ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ರೈತರ ಕಣ್ಣಲ್ಲಿ ನೀರು ತರಿಸಿದ ಝಂಡುಬಾಮ್!

ಹೊಲದಲ್ಲಿನ ಬೆಳೆ ಕಿತ್ತೊಗೆಯಲು ಮುಂದಾದ ರೈತರು
Last Updated 9 ಮೇ 2020, 19:56 IST
ಅಕ್ಷರ ಗಾತ್ರ

ಮುಂಡಗೋಡ (ಉತ್ತರ ಕನ್ನಡ): ಲಾಕ್‍ಡೌನ್‍ ಪರಿಣಾಮ ತಾಲ್ಲೂಕಿನ ಮೆಣಸಿನಕಾಯಿ ಬೆಳೆಗಾರರ ಮೇಲೆ ಬೀರಿದೆ. ಝಂಡುಬಾಮ್ ಅಥವಾ ತೇಜಸ್ವಿನಿ ತಳಿಯ ಮೆಣಸಿಕಾಯಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾರುಕಟ್ಟೆಯಿಲ್ಲದೆ ಕೆಲವು ರೈತರು ಗದ್ದೆಯಲ್ಲೇ ಅದನ್ನು ನೆಲಸಮಗೊಳಿಸಲು ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ಹುನಗುಂದ, ಅಗಡಿ, ಅರಿಶಿಣಗೇರಿ, ನಂದಿಗಟ್ಟಾ, ಕುಂದರ್ಗಿ ಸೇರಿದಂತೆ ಹಲವೆಡೆ 250ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ತೇಜಸ್ವಿನಿ ಮೆಣಸಿನಕಾಯಿ(414 ತಳಿ) ಬೆಳೆದಿದ್ದಾರೆ. ಮಹಾರಾಷ್ಟ್ರವೇ ಇದಕ್ಕೆ ಮುಖ್ಯ ಮಾರುಕಟ್ಟೆ. ಇದನ್ನು ಝಂಡುಬಾಮ್‌ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತದೆ.

‘ಹಿಂದೆ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಭಾಗದ ಮಧ್ಯವರ್ತಿಗಳು ಖರೀದಿಸಿ ಮುಂಬೈಗೆ ಸಾಗಿಸುತ್ತಿದ್ದರು. ಪ್ರತಿ ಕ್ವಿಂಟಲ್‌ಗೆ ಸರಾಸರಿ ₹ 6,000 ದರ ಇರುತ್ತಿತ್ತು. ಈಗ ಕಟಾವಿಗೆ ಬಂದು ತಿಂಗಳಾದರೂ ಖರೀದಿ ಮಾಡುವವರಿಲ್ಲ’ ಎಂದು ರೈತರಾದ ಸುಭಾಷ್ ಲಮಾಣಿ, ಮೋಹನ ಹರಮಲಕರ್, ಶಿವಾಜಿ ಲಮಾಣಿ, ಕಲ್ಮೇಶ ಲಮಾಣಿ, ಸಿಕಂದರ್ ಹುಬ್ಬಳ್ಳಿ ಹೇಳಿದರು.

‘ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ ₹ 40ಸಾವಿರ ಇದೆ. ಕೂಲಿ ಸೇರಿ ಎಕರೆಗೆ ₹1,800ರಷ್ಟು ಖರ್ಚು ತಗಲುತ್ತದೆ. ಈಗ ಪ್ರತಿ ಕ್ವಿಂಟಲ್ ಮೆಣಸಿನಕಾಯಿಗೆ ₹ 1,200 ದರವಿದೆ’ ಎಂದು ರೈತ ಅಬ್ದುಲ್ ರಹಿದ್ ಹೇಳಿದರು.

‘ಮುಂಬೈ ಮಾರುಕಟ್ಟೆ ಇನ್ನೂ ಒಂದು ತಿಂಗಳು ತೆರೆಯುವುದಿಲ್ಲ ಎನ್ನುತ್ತಾರೆ ದಲ್ಲಾಳಿಗಳು. ಈ ವರ್ಷ ಬೆಳೆ ಮಣ್ಣು ಪಾಲಾಗುವುದು ಖಚಿತ’ ಎಂದು ರೈತ ಯಲ್ಲಪ್ಪ ಮೇಲಿನಮನಿ ಕಣ್ಣೀರು ಹಾಕಿದರು.

***

ಎರಡು ದಿನಗಳಿಂದ ಕೆಲವು ಮಧ್ಯವರ್ತಿಗಳು ಖರೀದಿ ಮಾಡುತ್ತಿದ್ದಾರೆ. ಮುಂಬೈ ಮಾರುಕಟ್ಟೆ ಸೀಲ್‍ಡೌನ್ ಆಗಿದ್ದರಿಂದ ದರ ಕುಸಿತವಾಗಿದೆ

- ಎಸ್.ಎಫ್.ಪಾಟೀಲ, ತೋಟಗಾರಿಕಾ ಇಲಾಖೆಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT