ಮಂಗಳವಾರ, ಅಕ್ಟೋಬರ್ 27, 2020
27 °C

'IN' ಫಾರ್‌ ಇಂಡಿಯಾ; ಹೊಸ ರೂಪದಲ್ಲಿ ದೇಶೀಯ ಮೈಕ್ರೊಮ್ಯಾಕ್ಸ್‌ ಸ್ಮಾರ್ಟ್‌ಫೋನ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೈಕ್ರೊಮ್ಯಾಕ್ಸ್‌ ಇಂಡಿಯಾ

ಬೆಂಗಳೂರು: ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ–ಕಾಮರ್ಸ್‌ ವೇದಿಕೆಗಳಲ್ಲಿ ಹಬ್ಬದ ವಿಶೇಷ ಮಾರಾಟಗಳು ಇಂದಿನಿಂದ ಆರಂಭವಾಗಿವೆ. ಅದರಲ್ಲಿ ಬಹುತೇಕ ಚೀನಾ ಮೂಲದ ಕಂಪನಿಗಳ ಸ್ಮಾರ್ಟ್‌ಫೋನ್‌ಗಳದ್ದೇ ಪಾರಮ್ಯ. ಇದೇ ಸಮಯದಲ್ಲಿ ದೇಶಿಯ 'ಮೈಕ್ರೊಮ್ಯಾಕ್ಸ್‌' ಮಿಂಚಿನಂತೆ ಪ್ರವೇಶ ಮಾಡಿದೆ. 'ಇನ್‌' (IN) ಮೂಲಕ ಮತ್ತೆ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ದೇಶೀಯ ತಂತ್ರಜ್ಞಾನದ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿದೆ.

ಗಡಿಯಲ್ಲಿ ಚೀನಾದ ತಕರಾರು, ದೇಶದೊಳಗೆ ಚೀನಿ ವಸ್ತುಗಳದ್ದೇ ಕಾರುಬಾರು, ಚೀನಾ ಆ್ಯಪ್‌ಗಳ ನಿಷೇಧ, ಈ ನಡುವೆ ಆತ್ಮನಿರ್ಭರ ಭಾರತದ ಘೋಷಣೆ. ದೇಶೀಯ ವಸ್ತುಗಳನ್ನೇ ಖರೀದಿಸುವ ಪಣತೊಟ್ಟ ಅದೇಷ್ಟೊ ಭಾರತೀಯರು ಚೀನಾ ಸ್ಮಾರ್ಟ್‌ಫೋನ್‌ಗಳ ಬದಲಿಗೆ ಹುಡುಕಾಡಿದ್ದು ದೇಶದ 'ಮೈಕ್ರೊಮ್ಯಾಕ್ಸ್‌' ಫೋನ್‌ಗಳಿಗಾಗಿ. ಇ–ಕಾಮರ್ಸ್‌ ಪೋರ್ಟಲ್‌ಗಳಿಂದ ಹಿಡಿದು ಅಧಿಕೃತ ಮೈಕ್ರೊಮ್ಯಾಕ್ಸ್‌ ವೆಬ್‌ಸೈಟ್‌ವರೆಗೂ ಎಲ್ಲೆಲ್ಲೂ ಒಂದೂ ಫೋನ್‌ ಖರೀದಿಗೆ ಸಿಗಲಿಲ್ಲ! ಒಂದು ಸಮಯದಲ್ಲಿ ಇಡೀ ದೇಶದ ಬ್ರ್ಯಾಂಡ್‌ ಆಗಿ, ಜಗತ್ತಿನ ಪ್ರಮುಖ 10 ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಮೆರೆದ ಮೈಕ್ರೊಮ್ಯಾಕ್ಸ್‌ ಚೀನಾದ ಸ್ಮಾರ್ಟ್‌ಫೋನ್‌ಗಳ ಪ್ರಭಾವದಲ್ಲಿ ಸಂಪೂರ್ಣ ಮರೆಯಾಗಿಯೇ ಹೋಗಿದೆ(ತ್ತು?).

ದೇಶಕ್ಕಾಗಿ ಮತ್ತೆ ಮೇಲೆದ್ದು ಬಂದಿರುವುದಾಗಿ ಮೈಕ್ರೊಮ್ಯಾಕ್ಸ್‌ನ ಸಹ–ಸಂಸ್ಥಾಪಕ ರಾಹುಲ್‌ ಶರ್ಮಾ ವಿಡಿಯೊ ಮೂಲಕ ಹೇಳಿದ್ದಾರೆ. ಮೈಕ್ರೊಮ್ಯಾಕ್ಸ್‌ ಒಂದೂವರೆ ನಿಮಿಷಗಳ ವಿಡಿಯೊ ಪ್ರಕಟಿಸಿದ್ದು, 'ಹೊಸ ರೂಪದಲ್ಲಿ ದೇಶೀಯವಾಗಿ, ದೇಶದ ಜನರಿಗಾಗಿ ಮೈಕ್ರೊಮ್ಯಾಕ್ಸ್‌ ಮತ್ತೆ ಮರಳಿದೆ' ಎಂದು ರಾಹುಲ್‌ ಹೇಳಿದ್ದಾರೆ. ಮೈಕ್ರೊಮ್ಯಾಕ್ಸ್‌ ಶುರುವಾದ ಕಥೆ, ಅನಂತರ ಚೀನಾ ಫೋನ್‌ಗಳ ಪ್ರವೇಶದಿಂದ ಎದುರಾದ ಪರಿಸ್ಥಿತಿ, ಗಡಿಯಲ್ಲಿನ ಘರ್ಷಣೆ ಹಾಗೂ ಆತ್ಮನಿರ್ಭರ ಭಾರತ ಎಲ್ಲವನ್ನೂ ಪ್ರಸ್ತಾಪಿಸಿ 'ಇನ್‌' ಮೂಲಕ ಬರುತ್ತಿದ್ದೇವೆ ಎಂದಿದ್ದಾರೆ.

ಮೈಕ್ರೊಮ್ಯಾಕ್ಸ್‌ ವೆಬ್‌ಸೈಟ್‌ ಹಾಗೂ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲೂ 'ಕಮಿಂಗ್‌ ಸೂನ್‌' (ಶೀಘ್ರದಲ್ಲಿಯೇ ಬರುತ್ತಿದ್ದೇವೆ) ಎಂಬ ಪ್ರಕಟಣೆ ಕಾಣಬಹುದಾಗಿದೆ.

ವಿಡಿಯೊ ನೋಡಿರುವ ಟ್ವೀಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ದೇಶಿಯವಾಗಿ ತಯಾರಿಸುವುದಾಗಿ ಕಂಪನಿ ಹೇಳಿರುವುದು ಬಹಳಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ. ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಸಡ್ಡು ಹೊಡೆಯುವಂತೆ ಉತ್ಸಾಹ ತುಂಬಿದ್ದಾರೆ. ಮೈಕ್ರೊಮ್ಯಾಕ್ಸ್‌ ಫೋನ್‌ಗಾಗಿ ಕಾಯುತ್ತಿರುವುದಾಗಿ ಬಹುತೇಕರು ಟ್ವೀಟಿಸಿದ್ದಾರೆ. ದೇಶದಲ್ಲಿ ಎರಡು ತಯಾರಿಕಾ ಘಟಕಗಳನ್ನು ಹೊಂದಿರುವುದಾಗಿ ಮೈಕ್ರೊಮ್ಯಾಕ್ಸ್‌ ಹೇಳಿಕೊಂಡಿದೆ.

ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ, ಫೋನ್ ಗುಣಲಕ್ಷಣಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಕಂಪನಿಯು ಫೋನ್‌ಗಳ ಜೊತೆಗೆ ಟಿವಿಗಳು, ಸೌಂಡ್‌ ಸಿಸ್ಟಮ್‌, ಎಸಿ ಹಾಗೂ ವಾಷಿಂಗ್‌ ಮೆಷಿನ್‌ಗಳನ್ನೂ ತಯಾರಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು