ಗುರುವಾರ , ಮಾರ್ಚ್ 4, 2021
30 °C
ಬಡಜನರಿಗೆ ಮಿಡಿಯಲು ತಾಯಿ ಪಟ್ಟ ಸಂಕಷ್ಟವೇ ಕಾರಣ

ಮಾಸಾಶನ ಕೊಡಿಸಲು ಡಿಸಿ ಬೀಳಗಿ ಪಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ತಮ್ಮ ತಾಯಿ ವಿಧವಾ ವೇತನಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ ಸಂಕಷ್ಟವನ್ನು ಜಿಲ್ಲೆಯಲ್ಲಿ ಬೇರೆ ಯಾರೂ ಅನುಭವಿಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪಣತೊಟ್ಟಿದ್ದಾರೆ. ಪ್ರತಿ ಮನೆಯನ್ನೂ ಸರ್ವೆ ಮಾಡಿಸಿ ಅರ್ಹರ ಮನೆ ಬಾಗಿಲಿಗೇ ಮಾಸಾಶನ ಮುಟ್ಟಿಸಲು ಯೋಜನೆ ಹಮ್ಮಿಕೊಂಡಿದ್ದಾರೆ.

ಸಂಧ್ಯಾ ಸುರಕ್ಷಾ, ಮನಸ್ವಿನಿ, ವಿಧವಾ ವೇತನ, ಅಂಗವಿಕಲ ವೇತನ ಒಳಗೊಂಡಂತೆ ಸಾಮಾಜಿಕ ಭದ್ರತೆಯಡಿ ಬರುವ ಎಲ್ಲಾ ವೇತನಗಳಿಗೆ ಅರ್ಹರನ್ನು ಹುಡುಕುವ ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಸೆ.1ರಂದು ಆರಂಭಿಸಿದ್ದಾರೆ.

‘ಜಿಲ್ಲೆಯಲ್ಲಿ 230 ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಇವೆ. ಪ್ರತಿ ಗ್ರಾಮ ಲೆಕ್ಕಾಧಿಕಾರಿ ತಮ್ಮ ವ್ಯಾಪ್ತಿಯ ಒಂದು ಗ್ರಾಮವನ್ನು ಮೊದಲು ಆಯ್ಕೆ ಮಾಡಿಕೊಂಡಿದ್ದಾರೆ. ಆ ಗ್ರಾಮದಲ್ಲಿ ಅರ್ಹತೆ ಇರುವ ಎಲ್ಲರ ವಿವರಗಳನ್ನು ಪಡೆಯುತ್ತಿದ್ದಾರೆ. ಯಾರಿಗೆ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲವೋ, ಅದಕ್ಕೆ ಕಾರಣ ಪತ್ತೆ ಮಾಡಿ ಮೂರು ತಿಂಗಳ ಒಳಗೆ ಎಲ್ಲಾ ದಾಖಲಾತಿ ಸರಿ ಮಾಡಿ ವೇತನ ಸಿಗುವಂತೆ ಮಾಡುತ್ತಾರೆ. ಮೊದಲ ಹಂತ ಮುಗಿದ ಬಳಿಕ ಎರಡನೇ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಉಳಿದ ಗ್ರಾಮಗಳ ಸಮಿಕ್ಷೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಹಂತದಲ್ಲಿ 207 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ 2,143 ಮಂದಿಯನ್ನು ಗುರುತಿಸಲಾಗಿದೆ. ಅದರಲ್ಲಿ ಪರಿಶೀಲನೆ ನಡೆಸಿ 1,571 ಮಂದಿಯನ್ನು ಸೌಲಭ್ಯಕ್ಕೆ ಆಯ್ಕೆ ಮಾಡಲಾಗಿದೆ. 89 ತಿರಸ್ಕೃತಗೊಂಡಿವೆ. 483 ಪರಿಶೀಲನೆಗೆ ಬಾಕಿ ಇವೆ. ಅ.5ಕ್ಕೆ ಮೊದಲ ಹಂತದ ಆಂದೋಲನ ಮುಗಿಯಲಿದೆ ಎಂದು ಮಾಹಿತಿ ನೀಡಿದರು.

₹ 25 ಪಿಂಚಣಿಗೆ ₹ 100 ಲಂಚ!

ಬೆಳಗಾವಿ ಜಿಲ್ಲೆಯ ರಾಮದುರ್ಗದ ಮಹಾಂತೇಶ ಬೀಳಗಿ ಅವರ ಹೆತ್ತವರಿಗೆ ನಾಲ್ವರು ಮಕ್ಕಳಿದ್ದಾರೆ. ಬೀಳಗಿ ಅವರಿಗೆ ಐದು ವರ್ಷ ತುಂಬುವ ಹೊತ್ತಿಗೆ ತಂದೆ ನಿಧನರಾಗಿದ್ದರು. ಬಹಳ ಕಷ್ಟಪಟ್ಟು ಅವರ ತಾಯಿ ಮಕ್ಕಳನ್ನು ಬೆಳೆಸಿದ್ದರು.

ತಾಯಿ ವಿಧವಾ ವೇತನ ಪಡೆಯಲು ಆಗ ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆದಿದ್ದರು. ತಾಯಿ ಹೋದಲ್ಲೆಲ್ಲ ಬೀಳಗಿ ಅವರನ್ನೂ ಕರೆದುಕೊಂಡು ಹೋಗುತ್ತಿದ್ದರು. ಕೊನೆಗೆ ಬ್ರೋಕರ್‌ ಒಬ್ಬರಿಗೆ ₹ 100 ಲಂಚ ನೀಡಿದ ಬಳಿಕ ಆತ ಕೆಲಸ ಮಾಡಿಸಿಕೊಟ್ಟಿದ್ದ. ನಂತರ ವಿಧವಾ ವೇತನ ₹ 25 ಬರಲು ಆರಂಭವಾಗಿತ್ತು.

ಇದು ಮಹಾಂತೇಶ ಬೀಳಗಿ ಅವರು ನೆನಪಿಸಿಕೊಂಡ ಬಾಲ್ಯದ ಬದುಕಿನ ಕಥೆ. ತಾಯಿ ಪಟ್ಟ ಸಂಕಷ್ಟವೇ ಈಗ ಬಡಜನರಿಗಾಗಿ ಸ್ಪಂದಿಸಲು ಅವರಿಗೆ ಪ್ರೇರಣೆ ನೀಡಿದೆ.

* ನನ್ನ ತಾಯಿಗೆ ₹ 25 ವಿಧವಾ ವೇತನ ಸೌಲಭ್ಯ ಪಡೆಯಲು ₹ 100 ಲಂಚ ಕೊಡಲಾಗಿತ್ತು. ಈ ಪರಿಸ್ಥಿತಿ ಮತ್ತೆ ಯಾರಿಗೂ ಬರಬಾರದು.

ಮಹಾಂತೇಶ ಬೀಳಗಿ, ದಾವಣಗೆರೆ ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು