ಬುಧವಾರ, ಜನವರಿ 22, 2020
21 °C
ಸ್ವಾಮೀಜಿಗಳು, ಸಮಾಜದ ಪ್ರಮುಖರ ಸಮಾವೇಶ

ವಿಎಚ್‌ಪಿ ‘ಹಿತಚಿಂತಕ ಅಭಿಯಾನ’ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಬಜರಂಗ ದಳ ಜಿಲ್ಲಾ ಘಟಕಗಳ ವತಿಯಿಂದ ಇಲ್ಲಿನ ನ್ಯಾಯಾಲಯದ ಆವರಣದ ವಕೀಲರ ಸಮುದಾಯ ಭವನದಲ್ಲಿ ಡಿ.19ರಂದು ಸಂಜೆ 5ಕ್ಕೆ ಹಿತಚಿಂತಕ ಅಭಿಯಾನ, ಸ್ವಾಮೀಜಿಗಳು ಹಾಗೂ ಸಮಾಜದ ಪ್ರಮುಖರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ಕರ್ನಾಟಕ ಉತ್ತರ ಪ್ರಾಂತದ ಸಂಪರ್ಕ ಪ್ರಮುಖ ಸುಧಾಕರರಾವ್‌ ದೇಶಪಾಂಡೆ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ವಕೀಲ ಎಸ್.ಎಂ. ಕುಲಕರ್ಣಿ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಎಚ್‌ಪಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮುಖ್ಯಭಾಷಣ ಮಾಡಲಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳು ಸಮ್ಮುಖ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಸರ್ವ ಧರ್ಮ ಸಮಭಾವ: ‘ದೇಶದಲ್ಲಿ ದೇಶಭಕ್ತರು ಹಾಗೂ ದೇಶದ್ರೋಹಿ ಎನ್ನುವ 2 ಜಾತಿಗಳಿವೆ. ದೇಶಭಕ್ತರಾದ ಎಲ್ಲರೂ ವಿಎಚ್‌ಪಿ ಜೊತೆ ಪಾಲ್ಗೊಳ್ಳಬಹುದು. ಜಗತ್ತಿನ ಕಲ್ಯಾಣಕ್ಕಾಗಿ ವಿಎಚ್‌ಪಿ ಬೆಳೆಯಬೇಕಾಗಿದೆ. ಜಾತ್ಯತೀತ ಶಬ್ದದ ಅರ್ಥವನ್ನು ಬೇರೆ ರೀತಿಯಲ್ಲಿ ಕೆಲವರು ಅರ್ಥ ಮಾಡಿಕೊಂಡಿದ್ದಾರೆ; ವ್ಯಾಖ್ಯಾನಿಸುತ್ತಾರೆ. ಆದರೆ, ಹಿಂದೂ ಸಮಾಜವೇ ಜಾತ್ಯತೀತವಾದುದು. ಇಲ್ಲಿ ಸರ್ವ ಧರ್ಮ ಸಮಭಾವವಿದೆ. ಈ ಕುರಿತು ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ’ ಎಂದರು.

‘ಸಂಘಟನೆಯು ಶ್ರೀರಾಮ ಮಂದಿರ ನಿರ್ಮಾಣದ ಹೋರಾಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ದಲಿತರಿಗೂ ತರಬೇತಿ ನೀಡಿ ಅರ್ಚಕರನ್ನಾಗಿ ಮಾಡಿದ್ದೇವೆ. ಒಬ್ಬ ಹಿಂದೂ ಮತ ಬದಲಾಯಿಸಿದರೆ ದೇಶಕ್ಕೇ ಗಂಡಾಂತರವಾಗುತ್ತದೆ. ಈ ಕುರಿತು ಕೂಡ ಅರಿವು ಮೂಡಿಸಲಾಗುತ್ತಿದೆ. ಮತಾಂತರ ಮಾಡಿಸುವ ಷಡ್ಯಂತ್ರ ನಡೆದಿದ್ದು, ಇದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ.

ನೋಂದಣಿ ಗುರಿ:

ವಿಎಚ್‌ಪಿಯ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ‘ಪ್ರತಿ ಮೂರು ವರ್ಷಕ್ಕೊಮ್ಮೆ ಹಿತಚಿಂತಕ ಅಭಿಯಾನ ನಡೆಸಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಹಾಗೂ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 50ಸಾವಿರ ಹಿತಚಿಂತಕರ ನೋಂದಣಿ ಮಾಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳ ಸ್ಪಂದನೆ ಅದ್ಭುತವಾಗಿದೆ ಹಾಗೂ ಸಹಕಾರ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಸಮಾಜದ ಮುಖಂಡರನ್ನೂ ಭೇಟಿ ಮಾಡಿ ಚರ್ಚಿಸಿದ್ದೇವೆ’ ಎಂದು ತಿಳಿಸಿದರು.

‘15 ವರ್ಷ ಮೇಲ್ಪಟ್ಟವರು ವಿಎಚ್‌ಪಿ ಹಿತಚಿಂತಕರಾಗಬಹುದು. ₹ 20 ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹಿಂದುತ್ವ ಹಾಗೂ ಬಂಧುತ್ವ ಗಟ್ಟಿಗೊಳಿಸುವ ಕಾರ್ಯಕ್ರಮವಿದು’ ಎಂದರು.

‘ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ಹಿಂದೂಗಳು ಜಾಗೃತಗೊಳ್ಳುವ ಅಗತ್ಯ ಹಿಂದಿಗಿಂತಲೂ ಈಗ ಜಾಸ್ತಿ ಇದೆ’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಕದಂ, ನಗರ ಘಟಕದ ಅಧ್ಯಕ್ಷ ಡಾ.ಬಾಗೋಜಿ, ಪ್ರಮುಖರಾದ ವಿಜಯ ಜಾಧವ್, ಶಾರದಾ ಬೇಕಣೆ, ಬಿ. ಹಳಂಗಳಿ, ಸತೀಶ ಮಾಳವದೆ, ಆನಂದ ಕರಲಿಂಗಣ್ಣವರ, ರಾಜು ಚಿಕ್ಕನಗೌಡರ, ಶಿವಲಿಂಗ ಪ್ರಭು, ಅರ್ಜುನ ರಜಪೂತ ಇದ್ದರು.

ಪ್ರತಿಕ್ರಿಯಿಸಿ (+)