ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕಿಳಿದ ಕ್ಯಾನೆ ವೆಸ್ಟ್‌ ಬಗ್ಗೆ ಇಲ್ಲಿದೆ ಮಾಹಿತಿ

Last Updated 5 ಜುಲೈ 2020, 11:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಖ್ಯಾತ ಹಿಪ್‌ ಹಾಪ್‌ ಗಾಯಕ ಕಾನ್ಯೆ ವೆಸ್ಟ್ ಅವರು ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕದ 244ನೇ ಸ್ವಾತಂತ್ರ್ಯೋತ್ಸವದ ದಿನವಾದ ಜುಲೈ 4ರಂದು ಟ್ವೀಟ್‌ ಮಾಡಿ ಅವರು ಈ ವಿಚಾರ ತಿಳಿಸಿದ್ದಾರೆ.

ಈ ಮೂಲಕ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ಅವರ ಎದುರು ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಸೆಣಸುವ ಸಂದರ್ಭ ಸೃಷ್ಟಿಯಾಗಿದೆ. ಆದರೆ, ವೆಸ್ಟ್‌ ಅವರು ಟ್ರಂಪ್‌ ಆಪ್ತರು.

ಸ್ಪರ್ಧೆ ಘೋಷಣೆ ಬೆನ್ನಲ್ಲೇ ಬೆಂಬಲ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ವೆಸ್ಟ್‌ ಹೇಳಿದ್ದೇ, ಅವರಿಗೆ ಹಲವರಿಂದ ಬೆಂಬಲವೂ ವ್ಯಕ್ತವಾಗಿದೆ. ‘ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್’ ಸಂಸ್ಥಾಪಕ ಎಲೋನ್ ಮಸ್ಕ್ "ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ" ಎಂದು ಹೇಳಿದ್ದಾರೆ. ಇದಲ್ಲದೇ ಟ್ವಿಟರ್‌ನಲ್ಲಿ #VISION2020 ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಚರ್ಚೆಗಳು ನಡೆಯುತ್ತಿದ್ದು ವೆಸ್ಟ್‌ಗೆ ಭಾರಿ ಬೆಂಬಲವೂ ವ್ಯಕ್ತವಾಗಿದೆ.

ಟ್ರೆಂಡ್‌ ಆದ ಕಿಮ್‌ ಕರ್ದಾಶಿನ್‌

ಕಾನ್ಯೆ ವೆಸ್ಟ್‌ ಅವರು ಅಮೆರಿಕದ ಖ್ಯಾತ ನಟಿ ಕಿಮ್‌ ಕರ್ದಾಶಿನ್‌ ಅವರ ಪತಿಯೂ ಹೌದು. ಹಾಗೇನಾದರೂ ವೆಸ್ಟ್‌ ಈ ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ನಟಿ ಕಿಮ್‌ ಅಮೆರಿಕದ ಪ್ರಥಮ ಮಹಿಳೆಯೂ ಆಗಲಿದ್ದಾರೆ. ಇದೇ ಕಾರಣಕ್ಕೆ ಕಿಮ್‌ ಕರ್ದಾಶಿನ್‌ ಎಂಬ ಹ್ಯಾಷ್‌ ಟ್ಯಾಂಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಕೂಡ ಆಗಿದೆ.

ಪತ್ನಿ ಕಿಮ್‌ ಕರ್ದಾಶಿನ್‌ ಜೊತೆಗೆ ಕಾನ್ಯೆ ವೆಸ್ಟ್‌

ಈ ಹಿಂದೆಯೂ ಸ್ಪರ್ಧೆ ಘೋಷಣೆ ಮಾಡಿದ್ದ ಕಾನ್ಯೆ

ಎನ್‌ಬಿಸಿ ವರದಿಯ ಪ್ರಕಾರ ವೆಸ್ಟ್ ಈ ಮೊದಲು ಇದೇ ರೀತಿಯ ಘೋಷಣೆಯೊಂದನ್ನು ಮಾಡಿದ್ದರು. 2020ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು 2015 ರ ಎಂಟಿವಿ ವಿಡಿಯೋ ಮ್ಯೂಸಿಕ್ ಪ್ರಶಸ್ತಿ ಸಮಾರಂಭದಲ್ಲಿ ಘೋಷಿಸಿದ್ದರು. ಈ ಮಧ್ಯೆ ಅವರು 2024ರ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದರು. “ಕ್ರಿಶ್ಚಿಯನ್ ಜೀನಿಯಸ್ ಬಿಲಿಯನೇರ್ ಕಾನ್ಯೆ ವೆಸ್ಟ್’ ಎಂಬ ಹೆಸರಿನಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಟ್ರಂಪ್‌ ಬೆಂಬಲಿಗ

ಗಾಯಕ ಕಾನ್ಯೆ ವೆಸ್ಟ್ ಅವರು ಡೊನಾಲ್ಡ್‌ ಟ್ರಂಪ್ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದವರು. ಅಲ್ಲದೆ, ಅವರನ್ನು ನನ್ನ ಸೋದರ ಎಂದೂ ಹೇಳಿಕೊಂಡಿದ್ದರು. ‘ಮೇಕ್‌ ಅಮೆರಿಕ ಗ್ರೇಟ್‌ ಎಗೇನ್‌’ ಎಂಬ ಅಭಿಯಾನದಲ್ಲಿ ಕಾನ್ಯೆ ಅವರು ಭಾಗವಹಿಸಿದ್ದರು.

"ನೀವು ಟ್ರಂಪ್ ಅವರನ್ನು ಒಪ್ಪಿಕೊಳ್ಳಬೇಕಿಲ್ಲ. ಆದರೆ, ಜನಸಮೂಹವು ನನ್ನನ್ನು ಪ್ರೀತಿಸದಂತೆ ಮಾಡಲು ಸಾಧ್ಯವಿಲ್ಲ" ಎಂದು ಅವರು ಟ್ರಂಪ್‌ ಪರವಾಗಿ 2018 ರಲ್ಲಿ ಟ್ವೀಟ್ ಮಾಡಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜೊತೆಗೆ

ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಎಂಬ ಕಪ್ಪು ವರ್ಣಿಯ ಪೊಲೀಸ್‌ ಕಸ್ಟಡಿಯಲ್ಲೇ ಮೃತಪಟ್ಟ ವಿಚಾರ ಅಲ್ಲಿ ಜನಾಂಗೀಯ ದ್ವೇಷದ ವಿರುದ್ಧದ ಪ್ರತಿಭಟನೆಯ ಕಿಚ್ಚು ಹೊತ್ತಿಸಿದೆ. ಇದೇ ಹೊತ್ತಿನಲ್ಲೇ ಹಿಪ್‌ ಹಾಪ್‌ ಗಾಯಕ ಕಾನ್ಯೆ ವೆಸ್ಟ್‌ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವುದು ಸಹಜವಾಗಿಯೇ ಪ್ರಾಮುಖ್ಯತೆ ಪಡೆದುಕೊಂಡಿದೆ.

ಕಾನ್ಯೆ ವೆಸ್ಟ್‌ ಅವರ ಸ್ಪರ್ಧೆಯಿಂದಾಗಿ ಟ್ರಂಪ್‌ ಅಥವಾ ಬಿಡೆನ್‌ ಅವರ ಪೈಕಿ ಯಾರಿಗೆ ತೊಡಕು ಎದುರಾಗಬಹುದು ಎಂಬ ರಾಜಕೀಯ ಲೆಕ್ಕಾಚಾರಗಳು ಅಮೆರಿಕದಲ್ಲಿ ಈಗಾಗಲೇ ಆರಂಭವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT