ಸೋಮವಾರ, ಸೆಪ್ಟೆಂಬರ್ 21, 2020
22 °C

iPhone SE 2020: ಐಫೋನ್ 11ರ ಸಾಮರ್ಥ್ಯವಿರುವ ಪುಟ್ಟ ಬಜೆಟ್ ಫೋನ್

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

iPhone SE 2020

ಐಫೋನ್ ಪ್ರತಿಷ್ಠೆಯ ವಿಷಯವೂ ಹೌದು, ಸುರಕ್ಷತೆಯ ಸಂಕೇತವೂ ಹೌದು. ಭಾರತದಂತಹಾ ಬೆಲೆ-ಸಂವೇದೀ ಮಾರುಕಟ್ಟೆಗಳಲ್ಲಿಯೂ ತನ್ನ ಛಾಪು ಮೂಡಿಸುವ ನಿಟ್ಟಿನಲ್ಲಿ ಐಫೋನ್ ಎಸ್ಇ (ಸ್ಪೆಶಲ್ ಎಡಿಶನ್) ಎಂಬ ಮಾದರಿಯನ್ನು ಆ್ಯಪಲ್ ಪರಿಚಯಿಸಿತ್ತು. ಪ್ರಜಾವಾಣಿಗೆ ರಿವ್ಯೂಗಾಗಿ ಬಂದಿರುವ iPhone SE 2020 ಮಾಡೆಲ್ ಹೇಗಿದೆ? ಮೂರು ವಾರ ಬಳಸಿ ನೋಡಿದಾಗ ಕಂಡುಬಂದ ಅಂಶಗಳು ಇಲ್ಲಿವೆ.

ವಿನ್ಯಾಸ
ಮೊದಲ ನೋಟ ಆಕರ್ಷಣೀಯವಾಗಿದ್ದು, ಸ್ಲಿಮ್ ಡಿಸೈನ್ ಮತ್ತು ಈಗಿನ ದೊಡ್ಡ ಸ್ಕ್ರೀನ್ ಫೋನ್‌ಗಳ ಯುಗದಲ್ಲಿ ಪುಟ್ಟ ಗಾತ್ರದ ಅಂದರೆ 4.7 ಸ್ಕ್ರೀನ್‌ನ ಈ ಸಾಧನ, ಹಗುರವೂ ಇದೆ. ಕ್ಯೂಟ್ ಫೋನ್ ಎನ್ನಬಹುದು. ಐಫೋನ್ 8ರಂತೆಯೇ ಗಾಜು ಮತ್ತು ಅಲ್ಯುಮೀನಿಯಂನ ಕವಚ ಇದಕ್ಕಿದ್ದು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. ರಿವ್ಯೂಗೆ ಬಂದಿರುವುದು ಬಿಳಿ ಬಣ್ಣದ, 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್. ಹಿಂಭಾಗದಲ್ಲಿ ಒಂದೇ ಕ್ಯಾಮೆರಾ ಇದ್ದು, ಎಡಭಾಗದಲ್ಲಿ ಎಂದಿನಂತೆ ಸೈಲೆಂಟ್ ಮಾಡಲು ಸ್ವಿಚ್ ಮತ್ತು ವಾಲ್ಯೂಮ್ ಬಟನ್‌ಗಳು, ಬಲಭಾಗದಲ್ಲಿ ಪವರ್ ಬಟನ್ ಮತ್ತು ಸಿಮ್ ಟ್ರೇ ಇದೆ. ಈಗಿನ ಬೆಝೆಲ್ (ಸ್ಕ್ರೀನ್‌ನ ಮೇಲೆ ಫೋಟೋ ಅಥವಾ ವಿಡಿಯೊ ಕಾಣಿಸದಿರುವ ಸುತ್ತಲಿನ ಅಂಚುಗಳು) ಇಲ್ಲದಿರುವ ಈ ಯುಗದಲ್ಲಿ ಐಫೋನ್ ಎಸ್ಇ ಮಾಡೆಲ್‌ನಲ್ಲಿ ಸ್ಕ್ರೀನ್‌ನ ಮೇಲೆ ಮತ್ತು ಕೆಳಭಾಗದಲ್ಲಿ ದಪ್ಪನೆಯ ಬೆಝೆಲ್ ಇರುವುದು ಅಚ್ಚರಿ ಮೂಡಿಸುತ್ತದೆ.

ಹೇಗಿದೆ?
ನೋಡಲು ಐಫೋನ್ 8ನ್ನು ಹೋಲುವ, 148 ಗ್ರಾಂ ತೂಕ ಹಾಗೂ 7.33 ಮಿಮೀ ದಪ್ಪ ಇರುವ ಫೋನ್ ಇದು. ಗಾಜಿನ ಕವಚವು ಜಾರುವುದರಿಂದ ಇದಕ್ಕೆ ಕವರ್ ಬಳಸುವುದು ವಿಹಿತ. ಬಿಲ್ಡ್ ಚೆನ್ನಾಗಿದ್ದು, ಜಲನಿರೋಧಕತೆಯೂ ಇದರ ಪ್ಲಸ್ ಪಾಯಿಂಟ್. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವುದು ಇದರ ಒಳಗಿರುವ ಶಕ್ತಿಶಾಲಿ ಪ್ರೊಸೆಸರ್. ದುಬಾರಿಯಾಗಿರುವ ಐಫೋನ್ 11 ಮತ್ತು 11 ಪ್ರೋ ಮಾದರಿಯಲ್ಲಿರುವಂತಹಾ ಅತ್ಯಾಧುನಿಕ ಎ13 ಬಯೋನಿಕ್ ಪ್ರೊಸೆಸರ್ ಇದರಲ್ಲಿದೆ. ಇದು ಅತ್ಯಾಧುನಿಕವಾದ ಮತ್ತು ಫ್ಲ್ಯಾಗ್‌ಶಿಪ್ ಪ್ರೊಸೆಸರ್ ಆಗಿರುವುದರಿಂದಲೇ ವೇಗದ ಗೇಮ್ಸ್, ವೇಗದ ಬ್ರೌಸಿಂಗ್ ಹಾಗೂ ಮೆಷಿನ್ ಲರ್ನಿಂಗ್ ತಂತ್ರಜ್ಞಾನಕ್ಕೆ ಪೂರಕವಾಗಿದೆ. ಈ ಚಿಪ್ ಕಾರಣದಿಂದಾಗಿ, 3ಜಿಬಿ RAM ಇದ್ದರೂ ಆಂಡ್ರಾಯ್ಡ್‌ನ 6GB RAM ಇರುವ ಸಾಧನದಷ್ಟೇ ವೇಗವಾಗಿ, ಸುಲಲಿತವಾಗಿ ಫೋನ್ ಕೆಲಸ ಮಾಡುತ್ತದೆಂಬುದು ಅನುಭವಕ್ಕೆ ಬಂದ ವಿಚಾರ.

ಪ್ರೊಸೆಸರ್ ವೇಗದ ಚಾರ್ಜಿಂಗ್ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು ಅತ್ಯಾಧುನಿಕ ವೈಶಿಷ್ಟ್ಯಗಳಲ್ಲೊಂದು. ಆದರೆ, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನಿಷ್ಠ 3000 mAh ಬ್ಯಾಟರಿ ಇರುತ್ತದೆ, ಐಫೋನ್ ಎಸ್‌ಇಯಲ್ಲಿ ಕೇವಲ 1821 mAh ಸಾಮರ್ಥ್ಯದ ಬ್ಯಾಟರಿ ಇದೆ. ಆಂಡ್ರಾಯ್ಡ್ ಬಳಸಿದವರಿಗೆ ಇದು ಕೊರತೆ ಅನ್ನಿಸಿದರೂ, ಅಷ್ಟೇ ಬ್ಯಾಟರಿ ಸಾಮರ್ಥ್ಯದಲ್ಲಿ ದಿನಪೂರ್ತಿಯ ಕೆಲಸವೂ ನಡೆಯುತ್ತದೆ ಎಂಬುದು ಅದರ ಹಾರ್ಡ್‌ವೇರ್ ಗುಣಮಟ್ಟಕ್ಕೆ ಸಾಕ್ಷಿ. ಐಫೋನ್ 11 ಹಾಗೂ ಐಫೋನ್ 11 ಪ್ರೋ ಮಾದರಿಗಳಲ್ಲಿ ಅನುಕ್ರಮವಾಗಿ 3046 ಹಾಗೂ 3969 mAh ಸಾಮರ್ಥ್ಯದ ಬ್ಯಾಟರಿ ಇದೆ. ಇದಕ್ಕಾಗಿ ಅವುಗಳ ತೂಕವೂ ಹೆಚ್ಚು, ಬೆಲೆಯೂ ಹೆಚ್ಚು!

OLED ಸ್ಕ್ರೀನ್‌ನಷ್ಟು ಸ್ಪಷ್ಟತೆಯಿಲ್ಲದಿದ್ದರೂ ಈ ಫೋನ್‌ನಲ್ಲಿನ LCD ಡಿಸ್‌ಪ್ಲೇ ಚೆನ್ನಾಗಿದೆ. ಪ್ರಖರ ಬಿಸಿಲಿನಲ್ಲಿ ಫೋನ್‌ನಲ್ಲಿ ಏನಾದರೂ ಮೆಸೇಜ್ ನೋಡುವುದಿದ್ದರೆ OLED ಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಹಿನ್ನಡೆಯೇ. ಅದೇ ರೀತಿ, ಆಂಡ್ರಾಯ್ಡ್ ಬಳಸಿದವರಿಗೆ ನೋಟಿಫಿಕೇಶನ್ ಟ್ರೇಯಲ್ಲಿ ಗ್ರೂಪಿಂಗ್ ಆಯ್ಕೆ ಇಲ್ಲದಿರುವುದು ತೊಡಕಾಗಬಹುದು.

ಟಚ್ ಐಡಿಯಂತೂ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಐಫೋನ್ 5ಎಸ್ ಬಳಸಿ ಅನುಭವದ ಆಧಾರದಲ್ಲಿ ಹೇಳುವುದಾದರೆ, ಐಫೋನ್ ಎಸ್ಇ ಟಚ್ ಸೆನ್ಸರ್ ಗರಿಷ್ಠ ಸಾಮರ್ಥ್ಯ ಹೊಂದಿದೆ ಮತ್ತು ಸುಲಲಿತವಾಗಿ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಫಿಂಗರ್ ಪ್ರಿಂಟ್ ಸೆನ್ಸರ್ ವ್ಯವಸ್ಥೆಯು ಆನ್‌ಲೈನ್ ಖರೀದಿಗೆ, ಸೈನ್ ಇನ್‌ಗೆ ಪೂರಕವಾಗಿದೆ. ಹೋಂ ಬಟನ್ ಅಂತೂ ಲೀಲಾಜಾಲವಾಗಿ ಕೆಲಸ ಮಾಡುತ್ತದೆ.

[ಐಫೋನ್ SE 2020 ಮೂಲಕ ತೆಗೆದ ಸಮೀಪದ ಚಿತ್ರ]

ಕ್ಯಾಮೆರಾ
ಆಂಡ್ರಾಯ್ಡ್‌ನಲ್ಲಿ ನಾಲ್ಕು ಕ್ಯಾಮೆರಾ ಸೆನ್ಸರ್‌ಗಳಿರುವ ಕಾಲವಿದು. ಅಂಥದ್ದರಲ್ಲಿ ಒಂದೇ ಕ್ಯಾಮೆರಾ ಸೆನ್ಸರ್, ಅದೂ ಈ ಬೆಲೆಯಲ್ಲಿ? ಹೀಗಂದುಕೊಂಡರೂ, ನಾಲ್ಕು ಸೆನ್ಸರ್‌ಗಳ ಕ್ಯಾಮೆರಾದಷ್ಟು ಸ್ಫುಟವಲ್ಲದಿದ್ದರೂ, ಇದರಲ್ಲಿ ಸೂಕ್ತ ಬೆಳಕಿನಲ್ಲಿ ತೆಗೆದ ಚಿತ್ರಗಳಂತೂ ಅತ್ಯುತ್ತಮ ಸ್ಪಷ್ಟತೆಯನ್ನು ತೋರಿಸಿವೆ. ವಿಡಿಯೊ ಸ್ಪಷ್ಟತೆಯೂ (ವಿಶೇಷವಾಗಿ 4ಕೆ) ಚೆನ್ನಾಗಿಯೇ ಇದೆ. ಕ್ಯಾಮೆರಾದಲ್ಲಿರುವ ಸ್ಲೋ-ಮೋಶನ್, ಟೈಮ್ ಲ್ಯಾಪ್ಸ್ ಹಾಗೂ ಪೋರ್ಟ್ರೇಟ್ ಮೋಡ್‌ಗಳಿಂದ ಉತ್ತಮ ಚಿತ್ರ ಸೆರೆಹಿಡಿಯುವುದು ಸಾಧ್ಯವಾಯಿತು. ಫೋಟೋದಲ್ಲಿರುವ ಲೈವ್ ಎಂಬ ವೈಶಿಷ್ಟ್ಯ ಬಳಸಿದರೆ, ಯಾವುದೇ ಚಲನಶೀಲ ವಸ್ತುವಿನ ಫೋಟೋ ತೆಗೆಯಲು ಅನುಕೂಲ. ಹತ್ತು ಶಾಟ್‌ಗಳು ಕೆಲವೇ ಸೆಕೆಂಡುಗಳ ಅಂತರದಲ್ಲಿ ಸೆರೆಯಾಗುತ್ತಿದ್ದು, ಅತ್ಯುತ್ತಮವಾದುದನ್ನು ಆಯ್ಕೆ ಮಾಡಬಹುದು. ಇದುವರೆಗಿಲ್ಲದ ಹೊಸ ವೈಶಿಷ್ಟ್ಯವೆಂದರೆ, ಪೋರ್ಟ್ರೇಟ್ ಮೋಡ್. ಆದರೆ ಕ್ಯಾಮೆರಾದಲ್ಲಿ ನೈಟ್ ಮೋಡ್ ಆಯ್ಕೆ ಇಲ್ಲ.

ಇನ್ನೊಂದು ವಿಶೇಷವೆಂದರೆ, ಫೋಟೋ ಮೋಡ್‌ನಲ್ಲೇ ಕ್ಯಾಮೆರಾ ಬಟನ್ ಒತ್ತಿಹಿಡಿದುಕೊಂಡರೆ, ವಿಡಿಯೊ ರೆಕಾರ್ಡ್ ಅಲ್ಲಿಂದಲೇ ಮಾಡಬಹುದು (ವಿಡಿಯೊ ಬಟನ್ ಕ್ಲಿಕ್ ಮಾಡಬೇಕಾಗಿಲ್ಲ).

ಕನ್ನಡದ ಕೀಬೋರ್ಡ್
ಐಒಎಸ್ 12ರಿಂದಲೇ ಕನ್ನಡ ಕೀಬೋರ್ಡ್ ಅಳವಡಿಸಲಾಗಿದ್ದು, ಐಒಎಸ್ 13ರಲ್ಲಿಯೂ ಮತ್ತಷ್ಟು ಸುಧಾರಣೆಗಳೊಂದಿಗೆ ಕೀಬೋರ್ಡ್ ಇದೆ. ಅದರ ಇನ್‌ಸ್ಕ್ರಿಪ್ಟ್ ಮಾದರಿಯ ಕೀಲಿಮಣೆ ವಿನ್ಯಾಸವು ಹೊಸದಾಗಿ ಅಭ್ಯಾಸ ಮಾಡುವವರಿಗೆ ಸೂಕ್ತ. ಅದೇ ರೀತಿ, ಕನ್ನಡದ ವೆಬ್ ತಾಣಗಳನ್ನು ನೋಡುವಾಗ ಅಕ್ಷರದ ರೆಂಡರಿಂಗ್ ತುಂಬಾ ಸುಧಾರಿಸಿದ್ದು, ಸುಂದರವಾಗಿ ಕಾಣಿಸುತ್ತಿದೆ.

[ಐಫೋನ್ ಎಸ್ಇ 2020 ಮೂಲಕ ತೆಗೆದ ದೂರದ ಚಿತ್ರಗಳು]

ಸ್ಕ್ರೀನ್ ಟೈಮ್
ಸ್ಮಾರ್ಟ್ ಫೋನ್ ಬಳಕೆ ಅತಿಯಾಯಿತು ಅಂತಂದುಕೊಳ್ಳುವವರಿಗೆ, ಯಾವ ದಿನ ಎಷ್ಟು ಕಾಲ ಸ್ಕ್ರೀನ್ ನೋಡಿದಿರಿ, ಅದನ್ನು ಹೇಗೆ ನಿಯಂತ್ರಿಸುವುದು ಎಂದೆಲ್ಲ ಸೆಟ್ ಮಾಡಲು ಸ್ಕ್ರೀನ್ ಟೈಮ್ ಆ್ಯಪ್ ನೆರವಾಗುತ್ತದೆ.

ಬೆಲೆ ಮತ್ತು ಹೋಲಿಕೆ
ಬೆಲೆಯ ಬಗ್ಗೆ ಹೆಚ್ಚು ಸೂಕ್ಷ್ಮ ಮನಸ್ಥಿತಿ ಹೊಂದಿರುವ ಭಾರತ ಹಾಗೂ ಮತ್ತು ಇತರ ಮಾರುಕಟ್ಟೆಯನ್ನು ಗುರಿಯಾಗಿರಿಸಿ ಈ ಫೋನನ್ನು ಆ್ಯಪಲ್ ತಯಾರಿಸಿದೆ. ಐಫೋನ್ ಎಸ್ಇ 2020 ಮಾದರಿಯು ಮಾರುಕಟ್ಟೆಯಲ್ಲಿ ದೊರೆಯುವ ಹೊಸ ಫೋನ್‌ಗಳಲ್ಲಿ ಅತ್ಯಂತ ಕಡಿಮೆ (42,500ರಿಂದ ಆರಂಭ, ಡಿಸ್ಕೌಂಟ್ ಇದೆ) ಬೆಲೆಯದು ಎನ್ನಬಹುದಾದರೂ, ಹುಬ್ಬೇರಿಸುವುದಂತೂ ಸತ್ಯ. ರಿವ್ಯೂಗೆ ದೊರೆತ 256 ಜಿಬಿ ಸಾಧನದ ಬಾಕ್ಸ್ ಬೆಲೆ 58,300 ರೂ. ಇದೆ. ಆದರೆ, ಮುಂದಿನ ದಿನಗಳಲ್ಲಿ ಸಾಕಷ್ಟು ಸ್ಫರ್ಧೆಯೊಂದಿಗೆ, ಆ್ಯಪಲ್ ಕೂಡ ಭಾರತದಲ್ಲಿ ಅದೂ ಬೆಂಗಳೂರಿನಲ್ಲೇ ಹೊಸ ಐಫೋನ್ ಎಸ್ಇ ಜೋಡಣೆ ಆರಂಭಿಸುವುದರಿಂದ, ಬೆಲೆ ಮತ್ತಷ್ಟು ಕೈಗೆಟಕುವ ಸಾಧ್ಯತೆಗಳಿವೆ. ಪ್ರಸ್ತುತ ಆಮದಾಗುವ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ತೆರಿಗೆ, ಆಮದು ಸುಂಕವೂ ಹೆಚ್ಚಿದೆ. ಸ್ವಲ್ಪ ದಿನಗಳಲ್ಲಿ, ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಬೆಲೆ ಇಳಿಯುವ ಸಾಧ್ಯತೆಗಳಿವೆ. ಈಗಲೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಐಫೋನ್ 7 ಬೆಲೆ ಸುಮಾರು 30 ಸಾವಿರ ರೂ. ಇದೆ ಎಂಬುದು ಗಮನಿಸಬೇಕು. ಐಫೋನ್ ಎಕ್ಸ್ಆರ್ ಎಂಬ ಆಧುನಿಕ ತಂತ್ರಜ್ಞಾನವಿರುವ ಫೋನ್ ಬೆಲೆ ಸುಮಾರು 10 ಸಾವಿರ ರೂ. ಹೆಚ್ಚಿದೆ. ಇನ್ನು ಹತ್ತು ಸಾವಿರ ರೂ. ಆಸುಪಾಸಿನಲ್ಲೇ ಅತ್ಯಾಧುನಿಕ ತಂತ್ರಜ್ಞಾನಗಳೆಲ್ಲವನ್ನೂ ನೀಡುತ್ತಿರುವ, ದೊಡ್ಡ ಸ್ಕ್ರೀನ್‌ನ ಆಂಡ್ರಾಯ್ಡ್ ಫೋನ್‌ಗಳಿಗೆ ಐಫೋನ್ ಹೋಲಿಸಲಾಗದು. ವಿಶೇಷವಾಗಿ ಪ್ರತಿಷ್ಠಿತ ಬ್ರ್ಯಾಂಡ್ ಎಂಬ ಹೆಮ್ಮೆ ಹಾಗೂ ಸುರಕ್ಷತೆಯೇ ಪ್ರಧಾನ ಎಂದು ಪರಿಗಣಿಸುವವರಿಗೆ ಐಫೋನ್ ಅಚ್ಚುಮೆಚ್ಚು.

ಉಳಿದಂತೆ...

 • ಭಾರತೀಯ ಇಂಗ್ಲಿಷ್ ಉಚ್ಚಾರಣೆಯನ್ನು ಸಿರಿ ಎಂಬ ಸಹಾಯಕ ತಂತ್ರಾಂಶವು ಬೆಂಬಲಿಸುವುದರಿಂದ, ಆಂಡ್ರಾಯ್ಡ್‌ನಲ್ಲಿರುವ ಗೂಗಲ್ ಅಸಿಸ್ಟೆಂಟ್ ಮಾದರಿಯಲ್ಲಿ, ಫೋನ್ ಜೊತೆಗೆ ಸಂಭಾಷಣೆ ನಡೆಸಬಹುದು. ಸಿರಿ ತಂತ್ರಾಂಶವು ಮಾತನ್ನು ಸ್ಪಷ್ಟವಾಗಿ ಗುರುತಿಸುತ್ತದೆ.
 • ಸಂದೇಶ ಕಳುಹಿಸುವಾಗ ಆಕರ್ಷಕವಾದ ಮೆಮೊಜಿ ಸ್ಟಿಕರ್‌ಗಳನ್ನು ಬಳಸಬಹುದು ಮತ್ತು ನಮ್ಮದೇ ಚರ್ಮದ ಬಣ್ಣ, ಹುಬ್ಬು ಆಕಾರ, ಕನ್ನಡಕ, ತಲೆಗೂದಲಿನ ಶೈಲಿ... ಹೀಗೆ ವೈವಿಧ್ಯಮಯ ಆಯ್ಕೆಗಳೊಂದಿಗೆ ಪರಿಪೂರ್ಣವಾಗಿ ನಮ್ಮದೇ ಇಮೋಜಿ ಪ್ರೊಫೈಲ್ ಸ್ಟಿಕರ್ ರಚಿಸಬಹುದಾಗಿದೆ.
 • ಸಂಪರ್ಕಗಳು (ಕಾಂಟ್ಯಾಕ್ಟ್ಸ್) ಜಿಮೇಲ್ ಜೊತೆಗೆ ಸಿಂಕ್ರನೈಸ್ ಆಗಿದ್ದರೆ, ಐಫೋನ್‌ಗೂ ಸುಲಭವಾಗಿ ವರ್ಗಾಯಿಸಬಹುದಾಗಿದೆ.
 • ಅಂತರ್-ನಿರ್ಮಿತವಾಗಿ ಬರುವ ಮೆಶರ್ (measure) ಎಂಬ ಆ್ಯಪ್ ಮೂಲಕ ಟೇಬಲ್ ಮೇಲಿರುವ ಯಾವುದೇ ವಸ್ತುವಿನ ಅಂದಾಜು ಅಳತೆ ತಿಳಿಯಬಹುದು.

ದೊಡ್ಡ ಬೆಝೆಲ್‌ಗಳು ಸಮಸ್ಯೆಯಲ್ಲ ಎಂದುಕೊಂಡವರು ಮತ್ತು ಕೈಗೊಂದು ಕ್ಯೂಟ್ ಆ್ಯಪಲ್ ಫೋನ್ ಬೇಕೆನ್ನುವವರಿಗೆ ಐಫೋನ್ ಸ್ಪೆಶಲ್ ಎಡಿಶನ್ 2020 ಸೂಕ್ತ.

ಪ್ರಮುಖ ವೈಶಿಷ್ಟ್ಯಗಳು

 • ಗಾತ್ರ: 138.4 x 67.3 x 7.3 ಮಿಮೀ
 • ತೂಕ: 148 ಗ್ರಾಂ
 • ಸ್ಕ್ರೀನ್ ಗಾತ್ರ: 4.7 ಇಂಚು IPS LCD ಡಿಸ್‌ಪ್ಲೇ
 • ಟಚ್ ಐಡಿ ಫಿಂಗರ್ ಪ್ರಿಂಟ್ ಸೆನ್ಸರ್
 • IP67 ಜಲ ಹಾಗೂ ಧೂಳು ನಿರೋಧಕ ಅಲ್ಯೂಮೀನಿಯಂ ಚಾಸಿ
 • ಲೈಟ್ನಿಂಗ್ ಚಾರ್ಜಿಂಗ್
 • ಆ್ಯಪಲ್ 13 ಬಯೋನಿಕ್ ಪ್ರೊಸೆಸರ್
 • 3 GB RAM
 • 64 – 256GB ಸ್ಟೋರೇಜ್
 • 1,821 mAh ಬ್ಯಾಟರಿ
 • iOS 13.6.1 ಆವೃತ್ತಿಯ ಕಾರ್ಯಾಚರಣಾ ವ್ಯವಸ್ಥೆ
 • 18W ವೇಗದ ಚಾರ್ಜಿಂಗ್
 • 12MP ಹಿಂಭಾಗದ (ಪ್ರಧಾನ) ಕ್ಯಾಮೆರಾ
 • 7MP ಸೆಲ್ಫೀ ಕ್ಯಾಮೆರಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು