ಶುಕ್ರವಾರ, ಏಪ್ರಿಲ್ 23, 2021
22 °C
ವಾಣಿಜ್ಯ ಉದ್ದೇಶಿತ ಉತ್ಪಾದನೆಗೆ ಚಾಲನೆ ದೊರೆತು ಎರಡೂವರೆ ವರ್ಷಗಳಾಗಿದೆ

ರಾಯಚೂರು: ಸಾಮರ್ಥ್ಯ ಇದ್ದರೂ ಸಾಧನೆ ಮಾಡದ ವೈಟಿಪಿಎಸ್‌!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸೂಪರ್‌ ಕ್ರಿಟಿಕಲ್‌ ತಂತ್ರಜ್ಞಾನ ಹೊಂದಿದ ರಾಜ್ಯದ ಏಕೈಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಎನ್ನುವ ಹೆಗ್ಗಳಿಕೆ  ಇರುವ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರವು (ವೈಟಿಪಿಎಸ್‌) ವಾಣಿಜ್ಯ ಉದ್ದೇಶಿತ ವಿದ್ಯುತ್‌ ಉತ್ಪಾದನೆಗೆ ತೆರೆದುಕೊಂಡು ಎರಡುವರೆ ವರ್ಷಗಳಾಗಿದ್ದರೂ ಪೂರ್ಣಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡುತ್ತಿಲ್ಲ!

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌) ಸೇರಿದಂತೆ ಇತರೆ ಸಾಂಪ್ರದಾಯಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಿಗೆ ಹೋಲಿಕೆ ಮಾಡಿದರೆ, ಕಡಿಮೆ ನೀರು ಮತ್ತು ಕಲ್ಲಿದ್ದಲು ಬಳಸಿಕೊಂಡು ಹೆಚ್ಚು ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ವೈಟಿಪಿಎಸ್‌ ಹೊಂದಿದೆ. ಆರ್‌ಟಿಪಿಎಸ್‌ ಎಂಟು ಘಟಕಗಳಿಂದ 1,620 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಿದರೆ, ಎರಡು ಘಟಕಗಳಿರುವ ವೈಟಿಪಿಎಸ್‌ 1,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಲ್ಲದು.

2017 ರ ಏಪ್ರಿಲ್‌ನಲ್ಲಿ ವೈಟಿಪಿಎಸ್‌ ಘಟಕಗಳನ್ನು ವಾಣಿಜ್ಯ ಉದ್ದೇಶಕ್ಕೆ ಚಾಲನೆಗೊಳಿಸುವ ಮೊದಲು 72 ಗಂಟೆಗಳವರೆಗೆ ಪರೀಕ್ಷಾರ್ಥವಾಗಿ ಎರಡೂ ಘಟಕಗಳಿಂದ ನಿರಂತರ ವಿದ್ಯುತ್‌ ಉತ್ಪಾದಿಸಿ ಅವುಗಳ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಲಾಗಿತ್ತು. ಎರಡೂ ಘಟಕಗಳು ಗರಿಷ್ಠ ಮಟ್ಟ ಮೀರಿ ವಿದ್ಯುತ್‌ ಉತ್ಪಾದಿಸಿ ಗಮನ ಸೆಳೆದಿದ್ದವು. ಅದೇ ಕೊನೆ, ಆ ನಂತರದಲ್ಲಿ ವೈಟಿಪಿಎಸ್‌ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿಲ್ಲ. ಮುಖ್ಯವಾಗಿ, ರೈಲ್ವೆ ಲೈನ್‌ ಕಾಮಗಾರಿ ಇಲ್ಲದೆ ಕಲ್ಲಿದ್ದಲು ಪೂರೈಕೆ ಆಗದಿರುವುದು ಒಂದು ಸಮಸ್ಯೆಯಾದರೆ, ವೈಟಿಪಿಎಸ್‌ ಗುರಿಯಾಗಿಟ್ಟುಕೊಂಡು ಹೋರಾಟಗಳು ನಿರಂತರ ಮುಂದುವರಿಯುತ್ತಿವೆ.

ಕೈಗಾರಿಕೆಗಳ ಸ್ಥಾಪನೆಗಾಗಿ 1994–95 ರಲ್ಲಿ ಸುಮಾರು ಎರಡು ಸಾವಿರ ಎಕರೆಯಷ್ಟು ಭೂಮಿಯನ್ನು ಜಿಲ್ಲಾಡಳಿತಕ್ಕೆ ಐದು ಗ್ರಾಮಗಳ ರೈತರು ನೀಡಿದ್ದರು. ಅದರಲ್ಲಿಯೇ 1,200 ಎಕರೆ ಭೂಮಿ ಪಡೆದುಕೊಂಡು ವೈಟಿಪಿಎಸ್‌ ಸ್ಥಾಪಿಸಲಾಗಿದೆ. ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್‌ಇಎಲ್‌) ಹಾಗೂ ಕರ್ನಾಟಕ ವಿದ್ಯುತ್‌ ಕಾರ್ಪೋರೇಷನ್‌ (ಕೆಪಿಸಿಎಲ್‌) ಸಹಯೋಗದಲ್ಲಿ ₹1,300 ಕೋಟಿ ವೆಚ್ಚದಲ್ಲಿ ವೈಟಿಪಿಎಸ್‌ ಸ್ಥಾಪಿಸಿವೆ. ಭೂಮಿ ನೀಡಿರುವ ರೈತರೆಲ್ಲರೂ ವೈಟಿಪಿಎಸ್‌ನಲ್ಲಿ ಉದ್ಯೋಗ ಕೋರಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಆದರೆ, ಕೆಪಿಸಿಎಲ್‌ ಅಧಿಕಾರಿಗಳು ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಿಲ್ಲ.

ವೈಟಿಪಿಎಸ್‌ ಲೆಕ್ಕಾಚಾರದ ಪ್ರಕಾರ ಭೂ ಸಂತ್ರಸ್ತ ಕುಟುಂಬಗಳ ಸಂಖ್ಯೆ 258. ಆರಂಭದಲ್ಲಿ ಪ್ರತಿ ಎಕರೆಗೆ ₹50 ಸಾವಿರ ಮತ್ತು ಕೆಲವು ಜಮೀನಿಗೆ ₹65 ಸಾವಿರ ಪರಿಹಾರ ನೀಡಲಾಗಿದೆ. ಭೂಸಂತ್ರಸ್ತ ಕುಟುಂಬಕ್ಕೆ ಸಂಬಂಧಿಸಿದ 110 ಜನರಿಗೆ ಉದ್ಯೋಗ ಒದಗಿಸಲಾಗಿದೆ. ಕೈಗಾರಿಕೆ ನೀಡಿದ ಜಮೀನಿನಲ್ಲಿ ಪಾಲು ಹೊಂದಿರುವ ಪ್ರತಿ ಕುಟುಂಬಕ್ಕೊಂದು ಉದ್ಯೋಗ ಕೊಡಬೇಕು. ಭೂಮಿಯ ಮಾಲೀಕ ಮಹಿಳೆಯಾಗಿದ್ದರು ಉದ್ಯೋಗ ಒದಗಿಸಬೇಕು ಎನ್ನುವ ಒತ್ತಾಯವನ್ನು ಗ್ರಾಮಸ್ಥರು ಮಾಡುತ್ತಾ ಬರುತ್ತಿದ್ದಾರೆ. ಇದಕ್ಕಾಗಿ ಧರಣಿ, ರಸ್ತೆತಡೆ, ವಿದ್ಯುತ್‌ ಕಂಬ ಏರಿ ಪ್ರತಿಭಟನೆಗಳನ್ನು ಮಾಡಿದ್ದಾರೆ. ಆದರೆ, ಬೇಡಿಕೆಗಳು ಸಂಪೂರ್ಣ ಈಡೇರಿಲ್ಲ.

ಖಾಸಗೀಕರಣ ಯತ್ನ: ವೈಟಿಪಿಎಸ್‌ ಆರಂಭಿಸಲು ಇರುವ ಅಡೆತಡೆಗಳನ್ನು ಪರಿಹರಿಸಲು ಸಾಧ್ಯವಾಗದೆ ವೈಟಿಪಿಎಸ್‌ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ಈಚೆಗೆ ವಹಿಸಲಾಗಿತ್ತು. ಪವರ್‌ ಮೇಕಿಂಗ್‌ ಕಂಪೆನಿಯು ವೈಟಿಪಿಎಸ್‌ ನಿರ್ವಹಣೆಯ ಹೊಣೆ ತೆಗೆದುಕೊಂಡು ಕೆಲವು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿತ್ತು. ಆದರೆ, ಖಾಸಗೀಕರಣಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ, ಖಾಸಗಿ ನಿರ್ವಹಣೆ ಗುತ್ತಿಗೆಯನ್ನು ದಿಢೀರ್‌ ರದ್ದುಪಡಿಸಲಾಗಿದೆ.

ಇದೇ ವೇಳೆ, ಖಾಸಗಿ ಕಂಪೆನಿ ಕಡೆಯಿಂದ ನೇಮಕಗೊಂಡಿದ್ದ ಹೊರಗುತ್ತಿಗೆ ಉದ್ಯೋಗಿಗಳು ಸೇರಿದಂತೆ ವೈಟಪಿಎಸ್‌ನ 300 ಕ್ಕೂ ಹೆಚ್ಚು ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕೆಪಿಸಿಎಲ್‌ ಅಧಿಕಾರಿಗಳು ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳುವಂತೆ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕರೇಗುಡ್ಡಕ್ಕೆ ಗ್ರಾಮವಾಸ್ತವ್ಯಕ್ಕೆ ಬಂದಾಗಲೂ ಇದೇ ಕಾರ್ಮಿಕರು ಬಸ್‌ಗೆ ಅಡ್ಡಹಾಕಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಪ್ರತಿಭಟನೆ ಬಿಸಿ

ವೈಟಿಪಿಎಸ್‌ಗಾಗಿ ಭೂಮಿ ಕಳೆದುಕೊಂಡ ಐದು ಗ್ರಾಮಗಳ ರೈತರು, ಆ ಜಮೀನುಗಳಲ್ಲಿ ಪಾಲು ಹೊಂದಿದ್ದ ಎಲ್ಲರಿಗೂ ಉದ್ಯೋಗ ನೀಡಬೇಕು ಎನ್ನುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವೈಟಿಪಿಎಸ್‌ ಎದುರು ನಿರಂತರ ಹೋರಾಟ ನಡೆಸುತ್ತಿದ್ದಾರೆ.

ವೈಟಿಪಿಎಸ್‌ ವಿದ್ಯುತ್‌ ಉತ್ಪಾದನೆ ಆರಂಭಿಸುವ ದಿನ ರೈತರು ವಿದ್ಯುತ್‌ ಕಂಬ ಏರಿ ಕುಳಿತು ಪ್ರತಿಭಟಿಸಿದ್ದರು. ಆನಂತರವೂ ಪ್ರತಿಭಟನೆಗಳು ಎಡೆಬಿಡದೆ ನಡೆಯುತ್ತಿವೆ. ರೈತರ ಬೇಡಿಕೆಗಳನ್ನೆಲ್ಲ ಕೆಪಿಸಿಎಲ್‌ ಒಪ್ಪುತ್ತಿಲ್ಲ. ರೈತರು ಪ್ರತಿಭಟನೆ ಕೈಬಿಡುತ್ತಿಲ್ಲ.

**

ಆರ್‌ಟಿಪಿಎಸ್‌ನಿಂದ ಬಹಳಷ್ಟು ಎಂಜಿನಿಯರುಗಳನ್ನು ವೈಟಿಪಿಎಸ್‌ನಲ್ಲಿ ಕಾರ್ಯನಿರ್ವಹಿಸುವುದಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲೆ ಅದು ಕೂಡಾ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

- ಸಿ.ವೇಣುಗೋಪಾಲ್‌, ಆಟಿಪಿಎಸ್‌ ಕಾರ್ಯನಿರ್ವಾಹಕ ನಿರ್ದೇಶಕ (ವೈಟಿಪಿಎಸ್‌ ಉಸ್ತುವಾರಿ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.