ಬುಧವಾರ, ಮಾರ್ಚ್ 22, 2023
19 °C

5ಜಿ ಸ್ಮಾರ್ಟ್‌ಫೋನ್‌: ಕೂಸು ಹುಟ್ಟುವ ಮೊದಲಿನ ಕುಲಾವಿ!

ಕೃಷ್ಣ ಭಟ್ Updated:

ಅಕ್ಷರ ಗಾತ್ರ : | |

Prajavani

ಪ್ರ ತಿ 5 ವರ್ಷಕ್ಕೊಮ್ಮೆ ಎಲ್ಲ ಕ್ಷೇತ್ರದಲ್ಲೂ ಹೊಸ ಹೊಸ ತಂತ್ರಜ್ಞಾನ ಬರುತ್ತಲೇ ಇರುತ್ತದೆ. ಈಗ ಎಲ್ಲೆಡೆ 5ಜಿ ಜಮಾನ. ಮಾರುಕಟ್ಟೆಗೆ ಬರುವ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಈಗ 5ಜಿ ಟ್ಯಾಗ್‌ ಹೊತ್ತು ಬರುತ್ತವೆ.

ಆದರೆ, ಬಹಳಷ್ಟು ಜನರಿಗೆ ಇರುವ ಗೊಂದಲವೇನೆಂದರೆ, ನಾವು 5ಜಿ ಸ್ಮಾರ್ಟ್‌ಫೋನ್‌ ಕೊಳ್ಳಬೇಕೆ ಅಥವಾ 4ಜಿ ಸ್ಮಾರ್ಟ್‌ಫೋನ್‌ ಸಾಕೇ? ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ 5ಜಿ ಸ್ಮಾರ್ಟ್‌ಫೋನ್‌ಗಳೆಲ್ಲವೂ ಚೆನ್ನಾಗಿಯೇ ಇವೆ. ಬಹುತೇಕ ಎಲ್ಲವೂ ಅತಿ ಕಡಿಮೆ ದರದ 5ಜಿ ಸ್ಮಾರ್ಟ್‌ಫೋನ್‌ಗಳು ಎಂದೇ ಹೇಳಿಕೊಳ್ಳುತ್ತವೆ. ಆದರೆ, ಇದರಲ್ಲಿನ 5ಜಿ ಎಂಬ ಒಂದು ಸಂಗತಿಯನ್ನು ತೆಗೆದರೆ ಇವು ಸಾಮಾನ್ಯ 4ಜಿ ಸ್ಮಾರ್ಟ್‌ಫೋನ್‌ಗಿಂತ ಕಡಿಮೆ ದರ್ಜೆಯವೇ ಆಗಿರುತ್ತವೆ. ಅಪವಾದಗಳೂ ಇರಬಹುದು.

ಇನ್ನೂ ಬಂದಿಲ್ಲ 5ಜಿ ಟವರ್‌ಗಳು!

ಬಹುತೇಕ ಟೆಲಿಕಾಂ ಕಂಪನಿಗಳು ಇನ್ನೂ 5ಜಿ ಉಪಕರಣಗಳನ್ನು ಪ್ರಯೋಗ ಮಾಡುತ್ತಿವೆ. ಟ್ರಾಯ್‌ ಇನ್ನೂ 5ಜಿ ತರಂಗಾಂತರಗಳನ್ನು ಹರಾಜು ಹಾಕಿಲ್ಲ. ಎಲ್ಲ ಕಂಪನಿಗಳೂ ನಾವು 5ಜಿ ತರಂಗಾಂತರ ಖರೀದಿಗೆ ಸಿದ್ಧವಾಗಿದ್ದೇವೆ ಹಾಗೂ 5ಜಿ ಗೆ ಅಪ್‌ಗ್ರೇಡ್ ಆಗಲು ಸಿದ್ಧವಿದ್ದೇವೆ ಎಂದು ಹೇಳಿಕೊಂಡಿವೆ.

ಹೀಗೆ ನೋಡಿದರೆ, ತರಂಗಾಂತರ ಹರಾಜಾಗಿ, ಟೆಲಿಕಾಂ ಕಂಪನಿಗಳು ಅದನ್ನು ಖರೀದಿ ಮಾಡಿ, ದೇಶದಾದ್ಯಂತ ಇರುವ ತಮ್ಮ ಟವರ್‌ಗಳನ್ನು 5ಜಿಗೆ ಅಪ್‌ಗ್ರೇಡ್‌ ಮಾಡುವ ವೇಳೆಗೆ ಕನಿಷ್ಠ ಇನ್ನೂ 3-4 ವರ್ಷಗಳು ಬೇಕಾಗುವುದು ಖಚಿತ. ಅಷ್ಟಕ್ಕೂ, 3-4 ವರ್ಷಗಳಲ್ಲಿ ಇಡೀ ದೇಶಕ್ಕೆಲ್ಲ 5ಜಿ ತಂತ್ರಜ್ಞಾನ ಸಿಗುತ್ತದೆ ಎಂದು ಹೇಳಲೂ ಆಗದು. ಏಕೆಂದರೆ, 4ಜಿ ನೆಟ್‌ವರ್ಕ್‌ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿದ್ದು, 2013ರಲ್ಲಿ. ಆದರೆ, ಜಿಯೋದಂತಹ ಕಂಪನಿಗಳು 2017 ರ ವೇಳೆಗೆ ಎಲ್ಲ ಮೆಟ್ರೋ ನಗರಗಳಲ್ಲೂ 4ಜಿ ಟವರ್‌ಗಳನ್ನು ಹಾಕಲು ಸಾಧ್ಯವಾಗಿತ್ತು.

ಭಾರತದಲ್ಲಿ 2025ರ ವೇಳೆಗೆ 19 ಕೋಟಿ 5ಜಿ ಸಂಪರ್ಕಗಳನ್ನು ಕೊಡಬೇಕು ಎಂಬುದು ಸದ್ಯದ ಗುರಿ. ಭಾರತದಲ್ಲಿ ಸುಮಾರು 6 ಲಕ್ಷ ಟವರ್‌ಗಳು ಇವೆ. ಈ ಆರು ಲಕ್ಷ ಟವರ್‌ಗಳೆಲ್ಲವನ್ನೂ 5ಜಿ ಗೆ ಪರಿವರ್ತಿಸಲು ವರ್ಷಗಟ್ಟಲೆ ಸಮಯ ಬೇಕಾದೀತು. 5ಜಿ ಟವರ್‌ಗಳಿಗೆ ಬಹುಮುಖ್ಯವಾಗಿ ಬೇಕಾದ್ದು ಫೈಬರ್‌ ನೆಟ್‌ವರ್ಕ್‌ ಆಗಿದ್ದು, ಇದರ ಪ್ರಮಾಣ ಈಗ ನಮ್ಮಲ್ಲಿ ತುಂಬ ಕಡಿಮೆ ಇದೆ. ಶೇ. 30ರಷ್ಟು ಫೈಬರ್‌ ನೆಟ್‌ವರ್ಕ್ ಇದ್ದು, ಇದು ಶೇ. 60ಕ್ಕೆ ಏರಿಕೆಯಾದರೆ 5ಜಿ ವೇಗ ಸಿಗುತ್ತದೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ನೋಡುವುದಾದರೆ, 5ಜಿ ತಂತ್ರಜ್ಞಾನ ಮಾರುಕಟ್ಟೆಗೆ ಬರಲು ಕನಿಷ್ಠ 2024 ಆಗಬಹುದು. ಅಲ್ಲಿಯವರೆಗೆ 5ಜಿ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದಲ್ಲಿ ಯಾವ ಬದಲಾವಣೆ ಆಗುತ್ತದೆಯೋ ಗೊತ್ತಿಲ್ಲ. ಈಗ ಅತಿ ಕಡಿಮೆಯ ದರದ 5ಜಿ ಸ್ಮಾರ್ಟ್‌ಫೋನ್‌ ಎಂದು ಹೇಳಿಕೊಳ್ಳುವ ಸ್ಮಾರ್ಟ್‌ಫೋನ್‌ಗಳು ಇನ್ನು ನಾಲ್ಕು ವರ್ಷಗಳಲ್ಲಿ ವೃದ್ಧಾಪ್ಯಕ್ಕೆ ತೆರಳಬಹುದು.

ಏಕೆಂದರೆ, ಕೇವಲ ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಹಲವು ಫೋನ್‌ಗಳಲ್ಲಿರುವ ಫೀಚರ್‌ ಈಗ ಹಳೆಯದಾಗಿ ಬಿಟ್ಟಿವೆ. ಅದೇ ಬೆಲೆಗೆ ಈಗ ಮೂರು ಕ್ಯಾಮೆರಾವೋ ಅಥವಾ ಮತ್ತಿನ್ನೇನೋ ಹೊಸ ಹೊಸ ಫೀಚರ್ ಇರುವ ಫೋನ್‌ಗಳು ನಮಗೆ ಸಿಗುತ್ತಿವೆ. 5ಜಿ ಸ್ಮಾರ್ಟ್‌ಫೋನ್‌ಗಳ ಪರಿಸ್ಥಿತಿಯೂ ಹೀಗೆಯೇ ಆಗುತ್ತವೆ. ನಿಜವಾದ 5ಜಿ ಟವರ್‌ಗಳು ಬರುವ ಹೊತ್ತಿಗೆ 5ಜಿ ಸ್ಮಾರ್ಟ್‌ಫೋನ್‌ಗಳ ಪರಿಸ್ಥಿತಿಯೇ ಬದಲಾಗಬಹುದು.

ಈ ದೃಷ್ಟಿಯಲ್ಲಿ ನೋಡುವುದಾದರೆ, ಕೂಸು ಹುಟ್ಟುವ ಮೊದಲೇ ಕುಲಾವಿ ಖರೀದಿ ಮಾಡುವ ಬಗ್ಗೆ ಎಚ್ಚರಿಕೆ ಇರಲಿ. 15 ಸಾವಿರಕ್ಕಿಂತ ಕಡಿಮೆ ದರದ ಫೋನ್‌ಗಳು ಎರಡು ವರ್ಷಕ್ಕಿಂತ ಹೆಚ್ಚು ಬಾಳಿಕೆ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಎರಡು ವರ್ಷದ ನಂತರ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಲು ಆರಂಭವಾಗುತ್ತವೆ. ಆಗ ಸ್ಮಾರ್ಟ್‌ಫೋನ್‌ ಬದಲಿಸುವುದೇ ಅನಿವಾರ್ಯವಾಗುತ್ತದೆ. ಹೀಗಾಗಿ, 2 ವರ್ಷದಾಚೆಗೆ ಬರುವ 5ಜಿ ಫೀಚರ್ ಇರುವ ಸ್ಮಾರ್ಟ್‌ಫೋನ್‌ ಖರೀದಿ ಮಾಡುವುದು ಅನಗತ್ಯ. ಯಾಕೆಂದರೆ, 5ಜಿ ಟವರ್‌ ನಮ್ಮ ಫೋನ್‌ಗೆ ಸಿಗ್ನಲ್ ಕಳುಹಿಸುವ ಹೊತ್ತಿಗೆ ನಮ್ಮ ಸ್ಮಾರ್ಟ್‌ಫೋನ್‌ಗಳು ಸರ್ವೀಸ್‌ ಶಾಪ್‌ಗಳಿಗೆ ಅಲೆದಾಟ ಆರಂಭಿಸಿರುತ್ತವೆ. ಹಾಗೆಂದ ಮಾತ್ರ, ದೊಡ್ಡ ಮೊತ್ತದ ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಇದೇ ಮಾತನ್ನು ಹೇಳಲಾಗದು. ಅವು ಸ್ವಲ್ಪ ಹೆಚ್ಚು ಕಾಲ ಬಾಳಿಕೆ ಬರುತ್ತಿರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು