ಸೋಮವಾರ, ಅಕ್ಟೋಬರ್ 18, 2021
25 °C

ಬಹುರೂಪಿ ಲ್ಯಾಪ್‌ಟಾಪ್‌ ‘ಮೈಕ್ರೋಸಾಫ್ಟ್ ಸರ್ಫೇಸ್ ಸ್ಟುಡಿಯೋ’!

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

‘ಮೈಕ್ರೋಸಾಫ್ಟ್ ಸರ್ಫೇಸ್ ಸ್ಟುಡಿಯೋ’. ಇದು ಎಲ್ಲರ ಅನುಕೂಲಕ್ಕೆ ತಕ್ಕ ಹಾಗೆ ಬಾಗುವ, ಬದಲಾಗುವ ಲ್ಯಾಪ್‌ಟಾಪ್‌.

 

ವಿಹಾಗೆ ಶಾಲೆ ಶುರುವಾದರೆ ಸಾಕೆನಿಸಿಬಿಟ್ಟಿದೆ. ದಿನಪೂರ್ತಿ ಆನ್‌ಲೈನ್‌ ಕ್ಲಾಸುಗಳು; ಕಂಪ್ಯೂಟರ್ ಪರದೆ ನೋಡೀ ನೋಡಿ ಕನ್ನಡಕ ಬಂದದ್ದೂ ಆಯ್ತು, ಕುತ್ತಿಗೆಯ ಒಂದು ಬದಿ ದಿನವೆಲ್ಲಾ ನೋವು. ಮನೆಯಲ್ಲಿ ಎಪ್ಪತ್ತು ವರ್ಷದ ಹಿರಿಯರದ್ದು ‘ಇದೇನು ಏಳು ವರ್ಷದವಳಿಗೆ ಕನ್ನಡಕ, ಕುತ್ತಿಗೆ ನೋವು?’ ಎಂದು ಹುಬ್ಬೇರಿಸುವ ಸರದಿ.

ಆರ್ಟ್ ಪಾಠ ಮಾಡುವ ಚಿತ್ರಕಲಾವಿದೆ ಸೌರಭ ಕೂಡ ಇದಕ್ಕೆ ಹೊರತಾಗಿಲ್ಲ; ಬಿಡಿಸುತ್ತಿರುವ ರೇಖೆಯನ್ನ, ತುಂಬುತ್ತಿರುವ ಬಣ್ಣವನ್ನ ಯಾವ ಕೋನದಲ್ಲಿ ಮಕ್ಕಳಿಗೆ ತೋರಿಸೋದು ಆನ್‌ಲೈನ್‌ ತರಗತೀಲಿ? ಫೋನ್ನಿಂದ ಆಚೆಬದಿಯ ಕ್ಯಾಮೆರಾ ಆನ್ ಮಾಡಿ ತೋರಿಸಿದರೂ ಸಾಧ್ಯವಾಗ್ತಿಲ್ಲ, ಲ್ಯಾಪ್‌ಟಾಪ್‌ನ ಕ್ಯಾಮೆರಾ ಫೋಕಸ್ ಮಾಡೋದು ಹೇಗೆ ಕೆಳಗಿರುವ ಕ್ಯಾನ್ವಾಸಿನ ಮೇಲೆ?

ಇನ್ನು ನೇಸರ ಕೂಡ ಲಾಕ್‌ಡೌನ್‌ನಿಂದ ಬಳಲಿ ಬೆಂಡಾಗಿದ್ದಾನೆ. ಅವನಿಗೆ ಕಾಲೇಜಿನ ಆನ್‌ಲೈನ್‌ ಕ್ಲಾಸು, ನಂತರ ಓದು ಎಲ್ಲ ಮುಗಿದ ಮೇಲೆ ಕೊಂಚ ಓಟಿಟಿಯಲ್ಲಿನ ಡಾಕ್ಯುಸೀರೀಸ್ ನೋಡೋಣವೆಂದರೆ, ಕ್ಲಾಸಿಗೆ ಕೂತ ಅದೇ ಭಂಗಿಯಲ್ಲೇ ಕೂತು, ಲ್ಯಾಪ್‌ಟಾಪ್‌ ನೋಡುತ್ತಾ ಬೆನ್ನುನೋವು ಶುರುವಾಗಿದೆ. ಗೇಮಿಂಗ್ ಅನುಭವ ಕೂಡ ಅಷ್ಟಕ್ಕಷ್ಟೇ.

ಇವರಿಗೆಲ್ಲಾ ವರದಾನದಂತೆ ಬಂದಿದೆ, ಬಹುರೂಪಿ ಲ್ಯಾಪ್‌ಟಾಪ್. ಈ ನವೀನ ಉತ್ಪನ್ನದ ಹೆಸರೇ ‘ಮೈಕ್ರೋಸಾಫ್ಟ್ ಸರ್ಫೇಸ್ ಸ್ಟುಡಿಯೋ’! ಇದು ಉತ್ಪನ್ನವಲ್ಲ, ವಿಶಿಷ್ಟ ಅನುಭವದ ರಂಗಮಂಚ! ಎಲ್ಲರ ಅನುಕೂಲಕ್ಕೆ ತಕ್ಕ ಹಾಗೆ ಬಾಗುವ, ಬದಲಾಗುವ ಲ್ಯಾಪ್‌ಟಾಪ್‌ ಇದು. ಈ ಮೈಕ್ರೋಸಾಫ್ಟ್ ಸರ್ಫೇಸ್ ಸ್ಟುಡಿಯೋದಲ್ಲಿ ನೀವು ಯಾವ ಕೋನದಲ್ಲಿ ಬೇಕಾದರೂ ಲ್ಯಾಪ್‌ಟಾಪ್‌ನ ಪರದೆಯನ್ನು ಮಡಚಬಹುದು, ಬಗ್ಗಿಸಬಹುದು, ಓರೆಯಾಗಿ ತೆಗೆದಿಟ್ಟು ನಿಮ್ಮ ಕೆಲಸಗಳಿಗೆ ಸಹಾಯಕವಾಗಿ ಬಳಸಿಕೊಳ್ಳಬಹುದು. ಬಾಗಿಲುಗಳನ್ನು ಸರಾಗವಾಗಿ ತೆಗೆಯಲು, ಹಾಕಲು ಸಾಧ್ಯವಾಗುವುದು ಅವುಗಳ ಮತ್ತು ಗೋಡೆಗಳ ನಡುವಿನ ಕೀಲಿನ ಸಹಾಯದಿಂದ ತಾನೇ? ನಮ್ಮ ಕೈಕಾಲುಗಳನ್ನು ಸರಾಗವಾಗಿ ಮಡಚಿ, ಚಾಚಿ ಮಾಡೋಕೆ ಕೂಡ ಕೀಲು ಕಾರಣ. ಲ್ಯಾಪ್‌ಟಾಪನ್ನು ಮಡಚಿ, ತೆಗೆಯಲು ಕೂಡ ಈಗಾಗಲೇ ಪುಟ್ಟ ಎರಡು ಕೀಲುಗಳು ಇದ್ದವು; ಆದರೆ ಅವುಗಳಲ್ಲಿ ಅಪಾರ ಸುಧಾರಣೆ ತರಲಾಗಿದ್ದು, ಅವು ಕೇವಲ ಒಂದೇ ಬಗೆಯಲ್ಲಿ ಅಲ್ಲದೇ ಅನೇಕ ಕೋನಗಳಲ್ಲಿ ಲ್ಯಾಪ್‌ಟಾಪ್ ಪರದೆಯನ್ನು ತಿರುಗಿಸಿ, ಮಲಗಿಸಿ, ತೆಗೆದು, ಮಡಚಿ ಮಾಡಲು ಅನುವು ಮಾಡಿಕೊಡುತ್ತದೆ. ದಶಕಗಳ ಸಂಶೋಧನೆಗಳ ಭಾಗವಾಗಿ ತಯಾರಾದ ನಮ್ಯತೆಯ ಪ್ರತಿರೂಪವಾದ ಕೀಲನ್ನು ಈ ಸಾಧನದಲ್ಲೂ ಬಳಸಲಾಗಿದ್ದು, ಅದರ ಸಹಾಯದಿಂದಲೇ ಯಾವ ಕೋನಕ್ಕೆ ಬೇಕಾದರೂ ಪರದೆಯನ್ನು ತಿರುಗಿಸಬಹುದಾಗಿದೆ.

ಸರ್ಫೇಸ್ ಬುಕ್‌ನ ಮುಂದುವರೆದ ತಲೆಮಾರು ಎನಿಸುವ ಈ ಸಾಧನದಲ್ಲಿ ಪ್ರಮುಖ ಬದಲಾವಣೆ ಕಾಣುತ್ತಿರುವುದು ಡಿಸ್‌ಪ್ಲೇ ಪರದೆಯಲ್ಲಿ ಮತ್ತು ಕೀಲುಗಳಲ್ಲಿ. ಮೇಜಿನ ಮೇಲೆ ಇಡಬಹುದಾದ ಫೋಟೋಫ್ರೇಮುಗಳಲ್ಲಿ ಹಿಂದಕ್ಕೊಂದು ಪುಟ್ಟ ಮರದ ತುಂಡು ಇರೋದಿಲ್ವೇ? ಅದು ನಮಗೆ ಫೋಟೋಫ್ರೇಮನ್ನು ಹೇಗೆ ಬೇಕಾದರೂ ನಿಲ್ಲಿಸಲು ಸಹಾಯಕ. ಹಾಗೇ ಮೈಕ್ರೋಸಾಫ್ಟ್ ಸರ್ಫೇಸ್ ಸ್ಟುಡಿಯೋದ ಹಿಂಜ್ ಅಥವಾ ಕೀಲುಗಳು ಪರದೆಗೆ ಹೊಸ ನಮ್ಯತೆ ಕೊಟ್ಟಿದ್ದು, ಗೇಮಿಂಗ್, ಡಿಜಿಟಲ್ ಆರ್ಟ್‌ನಂತಹ ಹಲವಾರು ಅನುಭವಗಳಿಗೆ ಹೇಳಿಮಾಡಿಸಿದಂತಿದೆ. ಇಲ್ಲಿ ಬಳಸಲಾಗಿರುವ, ವಿವಿಧ ಕೋನಗಳಿಂದ ನೋಡಲು ಸಾಧ್ಯವಾಗುವಂತಹ ಸುಧಾರಿತ ಗುಣಮಟ್ಟದ ಪರದೆ ಕೂಡ ಇದಕ್ಕೆ ಪ್ರಮುಖ ಕಾರಣ.

ಇಲ್ಲಿ ಮತ್ತೊಂದು ಪ್ರಮುಖ ಅಡ್ವಾಂಟೇಜ್ ಇದೆ. ನಿಮಗೆ ಕೀಲಿಮಣೆ ಬೇಡವೆನಿಸಿದರೆ, ಆ ಕ್ಷಣವೇ ಪರದೆಯನ್ನು ಕೀಬೋರ್ಡಿನಿಂದ ಬಿಚ್ಚಿಕೊಂಡು ಬೇರೆ ಮಾಡಬಹುದು. ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾದ ಆ ಪರದೆಯನ್ನೇ, ಟ್ಯಾಬ್‌ನಂತೆ ಟಚ್‌ಸ್ಕ್ರೀನ್ ಮೋಡಲ್ಲಿ ಬಳಸಬಹುದು. ಇಲ್ಲಿ ನಿಮಗೆ ಮೂರು ಬಗೆಯ ಸಾಧ್ಯತೆಗಳು ಲಭ್ಯ – ಲ್ಯಾಪ್‌ಟಾಪ್, ಸ್ಟೇಜ್ ಮತ್ತು ಸ್ಟುಡಿಯೋ! ನಿಮ್ಮ ಅನುಕೂಲಕ್ಕೆ, ನಿಮ್ಮ ಅವಶ್ಯಕತೆಗೆ ತಕ್ಕ ಹಾಗೆ, ಒಂದು ಮೋಡ್‌ನಿಂದ ಮತ್ತೊಂದಕ್ಕೆ ಕ್ಷಣ ಮಾತ್ರದಲ್ಲಿ ಶಿಫ್ಟ್ ಆಗಬಹುದು. ಜೊತೆಗೆ, ದಿಜಿಟಲ್ ಇಂಕಿಂಗ್‌ನ ಆಸಕ್ತಿ ಇದ್ದರೆ, ‘ಸರ್ಫೇಸ್ ಸ್ಲಿಮ್ ಪೆನ್ 2’ ಕೂಡ ಲಭ್ಯವಿದ್ದು, ನಿಮ್ಮ ಕೈಬರಹವನ್ನು ಪರದೆಯ ಮೇಲೆ ಯಥಾವತ್ತಾಗಿ ಮೂಡಿಸಬಹುದು.

ಈಗಾಗಲೇ ಲಭ್ಯವಿರುವ ಸರ್ಫೇಸ್ ಬುಕ್‌ನಂತಹ ಸಾಧನಗಳಂತೆ ಎನಿಸಿದರೂ, ಮೈಕ್ರೋಸಾಫ್ಟ್ ಸರ್ಫೇಸ್ ಸ್ಟುಡಿಯೋ ಹೊಚ್ಚಹೊಸ ತಂತ್ರಜ್ಞಾನವನ್ನು ಒಳಗೊಂಡ, ಸುಧಾರಿತ ಅನುಭವಗಳನ್ನು ಕೊಡಮಾಡುವ ವಿಶಿಷ್ಟ ಆಲ್ ಇನ್ ಒನ್ ಪ್ಯಾಕೇಜ್. ಇಂಟೆಲ್‌ನ ಕ್ವಾಡ್ಕೋರ್ 11ನೆಯ ಜೆನ್ ಕೋರ್ ಐ5 ಅಥವಾ ಕೋರ್ ಐ7 ಪ್ರೋಸೆಸರ್‌ಗಳನ್ನು ಬಳಸಲಾಗಿದ್ದು, ಐರಿಸ್ ಎಕ್ಸ್ಇ ಗ್ರಾಫಿಕ್ಸ್ ಅಥವಾ ನ್ವಿಡಿಯ ಆರ್ಟಿಎಕ್ಸ್ 3050 ಟಿಐ ಜಿಪಿಯುವನ್ನು ಒಳಗೊಂಡಿರುತ್ತದೆ. 16ಜಿಬಿಯಿಂದ 32ಜಿಬಿಯವರೆಗಿನ ರ್‍ಯಾಮ್‌ ಆಯ್ಕೆಗಳು ಲಭ್ಯವಿದ್ದು, ‘2ಟಿಬಿ’ವರೆಗಿನ ಹೆಚ್ಚಿನ ಸ್ಟೋರೇಜ್ ಸಿಗುತ್ತದೆ. ಇಷ್ಟೆಲ್ಲಾ ಸುಧಾರಿತ ತಂತ್ರಜ್ಞಾನದ ಕೂಸಾಗಿರುವ ಈ ಬಹುರೂಪಿ ಲ್ಯಾಪ್‌ಟಾಪ್ ನಿಮ್ಮ ಮಡಿಲು ಸೇರಬೇಕಾದರೆ, ಈಗಾಗಲೇ ಪ್ರೀ–ಆರ್ಡರ್ ಸೌಲಭ್ಯ ಕೂಡ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು