ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್‌ಗೆ ಸೇರಿಸ್ತಾರೆ ‘ಉಡ’ದ ರಕ್ತ! ವಯಾಗ್ರ ತಯಾರಿಕೆಗೂ ಬೇಕಂತೆ ಈ ಪ್ರಾಣಿ

Last Updated 25 ನವೆಂಬರ್ 2019, 14:19 IST
ಅಕ್ಷರ ಗಾತ್ರ

ಬೆಂಗಳೂರು:ಅಳಿವಿನಂಚಿನಲ್ಲಿರುವ ‘ಉಡ’ವನ್ನು (Monitor lizard) ವಯಾಗ್ರ ತಯಾರಿಸುವುದಕ್ಕೆಂದು ಕೊಲ್ಲುತ್ತಿರುವ ಪ್ರಕರಣ ನಗರದಲ್ಲಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ. ಜೀವಂತ ಉಡ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದಲ್ಲಿ ಈಚೆಗೆ ಬಂಧಿಸಲಾಗಿತ್ತು.

ನಗರದಲ್ಲಿ ಉಡ ಮಾರಾಟ ಹೆಚ್ಚುತ್ತಿದೆ. ವಾರಾಂತ್ಯಗಳಲ್ಲಿ ಉಡಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿದೆ ಎಂದು ಹಿರಿಯ ವನ್ಯಜೀವಿ ಹೋರಾಟಗಾರರೊಬ್ಬರು ಮಾಹಿತಿ ನೀಡಿದ್ದು, ಉಡದ ರಕ್ತವನ್ನು ‘ರಮ್‌’ನಲ್ಲಿ ಸೇರಿಸಲಾಗುತ್ತದೆ. ನಂತರ ಅದನ್ನು ವಯಾಗ್ರದಂತೆ ನೀಡಲಾಗುತ್ತಿದೆ. ಇದನ್ನು ಐಟಿ ಮತ್ತು ರಿಯಲ್‌ ಎಸ್ಟೇಟ್ ಕ್ಷೇತ್ರದವರೇ ಹೆಚ್ಚಾಗಿ ಖರೀದಿಸುತ್ತಾರೆ ಎಂದೂ ಹೇಳಿದ್ದಾರೆ. ಆದರೆ, ಉಡದ ರಕ್ತದಲ್ಲಿ ಔಷಧೀಯ ಅಂಶ ಇದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದೂ ಅವರು ಹೇಳಿದ್ದಾರೆ.

ನಾಲ್ಕು ಉಡಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನುಅಕ್ಟೋಬರ್ 17ರಂದು ಬಂಧಿಸಲಾಗಿತ್ತು. ಕೆಲವು ಉಡಗಳನ್ನು ನಗರದ ರೆಸ್ಟೋರೆಂಟ್‌ಗಳಿಗೆ ಮಾಂಸದ ಉದ್ದೇಶಕ್ಕೆ ಮತ್ತು ಇನ್ನು ಕೆಲವನ್ನು ಬೇರೆ ಉದ್ದೇಶಗಳಿಗೆಮಾರಾಟ ಮಾಡುತ್ತಿರುವುದು ಆತನ ವಿಚಾರಣೆಯಿಂದ ತಿಳಿದುಬಂದಿತ್ತು.

ಇತ್ತೀಚೆಗೆ ನಗರದಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಕೋಲಾರದ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಚಿನ್ನ ಎಂದು ಗುರುತಿಸಲಾಗಿದೆ. ಈತನಿಂದ ಒಂದು ಜೀವಂತ ಉಡವನ್ನು ವಶಪಡಿಸಿಕೊಳ್ಳಲಾಗಿತ್ತು.

ಇಂತಹ ಅಕ್ರಮಗಳಲ್ಲಿ ಈ ಹಿಂದೆಯೂ ಅನೇಕ ಬಾರಿ ಚಿನ್ನ ಶಾಮೀಲಾಗಿದ್ದ. ಮಂಗಗಳನ್ನು ಹಿಡಿಯುವ (ಅಕ್ರಮವೆಂದು ಪರಿಗಣಿಸಲಾಗಿದ್ದರೂ) ಬಗ್ಗೆ ಆತ ಬಹಿರಂಗವಾಗಿಯೇ ಜಾಹೀರಾತು ನೀಡಿದ್ದ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ವಿಚಕ್ಷಣಾ ದಳ ಕೆ.ಆರ್.ಪುರಂನ ಶ್ರೀ ವಿನಾಯಕ ಜ್ಯುವೆಲರ್ಸ್‌ ಎದುರು ಆತನನ್ನು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ವಶಪಡಿಸಿಕೊಂಡ ಉಡವನ್ನು ಬನ್ನೇರುಘಟ್ಟದಲ್ಲಿರುವ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ಉಡ ಬೇಟೆಯಾಡಿದ್ದಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಆತ ತಿಳಿಸಿದ್ದಾನೆ.

ಮಂಗಗಳನ್ನು ಹಿಡಿಯುವ ಬಗ್ಗೆ ಚಿನ್ನ ಹಂಚುತ್ತಿದ್ದ ಬ್ಯುಸಿನೆಸ್ ಕಾರ್ಡ್
ಮಂಗಗಳನ್ನು ಹಿಡಿಯುವ ಬಗ್ಗೆ ಚಿನ್ನ ಹಂಚುತ್ತಿದ್ದ ಬ್ಯುಸಿನೆಸ್ ಕಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT