ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಗಾಳಿ, ತೇವಾಂಶ, ತಾಪಮಾನ ನಿಯಂತ್ರಣಕ್ಕೆ ನೆರವಾಗುವ ಶಾರ್ಪ್ ಏರ್ ಪ್ಯೂರಿಫಯರ್

Last Updated 6 ಮಾರ್ಚ್ 2021, 14:27 IST
ಅಕ್ಷರ ಗಾತ್ರ

ಮನುಷ್ಯನಿಗೆ ಅನ್ನ, ಆಹಾರದ ಸ್ವಚ್ಛತೆ ಎಷ್ಟು ಮುಖ್ಯವೋ, ಉಸಿರಾಡುವ ಗಾಳಿಯೂ ಅಷ್ಟೇ ಸ್ವಚ್ಛವಾಗಿರುವುದು ಅತಿ ಮುಖ್ಯ ಎಂಬುದು ಇತ್ತೀಚಿನ ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳ ಹೆಚ್ಚಳದಿಂದಾಗಿ ನಿಧಾನವಾಗಿಯಾದರೂ ಅರಿವಿಗೆ ಬರುತ್ತಿದೆ.

ಆಸ್ತಮಾ, ಅಲರ್ಜಿ ಮುಂತಾದವುಗಳಿಗೆ ಕಾರಣವಾಗುವ ಹೊರಾಂಗಣದ ಗಾಳಿಯ ಶುದ್ಧತೆ ನಮ್ಮ ಕೈಯಲ್ಲಿರುವುದಿಲ್ಲ. ಆದರೆ ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸಲು ಸಾಕಷ್ಟು ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಅವುಗಳಲ್ಲೊಂದು ಶಾರ್ಪ್ ಕಂಪನಿಯ ಕ್ಯೂನೆಟ್- ಝೆನ್‌ಸೇಶನಲ್ (Sharp QNET Zensational Air Purifier).

ಮನೆಯೊಳಗೆ ಧೂಳು, ರಾಸಾಯನಿಕಗಳು, ಹೊಗೆ, ವೈರಸ್, ಕಾರ್ಪೆಟ್ ಧೂಳು, ಸಾಕುಪ್ರಾಣಿಗಳ ರೋಮ, ತಿಗಣೆ ಮಾತ್ರವಲ್ಲದೆ ಪೀಠೋಪಕರಣಗಳ ಪೈಂಟ್ ವಾಸನೆ, ಗೋಡೆಯ ಬಣ್ಣದ ವಾಸನೆ - ಇವುಗಳು ಕೂಡ ಶುದ್ಧ ಗಾಳಿಗೆ ತಡೆಯಾಗಬಹುದು. ನಗರ ಪ್ರದೇಶದ ಕೆಲವು ಚಿಕ್ಕ ಮನೆಗಳಲ್ಲಿ ಸರಿಯಾದ ಗಾಳಿ-ಬೆಳಕು ಕೂಡ ಇರುವುದಿಲ್ಲ. ಈಗಂತೂ ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆಯಿರುವ ಸಂದರ್ಭದಲ್ಲಿ ಉದ್ಯೋಗಸ್ಥರು ಕೂಡ ಮನೆಯೊಳಗೇ ಹೆಚ್ಚಿನ ಕಾಲ ಇರುತ್ತಾರೆ. ಬೇಸಿಗೆಯಲ್ಲಿ ಬಿಸಿ ಗಾಳಿ, ವಿಷಾಂಶಯುಕ್ತ ಗಾಳಿ, ಚಳಿಗಾಲ, ಮಳೆಗಾಲದಲ್ಲಿ ವೈರಸ್, ಫಂಗಸ್‌ಗಳ ಕಾಟವಿರಬಹುದು. ಅಸ್ತಮಾ, ಅಲರ್ಜಿ, ಶ್ವಾಸಕೋಶದ ಸಮಸ್ಯೆಗಳೂ ಸೇರಿದಂತೆ ವೈರಸ್ ಹರಡುವ ಸಾಂಕ್ರಾಮಿಕ ಕಾಯಿಲೆಗಳಿಗೂ ಮನೆಯೇ ಆಶ್ರಯತಾಣವಾಗಬಹುದು.

ವಿವಿಧ ಮೋಡ್‌ಗಳೊಂದಿಗೆ ಬಟನ್‌ಗಳು
ವಿವಿಧ ಮೋಡ್‌ಗಳೊಂದಿಗೆ ಬಟನ್‌ಗಳು

ಈ ನಿಟ್ಟಿನಲ್ಲಿ ಮನೆಯೊಳಗೆ ಏರ್ ಪ್ಯೂರಿಫಯರ್‌ಗಳು ಉಪಯುಕ್ತವಾಗುತ್ತವೆ. ಏರ್ ಪ್ಯೂರಿಫಯರ್‌ಗಳು ಸಂಪೂರ್ಣ ರಕ್ಷಣೆ ನೀಡಲಾರವಾದರೂ, ಶೇ.50ರಷ್ಟು ಮಾಲಿನ್ಯವನ್ನು ತಗ್ಗಿಸಿ, ಶ್ವಾಸಕೋಶದ ಆರೋಗ್ಯಕ್ಕೆ ಅನುಕೂಲ ಒದಗಿಸಬಲ್ಲವು. ಈ ನಿಟ್ಟಿನಲ್ಲಿ, ಪ್ರಜಾವಾಣಿಗೆ ರಿವ್ಯೂಗೆ ಬಂದಿರುವ ಶಾರ್ಪ್ ಕ್ಯೂನೆಟ್ ಝೆನ್‌ಸೇಶನಲ್ ಎಂಬ ಏರ್ ಪ್ಯೂರಿಫಯರ್ ಹೇಗಿದೆ? ತಿಳಿಯೋಣ.

ವಿನ್ಯಾಸ

ರಿವ್ಯೂಗೆ ಬಂದಿರುವ KC-G60M-W ಎಂಬ ಮಾದರಿಯ ಏರ್ ಪ್ಯೂರಿಫಯರ್, ಗಾಳಿಯ ಶುದ್ಧೀಕರಣವಷ್ಟೇ ಅಲ್ಲದೆ, ತಾಪಮಾನ ನಿಯಂತ್ರಣ, ತೇವಾಂಶದ ನಿಯಂತ್ರಣ ಸೇರಿದಂತೆ ಬಹುಮಖೀ ಕೆಲಸಗಳನ್ನು ಮಾಡಬಲ್ಲುದು. ಇತರ ಪ್ಯೂರಿಫಯರ್‌ಗಳಂತೆ ತೀರಾ ಚಿಕ್ಕದಾಗಿಲ್ಲ. ಸ್ವಲ್ಪ ದೊಡ್ಡ ಗಾತ್ರದಲ್ಲಿ ನೋಡಲು ಆಕರ್ಷಕವಾಗಿದೆ. ಗಾತ್ರದಿಂದಾಗಿ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯವೂ ಹೆಚ್ಚು ಅಂದುಕೊಳ್ಳಬಹುದು. ಇದರಲ್ಲಿರುವ ಎಲ್‌ಇಡಿ ಇಂಡಿಕೇಟರ್‌ಗಳು ಸುಂದರವಾಗಿದ್ದು, ಎರಡು ಹ್ಯಾಂಡಲ್‌ಗಳ ಮೂಲಕ ಬೇಕಾದಲ್ಲಿಗೆ ಒಯ್ಯಬಹುದು. ಮನೆಯೊಳಗೆ ಅತ್ತಿತ್ತ ಸರಿಸುವಂತೆ ಅನುಕೂಲವಾಗಲು ಕಾಸ್ಟರ್‌ಗಳೆಂಬ 4 ಪುಟ್ಟ ಗಾಲಿಗಳಿವೆ. ಇದನ್ನು ಲಾಕ್ ಮಾಡಲೂಬಹುದು. ಆಪರೇಶನ್ ಪ್ಯಾನೆಲ್‌ನಲ್ಲಿ ಪ್ರೆಸ್ ಬಟನ್‌ಗಳಿವೆ. ಇದರಲ್ಲಿ ಆನ್/ಆಫ್ ಬಟನ್ ಹಾಗೂ ವಿವಿಧ ಮೋಡ್‌ಗಳ ಬಟನ್‌ಗಳಿವೆ. ಹಿಂಭಾಗದಿಂದ ಅಶುದ್ಧ ಗಾಳಿಯನ್ನು ತೆಗೆದುಕೊಂಡು ಮುಂಭಾಗ ಮತ್ತು ಮೇಲ್ಭಾಗದಿಂದ ಶುದ್ಧ ಗಾಳಿಯನ್ನು ವಾತಾವರಣಕ್ಕೆ ಬಿಡುವ ಕೆಲಸ ಈ ಪ್ಯೂರಿಫಯರ್‌ನದ್ದು.

ಗಾಳಿಯನ್ನು ಶುದ್ಧ ಮಾಡುವುದು ಮತ್ತು ತೇವಾಂಶಭರಿತವಾಗಿಡುವುದಷ್ಟೇ ಅಲ್ಲದೆ, ದುರ್ವಾಸನೆಯನ್ನು ನಿವಾರಿಸಿ, ಒಳಾಂಗಣದ ಉಷ್ಣತೆಯನ್ನು ನಿಯಂತ್ರಣದಲ್ಲಿಡುವ ಕೆಲಸವನ್ನೂ ಮಾಡುತ್ತದೆ ಈ ಶಾರ್ಪ್ ಕ್ಯೂನೆಟ್ ಏರ್ ಪ್ಯೂರಿಫಯರ್. ಸುಮಾರು 10.5 ಕಿಲೋ ತೂಕವಿದ್ದು, 370 x 660 x 293 ಮಿಮೀ ಸುತ್ತಳತೆ ಹೊಂದಿದೆ.

ಸೆನ್ಸರ್‌ಗಳು

ಇದರಲ್ಲಿ 2.5 ಮೈಕ್ರಾನ್‌ಗಿಂತಲೂ ಚಿಕ್ಕದಾದ ಧೂಳಿನ ಕಣಗಳನ್ನು ಗುರುತಿಸುವ ಸೆನ್ಸರ್ ಹಾಗೂ ಹೊಗೆ, ಕೀಟಗಳ ತ್ಯಾಜ್ಯಗಳು, ಧೂಳು ಮುಂತಾದ ಮನೆಯೊಳಗಿನ ಕಲ್ಮಶಗಳನ್ನು ಪತ್ತೆ ಮಾಡುವ ಸೆನ್ಸರ್ ಇದೆ. ಅದೇ ರೀತಿ, ತಂಬಾಕು, ಕಾಸ್ಮೆಟಿಕ್, ಆಲ್ಕೋಹಾಲ್, ಸ್ಪ್ರೇ ಮತ್ತಿತರ ವಾಸನೆಗಳನ್ನು ಪತ್ತೆ ಮಾಡುವ ಸೆನ್ಸರ್, ತಾಪಮಾನದ ಸೆನ್ಸರ್, ತೇವಾಂಶದ ಸೆನ್ಸರ್, ಬೆಳಕಿನ ಸೆನ್ಸರ್ ಮತ್ತು ಚಲನೆಯನ್ನು ಪತ್ತೆ ಮಾಡುವ ಸೆನ್ಸರ್ ಕೂಡ ಇರುವುದು ವಿಶೇಷ. ಇವುಗಳನ್ನು ಸೂಚಿಸಲು ಎಲ್‌ಇಡಿ ದೀಪಗಳೂ ಇವೆ.

ಇಂಟಲಿಜೆಂಟ್ ಮೋಡ್ ಮೂಲಕ ಈ ಎಲ್ಲ ಸೆನ್ಸರ್‌ಗಳು ನಿಖರವಾಗಿ ಕೆಲಸ ಮಾಡುತ್ತಾ, ಮನೆಯ ವಾತಾವರಣವನ್ನು ಸ್ವಯಂಚಾಲಿತವಾಗಿ ಶುದ್ಧವಾಗಿರಿಸುವಂತೆ ಮಾಡಬಹುದು.

ತಾಪಮಾನ ಮತ್ತು ತೇವಾಂಶಗಳನ್ನು ಗ್ರಹಿಸಿ, ಒಳಗಿರುವ ನೀರಿನ ಟ್ಯಾಂಕ್‌ನಿಂದ ನೀರನ್ನು ಸೆಳೆದುಕೊಂಡು, ಮನೆಯೊಳಗಿನ ವಾತಾವರಣವೂ ಆರ್ದ್ರವಾಗಿರುವಂತೆ ಈ ಪ್ಯೂರಿಫಯರ್ ನೋಡಿಕೊಳ್ಳುತ್ತದೆ. ಇದರ ಕಾರ್ಯನಿರ್ವಹಣಾ ವ್ಯಾಪ್ತಿಯು ಸುಮಾರು 530 ಚದರಡಿ.

ರಾತ್ರಿ ವೇಳೆ ದೀಪವಾರಿಸಿದಾಗ, ಇದರ ಡಿಸ್‌ಪ್ಲೇಯಲ್ಲಿರುವ ಎಲ್ಲ ಎಲ್‌ಇಡಿ ದೀಪಗಳೂ ಆಫ್ ಆಗುವ ಮೂಲಕ ನಿದ್ದೆಗೆ ಸಹಕರಿಸುತ್ತವೆ. ಅದೇ ರೀತಿ, ಗಾಳಿಯ ಸಂಚಾರದ ಧ್ವನಿಯೂ ಕಡಿಮೆಯಾಗುತ್ತದೆ.

ಒಳಗಿನ ವಾತಾವರಣ ಶುದ್ಧವಾಗಿದೆಯೇ ಎಂಬುದು ಕೂಡ ನೀಲಿ ಬೆಳಕಿನ ಮೂಲಕ ತಿಳಿಯುತ್ತದೆ. ನೀಲಿ ಬಣ್ಣವಿದ್ದರೆ ಶುದ್ಧವಿದೆ ಎಂದೂ, ದೀಪವು ಕೆಂಪಿನತ್ತ ತಿರುಗಿದರೆ ಅಶುದ್ಧವಾಗುತ್ತಿದೆಯೆಂದೂ ತಿಳಿಯಬಹುದಾಗಿದೆ.

ಇದರ ಡಿಸ್‌ಪ್ಲೇಯಲ್ಲಿ ಸಾಕಷ್ಟು ಟಚ್ ಬಟನ್‌ಗಳಿರುವುದರಿಂದ ಮತ್ತು ಮಕ್ಕಳ ಕೈಗೆ ಸುಲಭವಾಗಿ ಎಟಕುವುದರಿಂದ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು, ಚೈಲ್ಡ್ ಲಾಕ್ ವ್ಯವಸ್ಥೆಯೂ ಇದೆ.

ಫಿಲ್ಟರ್‌ಗಳು

ಇದರಲ್ಲಿ ಮೂರು ಫಿಲ್ಟರ್‌ಗಳಿವೆ. ಪಾಂಡಾ ಹೆಸರಿನ ಫಿಲ್ಟರ್ ಒಳಭಾಗದಲ್ಲಿದ್ದು, ರಾಸಾಯನಿಕ ಅಂಶಗಳ ವಾಸನೆಯನ್ನು ನಿವಾರಿಸುತ್ತದೆ. ಹೆಪಾ ಹೆಸರಿನ ಫಿಲ್ಟರ್, ಮಲಿನಕಾರಕ ಕಣಗಳನ್ನು ನಿವಾರಿಸಿದರೆ, 10 ಮೈಕ್ರಾನ್‌ನಷ್ಟು ಗಾತ್ರದ ಧೂಳಿನ ಕಣಗಳನ್ನು ಮೊದಲು ಕಾಣಿಸುವ ಪ್ರಿ-ಫಿಲ್ಟರ್ ತಡೆಯುತ್ತದೆ. ಈ ಮೂರು ಫಿಲ್ಟರ್‌ಗಳಿಂದ ವಾತಾವರಣದ ಗಾಳಿಯು ಒಳಗೆ ಬಂದು, ಶುದ್ಧ ಗಾಳಿಯು ಏರ್ ಔಟ್‌ಲೆಟ್ ಮೂಲಕ ಕೊಠಡಿಯನ್ನು ವ್ಯಾಪಿಸುತ್ತದೆ. ಈ ಫಿಲ್ಟರ್ ಸರಿಸುಮಾರು 10 ವರ್ಷ ಬಾಳಿಕೆ ಬರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.

ಪ್ಲಾಸ್ಮಾಕ್ಲಸ್ಟರ್ ಅಯಾನ್ ತಂತ್ರಜ್ಞಾನ

ಶಾರ್ಪ್ ಕ್ಯೂನೆಟ್‌ನ ವಿಶೇಷತೆಯೆಂದರೆ, ಹೊರಗಿನ ವಾತಾವರಣದಲ್ಲಿರುವ ಅಯಾನ್‌ಗಳಂತೆಯೇ ಒಳಗೂ ಶುದ್ಧಗೊಳಿಸಬಲ್ಲ 'ಪ್ಲಾಸ್ಮಾಕ್ಲಸ್ಟರ್' ತಂತ್ರಜ್ಞಾನದ ಬಳಕೆ. ಇದು ಸೋಂಕಿಗೆ ಕಾರಣವಾಗಬಲ್ಲ ಕೀಟಾಣುಗಳು, ವಸ್ತುಗಳು, ರಾಸಾಯನಿಕ ಹೊಗೆ, ವಿಷಾಂಶಯುಕ್ತ ಗಾಳಿಯ ಮಲಿನಕಾರಕ ಅಂಶಗಳನ್ನು ನಿವಾರಿಸುತ್ತದೆ.

ಕಂಪನಿ ಹೇಳಿಕೊಳ್ಳುವಂತೆ ಈ ಪ್ಲಾಸ್ಮಾಕ್ಲಸ್ಟರ್ ಅಯಾನುಗಳು ಗಾಳಿಯಲ್ಲಿ ಮತ್ತು ಮೇಲ್ಮೈಗಳಲ್ಲಿರಬಹುದಾದ 29 ರೀತಿಯ ಕೀಟಾಣುಗಳನ್ನು ನಾಶಪಡಿಸಬಲ್ಲುದು. ಇದು ಪಾಸಿಟಿವ್ ಮತ್ತು ನೆಗೆಟಿವ್ ಅಯಾನುಗಳನ್ನು ವಾತಾವರಣಕ್ಕೆ ಹೊರಬಿಡುವ ಜಪಾನಿ ತಂತ್ರಜ್ಞಾನವಾಗಿದೆ.

ಉಡುಪು, ಸೋಫಾ ಮತ್ತು ಕರ್ಟನ್‌ಗಳನ್ನು ಶುದ್ಧಗೊಳಿಸುವುದಕ್ಕೂ ಈ ಪ್ಲಾಸ್ಮಾ ಕ್ಲಸ್ಟರ್ ಅಯಾನ್‌ಗಳನ್ನು ಬಳಸಬಹುದು. ಬಟನ್ ಒತ್ತಿದಾಗ ಜೋರಾಗಿ ಗಾಳಿ ಬೀಸುತ್ತಾ ಅದು ದುರ್ವಾಸನೆ, ಕೀಟಾಣು, ಧೂಳಿನ ಕಣ ಮತ್ತಿತರ ವಸ್ತುಗಳನ್ನು ನಿವಾರಿಸುತ್ತದೆ.

ತೇವಾಂಶ ನಿಯಂತ್ರಣ ತಂತ್ರಜ್ಞಾನವು ಚರ್ಮ ಹಾಗೂ ಗಂಟಲಿನ ಒಣಗುವಿಕೆಯನ್ನೂ ತಗ್ಗಿಸಬಲ್ಲುದು. ತೇವಾಂಶ ಜಾಸ್ತಿಯಾಗಿ ಕೊಠಡಿಯಲ್ಲಿ ಸಾಕಷ್ಟು ಬೆಳಕು ಇರುವಾಗ ಪ್ಲಾಸ್ಮಾ ಕ್ಲಸ್ಟರ್ ಅಯಾನ್‌ಗಳು ಜೋರಾದ ಗಾಳಿಯೊಂದಿಗೆ ಹೊರಬರುತ್ತವೆ. ಉಳಿದ ಸಂದರ್ಭಗಳಲ್ಲಿ ನಿಶ್ಶಬ್ಧವಾಗಿ ಕೆಲಸ ಮಾಡುತ್ತದೆ.

ಇದರಲ್ಲಿ ಹಲವು ಮೋಡ್‌ಗಳಿದ್ದು, ಇಂಟೆಲಿಜೆಂಟ್ ಮೋಡ್ ಬಳಸಿದಲ್ಲಿ ಎಲ್ಲವೂ ಸ್ವಯಂಚಾಲಿತವಾಗಿ ನಿಯಂತ್ರಣವಾಗುತ್ತದೆ. ಒಳ ವಾತಾವರಣದ ಮಾಲಿನ್ಯ, ತಾಪಮಾನ, ತೇವಾಂಶ, ದುರ್ವಾಸನೆ ಮುಂತಾದವನ್ನು ಸೆನ್ಸರ್ ಮೂಲಕ ಗ್ರಹಿಸುವ ಈ ಮೋಡ್, ಮನೆಯೊಳಗಿನ ವಾತಾವರಣವನ್ನು ಶುದ್ಧವಾಗಿಸುವ ನಿಟ್ಟಿನಲ್ಲಿ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಸಾಮಾನ್ಯ ಧೂಳು, ವಾಸನೆ, ತಾಪಮಾನ, ತೇವಾಂಶ, ಬೆಳಕು, ಚಲನೆ ಹಾಗೂ ಪಿ.ಎಂ.2.5ಗಿಂತಲೂ ಚಿಕ್ಕದಾದ ಕಲ್ಮಶಾಂಶಗಳನ್ನು ಈ ಏರ್ ಪ್ಯೂರಿಫಯರ್ ಸ್ವಯಂಚಾಲಿತವಾಗಿ ಪತ್ತೆ ಮಾಡಿ, ಅದನ್ನು ಶುದ್ಧೀಕರಿಸಲು ತೊಡಗುತ್ತದೆ.

ಇದರ ಮತ್ತೊಂದು ವಿಶೇಷವೆಂದರೆ, ಮನೆಯೊಳಗೆ ಜನರಿದ್ದಾರೋ ಎಂಬುದನ್ನು ಒಳಗಿರುವ ಚಲನೆಯ ಸೆನ್ಸರ್ ಪತ್ತೆ ಮಾಡುತ್ತದೆ ಮತ್ತು ಬೆಳಕಿನ ಸೆನ್ಸರ್‌ನ ಸಂಜ್ಞೆಗೆ ಪೂರಕವಾಗಿ ಕೆಲಸ ಮಾಡುತ್ತಾ, ವಿದ್ಯುತ್ ಉಳಿತಾಯದ ಮೋಡ್‌ಗೆ ಸ್ವಯಂಚಾಲಿತವಾಗಿ ಬದಲಾಗುತ್ತದೆ.

ತೇವಾಂಶ ಹೆಚ್ಚಿಸುವ ತಂತ್ರಜ್ಞಾನವು ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚು ಉಪಯೋಗ. ಆಗ ವಾತಾವರಣ ಶುಷ್ಕವಾಗಿರುತ್ತದೆ. ತೇವಾಂಶ ಹೆಚ್ಚಿಸುವ ಮೂಲಕ ಗಾಳಿಯಲ್ಲಿರುವ ಕೀಟಾಣುಗಳು ಒದ್ದೆಯಾಗಿ ತೂಕ ಹೆಚ್ಚಿಸಿಕೊಂಡು ನೆಲಕ್ಕೆ ಬೀಳಬಲ್ಲವು. ಅಸ್ತಮಾ, ಅಲರ್ಜಿ, ಸೀನುವಿಕೆ ಮತ್ತು ಕೆಮ್ಮು ಇರುವವರಿಗೆ ಇದರಿಂದ ಹೆಚ್ಚು ಅನುಕೂಲ.

ಇದು ಶಬ್ದರಹಿತ ಸಾಧನವೆನ್ನಬಹುದು. ಕೆಲವೊಮ್ಮೆ ಇದು ಚಾಲನೆಯಲ್ಲಿರುವುದೂ ತಿಳಿಯದಷ್ಟು ನಿಶ್ಶಬ್ಧ. ಆದರೆ, ಬಾಗಿಲು ತೆಗೆದಾಗ ಅಥವಾ ಹೆಚ್ಚು ಮಾಲಿನ್ಯಕಾರಕ ವಸ್ತುಗಳು ಬಂದಾಗ, ಗಾಳಿಯ ವೇಗ ಜೋರಾಗುವ ಮೂಲಕ ಶಬ್ಧವೂ ಹೆಚ್ಚಾಗುತ್ತದೆ.

ಮುಚ್ಚಿದ ಬಾಗಿಲುಗಳಿರುವ ನಗರ ಪ್ರದೇಶಗಳಲ್ಲಿ ಶುದ್ಧ ಗಾಳಿಯಾಡುವುದಕ್ಕೆ ಅನುಕೂಲ ಮಾಡಿಕೊಡುವ ಮತ್ತು ಆರೋಗ್ಯ ರಕ್ಷಣೆಗೆ ಪೂರಕವಾಗಿರುವ ಈ ಶಾರ್ಪ್ ಕ್ಯೂನೆಟ್ ಝೆನ್‌ಸೇಶನಲ್ ಏರ್ ಪ್ಯೂರಿಫಯರ್ ಬೆಲೆ ರೂ.97,620 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT