ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಕ್ಸೆಡ್ ರಿಯಾಲಿಟಿಯ ಮಿಶ್ರ ವಾಸ್ತವ!

Published 26 ಮಾರ್ಚ್ 2024, 23:50 IST
Last Updated 26 ಮಾರ್ಚ್ 2024, 23:50 IST
ಅಕ್ಷರ ಗಾತ್ರ

‘ಮಿ ಕ್ಸೆಡ್ ರಿಯಾಲಿಟಿ’ಯ ವಿಷಯಕ್ಕೆ ಬಂದರೆ ಸದ್ಯಕ್ಕೆ ಎಲ್ಲರೂ ಕುತೂಹಲದಿಂದ, ಎರಡೂ ಕಣ್ಣು ಬಿಟ್ಟು ನೋಡುವಂಥ ವಿದ್ಯಮಾನವೊಂದು ಜರುಗುತ್ತಿದೆ. ಹಿಂದೆ ಹೀಗಾಗಿರಲಿಲ್ಲವೇ – ಎಂದು ಕೇಳಿದರೆ, ಇಷ್ಟು ಕುತೂಹಲ ಹುಟ್ಟಿಸುವಂಥ ಘಟನೆ ನಡೆದಿರಲಿಲ್ಲ ಎನ್ನಬಹುದೇನೋ? ಆದರೆ, ತಂತ್ರಜ್ಞಾನ ವಲಯದಲ್ಲಿ ಇದೊಂದು ಹೊಸ ವಿದ್ಯಮಾನವಲ್ಲ. ಆದರೆ, ಮಿಕ್ಸೆಡ್ ರಿಯಾಲಿಟಿ ಮಾರುಕಟ್ಟೆಯಲ್ಲಿ ಇದೊಂದು ಈ ಶತಮಾನದಲ್ಲಿ ತಂತ್ರಜ್ಞಾನದ ದಿಕ್ಕನ್ನು ಸೂಚಿಸುವ ಬೆಳವಣಿಗೆ ಎಂದೇನಾದರೂ ಹೇಳಬಹುದು. ಅಂಥದ್ದೊಂದು ಕುತೂಹಲಕ್ಕೆ ಕಾರಣವಾಗಿದ್ದು ‘ಆ್ಯಪಲ್‌ ವಿಷನ್ ಪ್ರೋ’ ಎಂಬ ಪ್ರಾಡಕ್ಟ್!

‘ಮಿಕ್ಸೆಡ್ ರಿಯಾಲಿಟಿ’ ಎಂಬುದು ವರ್ಚುವಲ್ ರಿಯಾಲಿಟಿಗಿಂತ ಸ್ವಲ್ಪ ಭಿನ್ನ. ಈ ಮಿಕ್ಸೆಡ್ ರಿಯಾಲಿಟಿಯಲ್ಲಿ ಡಿಜಿಟಲ್ ಕಂಟೆಂಟ್ ಅನ್ನು ನಮ್ಮ ಸುತ್ತಲಿನ ಪರಿಸರದ ಮೇಲೆಯೇ ಇಟ್ಟು ತೋರಿಸಲಾಗುತ್ತದೆ. ಇದರಲ್ಲಿ ನಾವು ನಮ್ಮ ಮನೆಯ ಹಾಲ್‌ನಲ್ಲಿ ಕುಳಿತರೆ, ಎದುರಿನ ಖಾಲಿ ಗೋಡೆಯೇ ಸಿನಿಮಾ ಥಿಯೇಟರ್‌ನಷ್ಟು ದೊಡ್ಡ ಸ್ಕ್ರೀನ್ ಆಗುತ್ತದೆ. ಅಲ್ಲಿ ಸಿನಿಮಾ ನೋಡಬಹುದು, ಗೇಮ್ ಪ್ಲೇ ಮಾಡಬಹುದು. ಇದರ ಪಕ್ಕದಲ್ಲೇ, ನಮ್ಮ ವರ್ಕ್ ಸ್ಪೇಸ್‌ ಅನ್ನೂ ಮಾಡಿಕೊಳ್ಳಬಹುದು. ಅಲ್ಲಿ ನಮಗೆ ಬೇಕಾದ ಫೇಸ್ಟೈಮ್, ಪ್ರೊಡಕ್ಟಿವಿಟಿ ಆ್ಯಪ್‌ಗಳು ಇರುತ್ತವೆ. ಎರಡು ಕೈ ಬೆರಳಲ್ಲಿ ಸನ್ನೆ ಮಾಡಿ ಅವುಗಳನ್ನು ಬಳಕೆ ಮಾಡಬಹುದು. ಎಂದರೆ, ಈಗಿರುವ ಅಪ್ಲಿಕೇಶನ್‌ಗಳನ್ನೇ ನಾವು ಬಳಸುವ ರೀತಿ ವಿಭಿನ್ನವಾಗಿದೆ.

ಆ್ಯಪಲ್ ವಿಷನ್ ಪ್ರೋ ಈಗ ಮಾರುಕಟ್ಟೆಯಲ್ಲಿರುವ ಸಾಧನಗಳಿಗಿಂತ ಅತ್ಯಂತ ಅದ್ಭುತ ಅನುಭವವನ್ನು ಕಟ್ಟಿಕೊಡುತ್ತದೆ. ನಮ್ಮನ್ನು ಪ್ರೊಡಕ್ಟಿವಿಟಿ, ಮನೋರಂಜನೆ ಸೇರಿದ ಹಾಗೆ ಎಲ್ಲದರಲ್ಲೂ ಮುಳುಗಿಸಿಬಿಡುವಷ್ಟು ಆಕರ್ಷಕವಾಗಿದೆ. ಹೀಗಾಗಿ ಇದು ಈ ಕ್ಷೇತ್ರದಲ್ಲಿ ಹೀರೋ ಆಗಿದೆ. ಹಾಗೆ ನೋಡಿದರೆ, ಮೆಟಾ ಸಂಸ್ಥೆಯ ಮೆಟಾ ಖ್ವೆಸ್ಟ್ 3 ಮಾರುಕಟ್ಟೆಯಲ್ಲಿ ಸ್ವಲ್ಪ ಕಾಲದಿಂದಲೂ ಇದೆ. ಇದು ಗೇಮರ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಮಿಕ್ಸೆಡ್ ರಿಯಾಲಿಟಿ ಎಂದರೆ ಈವರೆಗೆ ಮೆಟಾ ಕ್ವೆಸ್ಟ್ 3 ಎಂದೇ ಜನರು ಎಂದುಕೊಳ್ಳುವಷ್ಟು ಈವರೆಗೆ ಅದು ಮಾರುಕಟ್ಟೆಯಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ.

ಆದರೆ, ಆ್ಯಪಲ್ ಈ ಕ್ಷೇತ್ರಕ್ಕೆ ಕಾಲಿಟ್ಟಿತು. ವಿಶೇಷವೆಂದರೆ ಈ ಆ್ಯಪಲ್ ವಿಷನ್ ಪ್ರೋ ಅನ್ನು ಬಿಡುಗಡೆ ಮಾಡುವುದಕ್ಕೆ ಆ್ಯಪಲ್ ಅಷ್ಟೇನೂ ಜನಪ್ರಿಯ ವಿಧಾನಗಳನ್ನು ಬಳಸಲಿಲ್ಲ. ತನ್ನ ಫೋನ್ ಹಾಗೂ ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡುವಾಗ ಮಾಡಿದ ಹಾಗೆ ಗ್ರಾಹಕರಿಗೆ ಡೆಮಾನ್ಸ್ಟ್ರೇಶನ್ ನೀಡಲಿಲ್ಲ. ಪ್ರಚಾರವನ್ನೂ ಮಾಡಲಿಲ್ಲ. ಆದರೆ, ಅದು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಅದನ್ನು ಖರೀದಿಸಿ ಅದರ ಅನುಭವವನ್ನು ಪಡೆದುಕೊಳ್ಳಬೇಕು ಎಂಬುವವರ ಕುತೂಹಲಕ್ಕೇನೂ ಕಡಿಮೆ ಇರಲಿಲ್ಲ. ಮಾರಾಟವಾಯಿತು, ಜನಪ್ರಿಯವೂ ಆಯಿತು.

ಆದರೆ, ಈ ಮಿಕ್ಸೆಡ್ ರಿಯಾಲಿಟಿಯ ಸಮಸ್ಯೆಯಿರುವುದು ಇದನ್ನು ದೈನಂದಿನ ಅಗತ್ಯಕ್ಕೆ ಬಳಸುವುದು ಹೇಗೆ ಎಂಬುದು! ನಾವು ತಂತ್ರಜ್ಞಾನವನ್ನು ಮನೋರಂಜನೆಯಿಂದ ಹೊರತುಪಡಿಸಿ, ದೈನಂದಿನ ಕೆಲಸಗಳಿಗೆ, ಫಲಪ್ರದವಾಗಿ ಬಳಸುವುದಕ್ಕೆ ಎರಡು ಮುಖ್ಯ ಕಾರಣಗಳಿರುತ್ತವೆ. ಒಂದು, ನಮ್ಮ ಕೆಲಸವನ್ನು ಸುಲಭವಾಗಿಸುವುದು; ಇನ್ನೊಂದು, ಸಮಸ್ಯೆಗಳ ಪರಿಹಾರಕ್ಕೆ. ಈ ಎರಡಕ್ಕೂ ಮಿಕ್ಸೆಡ್ ರಿಯಾಲಿಟಿ ಉಪಯುಕ್ತವಲ್ಲ!

ಹೀಗಾಗಿ, ಮಿಕ್ಸೆಡ್ ರಿಯಾಲಿಟಿ ಎಂಬುದು ಸದ್ಯದ ಮಟ್ಟಿಗೆ ಪ್ರಶ್ನೆಯಿಲ್ಲದ ಉತ್ತರವಿದ್ದಂತೆ! ಎಲ್ಲ ಕಂಪನಿಗಳೂ ಇದರ ಯೂಸ್ ಕೇಸ್‌ಗಳನ್ನು ಅಂದರೆ, ಇದನ್ನು ಎಲ್ಲಿ ದೈನಂದಿನ ಬಳಕೆಗೆ ಅನ್ವಯಿಸಬಹುದು ಎಂಬುದರ ಹುಡುಕಾಟದಲ್ಲಿವೆ. ಎಂದರೆ, ತಂತ್ರಜ್ಞಾನ ಕಂಪನಿಗಳು ಉತ್ತರವನ್ನು ಕಂಡುಕೊಂಡಿವೆ. ಪ್ರಶ್ನೆಗಾಗಿ ಹುಡುಕಾಡುತ್ತಿವೆ.

ಬಹುಶಃ ಇದೇ ಉದ್ದೇಶಕ್ಕೇ ಏನೋ, ಮೈಕ್ರೋಸಾಫ್ಟ್ ತುಂಬ ಹಿಂದೆಯೇ ತನ್ನ ವಿಂಡೋಸ್ ಮಿಕ್ಸೆಡ್ ರಿಯಾಲಿಟಿಯಲ್ಲಿ ಆಸಕ್ತಿ ಕಳೆದುಕೊಂಡಿದೆ. ಅದರದ್ದೇ ಇನ್ನೊಂದು ಉತ್ಪನ್ನದ ಶೋಧ ಹೋಲೋಲೆನ್ಸ್ 3 ಕೂಡ ರದ್ದಾಗಿದೆ. ಇನ್ನು ಎಚ್ಪಿ ಸಂಸ್ಥೆಯ ರಿವರ್ಬ್ ಕೂಡ ಆಸಕ್ತಿ ಕಳೆದುಕೊಂಡು ನಿಂತಿದೆ. ಸದ್ಯ, ಮಿಕ್ಸೆಡ್ ರಿಯಾಲಿಟಿ ವಿಷಯದಲ್ಲಿ ಎಲ್ಲ ಕಂಪನಿಗಳ ಊಹೆಯೇನೆಂದರೆ, ಇದು ಶಿಕ್ಷಣ ಮತ್ತು ಇತರ ಅತ್ಯಂತ ಕಡಿಮೆ ಬಳಕೆಯ ವಲಯದಲ್ಲಿ ಮಾತ್ರ ಬಳಸಬಹುದು. ಅದನ್ನು ಬಿಟ್ಟರೆ, ಗೇಮಿಂಗ್ ವಲಯ ಇದನ್ನು ಅಪ್ಪಿಕೊಳ್ಳಬಹುದು. ಈ ನಿಟ್ಟಿನಲ್ಲಿ, ಮೆಟಾ ಈಗ ಕನ್ನಡಕಗಳ ತಯಾರಕ ಕಂಪನಿ ರೇಬಾನ್ ಜೊತೆಗೆ ಒಪ್ಪಂದ ಮಾಡಿಕೊಂಡು, ಆ ಕಂಪನಿಯ ಕನ್ನಡಕಗಳಲ್ಲಿ ಮೆಟಾ ತನ್ನ ಸಾಫ್ಟ್ವೇರ್ ಅನ್ನು ಅಳವಡಿಸಿ, ರೇಬಾನ್ ಕನ್ನಡಕಗಳನ್ನು ಸ್ಮಾರ್ಟ್ ಆಗಿಸಬಹುದೇ ಎಂದು ನೋಡುತ್ತಿದೆ.

ಮಿಕ್ಸೆಡ್ ರಿಯಾಲಿಟಿ ಉತ್ಪನ್ನಗಳ ಬಳಕೆ ಒಂದಷ್ಟು ಕಡೆ ಆಗಿದೆ. ಉದಾಹರಣೆಗೆ, ಅಮೆರಿಕದ ಕಟ್ಟಡ ನಿರ್ಮಾಣ ಕಂಪನಿಯೊಂದು, ತನ್ನ ಕೆಲಸಗಾರರಿಗೆ, ಎಂಜಿನಿಯರುಗಳಿಗೆ ಕಟ್ಟಡದ ಪ್ಲಾನ್ ಅನ್ನು ಹೇಳುವುದಕ್ಕೆ ಮೈಕ್ರೋಸಾಫ್ಟ್ ಹಾಲೋಲೆನ್ಸ್ ಬಳಸಿದೆ. ಇನ್ನು ಎಚ್ಟಿಸಿ ಕಂಪನಿಯ ವಿಆರ್ ಹೆಡ್ಸೆಟ್ ವಿವ್ ಫೋಕಸ್ 3 ಅನ್ನು ಕಳುಹಿಸಿಕೊಡಲಾಗಿತ್ತು. ಅಲ್ಲಿ ಅದು ಗಗನಯಾನಿಗಳಿಗೆ ಹಲವು ಅನುಕೂಲಗಳನ್ನು ಒದಗಿಸಿದೆಯಂತೆ. ಇನ್ನು, ಲಂಡನ್‌ನ ಆಸ್ಪತ್ರೆಯೊಂದರಲ್ಲಿ ರೋಗಿಯ ಸರ್ಜರಿ ಸಮಯದಲ್ಲಿ ಆ್ಯಪಲ್ ವಿಷನ್ ಪ್ರೋ ಬಳಸಿದ್ದರಂತೆ. ಆದರೆ, ಒಂದು ಉತ್ಪನ್ನ ವ್ಯಾಪಕವಾಗಿ ಬಳಕೆಗೆ ಬರುವುದಕ್ಕೆ, ಇಷ್ಟು ಸಾಲದು ಎನ್ನುತ್ತದೆ ತಂತ್ರಜ್ಞಾನ ಮಾರ್ಕೆಟಿಂಗ್ ವಲಯ.

ಯಾಕೆ ಈ ಮಿಕ್ಸೆಡ್ ರಿಯಾಲಿಟಿ ಎಂಬ ಕಲ್ಪನೆ ರೂಪತಳೆದು ಇಷ್ಟು ವರ್ಷವಾದರೂ ಜನರ ದೈನಂದಿನ ಬಳಕೆಯಲ್ಲಿ ಸೇರಿಹೋಗುವುದಕ್ಕೆ ಸಾಧ್ಯವಾಗಲಿಲ್ಲ ಎಂಬುದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ, ಇದರಲ್ಲಿ ಕಾಲಕಾಲಕ್ಕೆ ಅಂದರೆ, ವರ್ಷಕ್ಕೋ, ಎರಡು ವರ್ಷಕ್ಕೋ ಹೊಸ ಹೊಸ ಸಂಶೋಧನೆಗಳು ಆಗಿ, ಅದು ಮಾರುಕಟ್ಟೆಗೆ ಬರಲಿಲ್ಲ. ಇನ್ನು, ತಂತ್ರಜ್ಞಾನ ಕುತೂಹಲಿಗಳಲ್ಲಿ ಇತ್ತೀಚೆಗೆ ಎರಡು ಗೋಡೆಯ ಮಧ್ಯೆಯೇ ತಂತ್ರಜ್ಞಾನವನ್ನು ಅನ್ವೇಷಿಸುವ ಕುತೂಹಲ ಕಡಿಮೆಯಾಗಿದ್ದು, ಈ ಸಾಧನ ಕೂಡ ಬಳಸುವವರನ್ನು ಕೋಣೆಯಲ್ಲೇ ಕೂಡಿ ಹಾಕುತ್ತದೆ. ಇದರಲ್ಲಿ ಎಷ್ಟೇ ಸಂಶೋಧನೆ ನಡೆದರೂ, ಮಾನವನ ಕಣ್ಣಿನ ದೃಷ್ಟಿಯಷ್ಟೇ ಪರಿಣಾಮಕಾರಿಯಾಗಿ ಈ ಸಾಧನಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಅದೆಲ್ಲದರ ಜೊತೆಗೆ, ಈ ಸಾಧನವನ್ನು ಈಗಿಂದೀಗಲೇ ಬಳಸಬೇಕು ಎಂಬಂತಹ ಆಕರ್ಷಣೆ ಹುಟ್ಟಿಸುವ ‘ಅದ್ಭುತ ಆ್ಯಪ್‌ಗಳೂ’ ಇನ್ನೂ ಹುಟ್ಟಿಕೊಂಡಿಲ್ಲ.

ಹೀಗಾಗಿ, ಸದ್ಯಕ್ಕೆ ಮಿಕ್ಸೆಡ್ ರಿಯಾಲಿಟಿ ಹೆಡ್‌ಸೆಟ್‌ಗಳು ಗೇಮರ್‌ಗಳ ಮೆಚ್ಚಿನ ಸಾಧನವಾಗಿಯೇ ಮುಂದುವರಿಯಲಿದೆ. ಆ್ಯಪಲ್ ಇದರಲ್ಲಿ ಕೋಟ್ಯಂತರ ಡಾಲರ್ ಸುರಿಯುವುದರಿಂದ ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಾದ ಇನ್ನಷ್ಟು ಕಂಟೆಂಟ್ ಸೃಷ್ಟಿಯಾಗಬಹುದು. ಅದು ಈ ವಲಯದಲ್ಲಿ ಇನ್ನಷ್ಟು ಹೊಸ ಸಂಶೋಧನೆಗೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT