ಶನಿವಾರ, ಸೆಪ್ಟೆಂಬರ್ 19, 2020
26 °C

ಕಸ್ತೂರಿರಂಗನ್‌ ವರದಿ ತಿರಸ್ಕಾರ–ಹಿಂದಿನ ಸರ್ಕಾರದ ನಿಲುವು ಸಮರ್ಥಿಸಿಕೊಂಡ‘ಮೈತ್ರಿ’

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶವನ್ನು ‘ಪರಿಸರ ಸೂಕ್ಷ್ಮವಲಯ’ ಎಂದು ಘೋಷಿಸುವ ಕುರಿತು ಡಾ. ಕಸ್ತೂರಿರಂಗನ್‌ ವರದಿಯಲ್ಲಿರುವ ಶಿಫಾರಸುಗಳನ್ನು ತಿರಸ್ಕರಿಸುವ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿಲುವಿಗೆ ಬದ್ಧವಾಗಿರಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ.

ವರದಿ ಜಾರಿಗೆ ಕೇಂದ್ರ ಸರ್ಕಾರ ನಾಲ್ಕನೇ ಬಾರಿಗೆ ಹೊರಡಿಸಿರುವ ಅಧಿಸೂಚನೆಯನ್ನು ವಾಪಸು ಪಡೆಯುವಂತೆ ಕೇಂದ್ರಕ್ಕೆ ಮನವಿ ಮಾಡುವ ಪ್ರಸ್ತಾವವನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲು ಅರಣ್ಯ ಸಚಿವ ಆರ್‌. ಶಂಕರ್‌ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ನಿರ್ಣಯ ಕೈಗೊಂಡಿದೆ.

ವರದಿ ವಿರೋಧಿಸಿ ಪಶ್ಚಿಮಘಟ್ಟ ಭಾಗದಲ್ಲಿ ಜನಾಕ್ರೋಶ ಮತ್ತೆ ಭುಗಿಲೆದ್ದಿದೆ. ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಹೀಗಾಗಿ ಈ ಸೂಕ್ಷ್ಮ ವಿಷಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌  ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿವೆ. ಸಮಿತಿಯ ನಡಾವಳಿಗೆ ಸಂಪುಟ ಸಭೆಯ ಅನುಮೋದನೆ ಪಡೆದು ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಾಗುವುದು ಎಂದು  ಮೂಲಗಳು ಹೇಳಿವೆ.

ವರದಿ ಜಾರಿಯಾದರೆ ಈ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂಬುದು ಜನರ ತಕರಾರು. ಇದನ್ನು ಆಧರಿಸಿ, ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡಲಿರುವ ಎಲ್ಲ ಗ್ರಾಮ ಪಂಚಾಯಿತಿಗಳು ವರದಿಯನ್ನು ತಿರಸ್ಕರಿಸುವಂತೆ ನಿರ್ಣಯ ಕೈಗೊಂಡಿವೆ. ಈ ಭಾಗದ ಶಾಸಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಈ ವರದಿಯನ್ನು ಜನಾಭಿಪ್ರಾಯದ ವಿರುದ್ಧ ಹೇರಿದರೆ ಪರಿಸರ ರಕ್ಷಣೆಯ ಕೆಲಸಕ್ಕೆ ಪೂರಕವಾಗುವ ಬದಲು ಜನರ ಅಸಹಕಾರದ ಪರಿಣಾಮ ಮಾರಕವಾಗಿ ಪರಿಣಮಿಸಬಹುದು ಇನ್ನೂ ಹೆಚ್ಚಿನ ನಿರ್ಬಂಧ ಹೇರಿದರೆ ಅದನ್ನು ಸಹಿಸಲು ಸಿದ್ಧರಿಲ್ಲ’ ಈ ಪತ್ರದಲ್ಲಿ ಎಂದು ಸ್ಪಷ್ಟಪಡಿಸಿತ್ತು.

ಫಾರೆಸ್ಟ್ ಸರ್ವೆ ಆಫ್‌ ಇಂಡಿಯಾ ವರದಿಯಂತೆ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ 30,573 ಚದರ ಕಿ.ಮೀ ಅರಣ್ಯ ಹೊದಿಕೆ ಇದೆ. ಕಸ್ತೂರಿ ರಂಗನ್ ವರದಿಯಲ್ಲಿ ರಕ್ಷಿಸಬೇಕೆಂದು ಸೂಚಿಸಿದ (20,688 ಚದರ ಕಿ.ಮೀಟರ್‌) ವಿಸ್ತೀರ್ಣಕ್ಕಿಂತ ಇದು ಹೆಚ್ಚು. ಈ ಅರಣ್ಯ ಹೊದಿಕೆಯನ್ನು ಮೀಸಲು ಅರಣ್ಯ, ರಕ್ಷಿತಾರಣ್ಯವೆಂದು ಅಧಿಸೂಚಿಸಲಾಗಿದೆ. ಜೀವವೈವಿಧ್ಯ ಅತೀ ಹೆಚ್ಚು ಇರುವ ಪ್ರದೇಶಗಳಲ್ಲಿ ವನ್ಯ ಜೀವಿಧಾಮ, ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಗಿದೆ. ಈ ಜಾಲ 8,485 ಚದರ ಕಿ.ಮೀ ನಷ್ಟು ವಿಸ್ತಾರವಾಗಿದೆ. ಈ ಪ್ರದೇಶಗಳ ಹೊರಗೆ ಕೂಡಾ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡರೆ ಸುಮಾರು 1,907 ಚದರ ಕಿ.ಮೀ ಪ್ರದೇಶಕ್ಕೆ ಹೆಚ್ಚಿನ ರಕ್ಷಣೆ ಸಿಗಲಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ಸಮಯಾವಕಾಶ ಕೇಳಿದ್ದ ರಾಜ್ಯ ಸರ್ಕಾರ

ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರದ ವಿವಿಧ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಅ. 3ರಂದು ನಾಲ್ಕನೇ ಬಾರಿಗೆ ಹೊರಡಿಸಿದ್ದ ಕೇಂದ್ರ ಸರ್ಕಾರ, ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು.

ಆದರೆ, ಅಷ್ಟರೊಳಗೆ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗದೇ ಇದ್ದುದರಿಂದ ಕೇಂದ್ರ ಪರಿಸರ ಸಚಿವಾಲಯದ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಅವರಿಗೆನ. 28ರಂದು ಪತ್ರ ಬರೆದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್ ದುಬೆ, ಮತ್ತೆ 60 ದಿನಗಳ ಸಮಯ ನೀಡುವಂತೆ ಕೋರಿದ್ದರು.

* ವರದಿಯ ಶಿಫಾರಸುಗಳನ್ನು ತಿರಸ್ಕರಿಸಿದ್ದ ನಿಲುವಿನಲ್ಲಿ ಬದಲಾವಣೆ ಇಲ್ಲ. ಈ ಬಗ್ಗೆ ಸಂಪುಟ ಸಭೆಯ ಅನುಮೋದನೆ ಪಡೆದು ಕೇಂದ್ರಕ್ಕೆ ಕಳುಹಿಸಲಾಗುವುದು.
-ಆರ್‌. ಶಂಕರ್‌, ಅರಣ್ಯ ಸಚಿವ

ಮುಖ್ಯಾಂಶಗಳು
* ಅಧಿಸೂಚನೆ ವಾಪಸು ಪಡೆಯುವಂತೆ ಮತ್ತೆ ಮನವಿ

* ಸಂಪುಟ ಸಭೆಯ ಒಪ್ಪಿಗೆ ಪಡೆದು ಕೇಂದ್ರಕ್ಕೆ ಪತ್ರ

* ಜನಾಕ್ರೋಶಕ್ಕೆ ವಿರುದ್ಧ ಹೋಗದಿರಲು ತೀರ್ಮಾನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು