ಇನ್ನು ಮುಂದೆ ಯುದ್ಧಗಳಿರುವುದಿಲ್ಲ ಎಂದ ಕಿಮ್ ಜಾಂಗ್ ಉನ್!

ಸೋಲ್: ‘ನಮ್ಮಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ದೇಶದ ಸುರಕ್ಷತೆ ಮತ್ತು ಭವಿಷ್ಯವನ್ನು ಶಾಶ್ವತವಾಗಿ ಖಾತರಿಪಡಿಸುತ್ತಿವೆ. ಹೀಗಾಗಿ ಯುದ್ಧದ ಮಾತೇ ಇಲ್ಲ,’ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಹೇಳಿದ್ದಾರೆ. ಈ ಕುರಿತು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
1950-53ರ ಕೊರಿಯಾ ಯುದ್ಧ ಅಂತ್ಯದ 67ನೇ ವಾರ್ಷಿಕೋತ್ಸ ಜುಲೈ 27ರಂದು ನಡೆಯಿತು. ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರನ್ನು ಅಭಿನಂದಿಸುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್ಎ ತಿಳಿಸಿದೆ.
‘ಮತ್ತೊಂದು ಸಶಸ್ತ್ರ ಸಂಘರ್ಷವನ್ನು ತಡೆಯಲು, ಬಾಹ್ಯ ಶಕ್ತಿಗಳ ವಿರುದ್ಧ ಗೆಲುವು ಸಾಧಿಸಲು ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ. ಯಾವುದೇ ರೀತಿಯ ಒತ್ತಡ, ಸಾಮ್ರಾಜ್ಯಶಾಹಿತ್ವ ಮತ್ತು ಪ್ರತಿಕೂಲ ಶಕ್ತಿಗಳಿಂದ ಎದುರಾಗಬಹುದಾದ ಮಿಲಿಟರಿ ಬೆದರಿಕೆಗಳನ್ನು ಎದುರಿಸಲು ನಾವು ಈಗ ಸಮರ್ಥರಾಗಿದ್ದೇವೆ,’ ಎಂದು ಭಾಷಣದಲ್ಲಿ ಕಿಮ್ ಹೇಳಿದ್ದಾರೆ. ಈ ಮೂಲಕ ದೇಶದ ರಕ್ಷಣಾ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.
‘ನಮ್ಮ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸ್ವಯಂ-ರಕ್ಷಣಾತ್ಮಕ ಪರಮಾಣು ಶಕ್ತಿಗೆ ನಾನು ಅಭಿನಂಧನೆ ಸಲ್ಲಿಸುತ್ತೇನೆ. ಇನ್ನು ಮುಂದೆ ಯುದ್ಧವಿರುವುದಿಲ್ಲ. ನಮ್ಮ ದೇಶದ ಸುರಕ್ಷತೆ ಮತ್ತು ಭವಿಷ್ಯವು ಶಾಶ್ವತವಾಗಿ ಖಾತರಿಯಾಗಿದೆ,’ ಎಂದು ಅವರು ತಿಳಿಸಿದ್ದಾರೆ.
‘ತಾನು ವಿಧಿಸಿರುವ ನಿರ್ಬಂಧ ತೆರವು ಮಾಡಬೇಕಿದ್ದರೆ, ಉತ್ತರ ಕೊರಿಯಾ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಕೈಬಿಡಬೇಕು,’ ಎಂದು ಅಮೆರಿಕ ಹೇಳಿದೆ. ಈ ಕುರಿತಾದ ಎರಡೂ ದೇಶಗಳ ನಡುವಿನ ಮಾತುಕತೆಗಳು ಸದ್ಯ ಸ್ಥಗಿತಗೊಂಡಿರುವ ನಡುವೆಯೇ ಕಿಮ್ ಈ ಹೇಳಿಕೆ ನೀಡಿದ್ದಾರೆ.
ಹೆದರಿಕೆಯಿಂದ ಅಡಗಿಕೊಂಡಿದ್ದಾರೆಯೇ ಕಿಮ್ ಜಾಂಗ್ ಉನ್?
ಕಿಮ್ಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದ ವೈದ್ಯನ ಬಗ್ಗೆ ಇಲ್ಲಿದೆ ಮಾಹಿತಿ
ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಯ ಆಯ್ಕೆ ಹಿಂದಿದೆ ಕಾರಣ!
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.