ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಪರ ಘೋಷಣೆ: ವಿದ್ಯಾರ್ಥಿನಿ ವಶಕ್ಕೆ

ಮೈಕ್‌ ಕಸಿದುಕೊಂಡ ಒವೈಸಿ: ತನಿಖೆಗೆ ಆಯೋಜಕರ ಒತ್ತಾಯ
Last Updated 20 ಫೆಬ್ರುವರಿ 2020, 20:21 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನ್ (19) ಅವರನ್ನು ವೇದಿಕೆಯಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಅಮೂಲ್ಯ,ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ. ಕಂಪನಿಯೊಂದರ ಭಾಷಾಂತರ ವಿಭಾಗದಲ್ಲಿ ಇಂಟರ್ನಿಯಾಗಿದ್ದಾರೆ. ಇತ್ತೀಚೆಗೆ ಚಂದ್ರಾಲೇಔಟ್‌ ಠಾಣೆಯಲ್ಲೂ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.ಅಕ್ರಮ ಕೂಟ ರಚಿಸಿಕೊಂಡು ಪೊಲೀಸರ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪ ಅವರ ಮೇಲಿತ್ತು.

‘ಹಿಂದೂ–ಮುಸ್ಲಿಂ–ಸಿಖ್‌–ಇಸಾಯಿ ಫೆಡರೇಷನ್ ಬೆಂಗಳೂರು’ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆಹ್ವಾನ ಇಲ್ಲದಿದ್ದರೂ ಕೆಲ ಭಾಷಣಕಾರರ ಜೊತೆಯಲ್ಲೇ ವೇದಿಕೆ ಏರಿದ್ದ ಅಮೂಲ್ಯ ಮೈಕ್ ಪಡೆದುಕೊಂಡು, ‘ಪಾಕಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದಳು. ವೇದಿಕೆಯಲ್ಲೇ ಇದ್ದ ಓವೈಸಿ ಹಾಗೂ ಆಯೋಜಕರು ಮೈಕ್ ಕಸಿದುಕೊಳ್ಳಲು ಮುಂದಾದರು. ಅದೇ ವೇಳೆ ಅಮೂಲ್ಯ, ‘ಹಿಂದೂಸ್ಥಾನ್ ಜಿಂದಾಬಾದ್, ಹಿಂದೂಸ್ಥಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಲಾರಂಭಿಸಿದರು. ಅಷ್ಟರಲ್ಲೇ ವೇದಿಕೆ ಏರಿದ ಪೊಲೀಸರು, ಆಯೋಜಕರ ಸಹಾಯದಿಂದಲೇ ಅಮೂಲ್ಯಳನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.

ಘಟನೆಯಿಂದಾಗಿ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಆಯೋಜಕರು, ‘ನಾವೆಲ್ಲರೂ ಭಾರತೀಯರು. ಯುವತಿ ಹೇಳಿಕೆ ಆಶ್ವರ್ಯ ತಂದಿದೆ. ಆಕೆಗೂ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು. ‘ಪಾಕಿಸ್ತಾನ್ ಮುರ್ದಾಬಾದ್, ಪಾಕಿಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿ ಸಭೆ ಮುಂದುವರಿಸಿದರು.

ಪಾಕ್ ಪರ ಯುವತಿ ಘೋಷಣೆ ಕೂಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಓವೈಸಿ, ‘ನಾನು ಸೇರಿ ಎಲ್ಲ ಮುಸ್ಲಿಮರು ಭಾರತೀಯರು. ನಾವೆಲ್ಲರೂ ಹಿಂದೂಸ್ಥಾನ್ ಜಿಂದಾಬಾದ್ ಎನ್ನುತ್ತೇವೆ. ಆಮಂತ್ರಣವಿಲ್ಲದೇ ಬಂದ ಯುವತಿ ಹೀಗೆ ಹೇಳಿದ್ದು ತಪ್ಪು’ ಎಂದರು. ಆಯೋಜಕರೂ ಆಗಿದ್ದ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಸಹ ಕ್ಷಮೆ ಕೋರಿದರು.

ಫೇಸ್‌ಬುಕ್‌ನಲ್ಲೂ ಬರಹ: ಸಿಎಎ ವಿರೋಧಿ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅಮೂಲ್ಯ, ‘ಹಿಂದೂಸ್ತಾನ್, ಪಾಕಿಸ್ತಾನ್, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಅಫ್ಗಾನಿಸ್ತಾನ್, ಚೀನಾ, ಭೂತಾನ್ ದೇಶಗಳ ಪರವೂ ಘೋಷಣೆ ಇರುವ ಪೋಸ್ಟ್‌ನ್ನು ತನ್ನ ಫೇಸ್‌ಬುಕ್‌ನಲ್ಲಿ ಫೆ. 16ರಂದೇ ಪ್ರಕಟಿಸಿದ್ದಾರೆ. ಆರ್‌ಎಸ್ಎಸ್‌ ಹೆಸರು ಸಹ ಉಲ್ಲೇಖಿಸಿದ್ದಾರೆ.

ಜೈಲ್‌ ಭರೊ
‘ದೇಶದ ಶೇ 28ರಷ್ಟು ಜನರ ಬಳಿ ಜನ್ಮ ದಿನಾಂಕದ ದಾಖಲೆಗಳೇ ಇಲ್ಲ. ಕೇಂದ್ರ ಸರ್ಕಾರದ ಸಿಎಎ ಜಾರಿಗೆ ಬಂದರೆ 8 ಕೋಟಿ ಜನರು ಪೌರತ್ವ ಕಳೆದುಕೊಳ್ಳಲಿದ್ದಾರೆ. ಹೀಗಾಗಿ, ಕಾಯ್ದೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ’ ದೇಶದಾದ್ಯಂತ ಜೈಲ್ ಭರೋ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಸಾದುದ್ದೀನ್ ಒವೈಸಿ ಹೇಳಿದರು.

**
ಯುವತಿಯನ್ನು ನಾವು ಹೋರಾಟಕ್ಕೆ ಆಹ್ವಾನಿಸಿರಲಿಲ್ಲ. ತನ್ನ ಪಾಡಿಗೆ ಬಂದು ಈ ರೀತಿ ಮಾಡಿದ್ದಾರೆ. ಇದಕ್ಕೆ ಆಯೋಜಕರೆಲ್ಲರೂ ಕ್ಷಮೆ ಕೋರುತ್ತೇವೆ.
–ಇಮ್ರಾನ್ ಪಾಷಾ, ಪಾಲಿಕೆ ಸದಸ್ಯ

***
‘ಪಾಕಿಸ್ತಾನ ಜಿಂದಾಬಾದ್‌’ ಕೂಗಿದ್ದು ಕಾಫಿನಾಡಿನ ಗುಬ್ಬಗದ್ದೆ ಯುವತಿ
ಚಿಕ್ಕಮಗಳೂರು:
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆ ವೇಳೆ ‘ಪಾಕ್ತಿಸ್ತಾನ ಜಿಂದಾಬಾದ್‌’ ಕೂಗಿದ ಯುವತಿ ಅಮೂಲ್ಯ ಲಿಯೋನಾ ಕೊಪ್ಪ ತಾಲ್ಲೂಕಿನ ಹಿರೇಕೂಡಿಗೆ ಬಳಿಯ ಗುಬ್ಬಗದ್ದೆ ಗ್ರಾಮದವರು ಎಂದು ಮೂಲಗಳು ತಿಳಿಸಿವೆ.

‘ಈ ಯುವತಿ ಬೆಂಗಳೂರಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ಯುವತಿ ತಂದೆ ವೊಜಲ್ಡ್‌ ಮತ್ತು ತಾಯಿ ಲೆವಿನಾ ಗುಬ್ಬಗದ್ದೆಯಲ್ಲಿ ಕೃಷಿ ಮಾಡುತ್ತಾರೆ. ಯುವತಿ ಕೆಲವೆಡೆ ಸಿಎಎ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಬಗ್ಗೆ ಕೇಳಿದ್ದೇನೆ’ ಎಂದು ಹಿರೇಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT