ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲೇ ಅತ್ಯಾಧುನಿಕ ಮತ್ತು ಫ್ಲ್ಯಾಗ್‌ಶಿಪ್ ಮಾದರಿಯ ವೈಶಿಷ್ಟ್ಯಗಳುಳ್ಳ ಗ್ಯಾಲಕ್ಸಿ ಎ73 ಫೋನ್, ಏ.11ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 8GB/256GB ಮಾದರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ73 ಫೋನ್ ಹೇಗಿದೆ? ಒಂದು ವಾರದ ಬಳಕೆಯಲ್ಲಿ ಕಂಡುಬಂದ ಅಂಶಗಳು ಇಲ್ಲಿವೆ.
ವಿನ್ಯಾಸ, ಡಿಸ್‌ಪ್ಲೇ
ಇದು ಸ್ಯಾಮ್‌ಸಂಗ್ ಎ ಸರಣಿಯ ಅತ್ಯಂತ ಸ್ಲಿಮ್ (7.6 ಮಿಮೀ ದಪ್ಪ) ಫೋನ್. ವಿಶೇಷತೆಯೆಂದರೆ, ಎ ಸರಣಿಯ ಉಳಿದ ಫೋನ್‌ಗಳಿಗೆ ಹೋಲಿಸಿದರೆ ಹಿಂಭಾಗದ ಕವಚದಲ್ಲಿರುವ ಕ್ಯಾಮೆರಾ ಸೆಟಪ್ ಅನ್ನು ಮತ್ತಷ್ಟು ಸ್ಲೀಕ್ ಮಾಡಲಾಗಿದೆ. ಪ್ಲಾಸ್ಟಿಕ್ (ಪಾಲಿಕಾರ್ಬೊನೇಟ್) ಯೂನಿಬಾಡಿ ಇದ್ದು, ಹಿಂಭಾಗದಲ್ಲಿ ಮ್ಯಾಟ್ ಫಿನಿಶ್ ಇರುವುದರಿಂದ ಬೆರಳಚ್ಚು ಮೂಡುವುದಿಲ್ಲ. ಬಿಲ್ಡ್ ಚೆನ್ನಾಗಿದ್ದು ಬಳಕೆಗೆ ಅನುಕೂಲಕರವಾಗಿದೆ ಮತ್ತು ಲೋಹದ ಚೌಕಟ್ಟಿನೊಂದಿಗೆ ಪ್ರೀಮಿಯಂ ನೋಟವನ್ನು ಹೊಂದಿದೆ. 6.7 ಇಂಚಿನ ಸ್ಕ್ರೀನ್, ಐಪಿ67 ಪ್ರಮಾಣೀಕೃತ ಜಲನಿರೋಧಕತೆ, ಧೂಳು ನಿರೋಧಕತೆ ಇದೆ. 120Hz ರಿಫ್ರೆಶ್ ರೇಟ್‌ನಿಂದಾಗಿ ಸ್ಕ್ರೀನ್‌ನಲ್ಲಿ ಸುಲಲಿತ ವೀಕ್ಷಣೆ ಸಾಧ್ಯವಾಗುತ್ತದೆ. FHD+ ಸೂಪರ್ AMOLED+ ಡಿಸ್‌ಪ್ಲೇ ಇದಕ್ಕೆ ಪೂರಕವಾಗಿದ್ದು, ಪ್ರೀಮಿಯಂ ವೈಶಿಷ್ಟ್ಯವು ಎದ್ದುಕಾಣುತ್ತದೆ. 108MP ಪ್ರಧಾನ ಕ್ಯಾಮೆರಾ ಇದರ ವಿಶೇಷತೆಗಳಲ್ಲಿ ಮುಖ್ಯವಾದುದು. ಹೊರಾಂಗಣದಲ್ಲಿ, ವಿಶೇಷವಾಗಿ ಬಿಸಿಲು ಹೆಚ್ಚಿರುವಾಗಲೂ ಸ್ಕ್ರೀನ್ ವೀಕ್ಷಣೆಯಲ್ಲಿ ಸಮಸ್ಯೆಯಾಗುವುದಿಲ್ಲ. ಸ್ಕ್ರೀನ್‌ಗೆ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯಿದ್ದು, ಗೀರುಗಳಾಗದಂತೆ ತಡೆಯುತ್ತದೆ. ಬಾಕ್ಸ್‌ನಲ್ಲಿ ಚಾರ್ಜರ್ ಇಲ್ಲ. ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಕೇಬಲ್ ಮಾತ್ರ ನೀಡಲಾಗಿದೆ.
ಕ್ಯಾಮೆರಾ
108 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ ಸೆನ್ಸರ್ ಗ್ಯಾಲಕ್ಸಿ ಎ73 5ಜಿ ಫೋನ್‌ನ ವಿಶೇಷತೆ. ಗ್ಯಾಲಕ್ಸಿ ಎ ಸರಣಿಯಲ್ಲೇ ಮೊದಲ ಬಾರಿಗೆ ಈ ಭರ್ಜರಿ ಲೆನ್ಸ್ ಅಳವಡಿಸಲಾಗಿದ್ದು, ಬೇಕಾದಾಗ ಮಾತ್ರ ಬಳಸುವ ಆಯ್ಕೆ ಸೆಟ್ಟಿಂಗ್ಸ್‌ನಲ್ಲಿ ಇದೆ. ಪ್ರಧಾನ ಸೆನ್ಸರ್ ಜೊತೆಗೆ 8MP ಅಲ್ಟ್ರಾವೈಡ್, 5MP ಮ್ಯಾಕ್ರೋ ಹಾಗೂ 5MP ಡೆಪ್ತ್ ಸೆನ್ಸರ್‌ಗಳಿವೆ. 108MP ಬಳಸಿ ತೆಗೆದ ಫೋಟೊಗಳು ಹೆಚ್ಚು ಸ್ಥಳಾವಕಾಶ ಬೇಡುವುದರಿಂದಾಗಿ, ಅತ್ಯಂತ ಸೂಕ್ಷ್ಮ ಡೀಟೇಲ್ ಇರುವ ಫೋಟೊಗಳು, ವಿಶೇಷವಾಗಿ ಮುದ್ರಣಕ್ಕೆ ಬೇಕಾಗಿದೆಯೆಂದಾದರೆ ಮಾತ್ರ ಬಳಸಬಹುದು. ಚಿತ್ರ ಮತ್ತು ವಿಡಿಯೊಗೆ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನಗಳನ್ನು (OIS ಹಾಗೂ VDIS) ಬಳಸಿರುವುದರಿಂದ ಸ್ಪಷ್ಟ ಚಿತ್ರ/ವಿಡಿಯೊ ಮೂಡಿಬರುತ್ತದೆ. 3X ಆಪ್ಟಿಕಲ್ ಝೂಮ್ ಹಾಗೂ 10X ಡಿಜಿಟಲ್ ಝೂಮ್ ಇದೆ. ನೈಟ್ ಮೋಡ್ ಮೂಲಕ ಮಂದ ಬೆಳಕಿನಲ್ಲಿ ಅತ್ಯುತ್ತಮ ಚಿತ್ರಗಳು ಸೆರೆಯಾಗುತ್ತವೆ.
32MP ಸೆಲ್ಫೀ ಕ್ಯಾಮೆರಾ ಇದ್ದು, ಇದರಲ್ಲಿ ಅಂತರಜಾಲ ಸಂಪರ್ಕವಿರುವಾಗ ಬಳಸಬಹುದಾದ ಫನ್ ಮೋಡ್, ಈಗಿನ ವಿಡಿಯೊ ಸ್ಟೇಟಸ್ ಜಮಾನಕ್ಕೆ ಅತ್ಯುಪಯುಕ್ತವಾಗಿದೆ. ನಮ್ಮದೇ ಚಿತ್ರಕ್ಕೆ ವಿನೋದಕ್ಕಾಗಿ ವೈವಿಧ್ಯಮಯ ಅಂಶಗಳನ್ನು ಸೇರಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಹುದಾಗಿದೆ. ಸೆಲ್ಫೀ ಚಿತ್ರದ ಹಿನ್ನೆಲೆಯನ್ನು ಬದಲಾಯಿಸುವ ಅಂತರ್ಗತ ಆಯ್ಕೆಯೂ ಇದರಲ್ಲಿದೆ.
ವಿಶೇಷತೆಗಳು
ಗ್ಯಾಲಕ್ಸಿ ಎ73 ಫೋನ್‌ನಲ್ಲಿ 'ಆಬ್ಜೆಕ್ಟ್ ಇರೇಸರ್' ಎಂಬ, ಫೋಟೋದಿಂದ ನಿರ್ದಿಷ್ಟ ವಸ್ತುವನ್ನು ಅಳಿಸಬಹುದಾದ ವೈಶಿಷ್ಟ್ಯವು ಗಮನ ಸೆಳೆಯುತ್ತದೆ. ಈಗಿನ ಸೆಲ್ಫೀ ಅಥವಾ ಸ್ಟೇಟಸ್ ಜಮಾನದಲ್ಲಿ, ಫೋಟೋ ತೆಗೆದು, ನಿರ್ದಿಷ್ಟ ವಸ್ತುಗಳನ್ನು ಅಳಿಸಿಹಾಕಿ (ಹಿನ್ನೆಲೆಗೆ ಯಾವುದೇ ತೊಡಕಾಗದಂತೆ) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವವರಿಗೆ ಅನುಕೂಲಕರ ಇದು. ಇನ್ನೊಂದು ವೈಶಿಷ್ಟ್ಯವೆಂದರೆ, 'ಫೋಟೋ ರೀಮಾಸ್ಟರ್'. ಹಳೆಯ ಫೋಟೋಗಳನ್ನು ಈ ಫೋನ್‌ನ ಗ್ಯಾಲರಿಯಲ್ಲಿ ಸೇರಿಸಿಕೊಂಡರೆ (ಫೈಲ್ ಟ್ರಾನ್ಸ್‌ಫರ್ ಮೂಲಕ), ಆ ಭಾವಚಿತ್ರಗಳಿಗೆ ವಿನೂತನ ಸ್ಪರ್ಶ ನೀಡಿ, ಹೊಸತನ ತುಂಬಬಹುದು. ಆರ್ಟಿಫಿಶಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಸಮರ್ಪಕ ಬಳಕೆಯಾಗಿದೆ ಇಲ್ಲಿ. ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್ ಸ್ಟೀರಿಯೋ ಧ್ವನಿ ಇದ್ದು, ಇಯರ್‌ಫೋನ್ ಮೂಲಕ ಸ್ಪಷ್ಟವಾಗಿ ಧ್ವನಿ ಆಲಿಸಬಹುದು.
ಇದಲ್ಲದೆ, ಚಲನೆ ಹಾಗೂ ಸನ್ನೆಗಳಿಗೆ ಸಂಬಂಧಿಸಿದ ಅತ್ಯಾಧುನಿಕ ವೈಶಿಷ್ಟ್ಯಗಳಾದ ಫೋನ್ ಎತ್ತಿದರೆ ಸ್ಕ್ರೀನ್ ಆನ್ ಆಗುವುದು, ಸ್ಕ್ರೀನ್ ಆನ್/ಆಫ್ ಮಾಡಲು ಎರಡು ಬಾರಿ ಟ್ಯಾಪ್ ಮಾಡುವುದು, ಸ್ಕ್ರೀನ್ ಮೇಲೆಯೇ ನೋಡುತ್ತಿರುವಾಗ ಸ್ವಯಂಚಾಲಿತವಾಗಿ ಲಾಕ್ ಆಗದೇ ಇರುವುದು, ಸ್ಕ್ರೀನ್ ಮೇಲೆ ಕೈಯಿಟ್ಟರೆ ರಿಂಗಿಂಗ್ ಸದ್ದು ಮೌನವಾಗುವುದು, ಅಂಗೈ ತೋರಿಸಿದರೆ ಸೆಲ್ಫೀ ಫೋಟೋ ಸೆರೆಹಿಡಿಯುವುದು... ಅತ್ಯಾಧುನಿಕ ವೈಶಿಷ್ಟ್ಯಗಳು ಬಳಕೆಯ ಅನುಕೂಲತೆಯನ್ನು ಹೆಚ್ಚಿಸಿವೆ.
ಕಾರ್ಯಾಚರಣೆ
ಆಂಡ್ರಾಯ್ಡ್ ಫೋನ್‌ಗಳು ಬಿಸಿಯಾಗುತ್ತವೆ ಎಂಬ ಅಪವಾದಕ್ಕೆ ಸ್ಪಂದಿಸಿರುವ ಸ್ಯಾಮ್‌ಸಂಗ್, ಸಾಧನವನ್ನು ಸ್ವಯಂಚಾಲಿತವಾಗಿ ತಣ್ಣಗಾಗಿಸುವ ಹೀಟ್ ಪೈಪ್ ಮತ್ತು ವೇಪರ್ ಚೇಂಬರ್ ವ್ಯವಸ್ಥೆಯನ್ನು ಗ್ಯಾಲಕ್ಸಿ ಎ73 ರಲ್ಲಿ ಅಳವಡಿಸಿದೆ. ಸ್ನ್ಯಾಪ್‌ಡ್ರಾಗನ್ 778G 5G ಪ್ರೊಸೆಸರ್, RAM ಪ್ಲಸ್ ವೈಶಿಷ್ಟ್ಯದ ಮೂಲಕ, ಅನಿವಾರ್ಯ ಸಂದರ್ಭದಲ್ಲಿ RAM ಅನ್ನು 2, 4 ಅಥವಾ 6 ಜಿಬಿಯಷ್ಟು ಹೆಚ್ಚಿಸುವ ವೈಶಿಷ್ಟ್ಯವು ಭಾರಿ ತೂಕದ ಗೇಮಿಂಗ್ ಅಥವಾ ವಿಡಿಯೊ ವೀಕ್ಷಣೆಯ ಸಂದರ್ಭದಲ್ಲಿ ಅನುಭವಕ್ಕೆ ಬರುತ್ತದೆ. ಆಂಡ್ರಾಯ್ಡ್ 12ರ ಆಧಾರಿತ ಒನ್ ಯುಐ 4.1 ಮೂಲಕ ಕೆಲಸ ಮಾಡುವ ಈ ಸಾಧನಕ್ಕೆ ನಾಲ್ಕು ವರ್ಷಗಳ ಕಾಲ ಕಾರ್ಯಾಚರಣಾ ತಂತ್ರಾಂಶ, ಐದು ವರ್ಷ ಸುರಕ್ಷಾ ತಂತ್ರಾಂಶದ ಅಪ್‌ಡೇಟ್ ನೀಡಲಾಗುವುದು ಎಂದು ಸ್ಯಾಮ್‌ಸಂಗ್ ಘೋಷಿಸಿದೆ. ಆದರೆ, ಕ್ಷಿಪ್ರವಾಗಿ ತಂತ್ರಜ್ಞಾನ ಬದಲಾಗುತ್ತಿರುವ ಈ ಕಾಲದಲ್ಲಿ ನಾಲ್ಕು ವರ್ಷದ ಬಳಿಕ ಲಭ್ಯವಾಗುವ ಹೊಸ ತಂತ್ರಾಂಶಕ್ಕೆ ಈಗಿರುವ ಯಂತ್ರಾಂಶವು ಬೆಂಬಲಿಸೀತೇ ಎಂಬುದು ಕಾದುನೋಡಬೇಕಾದ ವಿಚಾರ. ಎಂದಿನಂತೆಯೇ ಥರ್ಡ್ ಪಾರ್ಟಿ ಆ್ಯಪ್‌ಗಳು ಮೊದಲೇ ಇನ್‌ಸ್ಟಾಲ್ ಆಗಿ ಬರುವುದರಿಂದ ಮತ್ತು ಕೆಲವನ್ನು ಅನ್‌ಇನ್‌ಸ್ಟಾಲ್ ಮಾಡಲಾಗದೇ ಇರುವುದು ಕೆಲವರಿಗೆ ಇಷ್ಟವಾಗದಿರಬಹುದು.
5000mAh ಬ್ಯಾಟರಿ ಸಾಮಾನ್ಯ ಬಳಕೆಯಲ್ಲಿ ದಿನಪೂರ್ತಿ ಕೆಲಸ ಮಾಡಿಯೂ ಶೇ.30-40ರಷ್ಟು ಉಳಿದಿರುತ್ತದೆ. 25W ವೇಗದ ಚಾರ್ಜಿಂಗ್ ಬೆಂಬಲವಿದ್ದು, ಅದರಲ್ಲಿ ಒಂದು ಗಂಟೆಯ ಆಸುಪಾಸಿನಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. 8GB/128GB ಮೂಲ ಮಾದರಿಯ ಬೆಲೆ ₹41,999 ಹಾಗೂ 8GB/256GB ಮಾದರಿಗೆ ₹44999.
ಒಟ್ಟಾರೆ ಹೇಗಿದೆ?
ಅತ್ಯುತ್ತಮ ಸ್ಕ್ರೀನ್, ಭರ್ಜರಿ ಕ್ಯಾಮೆರಾ, ಸುಲಲಿತ ಕಾರ್ಯಾಚರಣೆ, ಅತ್ಯುತ್ತಮ ಬ್ಯಾಟರಿ ಚಾರ್ಜ್ - ಇವುಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ73 ಸ್ಮಾರ್ಟ್ ಫೋನ್ ಅನ್ನು ಅರ್ಥಮಾಡಿಕೊಳ್ಳುವ ಅಂಶಗಳು. ಮತ್ತು ಇದು ಗುಣಮಟ್ಟದಲ್ಲಿ ಎಸ್ ಸರಣಿ (ಉದಾ. ಗ್ಯಾಲಕ್ಸಿ ಎಸ್22) ಫೋನ್‌ಗೆ ಉತ್ತಮ ಪ್ರತಿಸ್ಫರ್ಧಿಯೂ ಹೌದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.