ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನ ಕಳೆದುಕೊಳ್ಳುವರೆ ಕೃಷ್ಣಾರೆಡ್ಡಿ?

ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೃಷ್ಣಾರೆಡ್ಡಿ ರಾಜೀನಾಮೆ ನೀಡುವರೇ ಎಂಬ ಕುತೂಹಲ
Last Updated 9 ಮಾರ್ಚ್ 2020, 4:08 IST
ಅಕ್ಷರ ಗಾತ್ರ

ಚಿಂತಾಮಣಿ: ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಸ್ತಬ್ಧವಾಗಿದ್ದರೂ ಎಂ.ಕೃಷ್ಣಾರೆಡ್ಡಿ ಅವರು ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುತ್ತಾರೆಯೇ? ಅವಿಶ್ವಾಸದ ಮೂಲಕ ಪದಚ್ಯುತಿ ಗೊಳಿಸಲಾ ಗುತ್ತದೆಯೇ? ಇದುವರೆಗೂ ರಾಜೀನಾಮೆ ನೀಡದಿರಲು ಕಾರಣಗಳೇನು? ಎಂಬ ಪ್ರಶ್ನೆಗಳು ಕ್ಷೇತ್ರದ ಜನರ ಬಾಯಲ್ಲಿ ಹರಿದಾಡುತ್ತಿವೆ.

ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ವಿಧಾನಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಅವಿಭಜಿತ ಕೋಲಾರ ಜಿಲ್ಲೆಯ ಪಾಲಾಗಿದ್ದವು. ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ ಕುಮಾರ್ ಅಧ್ಯಕ್ಷರಾಗಿದ್ದರೆ, ಚಿಂತಾಮಣಿ ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಯಾರು ಊಹಿಸಿದ, ಆಶ್ಚರ್ಯಕರ ರೀತಿಯಲ್ಲಿ ವಿಧಾನಸಭೆಯ ಉಪಾಧ್ಯಕ್ಷರಾದರು. ಕೃಷ್ಣಾರೆಡ್ಡಿ ಅವರಿಗೂ ಇದು ಆಶ್ಚರ್ಯವನ್ನು ತಂದಿತ್ತು. ಆರಂಭದಲ್ಲಿ ಹಿಂದೇಟು ಹಾಕಿದರೂ ನಂತರ ಸಾಂವಿಧಾನಿಕ ಹುದ್ದೆ ಎಂಬ ಕಾರಣಕ್ಕೆ ಅಧಿಕಾರ ವಹಿಸಿಕೊಂಡಿದ್ದರು. ಉಪಾಧ್ಯಕ್ಷರ ಆಯ್ಕೆ ಕುರಿತು ಟೀಕೆ, ವ್ಯಂಗ್ಯ ಪ್ರತಿಕ್ರಿಯೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.

ಸಾಮಾನ್ಯವಾಗಿ ಅಧಿಕಾರ ನಡೆಸುತ್ತಿದ್ದ ಪಕ್ಷದ ಸರ್ಕಾರ ಪತನಗೊಂಡು ಮತ್ತೊಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಾನಸಭೆ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ನೀಡುವುದು ಸಂಪ್ರದಾಯವಾಗಿದೆ. ಕೆಲವು ಸಂದರ್ಭಗಳಲ್ಲಿ ಅವಿಶ್ವಾಸ ತಂದು ಪದಚ್ಯುತಿಗೊಳಿಸಲಾಗುತ್ತದೆ. ಅಧ್ಯಕ್ಷ ರಮೇಶ ಕುಮಾರ್ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಯಾವುದೇ ಚರ್ಚೆ, ವಿವಾದಕ್ಕೆ ಅವಕಾಶ ನೀಡದೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದರು. ಉಪಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ರಾಜೀನಾಮೆ ನೀಡದೆ ಮುಂದುವರೆದಿದ್ದಾರೆ.

ಈಚೆಗೆ ಅಧಿಕಾರ ವಂಚಿತ ಮೂಲ ಬಿಜೆಪಿ ಶಾಸಕರ ಕಣ್ಣು ಉಪಾಧ್ಯಕ್ಷ ಸ್ಥಾನದ ಮೇಲೆ ಬಿದ್ದಿದೆ. ಅದರಲ್ಲೂ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಒತ್ತಡ ಹೇರುತ್ತಿದ್ದಾರೆ. ಹಲವಾರು ಬಾರಿ ಬಹಿರಂಗವಾಗಿಯೇ ಮನದಾಳವನ್ನು ತೋಡಿಕೊಂಡಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ರಾಜೀನಾಮೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಶಾಸಕರು ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರವನ್ನು ಸ್ಪೀಕರ್‌ಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೃಷ್ಣಾರೆಡ್ಡಿ ಜತೆ ಮಾತನಾಡಿದ್ದಾರೆ. ಗೌರವಯುತವಾಗಿ ರಾಜೀನಾಮೆ ಪಡೆದುಕೊಳ್ಳುತ್ತಾರೆ ಎಂದೂ ಹೇಳಲಾಗುತ್ತಿದೆ.

ಎಂ.ಕೃಷ್ಣಾರೆಡ್ಡಿ ಅಧಿಕಾರ ವಹಿಸಿಕೊಂಡ 2 ತಿಂಗಳಿಗೆ ರಾಜೀನಾಮೆ ನೀಡುವ ಪ್ರಹಸನ ನಡೆದಿತ್ತು. ಸ್ವಪಕ್ಷದ ವಿರುದ್ಧವೇ ಮುನಿಸಿಕೊಂಡು ರಾಜೀನಾಮೆ ನೀಡುವ ವದಂತಿಗಳು ಹರಿದಾಡಿದ್ದವು. ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ರಾಜೀನಾಮೆ ನೀಡದಿರುವ ಕಾರಣ ಏನು ಎಂಬುದು ನಿಗೂಢವಾಗಿದೆ. ರಾಜೀನಾಮೆ ವಿಚಾರ ಕ್ಷೇತ್ರದ ಮತದಾರರಲ್ಲಿ ಚರ್ಚೆ, ವಾದ– ವಿವಾದ, ವದಂತಿಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT