ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಹೊಸ ಕ್ಯಾತೆ: ಭೂತಾನ್‌ ಪೂರ್ವ ಗಡಿಯ ಹಕ್ಕು ಪ್ರತಿಪಾದನೆ

Last Updated 6 ಜುಲೈ 2020, 5:21 IST
ಅಕ್ಷರ ಗಾತ್ರ
ADVERTISEMENT
""
""

ಭಾರತದ ಗಡಿಯಲ್ಲಿ ಆಗಾಗ್ಗೆ ಕ್ಯಾತೆ ತೆಗೆದು ಸಂಘರ್ಷಕ್ಕೆ ಮುಂದಾಗುವ ಚೀನಾ, ಪೂರ್ವ ಭಾಗದಲ್ಲಿ ಭೂತಾನ್‌ನೊಂದಿಗೆ ಗಡಿ ವಿವಾದ ಇರುವುದಾಗಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದೆ. ಇದು ಭೂತಾನ್‌ನೊಂದಿಗೆ ಶಾಂತಿ–ಸೌಹಾರ್ದತೆ ಹೊಂದಿರುವ ಭಾರತದ ಮೇಲೆ ರಾಜತಾಂತ್ರಿಕ ಒತ್ತಡ ಹೇರುವ ಪ್ರಯತ್ನವೆಂದೇ ವಿಶ್ಲೇಷಿಸಲಾಗುತ್ತಿದೆ.

ಭೂತಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿ ಚೀನಾದೊಂದಿಗೆ ಗಡಿ ವಿವಾದ ಹೊಂದಿದೆ. ಪೂರ್ವ ಭಾಗದ ಕುರಿತು ಈವರೆಗೂ ಚೀನಾ ಮತ್ತು ಭೂತಾನ್‌ ನಡುವೆ ಯಾವುದೇ ಮಾತುಕತೆ ನಡೆದಿರಲಿಲ್ಲ. ಇದೀಗ ಪೂರ್ವ ಭಾಗದಲ್ಲಿ ಸಕ್ಟೆಂಗ್‌ ಅಭಯಾರಣ್ಯ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಚೀನಾ ಆಕ್ಷೇಪಣೆ ವ್ಯಕ್ತಪಡಿಸುವ ಮೂಲಕ ಹೊಸ ಗಡಿ ವಿವಾದ ಮುಂದೆ ತಂದಿದೆ. ಪೂರ್ವ ಪ್ರದೇಶದ ಮೇಲೆ ಹಕ್ಕು ಪ್ರತಿಪಾದಿಸಿರುವುದರ ವಿರುದ್ಧ ನವದೆಹಲಿಯಲ್ಲಿರುವ ಭೂತಾನ್‌ ರಾಯಲ್‌ ಎಂಬೆಸಿ (ರಾಯಭಾರ ಕಚೇರಿ) ಪ್ರತಿಭಟನೆ ದಾಖಲಿಸಿದೆ.

ಗ್ಲೋಬಲ್ ಎನ್ವಿರಾನ್ಮೆಂಟ್‌ ಫೆಸಿಲಿಟಿಯ (ಜಿಇಎಫ್‌) ಆನ್‌ಲೈನ್‌ ಸಭೆಯಲ್ಲಿ ಪೂರ್ವ ಭೂತಾನ್‌ನ ತ್ರಾಷಿಗಾಂಗ್‌ ಜಿಲ್ಲೆಯ ಸಕ್ಟೆಂಗ್‌ ಅಭಯಾರಣ್ಯ ಅಭಿವೃದ್ಧಿ ಪಡಿಸುವುದರ ಮನವಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಅಮೆರಿಕ ಮೂಲದ ಜಾಗತಿಕ ಸಂಸ್ಥೆ ಜಿಇಎಫ್‌. 1992ರಿಂದ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ.

ಭಾರತ–ಭೂತಾನ್–ಚೀನಾ ಗಡಿ ಭೂಪಟ

ಭೂತಾನ್‌ ಪೂರ್ವ ಭಾಗದ ಬಗ್ಗೆ ಚೀನಾ ಹಕ್ಕು ಪ್ರತಿಪಾದನೆಗೆ ಭೂತಾನ್‌ ಸಹ ಆಕ್ಷೇಪಿಸಿದೆ. ಚೀನಾದ ಪ್ರಸ್ತಾಪವನ್ನು ತಳ್ಳಿ ಹಾಕಿರುವ ಜಿಇಎಫ್‌ ಮಂಡಳಿಯು ಯೋಜನೆಗೆ ಅನುಮೋದನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಜೂನ್‌ 2 ಮತ್ತು 3ರಂದು ಜಿಇಎಫ್‌ ಮಂಡಳಿಯ ಸಭೆ ನಡೆದಿದೆ.

ಐಎಎಸ್‌ ಅಧಿಕಾರಿ ಮತ್ತು ವಿಶ್ವ ಬ್ಯಾಂಕ್‌ ಮಂಡಳಿಯ ಕಾರ್ಯಕಾರಿ ನಿರ್ದೇಶಕಿಯಾಗಿರುವ ಅಪರ್ಣಾ ಸುಬ್ರಮಣಿ ಅವರು ಭೂತಾನ್‌ ಪ್ರತಿನಿಧಿಸುತ್ತಿದ್ದಾರೆ. 2017ರ ಸೆಪ್ಟೆಂಬರ್‌ 1ರಿಂದ ಬಾಂಗ್ಲಾದೇಶ, ಭೂತಾನ್‌, ಭಾರತ ಹಾಗೂ ಶ್ರೀಲಂಕಾ ರಾಷ್ಟ್ರಗಳನ್ನು ಅಪರ್ಣಾ ಪ್ರತಿನಿಧಿಸುತ್ತಿದ್ದಾರೆ.

'ಸಕ್ಟೆಂಗ್‌ ಅಭಯಾರಣ್ಯ ಪ್ರದೇಶ ಭೂತಾನ್‌ನ ಅವಿಭಾಜ್ಯ ಮತ್ತು ಸಾರ್ವಭೌಮತೆ ಭಾಗವಾಗಿದೆ. ಚೀನಾ ಮತ್ತು ಭೂತಾನ್‌ ನಡುವಿನ ಯಾವುದೇ ಚರ್ಚೆಯಲ್ಲಿ ಇದನ್ನು ವಿವಾದಿತ ಪ್ರದೇಶವೆಂದು ಪ್ರಸ್ತಾಪಿಸಿರಲಿಲ್ಲ' ಎಂದು ಭೂತಾನ್‌ ಸ್ಪಷ್ಟಪಡಿಸಿದೆ. ನವದೆಹಲಿಯಲ್ಲಿ ಚೀನಾ ರಾಜಭಾರ ಕಚೇರಿಗೆ ಭೂತಾನ್‌ ತನ್ನ ನಿಲುವು ರವಾನಿಸಿರುವುದಾಗಿ ತಿಳಿದು ಬಂದಿದೆ. ಚೀನಾ ಮತ್ತು ಭೂತಾನ್‌ ಉಭಯ ರಾಷ್ಟ್ರಗಳಲ್ಲಿ ಎರಡೂ ರಾಷ್ಟ್ರಗಳು ರಾಯಭಾರ ಕಚೇರಿಗಳನ್ನು ಹೊಂದಿಲ್ಲ. ರಾಜತಾಂತ್ರಿಕ ಮಾತುಕತೆಗಳನ್ನು ದೆಹಲಿ ಕಚೇರಿಗಳಿಂದಲೇ ನಡೆಸುತ್ತವೆ.

ಭೂತಾನ್‌ ಮತ್ತು ಚೀನಾ ಗಡಿ ವಿವಾದಗಳಿಗೆ ಸಂಬಂಧಿಸಿದಂತೆ 1984ರಿಂದ 2016ರ ವರೆಗೂ 24 ಸುತ್ತಿನ ಮಾತುಕತೆಗಳನ್ನು ನಡೆಸಿದ್ದು, ಬೀಜಿಂಗ್‌ ರಾಜಭಾರ ಕಚೇರಿ ಮುಂದಿನ ಸುತ್ತಿನ ಮಾತುಕತೆಯಲ್ಲಿ ಪೂರ್ವ ವಲಯದ ವಿಚಾರ ಪ್ರಸ್ತಾಪಿಸಿದರೆ ಥಿಂಪು (ಭೂತಾನ್‌ ರಾಜಧಾನಿ) ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಸಜ್ಜಾಗಿದೆ. 2017ರಲ್ಲಿ ಡೊಕ್ಲಾಂ ಪ್ರದೇಶದಲ್ಲಿ ಭಾರತ–ಚೀನಾ ಭದ್ರತಾ ಸಿಬ್ಬಂದಿ ನಡುವೆ ಎದುರಾದ ಸಂಘರ್ಷದ ನಂತರದಲ್ಲಿ ಭೂತಾನ್‌ ಜೊತೆಗೆ ಚೀನಾ ಮಾತುಕತೆ ಮುಂದುವರಿಸಿಲ್ಲ.

ಡೊಕ್ಲಾಂ ಪ್ರದೇಶ ವಿವಾದ

ಭೂತಾನ್‌ನ 650 ಚದರ ಕಿ.ಮೀ. ವ್ಯಾಪ್ತಿಯ ಪೂರ್ವ ವಲಯದಲ್ಲಿ ಅಭಯಾರಣ್ಯವಿದೆ. ಹಿಂದೆ ಈ ಭಾಗದ ಬಗ್ಗೆ ಚೀನಾ ಕ್ಯಾತೆ ತೆಗೆದಿರಲಿಲ್ಲ.

ಚೀನಾದ ವಿದೇಶಾಂಗ ಸಚಿವಾಲಯ ನೀಡಿರುವ ಪ್ರಕಟಣೆಯಲ್ಲಿ 'ಚೀನಾ–ಭೂತಾನ್‌ ಗಡಿ ವಿವಾದದಲ್ಲಿ ಮೂರನೇ ವ್ಯಕ್ತಿ ಪ್ರವೇಶಿಸುವಂತಿಲ್ಲ' ಎಂದಿದೆ. ಇದು ಪರೋಕ್ಷವಾಗಿ ಭಾರತದ ಕುರಿತು ಪ್ರಸ್ತಾಪಿಸಿರುವಂತಿದೆ. ಇತ್ತೀಚೆಗಷ್ಟೇ ಭಾರತ ಮತ್ತು ನೇಪಾಳದ ನಡುವೆ ಗಡಿ ವಿವಾದವೂ ಮೇಲೆದ್ದಿದೆ.

ಶಾಂಘೈನ ಫುಡಾನ್‌ ಯೂನಿವರ್ಸಿಟಿಯ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನ ಅಸಿಸ್ಟಂಟ್‌ ಡೀನ್‌ ಲಿನ್‌ ಮಿನ್‌ವಾಂಗ್‌ ಪ್ರಕಾರ, 'ನನಗೆ ತಿಳಿದಿರುವಂತೆ ಚೀನಾ–ಭೂತಾನ್‌ ಗಡಿ ವಿಚಾರವು 20 ವರ್ಷಗಳ ಹಿಂದೆಯೇ ಬಗೆ ಹರಿದಿದೆ. ಅಂತಿಮ ಒಪ್ಪಂದಕ್ಕೆ ಬರುವುದರ ಬಗ್ಗೆ ಉಭಯ ರಾಷ್ಟ್ರಗಳಿಗೆ ಸಮಾನ ತಿಳಿವಳಿಕೆ ಇದೆ. ಆದರೆ, ಭಾರತದಿಂದಾಗಿ ಭೂತಾನ್‌ಗೆ ಅ‌ದು ಕಠಿಣವಾಗಿ ತೋರುತ್ತಿದೆ. ಇದೇ ಕಾರಣದಿಂದಾಗಿ ಚೀನಾ–ಭೂತಾನ್‌ ಒಪ್ಪಂದಕ್ಕೆ ಸಹಿ ಮಾಡಿಲ್ಲ' ಎಂದಿರುವುದಾಗಿ ಹಿಂದುಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT