ಶನಿವಾರ, ಫೆಬ್ರವರಿ 27, 2021
28 °C

ಸಂಕಟ ತಂದ ರಾಮಗಡ ‘ಚಿನ್ನ’ದ ಗಣಿ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಗಣಿಗಾರಿಕೆಗೆ ಸಂಬಂಧಿಸಿದ ವಿಷಯದಲ್ಲಿ ಪರಸ್ಪರ ಸಹಮತ ಮೂಡದ ಕಾರಣದಿಂದಲೇ ಶಾಸಕ ಆನಂದ್‌ ಸಿಂಗ್‌, ಜಿಂದಾಲ್‌ ವಿರುದ್ಧ ತಿರುಗಿ ಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.

ಸಂಡೂರು ತಾಲ್ಲೂಕಿನ ರಾಮಗಡದಲ್ಲಿರುವ ‘ಸಿ’ ಕೆಟಗರಿ ಗಣಿಯಲ್ಲಿ ಗಣಿಗಾರಿಕೆ ನಡೆಸಲು ತನಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಆನಂದ್‌ ಸಿಂಗ್‌ ವಾದವಾಗಿದೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಆ ಗಣಿಯನ್ನು ತನ್ನದಾಗಿಸಿಕೊಂಡಿರುವ ಜಿಂದಾಲ್‌, ಸುತಾರಂ ಸಿಂಗ್‌ ಅವರ ವಾದ ಒಪ್ಪುತ್ತಿಲ್ಲ. ಈ ಉದ್ದೇಶದಿಂದಲೇ ಅವರು ಜಿಂದಾಲ್‌ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಅಂದಹಾಗೆ, ಸಿಂಗ್‌ ಮೊದಲಿನಿಂದಲೂ ಜಿಂದಾಲ್‌ ವಿರುದ್ಧ ಒಳಗೊಳಗೆ ಕತ್ತಿ ಮಸೆಯುತ್ತಿದ್ದರು. ಸ್ಥಳೀಯರನ್ನು, ಗ್ರಾಮ ಪಂಚಾಯಿತಿ ಸದಸ್ಯರನ್ನು ಜಿಂದಾಲ್‌ ವಿರುದ್ಧ ಎತ್ತಿ ಕಟ್ಟಿದ್ದಾರೆ. ಇದುವರೆಗೆ ಗ್ರಾಮ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. 2016ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಗಣಿ ತನ್ನದಾಗಿಸಿಕೊಂಡರೂ ಜಿಂದಾಲ್‌ಗೆ ಇದುವರೆಗೆ ಗಣಿಗಾರಿಕೆ ನಡೆಸಲು ಸಾಧ್ಯವಾಗಿಲ್ಲ.

ಏನಿದು ತಕರಾರು?

ರಾಮಗಡದಲ್ಲಿ ಗಣಿ ಉದ್ಯಮಿ ರಾಮರಾವ ಪೊಳ್‌ ಎಂಬುವರ ಹೆಸರಿನಲ್ಲಿ (ರೈಸಿಂಗ್‌ ಕಾಂಟ್ರ್ಯಾಕ್ಟ್‌) ಆನಂದ್‌ ಸಿಂಗ್‌ 2009ರಿಂದ ಗಣಿಗಾರಿಕೆ ನಡೆಸುತ್ತಿದ್ದರು. ಅದು 2011ರ ವರೆಗೆ ಸುಗಮವಾಗಿ ನಡೆಯಿತು. ಗಣಿಗಾರಿಕೆಯ ನಿಯಮಗಳನ್ನು ಸುಪ್ರೀಂಕೋರ್ಟ್‌ ಬಿಗಿಗೊಳಿಸಿ, ಹರಾಜು ಪ್ರಕ್ರಿಯೆ ಮೂಲಕ ಗಣಿ ಪ್ರದೇಶ ಹಂಚಿಕೆ ಮಾಡಬೇಕು. ಉಕ್ಕು, ಮೆದು ಕಬ್ಬಿಣ, ಅದಿರು ಸಂಸ್ಕರಣ ಘಟಕ ಹೊಂದಿದವರಿಗಷ್ಟೇ ಅವಕಾಶ ಕಲ್ಪಿಸಬೇಕೆಂದು ಷರತ್ತು ಕೂಡ ವಿಧಿಸಿತ್ತು.

2016ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಉಕ್ಕಿನ ಘಟಕ ಹೊಂದಿರುವ ಜಿಂದಾಲ್‌, ಸಿಂಗ್‌ ನಡೆಸುತ್ತಿದ್ದ ಗಣಿ ಪ್ರದೇಶ ತನ್ನದಾಗಿಸಿಕೊಂಡಿತು. ‘ತಾನು ಮೊದಲಿನಿಂದಲೂ ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ಅದನ್ನು ತನಗೇ ಬಿಟ್ಟುಕೊಡಬೇಕು‘ ಎಂದು ಸಿಂಗ್‌ ಪಟ್ಟು ಹಿಡಿದರು. ಆದರೆ, ಜಿಂದಾಲ್‌ ಅದಕ್ಕೆ ಒಪ್ಪಲಿಲ್ಲ. 

ಯಾವಾಗ ರಾಜ್ಯ ಸರ್ಕಾರವು ಜಿಂದಾಲ್‌ ಕಂಪನಿಗೆ 3,667 ಎಕರೆ ಜಮೀನು ಭೂ ಪರಭಾರೆ ಮಾಡಲು ಹೊರಟಿತೊ ಅದು ಸಿಂಗ್‌ ಅವರಿಗೆ ಅಸ್ತ್ರವಾಗಿ ಸಿಕ್ಕಿತು. ಈಗ ಆ ವಿಷಯವನ್ನು ಮುಂದೆ ಮಾಡಿಕೊಂಡು ಜಿಂದಾಲ್‌ ವಿರುದ್ಧ ಸಮರ ಸಾರಿದ್ದಾರೆ.

‘ಯಾವುದೇ ಉಕ್ಕಿನ ಘಟಕಗಳನ್ನು ಹೊಂದಿರದವರು ಗಣಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಆನಂದ್‌ ಸಿಂಗ್‌ಗೆ ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಜಿಂದಾಲ್‌ ನಿಯಮದಂತೆ ಗಣಿ ಪ್ರದೇಶ ಪಡೆದಿದೆ. ಆದರೆ, ಹಿಂಬಾಗಿಲಿನ ಮೂಲಕ ಸಿಂಗ್‌ ಅದನ್ನು ಪಡೆಯಲು ಯತ್ನಿಸಿದ್ದರು. ವಿಫಲವಾಗಿದ್ದರಿಂದ ಹೋರಾಟದ ನೆಪ ಮಾಡಿಕೊಂಡು ಜಿಂದಾಲ್‌ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಸರ್ಕಾರ ಸಂಧಾನ ನಡೆಸಿದರೆ ಆ ಮೂಲಕವಾದರೂ ಗಣಿ ಪ್ರದೇಶ ಮರಳಿ ತನ್ನ ತೆಕ್ಕೆಗೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಗಣಿ ಉದ್ಯಮಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿನ್ನದ ಗಣಿ’ಯಲ್ಲಿ 70 ಸಾವಿರ ಮರಗಳ ಮಾರಣ ಹೋಮ!
2002ರ ವೇಳೆ ಗಣಿಗಾರಿಕೆ ಉತ್ತುಂಗ ಸ್ಥಿತಿಗೆ ತಲುಪಿತ್ತು. ರಾಮಗಡದ 40 ಹೆಕ್ಟೇರ್‌ ಪ್ರದೇಶದಲ್ಲಿ ಉತ್ಕೃಷ್ಟವಾದ ಅದಿರು ಲಭ್ಯವಿತ್ತು. ಅದನ್ನು ಅದಿರಿನ ಗಣಿ ಬದಲು ‘ಚಿನ್ನದ ಗಣಿ’ ಎಂಬ ಅನ್ವರ್ಥಕ ನಾಮದಿಂದ ಕರೆಯಲಾಗುತ್ತಿತ್ತು.

ಈ ವಿಷಯ ಗೊತ್ತಾಗಿ ಗಣಿ ಉದ್ಯಮಿಗಳು, ಪ್ರಭಾವ ಬಳಸಿಕೊಂಡು ಅಲ್ಲಿ ಗಣಿಗಾರಿಕೆ ಆರಂಭಿಸಿದರು. ಗಣಿಗಾರಿಕೆಗಾಗಿ 70 ಸಾವಿರಕ್ಕೂ ಅಧಿಕ ಮರಗಳ ಮಾರಣ ಹೋಮ ಮಾಡಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಅಸಹಾಯಕರಾಗಿದ್ದರು ಎಂದು ಆ ಘಟನೆ ನೆನಪಿಸಿಕೊಳ್ಳುತ್ತಾರೆ ಗಣಿ ಉದ್ಯಮಿಯೊಬ್ಬರು. 

ಇವನ್ನೂ ಓದಿ... 

* ಜಿಂದಾಲ್‌ಗೇ ಬಳ್ಳಾರಿಯ ಸಿಂಹಪಾಲು ಗಣಿಗಳು!

ಜಿಂದಾಲ್‌ 3,666 ಎಕರೆ ತುಂಬ ಕಾರ್ಖಾನೆ, ಕಟ್ಟಡ!

* ಜಿಂದಾಲ್‌ ನೆಲ ಸಂಪತ್ತಿನ ಗಣಿ!

ಜಿಂದಾಲ್‌ಗೆ 3,667 ಎಕರೆ ಮಾರಾಟ!: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ

 ಜಿಂದಾಲ್‌ಗೆ ಭೂಮಿ ಕೊಟ್ಟರೆ ಸುಮ್ಮನಿರಲ್ಲ: ಸಾಲಿ ಸಿದ್ದಯ್ಯ ಸ್ವಾಮಿ ಎಚ್ಚರಿಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು