ಭಾನುವಾರ, ಆಗಸ್ಟ್ 1, 2021
26 °C

ವಲಸಿಗರ ಸಂಖ್ಯೆ ಇಳಿಸಲು ಮುಂದಾದ ಕುವೈತ್‌: 8 ಲಕ್ಷ ಭಾರತೀಯರಿಗೆ ಆತಂಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಕುವೈತ್‌ನಲ್ಲಿ ಕೆಲಸ ಮಾಡುವ ವಿದೇಶಿಯರ ಪ್ರಮಾಣಕ್ಕೆ ಕೋಟ ನಿಗದಿಮಾಡುವ ಕರಡು ಮಸೂದೆಗೆ ಅಲ್ಲಿನ ಸಂಸತ್‌ ಸಮಿತಿಯು ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಸುಮಾರು ಎಂಟು ಲಕ್ಷ ಭಾರತೀಯರು ತವರಿಗೆ ಮರಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಮಸೂದೆಯ ಪ್ರಕಾರ ಕುವೈತ್‌ನಲ್ಲಿ ಭಾರತೀಯರ ಸಂಖ್ಯೆಯು ಅಲ್ಲಿನ ಒಟ್ಟು ಜನಸಂಖ್ಯೆಯ ಶೇ 15ನ್ನು ಮೀರುವಂತಿಲ್ಲ. ಪ್ರಸಕ್ತ ಅಲ್ಲಿ ಭಾರತೀಯ ಮೂಲದವರ ಸಂಖ್ಯೆ 14.5 ಲಕ್ಷ ಇದೆ. ಈ ಕಾನೂನು ಜಾರಿಯಾದರೆ ಸುಮಾರು 8 ಲಕ್ಷ ಭಾರತೀಯರು ಅಲ್ಲಿಂದ ಹೊರಹೋಗಬೇಕಾಗುತ್ತದೆ ಎಂದು ‘ಗಲ್ಫ್‌ ನ್ಯೂಸ್’‌ ಪತ್ರಿಕೆಯು ಕುವೈತ್‌ ಪತ್ರಿಕೆಯೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕುವೈತ್‌ನ ಪ್ರಸಕ್ತ ಜನಸಂಖ್ಯೆಯು 43 ಲಕ್ಷ. ಅದರಲ್ಲಿ 13 ಲಕ್ಷ ಸ್ಥಳೀಯರಾಗಿದ್ದು, 30 ಲಕ್ಷ ಮಂದಿ  ವಲಸಿಗರಾಗಿದ್ದಾರೆ. ತೈಲಬೆಲೆಯಲ್ಲಿ ಕುಸಿತ ಹಾಗೂ ಕೊರೊನಾ ಸೋಂಕಿನಿಂದ ಸೃಷ್ಟಿಯಾಗಿರುವ ಆರ್ಥಿಕ ಸಂಕಷ್ಟದಿಂದಾಗಿ ಅಲ್ಲಿ ಈಗ ವಲಸಿಗರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿದೇಶಿಯರ ಸಂಖ್ಯೆಯನ್ನು ಇಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ದೇಶದ ವಲಸಿಗರ ಸಂಖ್ಯೆಯನ್ನು ಶೇ 30ಕ್ಕೆ ಇಳಿಸುವ ಪ್ರಸ್ತಾಪವನ್ನು ಕಳೆದ ತಿಂಗಳಲ್ಲಿ ಕುವೈತ್‌ನ ಪ್ರಧಾನಿ ಶೇಖ್‌ ಸಬಾ ಅಲ್‌ ಖಾಲಿದ್‌ ಅಲ್‌ಸಬಾ ಅವರು ಮಂಡಿಸಿದ್ದರು. ಈ ಕುರಿತು ಸಮಗ್ರವಾದ ಕರಡು ಮಸೂದೆಯೊಂದನ್ನು ಸಂಸದರ ಸಮಿತಿಯೊಂದು ಮಂಡಿಸಲಿದೆ ಎಂದು ಅಲ್ಲಿನ ಸ್ಪೀಕರ್‌ ಮರಜೋಕ್‌ ಅಲ್‌–ಘಾನೆಮ್‌ ಅವರು ಟಿ.ವಿ. ವಾಹಿನಿಯೊಂದಕ್ಕೆ ತಿಳಿಸಿದ್ದರು.

‘30 ಲಕ್ಷದಷ್ಟು ವಲಸಿಗರಲ್ಲಿ ಸುಮಾರು 13 ಲಕ್ಷ ಮಂದಿ ಅನಕ್ಷರಸ್ತರು ಅಥವಾ ಅಲ್ಪಸ್ವಲ್ಪ ಅಕ್ಷರಾಭ್ಯಾಸ ಹೊಂದಿದವರು ಎಂಬುದು ಚಿಂತೆಯ ವಿಚಾರವಾಗಿದೆ. ಇಂಥವರು ಕುವೈತ್‌ಗೆ ಬೇಕಾಗಿಲ್ಲ. ನಾವು ವೈದ್ಯರು ಮತ್ತು ಕುಶಲಕರ್ಮಿಗಳನ್ನು ನೇಮಕ ಮಾಡಬೇಕಾಗಿತ್ತೇ ವಿನಾ ಕೌಶಲರಹಿತರನ್ನಲ್ಲ. ವೀಸಾ ವ್ಯಾಪಾರಿಗಳು ನಿಯಮಗಳನ್ನು ವಿರೂಪಗೊಳಿಸಿ ಇಂಥವರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ’ ಎಂದು ಸ್ಪೀಕರ್‌ ಹೇಳಿದ್ದಾರೆ ಎಂದು ‘ಕುವೈತ್‌ ಟೈಮ್ಸ್’‌ ವರದಿ ಮಾಡಿದೆ.

‘ವಲಸಿಗರ ಸಂಖ್ಯೆಯನ್ನು ಪ್ರಸಕ್ತ ಸಾಲಿನಲ್ಲಿ ಶೇ 70ಕ್ಕೆ, ಮುಂದಿನ ವರ್ಷ ಶೇ 65... ಹೀಗೆ ಹಂತಹಂತವಾಗಿ ಇಳಿಸುತ್ತಾ ಬರಲು ಕರಡು ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ಈ ಮಸೂದೆಯನ್ನು ಸಂಬಂಧಪಟ್ಟ ಸಮಿತಿಗೆ ಕಳುಹಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಕುವೈತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಪ್ರಕಾರ ಕುವೈತ್‌ನಲ್ಲಿ ಸುಮಾರು 28,000 ಭಾರತೀಯರು ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಅವರಲ್ಲಿ ನರ್ಸ್‌, ಎಂಜಿನಿಯರ್‌ ಹಾಗೂ ಕೆಲವು ವಿಜ್ಞಾನಿಗಳೂ ಸೇರಿದ್ದಾರೆ. ಹೆಚ್ಚಿನ ಭಾರತೀಯರು ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ಸುಮಾರು 1.16 ಮಂದಿ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ಅಲ್ಲಿನ 23 ಭಾರತೀಯ ಶಾಲೆಗಳಲ್ಲಿ 60 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಭಾರತಕ್ಕೆ ಹೆಚ್ಚು ವಿದೇಶಿ ವಿನಿಮಯವನ್ನು ತಂದುಕೊಡುವ ರಾಷ್ಟ್ರಗಳಲ್ಲಿ ಕುವೈತ್‌ ಸಹ ಒಂದಾಗಿದೆ. 2018ರಲ್ಲಿ, 480 ಕೋಟಿ ಡಾಲರ್‌ನಷ್ಟು (₹35,825 ಕೋಟಿ) ಹಣವು ಭಾರತಕ್ಕೆ ಕುವೈತ್‌ನಿಂದ ಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು