ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕವಾಸ ಮರೆತು ಕ್ಲಬ್‌ನಲ್ಲಿ ಕುಣಿದ ಜರ್ಮನಿ ಟೆನಿಸ್‌ ಆಟಗಾರ ಜ್ವೆರೆವ್‌ !

Last Updated 29 ಜೂನ್ 2020, 11:01 IST
ಅಕ್ಷರ ಗಾತ್ರ

ನವದೆಹಲಿ: 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿ ಇರುವುದಾಗಿ ಹೇಳಿದ್ದ ಜರ್ಮನಿಯ ಟೆನಿಸ್‌ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌, ಭಾನುವಾರ ನೈಟ್‌ ಕ್ಲಬ್‌ವೊಂದರಲ್ಲಿ ಕುಣಿದು ಅಚ್ಚರಿ ಮೂಡಿಸಿದ್ದಾರೆ.

ಅವರ ಈ ನಡೆಯನ್ನು ಆಸ್ಟ್ರೇಲಿಯಾದ ಟೆನಿಸ್‌ ಆಟಗಾರ ನಿಕ್‌ ಕಿರ್ಗಿಯೊಸ್‌ ಸೇರಿದಂತೆ ಹಲವರು ಟೀಕಿಸಿದ್ದಾರೆ.

23 ವರ್ಷ ವಯಸ್ಸಿನ ಜ್ವೆರೆವ್, ಸರ್ಬಿಯಾದ ಆಟಗಾರ ನೊವಾಕ್‌ ಜೊಕೊವಿಚ್‌ ಆಯೋಜಿಸಿದ್ದ ಏಡ್ರಿಯಾ ಟೂರ್‌ ಪ್ರದರ್ಶನ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ಈ ಟೂರ್ನಿಯಲ್ಲಿ ಆಡಿದ್ದ ಜೊಕೊವಿಚ್‌, ಗ್ರಿಗರ್‌ ಡಿಮಿಟ್ರೋವ್‌, ಬೊರ್ನಾ ಕೊರಿಕ್‌ ಮತ್ತು ವಿಕ್ಟರ್‌ ಟ್ರೊಯಿಕಿ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಜ್ವೆರೆವ್‌ ಕೂಡ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಅವರಿಗೆ ಸೋಂಕು ತಗುಲಿಲ್ಲ ಎಂಬುದು ಪರೀಕ್ಷಾ ವರದಿಯಿಂದ ಖಾತರಿಯಾಗಿತ್ತು.

‘ನಾನು ಮತ್ತು ನನ್ನ ತಂಡದ ಸದಸ್ಯರು 14 ದಿನಗಳ ಸ್ವಯಂ ಪ್ರತ್ಯೇಕವಾಸದಲ್ಲಿರುತ್ತೇವೆ. ಮತ್ತೊಮ್ಮೆ ಕೋವಿಡ್‌ ಪರೀಕ್ಷೆಗೆ ಒಳಗಾಗುತ್ತೇವೆ’ ಎಂದು ಜ್ವೆರೆವ್, ಹೋದ ವಾರ‌ ತಿಳಿಸಿದ್ದರು. ಆದರೆ ಭಾನುವಾರ ರಾತ್ರಿ ಗೆಳೆಯರೊಂದಿಗೆ ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದ ಜ್ವೆರೆವ್,‌ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವಿಡಿಯೊವನ್ನು ಜರ್ಮನಿಯ ವಸ್ತ್ರ ವಿನ್ಯಾಸಕ ಫಿಲಿಪ್‌ ಪ್ಲೀನ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು. ಬಳಿಕ ಅದನ್ನು ಡಿಲೀಟ್‌ ಮಾಡಿದ್ದರು.

‘ಬೆಳಿಗ್ಗೆ ಎದ್ದ ಕೂಡಲೇ ವಿಡಿಯೊವೊಂದನ್ನು ನೋಡಿದೆ. ಅದರಲ್ಲಿ ಜ್ವೆರೆವ್,‌ ಅಂತರ ಮರೆತು ಕುಣಿಯುತ್ತಿದ್ದ. ಆತ ಎಷ್ಟು ಸ್ವಾರ್ಥಿ ಎಂಬುದು ಆಗಲೇಅರ್ಥವಾಯಿತು’ ಎಂದು ಕಿರ್ಗಿಯೊಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

‘ಏಡ್ರಿಯಾ ಟೂರ್ನಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅಭಿಮಾನಿಗಳ ಕ್ಷಮೆ ಯಾಚಿಸಿದ್ದ ನೀನು, ಸ್ವಯಂ ಪ್ರತ್ಯೇಕವಾಸದಲ್ಲಿ ಇರುವುದಾಗಿ ಹೇಳಿದ್ದೆ. ಈಗ ಕ್ಲಬ್‌ಗೆ ಭೇಟಿ ನೀಡಿ ಸಾಮಾನ್ಯ ಜನರ ಜೀವದ ಜೊತೆ ಆಟ ಆಡುತ್ತಿದ್ದೀಯಾ. 14 ದಿನ ಮನೆಯಲ್ಲೇ ಇರಬೇಕು ಎಂಬ ಪರಿಜ್ಞಾನವೂ ನಿನಗೆ ಇಲ್ಲವಲ್ಲ’ ಎಂದು 25 ವರ್ಷದ ಕಿರ್ಗಿಯೊಸ್‌ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT