ಸೋಮವಾರ, ಆಗಸ್ಟ್ 8, 2022
24 °C

ಮೈಕ್ರೊಸಾಫ್ಟ್‌ ಎಡ್ಜ್‌ ಬದಲಾವಣೆಗಳೊಂದಿಗೆ

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

ಬ್ರೌಸರ್‌ ಎಂದ ಕೂಡಲೇ ಹಲವರಿಗೆ ನೆನಪಾಗುವುದು ಗೂಗಲ್‌ ಕ್ರೋಮ್‌ ಹಾಗೂ ಮೊಜಿಲ್ಲಾ ಫೈರ್‌ಫಾಕ್ಸ್‌. ಈ ವಿಷಯದಲ್ಲಿ ಹಿಂದೆ ಉಳಿದಿದ್ದ ಮೈಕ್ರೊಸಾಫ್ಟ್‌ ತನ್ನ ಬ್ರೌಸರ್‌ ಲೋಪಗಳನ್ನು ಸರಿಪಡಿಸಿ ಹಲವು ವೈಶಿಷ್ಟ್ಯಗಳನ್ನು ಸೇರಿಸಿದೆ.

ಅಂತರ್ಜಾಲದಲ್ಲಿ ಮಾಹಿತಿಯನ್ನು ಕಲೆ ಹಾಕುವುದಕ್ಕೆ, ಯಾವುದಾದರೂ ಸೇವೆ ಪಡೆಯುವುದಕ್ಕೆ –  ಹೀಗೆ ಹಲವು ನಿತ್ಯಕೆಲಸಗಳಿಗೆ ಬ್ರೌಸರ್‌ಗಳು ನೆರವಾಗುತ್ತಿವೆ. ಆದರೆ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ನಿಖರವಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ಕಡಿಮೆ ಮೊಮೊರಿ ಹಾಗೂ ಪ್ರೊಸೆಸರ್‌ ಶಕ್ತಿಯನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡು, ಗೌಪ್ಯತೆಗೆ ಹೆಚ್ಚು ಆದ್ಯತೆ ನೀಡುವ ಬ್ರೌಸರ್‌ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈಕ್ರೊಸಾಫ್ಟ್‌ ‘ಎಡ್ಜ್’ ಬ್ರೌಸರ್‌ ಅಭಿವೃದ್ಧಿಪಡಿಸಲಾಗಿದೆ. ವಿಂಡೋಸ್‌ 10 ಅಪ್‌ಡೇಟ್‌ ಜತೆಯಲ್ಲೇ ಇದು ಬಳಕೆಗೆ ಬಂದಿದೆ.

ಸೈಟ್‌ಗಳು ಆ್ಯಪ್‌ಗಳಾಗಬಹುದು!
ನಿತ್ಯ ನೋಡುವಂತಹ ಕೆಲವು ವೆಬ್‌ಸೈಟ್‌ಗಳನ್ನು ಶಾರ್ಟ್‌ಕಟ್‌ ರೂಪದಲ್ಲಿ ಬಳಸಿಕೊಳ್ಳಲು ಸಮಸ್ಯೆಯಾಗುತ್ತಿದ್ದರೆ, ಎಡ್ಜ್‌ನಲ್ಲಿ ಈ ಸಮಸ್ಯೆ ಇರುವುದಿಲ್ಲ. ಆ್ಯಪ್ ರೂಪದಲ್ಲಿ ಬಳಸಿಕೊಳ್ಳಲು ಉದ್ದೇಶಿಸಿರುವ ವೆಬ್‌ಸೈಟ್‌ ತೆರೆದು, ಬ್ರೌಸರ್‌ ಬಲಭಾಗದಲ್ಲಿರುವ ಮೂರು ಚುಕ್ಕಿಗಳ ಮೇಲ್‌ ಕ್ಲಿಕ್‌ ಮಾಡಿ, ಸೆಟ್ಟಿಂಗ್ಸ್‌ಗೆ ಹೋಗಿ ‘ಆ್ಯಪ್’ ಆಯ್ಕೆ ಕ್ಲಿಕ್‌ ಮಾಡಬೇಕು. ನಂತರ ಇನ್‌ಸ್ಟಾಲ್‌ ದಿಸ್‌ ಸೈಟ್‌ ಆ್ಯಪ್ ಎಂಬ ಆಯ್ಕೆ ಕ್ಲಿಕ್‌ ಮಾಡಿ, ಅದಕ್ಕೊಂದು ಹೆಸರನ್ನು ನೀಡಿ, ಇನ್‌ಸ್ಟಾಲ್‌ ಬಟನ್‌ ಮೇಲೆ ಕ್ಲಿಕ್ ಮಾಡಿದರೆ, ಸ್ಟಾರ್ಟ್‌ ಮೆನುವಿನಲ್ಲಿ ವೆಬ್‌ಸೈಟ್‌ ಐಕಾನ್‌ ರೂಪದಲ್ಲಿ ರೂಪುಗೊಳ್ಳುತ್ತದೆ. ಇದನ್ನು ಡೆಸ್ಕ್‌ಟಾಪ್‌ಗೆ ತಂದು ಶಾರ್ಟ್‌ಕಟ್‌ ರೂಪದಲ್ಲೂ ಬಳಸಿಕೊಳ್ಳಬಹುದು. ಬೇಕಿದ್ದರೆ ಡೆಸ್ಕ್‌ಟಾಪ್‌ನಲ್ಲಿ ಪಿನ್‌ ರೂಪದಲ್ಲಿ ಇಟ್ಟುಕೊಳ್ಳಬಹುದು. ಅನಗತ್ಯವಾದ ಆ್ಯಪ್ ಅನ್ನು ತೊಲಗಿಸುವುದಕ್ಕೂ ಅವಕಾಶವಿದೆ. ಅನ್‌ಇನ್‌ಸ್ಟಾಲ್‌ ಮಾಡಿಕೊಳ್ಳಲು ಮ್ಯಾನೇಜ್‌ ಆ್ಯಪ್‌ನಲ್ಲಿ ಈ ಸೆಟ್ಟಿಂಗ್ಸ್‌ ಮಾಡಿಕೊಳ್ಳಬಹುದು.

ಒಂದೇ ಸಮಯದಲ್ಲಿ ಹೆಚ್ಚು ಟ್ಯಾಬ್‌ಗಳು
ತೆರೆದಿಟ್ಟ ಟ್ಯಾಬ್‌ಗಳು ಎಡಭಾಗದಲ್ಲಿ ಸಂಕ್ಷಿಪ್ತವಾಗಿ ಎದ್ದುಕಾಣುವಂತೆ ಎಡ್ಜ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಹೆಚ್ಚು ಟ್ಯಾಬ್‌ಗಳನ್ನು ಸುಲಭವಾಗಿ ಬಳಸಬಹುದು. ಹೀಗೆ ಹೆಚ್ಚು ಟ್ಯಾಬ್‌ಗಳನ್ನು ಬಳಸುವಾಗ ಹಾಗೂ ಹೆಚ್ಚು ಬಾರಿ ಬದಲಿಸುತ್ತಾ ಪರಿಶೀಲಿಸಬೇಕಾದಾಗ ಇದು ನೆರವಾಗುತ್ತದೆ. ಆದರೆ ಹೆಚ್ಚು ಟ್ಯಾಬ್‌ಗಳನ್ನು ಬಳಸಿದರೆ ಕಂಪ್ಯೂಟರ್‌ ಮೆಮೊರಿ ಹಾಗೂ ಪ್ರೊಸೆಸರ್‌ ವೇಗ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವಾಗಿ ಎಡ್ಜ್‌ ಬ್ರೌಸರ್‌ನಲ್ಲಿ ಟ್ಯಾಬ್‌ಗಳನ್ನು ಸ್ವಯಂ ಚಾಲಿತವಾಗಿ ಸ್ಲೀಪಿಂಗ್‌ ಮೋಡ್‌ಗೆ ಕಳುಹಿಸುವ ವ್ಯವಸ್ಥೆ ಇದೆ. ಇದಕ್ಕಾಗಿ ಬಲಭಾಗದಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್‌ ಮಾಡಿ, ಸೆಟ್ಟಿಂಗ್ಸ್‌ ಆಯ್ಕೆ ಮಾಡಿ, ಸಿಸ್ಟಂ ಮೇಲ್‌ ಕ್ಲಿಕ್‌ ಮಾಡಿ ಅಲ್ಲಿರುವ ಸೇವ್‌ ರಿಸೋರ್ಸಸ್‌ಗೆ ಹೋದರೆ ಅಲ್ಲಿ ಸೇವ್‌ ರಿಸೋರ್ಸಸ್‌ ವಿತ್‌ ಸ್ಲೀಪಿಂಗ್‌ ಟ್ಯಾಬ್‌ ಬಟನ್‌ ಮೇಲ್‌ ಕ್ಲಿಕ್‌ ಮಾಡಬೇಕು. ಇದರಲ್ಲಿ ಟ್ಯಾಬ್‌ ಎಷ್ಟು ಹೊತ್ತು ಸ್ಲೀಪಿಂಗ್‌ ಮೋಡ್‌ನಲ್ಲಿ ಇರಬೇಕು ಎಂಬುದನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ನಿರಂತರ ಚಲನೆ
ಸೇವ್‌ ರಿಸೋರ್ಸಸ್‌ನಲ್ಲಿ ವೆಬ್‌ಸೈಟ್‌ ಸ್ಲೀಪ್‌ಮೋಡ್‌ಗೆ ಹೋಗದಂತೆ ನಿಯಂತ್ರಿಸುವ ಆಯ್ಕೆಯೂ ಇದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ವೆಬ್‌ಸೈಟ್‌ಗಳನ್ನು ಸದಾ ಚಾಲನಾಸ್ಥಿತಿಯಲ್ಲಿ ಇಡಬೇಕಾದ ಅವಶ್ಯಕತೆ ಇರಬಹುದು. ಅಂತಹ ಸಂದರ್ಭಗಳಲ್ಲಿ ಈ ವೈಶಿಷ್ಟ್ಯ ನೆರವಾಗುತ್ತದೆ. ತೆರೆದಿಟ್ಟಿರುವ ಟ್ಯಾಬ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ ಅದರಲ್ಲಿ ಪಿನ್‌ ಟ್ಯಾಬ್‌ ಆಯ್ಕೆ ಮಾಡಿದರೆ ಅದು ಐಕಾನ್‌ ರೂಪಕ್ಕೆ ಬದಲಾಗುತ್ತದೆ. ಆಗ ಇದು ನಿರಂತರವಾಗಿ ಚಾಲನಾಸ್ಥಿತಿಯಲ್ಲಿ ಇರುತ್ತದೆ.

ಸುರಕ್ಷಿತ ಕಿಡ್ಸ್‌ ಮೋಡ್‌
ಎಡ್ಜ್‌ನ ಮತ್ತೊಂದು ವೈಶಿಷ್ಟ್ಯ ಕಿಡ್ಸ್‌ ಮೋಡ್‌. 5-8 ಹಾಗೂ 9-12 ವಯಸ್ಸಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ಇದರಲ್ಲಿನ ‘ಗಾರ್ಡ್‌ರೆಯಿಲ್ಸ್‌’ ಬಿಲ್ಟಿನ್‌ ಪಟ್ಟಿ ನೆರವಿನೊಂದಿಗೆ ಮಕ್ಕಳು ಅನಾವಶ್ಯಕ ಹಾಗೂ ಅನುಚಿತ ವೆಬ್‌ಸೈಟ್‌ಗಳನ್ನು ತೆರೆಯದಂತೆ ನಿಯಂತ್ರಿಸಬಹುದು. ಪೋಷಕರು ರಿವ್ಯೂ ಮಾಡಿ ನೋಡುವುದಕ್ಕೂ ಅವಕಾಶವಿದೆ. ಸೆಟ್ಟಿಂಗ್ಸ್‌ ಮೂಲಕ ಅನುಮತಿ ನೀಡುವಂತಹ ಅಂಶಗಳಲ್ಲಿ ಬದಲಾವಣೆಗಳನ್ನೂ ಮಾಡಿಕೊಳ್ಳಬಹುದು. ಸೆಟ್ಟಿಂಗ್ಸ್‌ನಲ್ಲಿರುವ ‘ಫ್ಯಾಮಿಲಿ ಸೇಫ್ಟಿ’ ಆಯ್ಕೆಯಲ್ಲಿ ಈ ಸೌಲಭ್ಯವಿದೆ.

ಇವಲ್ಲದೆ ಗೋಪ್ಯತೆ ಕಾಪಾಡಲು ನ್ಯೂ ಪ್ರೈವೇಟ್‌ ವಿಂಡೊ, ಸೈಟ್‌ಗಳಲ್ಲಿನ ವಿಷಯಗಳನ್ನು ಓದಿ ತಿಳಿಸುವ ‘ರೀಡ್‌ ಅಲೌಡ್‌’ – ಹೀಗೆ ಹಲವು ವೈಶಿಷ್ಟ್ಯಗಳು ಎಡ್ಜ್‌ನಲ್ಲಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು