ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2–3 ದಿನದಲ್ಲಿ ರಮೇಶ ಜಾರಕಿಹೊಳಿ ಜತೆ ಚರ್ಚೆ

ಸರ್ಕಾರಕ್ಕೆ ಅಪಾಯವಿಲ್ಲ: ಸಚಿವ ಸತೀಶ ಜಾರಕಿಹೊಳಿ
Last Updated 27 ಡಿಸೆಂಬರ್ 2018, 19:35 IST
ಅಕ್ಷರ ಗಾತ್ರ

ಚಿಕ್ಕೋಡಿ/ ಅಥಣಿ: ‘ಸೋದರ, ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಲು ಸದ್ಯಕ್ಕೆ ಸಮಯವಿಲ್ಲ. 2-3 ದಿನಗಳ ನಂತರ ಭೇಟಿಯಾಗಿ ಚರ್ಚಿಸುವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಭೇಟಿ ಆಗಬೇಕಿರುವುದರಿಂದ ಹಾಗೂ ಪ್ರವಾಸದಲ್ಲಿ ಇರುವುದರಿಂದ ಅವರ ಭೇಟಿ ಮಾಡಿಲ್ಲ; ಮಾತನಾಡಿಲ್ಲ. ಅವರು ಸ್ನೇಹಿತರನ್ನು ಭೇಟಿಯಾಗಲು ಎಲ್ಲೋ ಹೋಗಿರಬಹುದು’ ಎಂದು ತಿಳಿಸಿದರು.

‘ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ವಾರದಲ್ಲಿ ಪತನವಾಗುತ್ತದೆ’ ಎಂಬ ಬಿಜೆಪಿ ಮುಖಂಡ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕರೇನು ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ವಸ್ತುಗಳಲ್ಲ. ಕತ್ತಿ ಹೇಳಿದಂತೆ ಏನೂ ನಡೆಯುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ರಮೇಶ ಸೇರಿದಂತೆ ಯಾರೂ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವುದಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಅವುಗಳನ್ನು ಚರ್ಚಿಸಿ ಬಗೆಹರಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು. ಹಿಂದಿನಿಂದಲೂ ಅದಕ್ಕೆ ನನ್ನ ಬೆಂಬಲವಿದೆ. ಸರ್ಕಾರದ ಮೇಲೆ ಒತ್ತಡ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಾಸಕರೊಂದಿಗೆ ರಹಸ್ಯ ಮಾತುಕತೆ

ರಮೇಶ ಜಾರಕಿಹೊಳಿ ಬೆಂಬಲಿಗರಾದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರನ್ನು ಅಥಣಿಯಲ್ಲಿ ಭೇಟಿಯಾದ ಸಚಿವ ಸತೀಶ, ಕೆಲವು ಸಮಯ ರಹಸ್ಯ ಮಾತುಕತೆ ನಡೆಸಿದರು. ‘ಆತುರದ ನಿರ್ಧಾರ ಕೈಗೊಳ್ಳಬೇಡಿ. ಅಲ್ಲದೇ, ಸೋದರ ರಮೇಶ ಮನವೊಲಿಸಲು ಸಹಕರಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು ಎನ್ನಲಾಗಿದೆ.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಮಂತ ಪಾಟೀಲ, ‘ಬಿಜೆಪಿಯವರು ಸಾವಿರ ಕೋಟಿ ರೂಪಾಯಿ ಕೊಟ್ಟರೂ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವುದಿಲ್ಲ. ಹಿಂದಿನಿಂದಲೂ ಇದೇ ಮಾತು ಹೇಳುತ್ತಿದ್ದೇನೆ. ಈಗಲೂ ಅದಕ್ಕೆ ಬದ್ಧ ಇದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT