ಹಾಂಗ್‌ಝೌ: ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದ ಭಾರತದ ಶೂಟರ್‌ಗಳು ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ಎರಡು ಚಿನ್ನ ಸೇರಿದಂತೆ ಏಳು ಪದಕಗಳನ್ನು ಗೆದ್ದು ಸಂಭ್ರಮಿಸಿದರು.
ಹಾಂಗ್‌ಝೌ ಶೂಟಿಂಗ್ ರೇಂಜ್‌ನಲ್ಲಿ ನಡೆದ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ಸಿಫ್ತ್ ಕೌರ್ ಸಾಮ್ರಾ ಚಿನ್ನಕ್ಕೆ ಗುರಿಯಿಟ್ಟು ಗಮನ ಸೆಳೆದರು. ಒಟ್ಟು 469.6 ಪಾಯಿಂಟ್ಸ್ ಕಲೆಹಾಕಿದ ಅವರು ವಿಶ್ವದಾಖಲೆ ಮತ್ತು ಕೂಟ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡರು.
ಏಷ್ಯನ್ ಕ್ರೀಡಾಕೂಟದ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ಶೂಟರ್ ಎಂಬ ಗೌರವ ಅವರಿಗೆ ಒಲಿಯಿತು. ಇದೇ ವಿಭಾಗದಲ್ಲಿ ಕಣದಲ್ಲಿದ್ದ ಆಶಿ ಚೋಕ್ಸಿ, 451.9 ಪಾಯಿಂಟ್ಸ್‌ಗಳೊಂದಿಗೆ ಕಂಚು ಜಯಿಸಿದರು. ಬೆಳ್ಳಿ ಪದಕ ಚೀನಾದ ಕ್ವಿಯಾಂಗ್‌ಯುಯಿ ಝಾಂಗ್ (462.3) ಅವರಿಗೆ ಒಲಿಯಿತು.
ಚಿನ್ನ ಗೆಲ್ಲುವ ಮುನ್ನ ಸಾಮ್ರಾ ಅವರು ಅರ್ಹತಾ ಸುತ್ತಿನಲ್ಲಿ 594 ಪಾಯಿಂಟ್ಸ್ (600 ರಲ್ಲಿ) ಗಳಿಸಿ ಕೂಟ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡರು.
25 ಮೀ. ಪಿಸ್ತೂಲ್ ತಂಡಕ್ಕೆ ಚಿನ್ನ: ಶೂಟಿಂಗ್ ರೇಂಜ್‌ನಲ್ಲಿ ಬುಧವಾರ ಮೊದಲ ಚಿನ್ನವನ್ನು ಮನು ಭಾಕರ್, ರಿದಂ ಸಾಂಗ್ವಾನ್ ಮತ್ತು ಇಶಾ ಸಿಂಗ್ ಅವರನ್ನೊಳಗೊಂಡ ಮಹಿಳೆಯರ 25 ಮೀ. ಪಿಸ್ತೂಲ್ ತಂಡ ಗೆದ್ದುಕೊಟ್ಟಿತು. ಭಾರತ ತಂಡ ಒಟ್ಟು 1,759 ಪಾಯಿಂಟ್ಸ್ ಕಲೆಹಾಕಿತು.
ಸಾಮ್ರಾ, ಚೋಕ್ಸಿ ಮತ್ತು ಮಾನಿನಿ ಕೌಶಿಕ್ ಅವರು ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು. ಅವರು ಒಟ್ಟು 1,764 ಪಾಯಿಂಟ್ಸ್ ಸಂಗ್ರಹಿಸಿದರು. ಆತಿಥೇಯ ಚೀನಾ (1,773) ಚಿನ್ನ ಗೆದ್ದರೆ, ಕಂಚಿನ ಪದಕ ದಕ್ಷಿಣ ಕೊರಿಯಾ (1,756) ತಂಡದ ಪಾಲಾಯಿತು.
ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಇಶಾ ಸಿಂಗ್ 34 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಜಯಿಸಿದರು. ಇದೇ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಮನು, ಆರನೇ ಸ್ಥಾನಕ್ಕೆ ಕುಸಿತ ಕಂಡರು.
18 ವರ್ಷದ ಇಶಾ, ಚಿನ್ನದ ಪದಕದ ಪೈಪೋಟಿಯಲ್ಲಿ ಐದು ಅವಕಾಶಗಳಲ್ಲಿ ಮೂರರಲ್ಲಿ ನಿಖರ ಗುರಿ ಹಿಡಿಯಲು ವಿಫಲರಾದರು. ಚಿನ್ನ ಗೆದ್ದ ಚೀನಾದ ರುಯಿ ಲಿಯು (38 ಪಾಯಿಂಟ್ಸ್) ಒಮ್ಮೆ ಮಾತ್ರ ಗುರಿ ತಪ್ಪಿದರು.
ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದ ಮನು ಅವರಿಗೆ ಪದಕ ಗೆಲ್ಲುವ ಅದೃಷ್ಟ ಇರಲಿಲ್ಲ. ರಿದಂ ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಆದರೆ ಒಂದು ದೇಶದ ಇಬ್ಬರಿಗೆ ಮಾತ್ರ ಫೈನಲ್‌ನಲ್ಲಿ ಆಡುವ ಅವಕಾಶವಿದ್ದ ಕಾರಣ ಪದಕ ಸುತ್ತಿನ ಪೈಪೋಟಿಯಲ್ಲಿ ಅವರು ಸ್ಥಾನ ಪಡೆಯಲಿಲ್ಲ.
ಇಶಾ ಅವರ ಬೆಳ್ಳಿ, ಶೂಟಿಂಗ್‌ನಲ್ಲಿ ಈ ಬಾರಿ ಭಾರತಕ್ಕೆ ದೊರೆತ 10ನೇ ಪದಕ ಆಗಿದೆ. ಇದರೊಂದಿಗೆ 2018ರ ಕೂಟದಲ್ಲಿ ತೋರಿದ್ದ ಸಾಧನೆಯನ್ನು (9 ಪದಕ) ಮೀರಿ ನಿಂತಿತು.
ಅನಂತ್ ಜೀತ್‌ಗೆ ಬೆಳ್ಳಿ
ಅನಂತ್ ಜೀತ್ ಸಿಂಗ್ ನರುಕಾ ಅವರು ಪುರುಷರ ಸ್ಕೀಟ್ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದಕ್ಕೂ ಮುನ್ನ ಅವರು ಅಂಗದ್ ವೀರ್ ಸಿಂಗ್ ಬಾಜ್ವಾ ಮತ್ತು ಗುರುಜ್ಯೋತ್ ಸಿಂಗ್ ಖಂಗುರಾ ಅವರೊಂದಿಗೆ ತಂಡ ವಿಭಾಗದಲ್ಲಿ ಕಂಚು ಜಯಿಸಿದ್ದರು.
ಆರಂಭಿಕ ಸುತ್ತುಗಳಲ್ಲಿ ನಿಖರ ಗುರಿ ಸಾಧಿಸಿದ್ದ ಅನಂತ್ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಕೊನೆಯ ಸುತ್ತುಗಳಲ್ಲಿ ಎಡವಿದರು. ಅವರು 60 ರಲ್ಲಿ 58 ಪಾಯಿಂಟ್ಸ್ ಕಲೆಹಾಕಿದರು. 60 ಪಾಯಿಂಟ್ಸ್ ಕಲೆಹಾಕಿದ ಕುವೈತ್‌ನ ಅಬ್ದುಲ್ಲಾ ಅಲ್‌ರಶೀದಿ ವಿಶ್ವದಾಖಲೆ ಸರಿಗಟ್ಟುವುದರೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು.
ಕತಾರ್‌ನ ನಾಸೆರ್ ಅಲ್ ಅತಿಯಾ (46 ಪಾಯಿಂಟ್ಸ್) ಕಂಚು ಜಯಿಸಿದರು. ತಂಡ ವಿಭಾಗದಲ್ಲಿ ಅನಂತ್ ಬಾಜ್ವಾ ಮತ್ತು ಗುರುಜ್ಯೋತ್ ಅವರು 355 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು. ಭಾರತ ಮಹಿಳಾ ಸ್ಕೀಟ್ ತಂಡ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತವಾಯಿತು. ಚೀನಾ ಮತ್ತು ಕತಾರ್ ತಂಡಗಳು ಕ್ರಮವಾಗಿ ಚಿನ್ನ ಹಾಗೂ ಕಂಚು ಜಯಿಸಿದವು.
ಎಂಬಿಬಿಎಸ್ ಕೋರ್ಸ್‌ಗೆ ಗುಡ್‌ಬೈ
ಪಂಜಾಬ್‌ನ ಫರೀದ್‌ಕೋಟ್‌ನವರಾದ ಸಿಫ್ತ್ ಕೌರ್ ತಮ್ಮ ಚಿತ್ತವನ್ನು ಶೂಟಿಂಗ್‌ನತ್ತ ಹರಿಸಲು ಎಂಬಿಬಿಎಸ್ ಕೋರ್ಸ್‌ಅನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದರು. ಎಂಬಿಬಿಎಸ್ ಕೋರ್ಸ್ ಮಾಡುವ ಜತೆಯಲ್ಲೇ ಶೂಟಿಂಗ್ ತರಬೇತಿ ಪಡೆಯುವುದು 23 ವರ್ಷದ ಸಿಫ್ತ್ ಅವರಿಗೆ ಕಷ್ಟವೆನಿಸಿತ್ತು.
‘ಫರೀದ್‌ಕೋಟ್‌ನ ಜಿಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಪಡೆಯುತ್ತಿದ್ದ ಎಂಬಿಬಿಎಸ್ ಶಿಕ್ಷಣವನ್ನು ಮಾರ್ಚ್‌ನಲ್ಲಿ ಮೊಟಕುಗೊಳಿಸಿದೆ. ಇದೀಗ ಅಮೃತ್‌ಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಕೋರ್ಸ್ ಮಾಡುತ್ತಿರುವೆ’ ಎಂದು ಚಿನ್ನದ ಸಾಧನೆಯ ಬಳಿಕ ಅವರು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.