂ ಕೈಗಾ-ನರೇಂದ್ರವರೆಗೆ ಎರಡು ಬೃಹತ್ ವಿದ್ಯುತ್ ತಂತಿ ಮಾರ್ಗಗಳಿಗೆ 2 ಲಕ್ಷ ಮರಗಳ ಹನನವಾಗಿದೆ. 1400 ಮೆಗಾವ್ಯಾಟ್ ಉತ್ಪಾದಿಸುವ ಉದ್ದೇಶ ಹೊಂದಿರುವ 5-6ನೇ ಘಟಕಕ್ಕೆ ಬೃಹತ್ ವಿದ್ಯುತ್ ತಂತಿ ಮಾರ್ಗ ನಿರ್ಮಾಣ ಮಾಡಲು 1 ಲಕ್ಷ ವೃಕ್ಷ ಕಟಾವು ಮಾಡಬೇಕು. ಅಗಾಧ ಪಾರಿಸಾರಿಕ ದುಷ್ಪರಿಣಾಮ ಉಂಟು ಮಾಡುವ ಕೈಗಾ ಬೃಹತ್ ತಂತಿ ಮಾರ್ಗ ನಿರ್ಮಾಣ ಅಸಾಧು’ ಎಂದು ಜೀವಿ-ಪರಿಸರ-ಸಸ್ಯ ವಿಜ್ಞಾನಿ ಡಾ. ಕೇಶವ ಹೆಚ್. ಕೊರ್ಸೆ ಅಭಿಪ್ರಾಯಪಟ್ಟಿದ್ದಾರೆ.

‘ಕೈಗಾ ಅಣು ಸ್ಥಾವರ ಯೋಜನೆಗಳಿಂದ ಅಪಾರ ವಿಕಿರಣ ಸೋರುವಿಕೆಯಿಂದ ಜಲಸಸ್ಯ, ಜಲಚರ, ಸಸ್ಯವರ್ಗ, ವನ್ಯಜೀವಿಗಳ ಮೇಲೆ ಆಗಿರುವ ದುಷ್ಪರಿಣಾಮಗಳೇನು ಎಂಬ ಬಗ್ಗೆ ನಾಡಿನ ತಜ್ಞ ಪರಿಸರ ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಅಧ್ಯಯನ ನಡೆಸಿದೆಯೇ ಎಂಬ ಬಗ್ಗೆ ಮೆಕಾನ್ ಸಂಸ್ಥೆ ನೀಡಿದ ಪರಿಸರ ವರದಿ ಪ್ರಸ್ತಾಪ ಮಾಡಿಲ್ಲ’ ಎಂದು ಜೀವವೈವಿಧ್ಯ ಅಧ್ಯಯನಕಾರ ರಮೇಶ ಕಾನಗೋಡ ಎಂದಿದ್ದಾರೆ.

ಕೈಗಾ ಅಣು ಸ್ಥಾವರದಿಂದ 20 ವರ್ಷಗಳಲ್ಲಿ ಕೈಗಾ ಸುತ್ತಲ ಹಳ್ಳಿಗಳಲ್ಲಿ ಗಂಭೀರ ಕಾಯಿಲೆಗಳು ಹೆಚ್ಚಿವೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ಬಗ್ಗೆ ಹಾಹಾಕಾರ ಎದ್ದಿದೆ. ಈ ವಿಷಯವನ್ನು ಕೈಗಾ ಪರಿಸರ ವರದಿ ನಿರ್ಲಕ್ಷ್ಯ ಮಾಡಿದೆ ಎಂದು ಯೋಜನಾ ಪೂರ್ವ ಆರೋಗ್ಯ ಸಮೀಕ್ಷೆ ನಡೆಸಿದ್ದ ಅವಿನಾಶ ಸಂಸ್ಥೆಯ ಮುಖಂಡ ವೈ.ಬಿ.ರಾಮಕೃಷ್ಣ ಆರೋಪಿಸಿದ್ದಾರೆ.

ಕೈಗಾ ಅಣು ಸ್ಥಾವರಗಳ ಅಣುವಿಕಿರಣಯುಕ್ತ ತ್ಯಾಜ್ಯ ನೀರನ್ನು ಕಾಳಿ ನದಿಗೆ ಬಿಡುತ್ತಿದ್ದಾರೆ ಎಂದು ಸ್ಥಳೀಯರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆಯಾಗಿಲ್ಲ. ಕೈಗಾ ಸುತ್ತಲ ಹಳ್ಳಿಗಳ ಜನರಿಗೆ ಪುನರ್ವಸತಿ, ಉದ್ಯೋಗ ನೀಡಿಕೆ, ವಿದ್ಯುತ್, ಕುಡಿಯುವ ನೀರು, ಒದಗಿಸಿಲ್ಲ ಎಂದು ಸ್ಥಳೀಯ ರೈತರು, ಮಹಿಳೆಯರು, ಸಂಕಷ್ಟ ತೋಡಿಕೊಳ್ಳುತ್ತಲೇ ಇದ್ದಾರೆ. ಕೈಗಾ ಸುತ್ತಲಿನ ಹಳ್ಳಿಗಳಲ್ಲಿ ಮುಂಬೈ ಟಾಟಾ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೈಗೊಂಡ ಆರೋಗ್ಯ ಸಮೀಕ್ಷಾ ವರದಿಯನ್ನು ಸರ್ಕಾರ ಪ್ರಕಟಿಸಿಲ್ಲ. ಕೈಗಾ ಮಳೆಕಾಡಿನ ಘಟ್ಟದ ಬುಡದಲ್ಲಿ ಇರುವ ಕೈಗಾ, ಕಾಳಿ ನದಿ ದಂಡೆಯಲ್ಲೇ ಇದೆ. ನದಿಯ ಮೇಲ್ಭಾಗದಲ್ಲಿ ಕೊಡಸಳ್ಳಿ ಜಲವಿದ್ಯುತ್ ಅಣೆಕಟ್ಟು ಸೇರಿ ಕಾಳಿ ನದಿಗೆ ಆರು ಅಣೆಕಟ್ಟುಗಳಿವೆ. ಭಾರಿ ಮಳೆ, ಭೂಕುಸಿತ, ಭೂಕಂಪಗಳಂಥ ಪ್ರಕೃತಿ ವಿಕೋಪಗಳಿಂದ ಕೈಗಾ ಅಣು ಸ್ಥಾವರಗಳ ಪರಿಸ್ಥಿತಿ ಏನಾಗಬಹುದು ಎಂಬ ಆತಂಕಗಳನ್ನು ಪರಿಸರ ಕಾರ್ಯಕರ್ತರು ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT