ಭಾನುವಾರ, ಜೂನ್ 26, 2022
29 °C

ಸೋನಿ ಸ್ಮಾರ್ಟ್‌ಫೋನ್ ಎಕ್ಸ್‌ಪೀರಿಯಾ 1 II: 4ಕೆ ಸ್ಕ್ರೀನ್, ಬೆಲೆ ಲಕ್ಷದ ಸಮೀಪ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸೋನಿ ಎಕ್ಸ್‌ಪೀರಿಯಾ 1 II

ಬೆಂಗಳೂರು: ಗುಣಮಟ್ಟದ ಪ್ರೊಫೆಷನಲ್‌ ಕ್ಯಾಮೆರಾ ಹಾಗೂ ವಿಡಿಯೊ ಲೆನ್ಸ್‌ಗಳಿಂದ ಈವರೆಗೂ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಜಪಾನ್‌ ಮೂಲದ ಸೋನಿ, ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಕೊಂಚ ಹಿಂದೆ ಉಳಿದಿರುವಂತೆ ತೋರುತ್ತದೆ. ಇದೀಗ ಸೋನಿ ಎಕ್ಸ್‌ಪೀರಿಯಾ1 II (ಒನ್‌, ಟು) ಮೂಲಕ ಹೊಸ ಸಾಮರ್ಥ್ಯದೊಂದಿದೆ ಹೊರ ಬಂದಿದೆ. 

ಬಹುತೇಕ ತನ್ನ ಎಲ್ಲ ಮಾದರಿಯ ಫೋನ್‌ಗಳಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಎಂದು ಹೇಳಿಕೊಳ್ಳುವ ಸೋನಿ, ನೀಡಿರುವ ಆಯ್ಕೆಗಳು ಕೈಗೆಟುವ ಬೆಲೆಯ ಫೋನ್‌ಗಳಿಗಿಂತ ಹಿಂದಿ ಉಳಿದಿವೆ. ಇದರೊಂದಿಗೆ ನಿಗದಿಯಾಗಿರುವ ಫೋನ್‌ ದರ ಸಹ ಅತಿ ಹೆಚ್ಚು. ಪ್ರಸ್ತುತ ಭಾರತದ ಹೊರಗಿನ ರಾಷ್ಟ್ರಗಳಲ್ಲಿ ಅಧಿಕೃತವಾಗಿ ಪ್ರಕಟಗೊಂಡಿರುವ ಎಕ್ಸ್‌ಪೀರಿಯಾ 1 II ಫೋನ್‌ಗೆ 1,199.99 ಡಾಲರ್‌ (ಸುಮಾರು ₹91,000) ನಿಗದಿಯಾಗಿದೆ. ಮುಂಚಿತವಾಗಿಯೇ ಬುಕ್ ಮಾಡಲು ಜೂನ್‌ 1ರಿಂದ ಅವಕಾಶವಿದ್ದು, ಮೊದಲೇ ಫೋನ್‌ ಕಾಯ್ದಿರಿಸುವವರಿಗೆ ಜುಲೈ 28ರ ಹೊತ್ತಿಗೆ ಸೋನಿ ನಾಯ್ಸ್‌–ಕ್ಯಾನ್ಸೆಲಿಂಗ್‌ WF-1000XM3 ವೈರ್‌ಲೆಸ್‌ ಇಯರ್‌ಬಡ್‌ ಕೊಡುಗೆಯಾಗಿ ಸಿಗಲಿದೆ. ಅದರ ಬೆಲೆ ಸುಮಾರು 230 ಡಾಲರ್‌  (ಸುಮಾರು ₹17,500).

ಹೊಸ ಸ್ಮಾರ್ಟ್‌ಫೋನ್‌ 6.5 ಇಂಚು ಅಮೊಲೆಡ್‌ ಡಿಸ್‌ಪ್ಲೇ ಜೊತೆಗೆ 4ಕೆ ರೆಸಲ್ಯೂಷನ್‌ (1644 x 3840) ಸ್ಕ್ರೀನ್‌ ಹೊಂದಿದೆ. ಇತ್ತೀಚಿನ ದುಬಾರಿ ಬೆಲೆಯ ಫೋನ್‌ಗಳು 2ಕೆ (ಕ್ಯುಎಚ್‌ಡಿ) ಸ್ಕ್ರೀನ್‌ಗಳನ್ನು ಹೊಂದಿರುತ್ತವೆ. ಆದರೆ, ಸೋನಿ 4ಕೆ ಗುಣಮಟ್ಟದ ಸ್ಕ್ರೀನ್ ಅಳವಡಿಸುವ ಮೂಲಕ ಮತ್ತೆ ಸದ್ದು ಮಾಡಿದೆ. ಮುಂಭಾಗದಲ್ಲಿ ಸ್ಟೀರಿಯೊ ಸ್ಪೀಕರ್‌ಗಳಿವೆ ಹಾಗೂ ಹೆಡ್‌ಫೋನ್‌ ಸಂಪರ್ಕಿಸಲು 3.5 ಎಂಎಂ ಪೋರ್ಟ್ ನೀಡಲಾಗಿದೆ. 

ಪ್ರಸ್ತುತ ಅತ್ಯಂತ ಸಮರ್ಥ ಪ್ರೊಸೆಸರ್‌ ಎಂದು ವಿಶ್ಲೇಷಿಸಲಾಗುತ್ತಿರುವ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 865 ಇದೆ. ಇದರೊಂದಿಗೆ 8ಜಿಬಿ ರ‍್ಯಾಮ್‌ ಹಾಗೂ 256ಜಿಬಿ ಸಂಗ್ರಹ ಸಾಮರ್ಥ್ಯವಿದ್ದು, ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 1ಟಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳುವ ಅವಕಾಶವಿದೆ. 

ಫೋಟೊಗ್ರಫಿಗೆ ಪೂರಕವಾದ ಲೆನ್ಸ್‌ಗಳನ್ನು ಅಳವಡಿಸಲಾಗಿದೆ. ಹಿಂಬದಿಯಲ್ಲಿ 12ಎಂಪಿ ಪ್ರೈಮರಿ ಕ್ಯಾಮೆರಾ, 12ಎಂಪಿ ಟೆಲಿಫೋಟೊ ಕ್ಯಾಮೆರಾ (3x ಆಪ್ಟಿಕಲ್‌ ಜೂಮ್‌ ಸಹಿತ) ಹಾಗೂ 12ಎಂಪಿ ಅಲ್ಟ್ರಾ–ವೈಡ್‌ ಕ್ಯಾಮೆರಾ ಹಾಗೂ ಟೈಮ್‌ ಆಫ್‌ ಫ್ಲೈಟ್‌ ಸೆನ್ಸರ್‌ ನೀಡಲಾಗಿದೆ. ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಇದೆ. ಪ್ರೊಫೆಷನಲ್‌ ಕ್ಯಾಮೆರಾಗಳಲ್ಲಿ ಹೊಂದಿರುವ ಬಹಳಷ್ಟು ಆಯ್ಕೆಗಳನ್ನು ಅಳವಡಿಸಲಾಗಿದೆ. 
 
ಎಕ್ಸ್‌ಪೀರಿಯಾ 1 II ವೈರ್‌ಲೆಸ್‌ ಚಾರ್ಜಿಂಗ್‌ ಆಯ್ಕೆಯನ್ನೂ ಹೊಂದಿದೆ. 4,000 ಎಂಎಎಚ್‌ ಬ್ಯಾಟರಿ ಫಾಸ್ಟ್‌ ಚಾರ್ಜಿಂಗ್‌ಗೂ ಪೂರಕವಾಗಿದ್ದು, 30 ನಿಮಿಷಗಳಲ್ಲಿ ಶೇ 50ರಷ್ಟು ಚಾರ್ಜ್‌ ಆಗುತ್ತದೆ. ಆ್ಯಂಡ್ರಾಯ್ಡ್‌ 10 ಒಎಸ್‌, ಡಾಲ್ಬಿ ಆಟಮ್ಸ್‌ ಸೌಂಡ್‌ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ. 

ಎಕ್ಸ್‌ಪೀರಿಯಾ 1 II ಗುಣಲಕ್ಷಣಗಳು: 

ಡಿಸ್‌ಪ್ಲೇ: 6.5 ಇಂಚು ಅಮೊಲೆಡ್‌, 4ಕೆ ರೆಸಲ್ಯೂಷನ್‌ 
ಕ್ಯಾಮೆರಾ: ಹಿಂಬದಿಯಲ್ಲಿ 12ಎಂಪಿ+12ಎಂಪಿ (ಟೆಲಿ)+12ಎಂಪಿ (ಅಲ್ಟ್ರಾ–ವೈಡ್‌); ಸೆಲ್ಫಿಗಾಗಿ 8ಎಂಪಿ
ಪ್ರೊಸೆಸರ್‌:  ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 865
ಸಾಮರ್ಥ್ಯ: 8ಜಿಬಿ ರ್‍ಯಾಮ್‌ + 256ಜಿಬಿ ಸಂಗ್ರಹ
ಬ್ಯಾಟರಿ:  4,000 ಎಂಎಎಚ್‌ 
ಬೆಲೆ:  230 ಡಾಲರ್‌  (ಸುಮಾರು ₹17,500)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು