ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಜಾಗೃತಿಗೆ ಗೊಂಬೆಯಾಟ!

ಕಾಸರಗೋಡಿನ ಯಕ್ಷಗಾನ ಗೊಂಬೆಯಾಟ ಸಂಘದಿಂದ ವಿಶಿಷ್ಟ ಪ್ರಯೋಗ
Last Updated 5 ಜುಲೈ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಬಗೆಯ ಜಾಗೃತಿ ಯತ್ನಗಳು ನಡೆಯುತ್ತಿರುವ ಮಧ್ಯೆಯೇ, ಗಡಿನಾಡು ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಯೂಟ್ಯೂಬ್‌ ಮೂಲಕ ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ‘ಗೊಂಬೆಯಾಟ’ ಹರಿಬಿಟ್ಟು ಜಾಗತಿಕ ಮಟ್ಟದಲ್ಲಿ ಜನಜಾಗೃತಿಗಿಳಿದಿದೆ.

ಮೂರು ಭಾಷೆಗಳಲ್ಲಿರುವ (ಇಂಗ್ಲಿಷ್‌, ಹಿಂದಿ, ಕನ್ನಡ) 30 ನಿಮಿಷ ಅವಧಿಯ ಈ ಯಕ್ಷಗಾನ
(ಪ್ರಸಂಗ– ಕೊರೊನಾಸುರ) ‘ಗೊಂಬೆಯಾಟ’ ವಿಡಿಯೊ ನಿರ್ಮಾಣಕ್ಕೆ ಸುಮಾರು ₹ 1 ಲಕ್ಷ ವೆಚ್ಚ ತಗಲಿದೆ. ಕನ್ನಡದಲ್ಲಿ ಶೀಘ್ರದಲ್ಲೇ ಹೊರಬರಲಿದೆ.

ಈ ಯೋಜನೆಯ ಕನಸು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಹಿರಿಯ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರದ್ದು. ಬೊಂಬೆಗಳನ್ನು ಒದಗಿಸಿದವರು ತೆಂಕುತಿಟ್ಟು ಶೈಲಿಯ, ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ. ರಮೇಶ್‌.

ಏನಿದು ‘ಕೊರೊನಾಸುರ’: ಕೊರೊನಾಸುರನೆಂಬ ರಾಕ್ಷಸ ರೋಗರಾಜ ವಿಶ್ವದೆಲ್ಲೆಡೆ ಪ್ರಾಬಲ್ಯ ಸ್ಥಾಪಿಸಲು ಆರಂಭಿಸುತ್ತಾನೆ. ವೈರಾಣುಗಳ ಮೂಲಕ ಜನರ ದೇಹ ಪ್ರವೇಶಿಸಿ ಬದುಕು ಅತಂತ್ರಗೊಳಿಸುವುದು ಆತನ ಉದ್ದೇಶ. ಭರತಖಂಡ ಆತನ ಕಣ್ಣಿಗೆ ಬೀಳುತ್ತದೆ. ತನ್ನ ಅನುಯಾಯಿಗಳೊಂದಿಗೆ ದಾಳಿ ಇಟ್ಟಾಗ ಭರತಖಂಡದ ಚಕ್ರವರ್ತಿ, ರೋಗವಿವಾರಕ ದೇವನಾದ ಧನ್ವಂತರಿಯ ಮೊರೆ ಹೋಗುತ್ತಾನೆ. ಧನ್ವಂತರಿಯು ಅಶ್ವಿನಿ ಕುಮಾರರ ಜತೆ ಸೇರಿ ಕೊರೊನಾಸುರನನ್ನು ಹೊಡೆದೋಡಿಸುತ್ತಾನೆ. ಕೊರೊನಾಸುರನ ದಾಳಿಯಿಂದ ರಕ್ಷಿಸಿಕೊಳ್ಳಲು ಆದಷ್ಟು ಮನೆಯಲ್ಲೇ ಇರುವುದು, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವ ಬಗ್ಗೆ ರಾಜನಿಗೆ ಸಲಹೆ ನೀಡುತ್ತಾನೆ.

ರಾಮಕೃಷ್ಣ ಮಯ್ಯ ಅವರ ಪರಿಕಲ್ಪನೆಗೆ ಯಕ್ಷಗಾನ ವಿದ್ವಾಂಸ ಶ್ರೀಧರ ಡಿ.ಎಸ್‌. ಕನ್ನಡ ಪದ್ಯಗಳನ್ನು ರಚಿಸಿದ್ದಾರೆ. ಸರ್ಪಂಗಳ ಈಶ್ವರ ಭಟ್‌ ಅವರು ಹಿಂದಿ ಪದ್ಯ ಮತ್ತು ಸಂಭಾಷಣೆ ರಚಿಸಿದ್ದಾರೆ. ಇಂಗ್ಲಿಷ್‌ಗೆ ಪ್ರಸನ್ನ ಕುಮಾರಿ ಮತ್ತು ದಿನೇಶ್‌ ಕೆ.ಎಸ್. ಅನುವಾದ ಮಾಡಿದ್ದಾರೆ. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜನಾ
ಧಿಕಾರಿ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಸಹಕರಿಸಿದ್ದಾರೆ. ಕ್ಯಾಮೆರಾ ಮತ್ತು ಸಂಕಲನ ಶ್ರೀಮುಖ ಮಯ್ಯ, ಶ್ಯಾಮ್‌ ಪ್ರಸಾದ್‌ ಕುಂಚಿನಡ್ಕ ಅವರದ್ದು.

ರಮೇಶ್‌ ಕೆ.ವಿ, ತಿರುಮಲೇಶ್‌ ಕೆ.ವಿ, ಸುದರ್ಶನ ಕೆ. ವಿ, ಕುಮಾರ ಸ್ವಾಮಿ, ಅನೀಶ್‌ ಪಿಲಿಕುಂಜೆ, ಸ್ವಾತಿ ಕೆ. ವಿ. ಸರಳಿ, ಸುನಿತಾ ಮಯ್ಯ, ಆತ್ಮೀಯ ಕೃಷ್ಣ ಕಾರ್ತಿಕ್‌ ಶರ್ಮ ಗೊಂಬೆಗಳಿಗೆ ಸೂತ್ರಧಾರಿಗಳು. ಭಾಗವತರಾಗಿ ರಾಮಕೃಷ್ಣ ಮಯ್ಯ, ಚೆಂಡೆಯಲ್ಲಿ ಶಿವಶಂಕರ ಭಟ್‌ ಅಂಬೆಮೂಲೆ, ಮದ್ದಳೆಯಲ್ಲಿ ಉದಯ ಕಂಬಾರು, ಬೊಂಬೆಗಳಿಗೆ ಧ್ವನಿ ನೀಡುವ ಹಿನ್ನೆಲೆ ಕಲಾವಿದರಾಗಿ ರಾಧಾಕೃಷ್ಣ ನಾವಡ, ರತ್ನಾಕರ ಮಲ್ಲಮೂಲೆ, ಗುರುರಾಜ ಹೊಳ್ಳ ಬಾಯಾರು, ಕಾರ್ತಿಕ್‌ ಪಡ್ರೆ
ಸಹಕರಿಸಿದ್ದಾರೆ.

ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು, ‘ಯಕ್ಷಗಾನ, ಗೊಂಬೆಯಾಟಗಳನ್ನು ಕೊರೊನಾ ಜಾಗೃತಿಗೆ ಬಳಸಿರುವುದು ಶ್ಲಾಘನೀಯ’ ಎಂದಿದ್ದಾರೆ.

ವೀಕ್ಷಿಸಲು ಲಿಂಕ್: https://youtu.be/8Q-lrC9WFu4 (ಇಂಗ್ಲಿಷ್‌), https://youtu.be/6m-_2VXGsUU (ಹಿಂದಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT