ಶನಿವಾರ, ಜುಲೈ 31, 2021
25 °C

ಅಮೆರಿಕದ ಜತೆ ಮಾತುಕತೆಯ ಅಗತ್ಯ ನಮಗಿಲ್ಲ: ಕಿಮ್‌ ಸಹೋದರಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಸಿಯೋಲ್‌: ‘ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ಪ್ರಸಕ್ತ ಸಾಲಿನಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರನ್ನು ಭೇಟಿಮಾಡುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಇಂಥ ಉನ್ನತ ಮಟ್ಟದ ಸಭೆಯನ್ನು ಅಮೆರಿಕಕ್ಕೆ ಉಡುಗೊರೆಯಾಗಿ ನೀಡಲು ನಾವು ಬಯಸುವುದಿಲ್ಲ’ ಎಂದು ಪ್ರಭಾವಿ ನಾಯಕಿ, ಅಧ್ಯಕ್ಷ ಉನ್‌ ಅವರ ಸಹೋದರಿ ಕಿಮ್‌ ಯೊ ಜಾಂಗ್‌ ಶುಕ್ರವಾರ ಹೇಳಿದ್ದಾರೆ.

‘ಪರಮಾಣು ರಾಜತಾಂತ್ರಿಕತೆಯನ್ನು ಜೀವಂತವಾಗಿರಿಸಲು ಅಮೆರಿಕದಿಂದ ಕೆಲವು ರಿಯಾಯಿತಿಗಳನ್ನು ಕೇಳಲಾಗಿದೆ. ಇಬ್ಬರು ನಾಯಕರ ಭೇಟಿಯಲ್ಲಿ ಕೈಗೊಳ್ಳುವ ನಿರ್ಧಾರಗಳಲ್ಲಿ ಅಚ್ಚರಿಯ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಗಳು ಇರುತ್ತವೆ. ಮಾತುಕತೆ ಈಗ ಅಮೆರಿಕಕ್ಕೆ ಬೇಕಾಗಿದೆಯೇ ಹೊರತು ಉತ್ತರ ಕೊರಿಯಾಗೆ ಅಲ್ಲ. ಇಂಥ ಮಾತುಕತೆಯು ಅಪ್ರಾಯೋಗಿಕ ಮತ್ತು ನಮ್ಮ ಉದ್ದೇಶವನ್ನು ಈಡೇರಿಸುವುದೇ ಇಲ್ಲ’ ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಕಿಮ್‌ ಯೊ ಜಾಂಗ್‌ ಅವರು ಇತ್ತೀಚೆಗೆ ಉತ್ತರ ಕೊರಿಯಾದ ಆಡಳಿತದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ‘ಉತ್ತರ ಕೊರಿಯಾಗೆ ಸಂಬಂಧಿಸಿದ ಅಮೆರಿಕದ ಅಧಿಕಾರಿಗಳು ಏಷ್ಯಾದಲ್ಲಿದ್ದಾರೆ. ಸಿಯೋಲ್‌ನಲ್ಲಿ ದಕ್ಷಿಣ ಕೊರಿಯಾದ ಅಧಿಕಾರಿಗಳನ್ನು ಭೇಟಿಮಾಡಿದ ಅಮೆರಿಕದ ಉಪಕಾರ್ಯದರ್ಶಿ ಸ್ಟೀಫನ್‌ ಬಿಗನ್ ಅವರು ಜಪಾನ್‌ಗೆ ಹೋಗಿ ಕುಳಿತಿದ್ದಾರೆ. ಅಲ್ಲಿದ್ದುಕೊಂಡು, ‘ಉತ್ತರ ಕೊರಿಯದ ಪರಮಾಣು ಸಮಾಲೋಚಕರು ಹಳೆಯ ಚಿಂತನೆಗಳನ್ನು ಹೊಂದಿದವರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಮೆರಿಕವು ಮಾತುಕತೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಯಾವುದೇ ರಿಯಾಯಿತಿಗಳನ್ನು ನೀಡಲು ಇಚ್ಛಿಸುವುದಿಲ್ಲ ಎಂಬುದು ಅವರ ಹೇಳಿಕೆಯಿಂದ ತಿಳಿಯುತ್ತದೆ’ ಎಂದು ಜಾಂಗ್‌ ಆರೋಪಿಸಿದ್ದಾರೆ.

2018ರಲ್ಲಿ ಉನ್ನತಮಟ್ಟದ ಪರಮಾಣು ಮಾತುಕತೆಯನ್ನು ಆರಂಭಿಸಿದ ನಂತರ, ಟ್ರಂಪ್‌ ಹಾಗೂ ಉನ್‌ ಅವರು ಮೂರು ಬಾರಿ ಭೇಟಿಯಾಗಿದ್ದರು. 2019ರಲ್ಲಿ ನಡೆದ ಎರಡನೇ ಸಭೆಯಲ್ಲಿ, ತಮ್ಮ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿದರೆ ಮಾತ್ರ ಪರಮಾಣು ಸಾಮರ್ಥ್ಯವನ್ನು ಭಾಗಶಃ ಸಡಿಲಿಸುವುದಾಗಿ ಉತ್ತರ ಕೊರಿಯಾ ಕರಾರು ಹಾಕಿತ್ತು. ಇದಾದ ನಂತರ ಅವರಿಬ್ಬರ ಮಾತುಕತೆ ಕುಂಠಿತಗೊಂಡಿದೆ.

ಅಮೆರಿಕದ ನಾಯತ್ವದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇರುವುದರಿಂದ ಉತ್ತರ ಕೊರಿಯಾ ಸದ್ಯಕ್ಕೆ ಅಮೆರಿಕದ ಜತೆಗೆ ಯಾವುದೇ ಗಂಭೀರ ವಿಚಾರದಲ್ಲಿ ಮಾತುಕತೆ ನಡೆಸದಿರಲು ತೀರ್ಮಾನಿಸಿದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

‘ಪರಸ್ಪರ ಚಿಂತನೆಗಳ ವಿನಿಮಯದಿಂದ ಮಾತ್ರ ಮಾತುಕತೆ ಯಶಸ್ವಿಯಾಗಲು ಸಾಧ್ಯ. ಅಣುನಿಶ್ಶಸ್ತ್ರೀಕರಣ ಅಸಾಧ್ಯ ಎಂದು ನಾವು ಹೇಳುತ್ತಿಲ್ಲ. ಆದರೆ ಈಗಿನ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ’ ಎಂದು ಯೊ ಜಾಂಗ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು