ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಸೆಮಿಗೆ ನಿಖತ್, ಒಲಿಂಪಿಕ್ಸ್‌ಗೂ ಅರ್ಹತೆ

ಬಾಕ್ಸಿಂಗ್‌: ಸೆಮಿಫೈನಲ್ ತಲುಪಿದ ಭಾರತದ ಸ್ಪರ್ಧಿ
Published 30 ಸೆಪ್ಟೆಂಬರ್ 2023, 0:26 IST
Last Updated 30 ಸೆಪ್ಟೆಂಬರ್ 2023, 0:26 IST
ಅಕ್ಷರ ಗಾತ್ರ

ಹ್ವಾಂಗ್‌ಝೌ: ಎರಡು ವರ್ಷ ಕೆಳಗೆ ಟೋಕಿಯೊ ಒಲಿಂಪಿಕ್ಸ್‌ ಕಳೆದುಕೊಂಡಿದ್ದ ಬೇಸರದಲ್ಲಿದ್ದ ತೆಲಂಗಾಣದ ಛಲಗಾತಿ ಬಾಕ್ಸರ್‌ ನಿಖತ್ ಝರೀನ್ ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದು ಮೊದಲ ಗುರಿಯಾಗಿತ್ತು. ಶುಕ್ರವಾರ, ಏಷ್ಯನ್‌ ಗೇಮ್ಸ್‌ ಸೆಮಿಫೈನಲ್ ತಲುಪುವ ಮೂಲಕ ಅವರು ಅದನ್ನು ಸಾಧಿಸಿಯೇಬಿಟ್ಟರು.

27 ವರ್ಷದ ನಿಖತ್‌ ಅವರು 50 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜೋರ್ಡಾನ್‌ನ ಎದುರಾಳಿ ನಾಸರ್‌ ಹನ್ನನ್ ಅವರನ್ನು ಸೋಲಿಸಲು ಹೆಚ್ಚು ಬೆವರುಹರಿಸಲಿಲ್ಲ. ಮೊದಲ ಸುತ್ತಿನಲ್ಲೇ ‘ಆರ್‌ಬಿಸಿ’ (ರೆಫ್ರಿ ಸ್ಟಾಪ್ಸ್‌ ಕಂಟೆಸ್ಟ್‌) ಆಧಾರದಲ್ಲಿ ಅವರು ಜಯಗಳಿಸಿದರು. ಪಂದ್ಯ ಮೂರೇ ನಿಮಿಷಗಳಲ್ಲಿ ಇತ್ಯರ್ಥಗೊಂಡಿತು. ಕರಾರುವಾಕ್ ಪಂಚ್‌ಗಳ ಮೂಲಕ ತಕ್ಷಣವೇ ಮೇಲುಗೈ ಸಾಧಿಸಿದರು.

ಎರಡು ಬಾರಿಯ ವಿಶ್ವ ಚಾಂಪಿಯನ್, ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್ ಮತ್ತು ಈಗ ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಸಹ ಆಗುವ ಹಾದಿಯಲ್ಲಿ ಈಗ ನಿಖತ್ ಯಶಸ್ವಿಯಾಗಿದ್ದಾರೆ.

‘ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದು ಒಲಿಂಪಿಕ್ ಕೋಟಾ ದೊರೆತಿರುವುದರಿಂದ ತುಂಬಾ ಖುಷಿಯಾಗಿದೆ. ಒಲಿಂಪಿಕ್‌ ಕೋಟಾದ ಗುರಿ ಕೊನೆಗೂ ಸಾಕಾರಗೊಂಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಾಕ್ಸಿಂಗ್ ದಂತಕತೆ ಎನಿಸಿರುವ ಎಂಸಿ ಮೇರಿ ಕೋಮ್ ಅವರ ನೆರಳಿನಲ್ಲಿ ನಿಖತ್ ಅವರು ತಮ್ಮ ಅವಕಾಶಕ್ಕಾಗಿ ಸಹನೆಯಿಂದ ಕಾಯಬೇಕಾಗಿತ್ತು. ಆದರೆ ತಮಗೆ ಅವಕಾಶ ದೊರೆತ ನಂತರ ಮಾತ್ರ ಅವರು ಹಿಂತಿರುಗಿಯೇ ನೋಡಿಲ್ಲ. ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಅವರಿಗೆ ಸೂಕ್ತ ಉತ್ತರಾಧಿಕಾರಿ ಆಗುತ್ತಿದ್ದಾರೆ.

ನಿಖತ್ ಭಾನುವಾರ ನಡೆಯುವ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಚುಥಾಮತ್ ರಕ್ಸತ್ (ಥಾಯ್ಲೆಂಡ್) ಅವರನ್ನು ಎದುರಿಸುವರು.

ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಪರ್ವಿನ್ ಅವರು ಸ್ಥಳೀಯ ಫೆವರೇಟ್ ಝಿಚುನ್ ಷು ಅವರನ್ನು 16ರ ಸುತ್ತಿನಲ್ಲಿ 5–0ಯಿಂದ ಸೋಲಿಸಿ ತಮ್ಮ ಅಭಿಯಾನ ಆರಂಭಿಸಿದರು.

80 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯ ಚಾಹರ್ 1–4 ರಿಂದ ಕಿರ್ಗಿಸ್ತಾನದ ಒಮುರ್ಬೆಕ್ ಬೆಕ್ಸಿಗಿಟ್ ಎದುರು ಸೋಲನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT