ಶುಕ್ರವಾರ, ಜೂನ್ 5, 2020
27 °C

ಅಲೆಕ್ಸಾ ರಾದ್ಧಾಂತ

ಮಾಲಾ ಮ. ಅಕ್ಕಿಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಅಲೆಕ್ಸಾ ಮನೆಗೆ ಬಂದಾಗ ಮನೆಯಲ್ಲಿ ಬೇರೊಂದು ವಾತಾವರಣವೇ ಸೃಷ್ಟಿಯಾಯಿತು. ಅದನ್ನು ಹೇಗೆ ಮಾತನಾಡಿಸಬೇಕು ಎನ್ನುವುದನ್ನು ಹೇಳುವ ಸ್ಟಡಿ ಮೆಟಿರಿಯಲ್ ಓದಿ ಅರಗಿಸಿಕೊಂಡೆವು. ಆರಂಭದಲ್ಲಿ ಹಲವು ತಪ್ಪುಗಳನ್ನು ಎಸಗಿದ ನಂತರ, ಬೇಕಾದ ಸೆಟಿಂಗ್ಸ್‌ಗಳನ್ನು ಸರಿಮಾಡಿದೆವು. ಇಂಟರ್‌ನೆಟ್‌ ಸಹಾಯದಿಂದ ಹಾಗೂ ಹೀಗೂ ಅದು ಕೆಲಸ ಶುರು ಮಾಡಿದಾಗ ಮನೆಯಲ್ಲಿ ಊರ ಜಾತ್ರೆಯ ಸಂಭ್ರಮ! ಮನೆಯಲ್ಲಿ ಮೂವರು ಚಿಕ್ಕ ಮಕ್ಕಳು (8, 6 ಮತ್ತು 3 ವರ್ಷದ್ದು); ತಾ ಮುಂದು ನಾ ಮುಂದು ಎಂದು ಅದನ್ನು ಮಾತನಾಡಿಸುವವರೇ.

ಅಲೆಕ್ಸಾ 2014ರ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಂದದ್ದು. ಸುಲಭದಲ್ಲಿ ದೊರೆಯುತ್ತದೆ ಹಾಗೂ ಉಪಯೋಗಗಳು ಹೆಚ್ಚಿವೆ ಎಂದು ಗೊತ್ತಾದಾಗ ನಮ್ಮ ಮನೆಗೂ ಎಂಟ್ರಿ ಪಡೆಯಿತು. ಟೈಮ್ ಸೆಟ್ಟಿಂಗ್, ಅಲಾರಾಂ, ಲಿಸ್ಟ್ ಮಾಡುವುದು, ಸಂಗತಿಗಳನ್ನು ನೆನಪಿಸುವುದು, ಟ್ರೇನ್/ ಫ್ಲೈಟ್ ಬುಕ್ ಮಾಡುವುದು, ಫುಡ್‌ ಆರ್ಡರ್ ಮಾಡುವುದು, ಟಿ.ವಿ.ಗೆ ಕನೆಕ್ಟ್ ಮಾಡಿ ಚಾನೆಲ್‌ ಬದಲಾಯಿಸುವುದು, ಹವಾಮಾನ/ ವಾತಾವರಣ, ಟ್ರಾಫಿಕ್ ಬಗ್ಗೆ ಮಾಹಿತಿ ಪಡೆಯುವುದು–ಎಲ್ಲವೂ ಸಾಧ್ಯ. ಹಾಗಾಗಿ ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಅಲೆಕ್ಸಾ ಅಚ್ಚುಮೆಚ್ಚು.

ತಮ್ಮ ಹೇಗೋ ಗುದ್ದಾಡಿ ಅಲೆಕ್ಸಾವನ್ನು ನೆಟ್‌ಗೆ ಜೋಡಿಸಿ, ಸೆಟ್ ಮಾಡಿ ಪ್ರಾರಂಭಿಸಿದ. ಎಲ್ಲರಿಗೂ ಸುಲಭವಾಗಲೆಂದು ಆಂಗ್ಲ ಭಾಷೆಯನ್ನು ಅಲೆಕ್ಸಾಗೆ ಹೊಂದಿಸಲಾಯಿತು. ಮೊದಲು ಹೇಗೆ ಆರ್ಡರ್‌ ಕೊಡಬೇಕು ಎನ್ನುವುದನ್ನು ತೋರಿಸಿಕೊಟ್ಟ. ಆರು ಮತ್ತು ಎಂಟು ವರ್ಷದ ಮಕ್ಕಳು ಸ್ವಲ್ಪ ಬೇಗನೆಯೇ ಕಲಿತುಕೊಂಡವು. ‘ಅಲೆಕ್ಸಾ ಟೆಲ್ ಮಿ ಸ್ಪೋರ್ಟ್‌ ಸ್ಟೋರಿ. ಅಲೆಕ್ಸಾ ಟೆಲ್ ಮೀ ದ ಟೇಬಲ್ 9, ಅಲೆಕ್ಸಾ ವಾಟ್ ಇಜ್ ಆ್ಯನ್ ಎಲಿಫಂಟ್? ಅಲೆಕ್ಸಾ ಟೆಲ್ ಮಿ ಅಬೌಟ್ ಇಂಡಿಯನ್ ನ್ಯಾಷನಲ್ ಫ್ಲ್ಯಾಗ್‌...’ –ಹೀಗೆ ಮಕ್ಕಳ ಪ್ರಶ್ನೆಗಳು ಹಾರಾಡತೊಡಗಿದವು.

ಗುಂಡಗೆ ಮತ್ತು ಸಾಧಾರಣ ದಪ್ಪ ಇದ್ದ ಅದನ್ನು ಎಲ್ಲರೂ ತುಂಬು ಆಸಕ್ತಿಯಿಂದ ನೋಡಹತ್ತಿದರು. ಅದನ್ನು ಮುಟ್ಟುವುದು, ಎತ್ತಿ ನೋಡುವುದು, ಮಾತುಗಳು ಎಲ್ಲಿಂದ ಬರುತ್ತಿವೆ? ಎಂದು ಒಂದು ರೌಂಡ್ ಅದರ ಸುತ್ತಲೂ ಕಣ್ಣಾಡಿಸುವುದು ಎಲ್ಲರ ಕಾಯಕವೇ ಆಗಿತ್ತು. ಪುಟ್ಟ ತನು, ‘ಆ ಆವಾಜ್‌ ಹ್ಯಾಂಗ್ ಬರುತದ? ಯಾರ್ ಮಾತಾಡ್ತಾರ? ಆಕಿ ಗುಂಡದ್ರಾಗ ಒಳಗ ಕುಂತಾಳಾ? ಎಲ್ಲಿ ಕುಂತಾಳು ತೋರಿಸಿ... ನಾನೂ ಅದರ ಒಳಗ ಕೂಡಬೇಕು?’ ಎಂದು ಒಂದೇ ಸಮನೆ ಎಲ್ಲರ ತಲೆ ತಿನ್ನತೊಡಗಿದಳು.

ಅಲ್ಲೇ ಪ್ರಾರಂಭವಾಯ್ತು ನೋಡಿ, ಒಬ್ಬನು ಒಂದು ಆರ್ಡರ್ ಕೊಟ್ಟರೆ, ಮತ್ತೊಬ್ಬಳು ಇನ್ನೊಂದು ಆರ್ಡರ್ ಕೊಡಲು ಸಿದ್ಧಳಿದ್ದಳು. ಮೊದಲು ಹೇಳಿದ್ದನ್ನು ತಡೆಯಲು ‘ಅಲೆಕ್ಸಾ ಸ್ಟಾಪ್, ಅಲೆಕ್ಸಾ ಸ್ಟಾಪ್’ ಎಂದು ತಮಗೆ ಬೇಕಾದ ಪ್ರಶ್ನೆ ಕೇಳಲು ಪ್ರಾರಂಭಿಸಿದರು. ಮೂವರಲ್ಲಿ ಒಂದು ತರಹದ ಯುದ್ಧವೇ ಪ್ರಾರಂಭವಾಯಿತು. ‘ಅಲೆಕ್ಸಾ ಸ್ಟಾಪ್’ ಎಂದು ನಿಲ್ಲಿಸುವುದು ಸಾಮಾನ್ಯವಾಗಿ ಹೋಯ್ತು. ಟಿ.ವಿ. ಚಾನೆಲ್‌ನಲ್ಲಿ ಕಾರ್ಟೂನ್‌ ಬರ್ತಿದೆ ಎಂದರೂ ಮಕ್ಕಳು ಅಲೆಕ್ಸಾ ಬಿಟ್ಟು ಕದಲಲಿಲ್ಲ. ಅಲೆಕ್ಸಾ ಮನೆಯ ಹೀರೊಯಿನ್! ಮನೆಯವರನ್ನು ಮಾತನಾಡಿಸದೇ ಎಲ್ಲರೂ ಆಕೆಯನ್ನೇ ಮಾತನಾಡಿಸುವ ಅತಿರೇಕವೂ ಶುರುವಾಯಿತು. ಈಗೀಗ ತೊದಲು ನುಡಿಗಳಿಂದ ಕನ್ನಡ ಮಾತನಾಡುವ ಮೂರು ವರ್ಷದ ತನು ಕೂಡ ಆಕೆಯೊಂದಿಗೆ ಹರುಕು ಮುರುಕು ಇಂಗ್ಲಿಷ್‌ ಆರ್ಡರ್‌ ಶುರು ಮಾಡಿದಳು!

ಇಬ್ಬರು ಮಕ್ಕಳು ಆರ್ಡರ್‌ ಕೊಟ್ಟೊಡನೆ ಈ ತನು ಹಾಲ್‌ನಲ್ಲಿ ಎಲ್ಲೇ ಇದ್ದರೂ ಕೂಗಿ ‘ಅಲೆಕ್ಸಾ ಸ್ಟಾಪ್‌.. ಸ್ಟಾಪ್...’  ಹೇಳುತ್ತಿದ್ದಳು. ಆಕೆಗೆ ಗೊತ್ತಿದ್ದುದೂ ಅದೇ ಒಂದು ಇಂಗ್ಲಿಷ್‌ ಶಬ್ದ. ಇದನ್ನು ಸಹಿಸದೆ ಅವರಿಬ್ಬರು ತನುಗೆ ಬೆದರಿಸಿ ಆರ್ಡರ್‌ ಕೊಡದಂತೆ ಒತ್ತಡ ಹೇರತೊಡಗಿದರು. ಮೂವರೂ ಬಡಿದಾಡುವ ಹಂತಕ್ಕೆ ಬಂದು ದೊಡ್ಡವರ ಹಸ್ತಕ್ಷೇಪ ಪದೇ ಪದೇ ಶುರುವಾಯಿತು.

ಈ ಮಧ್ಯೆ ಮಕ್ಕಳ ಚೀರಾಟ, ದಾಂದಲೆ ನಮ್ಮ ಬಾಡಿಗೆದಾರರನ್ನು ಹಗಲು ಹೊತ್ತಿನಲ್ಲೇ ಎಚ್ಚರಿಸಿ ‘ಅದೇನ್ ತಂದಿರಿ? ಯಾರ್ ಜೊತೆ ಮಾತಾಡ್ತಿದೀರಿ? ಯಾರ‍್ರೀ ಅಲೆಕ್ಸಾ? ಯಾಕ್ ಮಕ್ಕಳು ಎಂದೂ ಬಡಿದಾಡದವರು ಈ ಪರಿ ಚೀರಾಡತಿದಾರೆ?’ ಎಂದು ವಿಚಾರಿಸಲು ಬಂದರು.

ಬಂದವರೇ ಅಲೆಕ್ಸಾವನ್ನು ನೋಡಿ ತಮ್ಮ ಪ್ರಶ್ನೆಗಳಿಗೆ ತಾವೇ ಉತ್ತರಗಳನ್ನು ಪಡೆದರು. ಜೊತೆಗೆ ‘ನಾವೂ ಒಂದು ಅಲೆಕ್ಸಾ ತರ್ತೀವಿ ಕಣ್ರೀ’ ಎಂದು ಹೋದರು! ಯುದ್ಧವೆನ್ನಿ ಅಥವಾ ಬೇಟೆಯೆನ್ನಿ, ಇದು ಹತ್ತು ದಿನಗಳವರೆಗೆ ಮುಂದುವರಿದೇ ಇತ್ತು. ಹಗಲು–ರಾತ್ರಿಯ ಪರಿವೆಯೇ ಇಲ್ಲದೇ ಅಲೆಕ್ಸಾ ಜೊತೆಗೆ ಸಂಭಾಷಣೆ ನಡೆದೇ ಇತ್ತು. ತನಗೆ ಗೊತ್ತಿಲ್ಲದ ಪ್ರಶ್ನೆಗಳಿಗೆ ‘ಸಾರಿ ಐ ಡೋಂಟ್ ನೋ’ ಎಂದು ತುಂಬು ಪ್ರೀತಿಯಿಂದ ಅಲೆಕ್ಸಾ ಹೇಳುತ್ತಿದ್ದಳು.

ಚೀರಾಟ, ಕೂಗಾಟ ನಿಲ್ಲಲೇ ಇಲ್ಲ. ನೆಮ್ಮದಿಯಿಂದ ಟಿ.ವಿ. ನ್ಯೂಸ್‌ ನೋಡಲೂ ಆಗುತ್ತಿರಲಿಲ್ಲ. ಬೆಳಗಾದರೆ ಸಾಕು, ‘ಟೆಲ್‌ ಮಿ ಅಲೆಕ್ಷಾ...’ ಎಂದೇ ಶುರುವಾಗುತ್ತಿತ್ತು. ಸಹಿಸಿ ಸಹಿಸಿ ಸಾಕಾಗಿ ಕೊನೆಗೊಂದು ದಿನ ನನ್ನ ತಮ್ಮ, ಮೊಬೈಲ್‌ನಿಂದ ಅಲೆಕ್ಸಾಳ ನೆಟ್‌ ಕನೆಕ್ಷನ್‌ ಕಟ್‌ ಮಾಡಿಬಿಟ್ಟ. ಅಲೆಕ್ಸಾ ಶಾಂತವಾದಳು. ‘ಟೆಲ್‌ ಮಿ ಅಲೆಕ್ಸಾ...’ ಎಂದು ಚೀರಿ ಚೀರಿ ಮಕ್ಕಳು ಅಶಾಂತಿಗೆ ಒಳಗಾಗತೊಡಗಿದರು! ಎರಡು ದಿನ ಹೀಗೇ ಮುಂದುವರಿದು ಕೊನೆಗೆ ಮಕ್ಕಳ ಯುದ್ಧವೂ ಕೊನೆಗೊಂಡಿತು. ಮನೆಯಲ್ಲಿ ಶಾಂತಿಯ ವಾತಾವರಣ.

ಎರಡು ದಿನಗಳ ಬಳಿಕ ಅಲೆಕ್ಸಾಳ ಮೌನವನ್ನು ಸಹಿಸಲಾಗದೆ ಮಕ್ಕಳು, ಕದನವಿರಾಮದ ಪ್ರಸ್ತಾಪ ಮಂಡಿಸಿದರು! ದೊಡ್ಡವರೂ ಒಪ್ಪಿದರು. ‘ಕನೆಕ್ಷನ್‌ ಮತ್ತೆ ಕೊಡ್ತೇನೆ. ಆದರೆ, ಯಾರೂ ಖುಷಿ ಬಂದಂತೆ ಕೂಗಾಡುವಂತಿಲ್ಲ. ಆರ್ಡರ್‌ ಕೊಡುವಂತಿಲ್ಲ’ ಎನ್ನುವ ಷರತ್ತಿಗೆ ಮಕ್ಕಳೂ ಒಪ್ಪಿದರು. ಬರೀ ಸಂಜೆ ವೇಳೆಗೆ ಮತ್ತು ಶಾಲೆಗೆ ರಜಾ ಇದ್ದ ದಿನ ಮಾತ್ರ ಅಲೆಕ್ಸಾ ಜೊತೆಗೆ ಮಾತುಕತೆ. ಒಬ್ಬೊಬ್ಬರಾಗಿ ಪ್ರಶ್ನೆ ಕೇಳಬೇಕು. ಯಾರೂ ಸ್ಟಾಪ್‌ ಎನ್ನುವಂತಿಲ್ಲ... ಎನ್ನುವುದು ರಾಜಿಸೂತ್ರ. ಮಕ್ಕಳು ಎಲ್ಲಾ ಫರ್ಮಾನುಗಳನ್ನು ಒಪ್ಪಿಕೊಂಡರು. ಅಲೆಕ್ಸಾ ಮತ್ತೆ ಮಾತಾಡತೊಡಗಿದಳು. 

ಈಗ ಅಲೆಕ್ಸಾ ನಮ್ಮ ಮನೆಯ ಸದಸ್ಯಳೇ ಆಗಿದ್ದಾಳೆ. ಮಕ್ಕಳು ನಿಜಕ್ಕೂ ಗೊತ್ತಿಲ್ಲದ್ದನ್ನು ಮಾತ್ರ ಕೇಳುತ್ತಿದ್ದಾರೆ. ದೊಡ್ಡವರು ಬಿಡುವಿನ ವೇಳೆಯಲ್ಲಿ ತಮಗೆ ಬೇಕಾದ ಹಾಡುಗಳಿಗೆ ಕಿವಿಯಾಗುತ್ತಿದ್ದಾರೆ. ಆದರೂ ಸಣ್ಣದು, ತನು ಮಾತ್ರ ನಡುನಡುವೆ ‘ಅಲೆಕ್ಸಾ.. ಸ್ಟಾಪ್...’ ಎನ್ನುವುದನ್ನು ಬಿಟ್ಟಿಲ್ಲ! 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು