ಶನಿವಾರ, ಅಕ್ಟೋಬರ್ 19, 2019
28 °C
ಚಾಲನೆ ನೀಡಿದ ಬ್ಯಾಡ್ಮಿಂಟನ್‌ ಚಾಂಪಿಯನ್‌ಗೆ ಚಪ್ಪಾಳೆ ಸುರಿಮಳೆ

ಯುವ ದಸರೆ: ಸ್ಫೂರ್ತಿ ತುಂಬಿದ ಪಿ.ವಿ. ಸಿಂಧು

Published:
Updated:
Prajavani

ಮೈಸೂರು: ದೀಪಾಲಂಕಾರದಿಂದ ಪ್ರಜ್ವಲಿಸುತ್ತಿದ್ದ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಕ್ರೀಡಾಸಾಧಕಿ ಪಿ.ವಿ.ಸಿಂಧು ಅಕ್ಷರಶಃ ಕಂಗೊಳಿಸಿದರು. ಚಾಂಪಿಯನ್‌ಗೆ ಪ್ರೇಕ್ಷಕರ ಚಪ್ಪಾಳೆಯ ಭೋರ್ಗರೆತ. ಛಲಗಾತಿಯು ವೇದಿಕೆ ಏರುತ್ತಿದ್ದಂತೆ ಸಭಾಂಗಣದಲ್ಲಿದ್ದವರು ಎದ್ದು ನಿಂತು ಅಭಿಮಾನ ಮೆರೆದರು.

ಇಂಥ ಭಾವುಕ ಹಾಗೂ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಯುವ ದಸರಾ. ನಾಡಹಬ್ಬದ ಪ್ರಮುಖ ಆಕರ್ಷಣೆ ಎನಿಸಿರುವ ಈ ಕಾರ್ಯಕ್ರಮದಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಸಿಂಧು ಅವರದ್ದೇ ಗುಣಗಾನ. ಆ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದು ಸಿಂಧು ಪೋಷಕರು.

‘ಎಲ್ಲರಿಗೂ ನಮಸ್ಕಾರ. ಹೇಗಿದ್ದೀರಾ. ಎಲ್ಲರಿಗೂ ದಸರಾ ಶುಭಾಶಯ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಸಿಂಧು, ‘ನಿಮ್ಮ ಅಭಿಮಾನ, ಪ್ರೋತ್ಸಾಹ ಹೀಗೆ ಮುಂದುವರಿದರೆ ಭಾರತಕ್ಕಾಗಿ ಮತ್ತಷ್ಟು ಪದಕ ಗೆದ್ದು ತರುತ್ತೇನೆ’ ಎಂದಾಗ ಜೋರು ಕರತಾಡನ.

‘ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಉತ್ತಮ ದಾರಿಯಲ್ಲಿ ಹೆಜ್ಜೆ ಇಟ್ಟರೆ ಖಂಡಿತ ಯಶಸ್ಸು ನಿಮ್ಮದಾಗಲಿದೆ’ ಎಂದು ಹುರಿದುಂಬಿಸಿದರು. ‌

ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ಯುವಕರನ್ನು ಆಕರ್ಷಿಸುವ ಕಾರ್ಯಕ್ರಮಕ್ಕೆ ಸಾಧಕಿ ಸಿಂಧು ಚಾಲನೆ ನೀಡಿರುವುದು ಸಂತೋಷದ ವಿಚಾರ. ಅವರು ನಮ್ಮೊಂದಿಗಿರುವುದೇ ಹೆಮ್ಮೆಯ ವಿಷಯ’ ಎಂದು ಹೇಳಿದರು.

ಬಳಿಕ ಆರಂಭವಾಗಿದ್ದು ಗಾಯಕಿ ಶಮಿತಾ ಮಲ್ನಾಡ್‌ ಅವರ ಗಾನಸುಧೆ. ಸಿನಿಮಾ ಹಾಡುಗಳ ಮೂಲಕ ರಂಜಿಸಿದರು. ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದ ‘ಕೇಳದೆ ನಿಮಗೀಗ’ ಕಾರ್ಯಕ್ರಮ ಡಾ.ರಾಜಕುಮಾರ್‌, ಶಂಕರ್‌ ನಾಗ್‌, ವಿಷ್ಣುವರ್ಧನ್‌, ಅಂಬರೀಷ್‌ ಅವರ ಸಿನಿಮಾಗಳನ್ನು ಪರಿಚಯಿಸಿತು.

ಸಿಂಧುಗೆ ₹ 10 ಲಕ್ಷ ಬಹುಮಾನ

ಸಾಧಕಿ ಪಿ.ವಿ.ಸಿಂಧು ಅವರಿಗೆ ರಾಜ್ಯ ಸರ್ಕಾರದ ಪ‍ರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ₹ 10 ಲಕ್ಷ ಬಹುಮಾನ ನೀಡಿದರು.

ಕ್ರೀಡಾ ಇಲಾಖೆಯಿಂದ ₹ 5 ಲಕ್ಷ ಹಾಗೂ ದಸರಾ ಸಮಿತಿಯಿಂದ ನೀಡಿದ ₹ 5 ಲಕ್ಷ ಇದರಲ್ಲಿ ಸೇರಿದೆ.

Post Comments (+)