ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯರಾಜಿ ಹಾಗೂ ನಿತ್ಯಾ ರಾಮರಾಜ್ ಅವರು ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಹಾಗೂ ಜೆಸ್ವಿನ್ ಆಲ್ಡ್ರಿನ್ ಕೂಡಾ ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.
100 ಮೀ. ಹರ್ಡಲ್ಸ್‌ನ ಅರ್ಹತಾ ಸುತ್ತಿನಲ್ಲಿ ಯರಾಜಿ ಅವರು 13.03 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಈ ಪಂದ್ಯದಲ್ಲಿ ಚೀನಾದ ಯುವೀ ಲಿನ್ ಅವರು 12.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು.
ಭಾರತದ ಮತ್ತೊಬ್ಬ ಹರ್ಡಲ್ ಓಟಗಾರ್ತಿ ನಿತ್ಯಾ ರಾಮರಾಜ್ ಅವರು ಅರ್ಹತಾ ಪಂದ್ಯದಲ್ಲಿ 13.30 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 5ನೇಯವರಾದರು.
2ನೇ ಅತ್ಯಂತ ವೇಗದ ಓಟಗಾರ್ತಿ ಯರಾಜಿ ಅವರು ಏಷ್ಯನ್ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿದ್ದರು. 100 ಮೀ ಹರ್ಡಲ್ಸ್‌ನಲ್ಲಿ ರಾಷ್ಟ್ರಮಟ್ಟದ ದಾಖಲೆಯನ್ನು ಅವರು ಮುರಿದಿದ್ದಾರೆ.
ಪುರುಷರ ಲಾಂಗ್‌ಜಂಪ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ಶ್ರೀಶಂಕರ್ ಅವರು 7.90 ಮೀ ಉದ್ದಕ್ಕೆ ಜಿಗಿಯುವ ಮೂಲಕ ಫೈನಲ್ ಪ್ರವೇಶಿಸಿದರು.
ಮೊದಲ ಪ್ರಯತ್ನವನ್ನೇ ಫೌಲ್ ಮೂಲಕ ಆರಂಭಿಸಿದ ಜಸ್ವಿನ್ ಆಲ್ಡ್ರಿನ್ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 7.67 ಮೀ ಉದ್ದ ಜಿಗಿದರೂ ಅರ್ಹತೆಗೆ ಅದು ಸಾಕಾಗುತ್ತಿರಲಿಲ್ಲ. ಆದರೆ ಹೀಟ್ ಸುತ್ತಿನಲ್ಲಿ ಪಾಲ್ಗೊಂಡ 12 ಜನರಲ್ಲಿ 2ನೇಯವರಾದ ಇವರು ಅಂತಿಮ ಸುತ್ತು ಪ್ರವೇಶಿಸಿದರು.
ಪುರುಷರ 1500 ಮೀ. ಓಟದ ಅಂತಿಮ ಸುತ್ತಿಗೆ ಜಿನ್ಸನ್ ಜಾನ್ಸನ್ ಹಾಗೂ ಅಜಯ್ ಕುಮಾರ್ ಅರ್ಹತೆ ಪಡೆದಿದ್ದಾರೆ. ಜಾನ್ಸನ್ (3:56.22 ನಿ.) ಅವರು ಗುರಿ ತಲುಪಿ 5ನೆಯವರಾದರು. ಅಜಯ್ ಕುಮಾರ್ (3:51.93 ನಿ.) ಅವರು ಅರ್ಹತಾ ಸುತ್ತಿನಲ್ಲಿ 2ನೆಯವರಾದರು. ಹೀಗಾಗಿ ಅಂತಿಮ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾದರು.
ಮಹಿಳೆಯರ 100 ಮೀ ಹರ್ಡಲ್ಸ್, ಪುರುಷರ ಉದ್ದ ಜಿಗಿತ ಹಾಗೂ 1500 ಮೀ ಓಟದ ಅಂತಿಮ ಪಂದ್ಯಗಳು ಭಾನುವಾರ ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.