ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ಗೆ ಗೂಗಲ್ ಕ್ಲೌಡ್ ಬಲ: ಗ್ಯಾಲಕ್ಸಿ S24ರಲ್ಲಿ ವಿನೂತನ AI ಅನುಭವ

Published 18 ಜನವರಿ 2024, 10:14 IST
Last Updated 18 ಜನವರಿ 2024, 10:14 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಕ್ಲೌಡ್‌ನ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ- ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಗೂಗಲ್ ಕ್ಲೌಡ್ ಕೈಜೋಡಿಸಿವೆ.

ಕ್ಯಾಲಿಫೋರ್ನಿಯಾದ ಸ್ಯಾನ್‌ಯೋಸೆಯಲ್ಲಿ ಗುರುವಾರ ನಡೆದ 'ಗ್ಯಾಲಕ್ಸಿ ಅನ್‌ಪ್ಯಾಕ್ಡ್' ಸಮಾರಂಭದಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್-24 ಸರಣಿಯ ಸ್ಮಾರ್ಟ್‌ಫೋನ್‌ಗಳಿಂದಲೇ ಈ ವಿನೂತನ ತಂತ್ರಜ್ಞಾನ ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್ ಸಾಧನಗಳಲ್ಲಿ ಕ್ಲೌಡ್ ಮೂಲಕ ವರ್ಟೆಕ್ಸ್ ಎಐಯಲ್ಲಿ ಗೂಗಲ್‌ನ ಜೆಮಿನಿ ಪ್ರೊ (Gemini Pro) ಹಾಗೂ ಇಮೇಜೆನ್ 2 (Imagen 2) ತಂತ್ರಜ್ಞಾನಗಳನ್ನು ಬಳಸುವ ನಿಟ್ಟಿನಲ್ಲಿ ಗೂಗಲ್ ಕ್ಲೌಡ್‌ನ ಮೊದಲ ಪಾಲುದಾರ ಸಂಸ್ಥೆ ಸ್ಯಾಮ್‌ಸಂಗ್ ಆಗಿದ್ದು, ಈಗ ಘೋಷಣೆಯಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಕಾರ್ಪೊರೇಟ್ ಇವಿಪಿ ಜಾಂಗ್ಯುನ್ ಯೂನ್ ಅವರು ಘೋಷಿಸಿದರು.

ಪಠ್ಯ, ಕೋಡ್, ಚಿತ್ರಗಳು ಮತ್ತು ವಿಡಿಯೊಗಳ ಸಹಿತವಾಗಿ ವೈವಿಧ್ಯಮಯ ದತ್ತಾಂಶಗಳನ್ನು ಜೆಮಿನಿ ತಂತ್ರಾಂಶವು ಅರ್ಥಮಾಡಿಕೊಂಡು, ಕೃತಕ ಬುದ್ಧಿಮತ್ತೆಯ ಮೂಲಕ ಮಾಹಿತಿಯನ್ನು ಸಂಸ್ಕರಿಸುತ್ತದೆ. ಸ್ಯಾಮ್‌ಸಂಗ್ ಸಾಧನಗಳಲ್ಲಿ ಲಭ್ಯವಿರುವ ನೋಟ್ಸ್, ವಾಯ್ಸ್ ರೆಕಾರ್ಡರ್, ಕೀಬೋರ್ಡ್ ಮುಂತಾದ ಕಿರುತಂತ್ರಾಂಶಗಳೊಂದಿಗೆ ಬೆರೆತು ಹೊಸ ಸಾಧ್ಯತೆಗಳಿಗೆ ಅವಕಾಶ ಮಾಡಿಕೊಡಲಿದೆ. ಜೆಮಿನಿ ಪ್ರೊ ಹಾಗೂ ವರ್ಟೆಕ್ಸ್ ಎಐ ತಂತ್ರಾಂಶಗಳು ಸ್ಯಾಮ್‌ಸಂಗ್‌ಗೆ ಮಾಹಿತಿಯ ಸುರಕ್ಷತೆ, ಗೋಪ್ಯತೆ ಮತ್ತಿತರ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.

ಪಠ್ಯದಿಂದ ಚಿತ್ರಕ್ಕೆ ಪರಿವರ್ತಿಸುವ ಗೂಗಲ್‌ನ ಅತ್ಯಾಧುನಿಕ ತಂತ್ರಾಂಶವಾಗಿರುವ ಇಮೇಜೆನ್ 2ರ ಪ್ರಯೋಜನವು ಸ್ಯಾಮ್‌ಸಂಗ್ ಎಸ್24 ಬಳಕೆದಾರರಿಗೆ ತಕ್ಷಣಕ್ಕೆ ಲಭ್ಯವಾಗಲಿದೆ. ವರ್ಟೆಕ್ಸ್ ಎಐಯಲ್ಲಿ ಇಮೇಜೆನ್ 2 ಬಳಸಿ, ಸರಳವಾಗಿ ಮತ್ತು ಚಿತ್ರಗಳನ್ನು ನಮಗೆ ಬೇಕಾದಂತೆ ಎಡಿಟ್ ಮಾಡಬಹುದಾಗಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ ಸಹಕರಿಸುತ್ತದೆ. ಗ್ಯಾಲಕ್ಸಿ ಎಸ್24ರ ಗ್ಯಾಲರಿ ಅಪ್ಲಿಕೇಶನ್‌ನಲ್ಲಿರುವ ಜನರೇಟಿವ್ ಎಡಿಟ್ ಎಂಬುದನ್ನು ಬಳಸಿ ಈ ವೈಶಿಷ್ಟ್ಯದ ಪ್ರಯೋಜನ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್ - ಗೂಗಲ್ ನಡುವಿನ ಪಾಲುದಾರಿಕೆಯ ಅನುಸಾರ, ಅತ್ಯಂತ ಸಂಕೀರ್ಣ ಕಾರ್ಯಗಳನ್ನು ಸುಲಭವಾಗಿಸುವ ಗೂಗಲ್‌ನ ಅತಿದೊಡ್ಡ ಮತ್ತು ಅತ್ಯಂತ ಸಮರ್ಥ ಮಾಡೆಲ್ ಆಗಿರುವ ಜೆಮಿನಿ ಅಲ್ಟ್ರಾ ತಂತ್ರಾಂಶವನ್ನು ಪರೀಕ್ಷಿಸುವ ಅವಕಾಶವೂ ಸ್ಯಾಮ್‌ಸಂಗ್‌ಗೆ ದೊರೆತಿದೆ.

ಸ್ಯಾಮ್‌ಸಂಗ್ ಜೊತೆಗೆ ಸೇರಿಕೊಂಡು ಕೋಟ್ಯಂತರ ಮಂದಿಯ ಸಂಪರ್ಕ ಮತ್ತು ಸಂವಹನ ವಿಧಾನಗಳನ್ನು ಬಲಪಡಿಸುವ ಅರ್ಥಪೂರ್ಣ ಮೊಬೈಲ್ ಫೋನ್ ಅನುಭವವನ್ನು ಒದಗಿಸುವಲ್ಲಿ ಜನರೇಟಿವ್ ಎಐ ಮೂಲಕ ಸಾಕಷ್ಟು ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ಗೂಗಲ್ ಕ್ಲೌಡ್‌ನ ಸಿಇಒ ಥಾಮಸ್ ಕುರಿಯನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT